ಒಪ್ಪಿತ ವಯಸ್ಕರ ಲೈಂಗಿಕ ರಿವಾಜು ಹೆಂಗಿರಬೇಕಂತ ಕಾಯ್ದೆ ನಿರ್ಧರಿಸಬೇಕೇ? ಆರ್ಟಿಕಲ್ 377ರ ಪರಾಮರ್ಶೆಗೆ ಒಪ್ಪಿತು ಸುಪ್ರೀಂಕೋರ್ಟ್!

 

ಡಿಜಿಟಲ್ ಕನ್ನಡ ಟೀಮ್

‘ಇಬ್ಬರು ವಯಸ್ಕರು ಅವರ ಬೆಡ್ರೂಮಿನಲ್ಲಿ ಏನು ಮಾಡ್ತಾರೆ ಎಂಬುದನ್ನು ಪರೀಕ್ಷಿಸುವ ಕೆಲಸ ಸರ್ಕಾರದ್ದಲ್ಲವೇ ಅಲ್ಲ. ಸಲಿಂಗಿಗಳ ನಡುವಿನ ಕಾಮ ಶಿಕ್ಷಾರ್ಹ ಎಂಬ ನೂರೈವತ್ತು ವರ್ಷಗಳ ಹಿಂದಿನ ಕಾಯ್ದೆ ಪ್ರಸ್ತುತವೇ ಅಲ್ಲ’

– ಲೆಸ್ಬಿಯನ್, ಗೇ, ಬೈಸೆಕ್ಷುವಲ್, ಟ್ರಾನ್ಸ್ ಜೆಂಡರ್ ಚಳವಳಿಯಲ್ಲಿರುವವರ ಪ್ರತಿಪಾದನೆ.

‘ನ್ಯಾಯಾಲಯ ಇದನ್ನು ಮಾನ್ಯ ಮಾಡದಿದ್ದರೂ ಸಲಿಂಗ ಲೈಂಗಿಕತೆ ನಡೆದೇ ನಡೆಯುತ್ತದೆ. ಏಕೆಂದರೆ ಈ ನೈಸರ್ಗಿಕ ಪ್ರಕ್ರಿಯೆಯನ್ನು ನಿಷೇಧಿಸುವುದಕ್ಕೆ ಸಾಧ್ಯವಿಲ್ಲ. ಗೋಮಾಂಸದ ಮೇಲೆ ನಿಷೇಧ ಎಂದಾದರೆ ಅದಕ್ಕೆ ಪರ್ಯಾಯವಾಗಿ ತಿನ್ನಬಹುದಾದದ್ದನ್ನು ತೋರಿಸಬಹುದು. ಆದರೆ ಲೈಂಗಿಕತೆ ಮೂಲಭೂತ ಅವಶ್ಯ. ಅದಕ್ಕೆಲ್ಲಿಯ ಪರ್ಯಾಯ?’

– ಸಿಎನ್ ಎನ್- ಐಬಿಎನ್ ಜತೆ ಮಾತನಾಡುತ್ತ ಕನ್ನಡದ ಖ್ಯಾತ ಕಥೆಗಾರ ವಸುಧೇಂದ್ರ ಅವರು ಹೇಳಿದ್ದು.

ಇಂಥ ಹಲವು ಧ್ವನಿಗಳ ಹಕ್ಕೊತ್ತಾಯವನ್ನು ಕೇಳಿಸಿಕೊಂಡಿತೋ ಎಂಬಂತೆ, ಇಂದು ಸಲಿಂಗಕಾಮವನ್ನು ಪ್ರತಿಬಂಧಿಸುವ 377ನೇ ವಿಧಿಯನ್ನು ತೆಗೆದುಹಾಕುವ ಸಂಬಂಧ ಅರ್ಜಿ ಆಲಿಸಿದ ಸುಪ್ರೀಂಕೋರ್ಟ್, ಇದನ್ನು ಐವರು ಸದಸ್ಯರ ನ್ಯಾಯಪೀಠಕ್ಕೆ ವರ್ಗಾಯಿಸಿದೆ.

ಈ ಮೂಲಕ ಈ ಹಿಂದೆ ತಾನೇ ಕೊಟ್ಟಿದ್ದ ತೀರ್ಪನ್ನು ಪುನರ್ ಪರಿಶೀಲನೆ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಂತಾಗಿದೆ. ಈ ಹಿಂದೆ 2013ರ ಡಿಸೆಂಬರ್ 11ರ ತೀರ್ಪಿನಲ್ಲಿ ಸುಪ್ರೀಕೋರ್ಟ್- ಕಾನೂನು ಮಾಡುವುದು ತನ್ನ ಕೆಲಸ ಅಲ್ಲವಾದ್ದರಿಂದ ವಿಧಿ 377ರ ಬದಲಾವಣೆ ಬಗ್ಗೆ ತಾನೇನೂ ಹೇಳಲಾರೆ ಎಂದಿತ್ತು. ಆದ್ದರಿಂದ ‘ಅನೈಸರ್ಗಿಕ ಲೈಂಗಿಕ ಕ್ರಿಯೆ’ ಅಪರಾಧವಾಗಿಯೇ ಮುಂದುವರಿದಿತ್ತು ಹಾಗೂ ಇಂಡಿಯನ್ ಪೆನಲ್ ಕೋಡ್ ನ ಇದೇ ಕಾಯ್ದೆಯನ್ನು ಬಳಸಿಕೊಂಡು ಸಲಿಂಗಿಗಳನ್ನು ಶಿಕ್ಷೆಗೆ ಒಳಪಡಿಸುವ ಸಾಧ್ಯತೆ ಮುಂದುವರಿದಿತ್ತು.

ಆರ್ಟಿಕಲ್ 377 ಹೇಳುವ ಅಸ್ವಾಭಾವಿಕ ಅಥವಾ ಅನೈಸರ್ಗಿಕ ಲೈಂಗಿಕತೆ ವ್ಯಾಖ್ಯೆಯ ಪ್ರಕಾರ, ಹೆಣ್ಣು- ಗಂಡಿನ ಮಿಲನದ ಹೊರತಾದ ಎಲ್ಲವೂ ಅಸ್ವಾಭಾವಿಕವೆನಿಸಿ ಶಿಕ್ಷಾರ್ಹವಾಗುತ್ತದೆ. ವಯಸ್ಕ ಹೆಣ್ಣು- ಗಂಡು ಮುಖಮೈಥುನಕ್ಕಿಳಿದರೂ ಅದೂ ಈ ಕಾಯ್ದೆಯ ಪ್ರಕಾರ ಅನೈಸರ್ಗಿಕವೇ. ಇಂಥ ಅಸ್ವಾಭಾವಿಕ ಲೈಂಗಿಕತೆಗೆ ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷಗಳ ಜೈಲು ಇಲ್ಲವೇ ದಂಡವನ್ನು ವಿಧಿಸುವ ಅವಕಾಶ ಕಾಯ್ದೆಯಲ್ಲಿದೆ.

Leave a Reply