ಖೇರ್ ಗೆ ಪಾಕ್ ವೀಸಾ ನಿರಾಕರಣೆ ಅನ್ನೋದು ಕಟ್ಟರ್ ವಾದಿಗಳಿಬ್ಬರನ್ನೂ ಹೇಗೆ ಅನಾವರಣಗೊಳಿಸಿತು ಗೊತ್ತೇ?

 

ಪ್ರವೀಣ್ ಕುಮಾರ್

 ನಟ ಅನುಪಮ್ ಖೇರ್ ಅವರಿಗೆ ಪಾಕಿಸ್ತಾನವು ವೀಸಾ ನಿರಾಕರಿಸಿರುವ ಸಂಗತಿ ಉಭಯ ದೇಶಗಳ ಬಾಂಧವ್ಯವೃದ್ಧಿ, ಸಹಿಷ್ಣುತೆ ಇವೆಲ್ಲದರ ಚರ್ಚೆಗೆ ಮತ್ತೆ ಜೀವ ತುಂಬಿದೆ.

ಫೆಬ್ರವರಿ 5ರಿಂದ ನಡೆಯುವ ಕರಾಚಿ ಸಾಹಿತ್ಯೋತ್ಸವಕ್ಕೆ ಆಹ್ವಾನಿತರಾಗಿದ್ದ ತಮಗೆ ಪಾಕಿಸ್ತಾನವು ವೀಸಾ ನಿರಾಕರಿಸಿದೆ ಅಂತ ಬಾಲಿವುಡ್ ನಟ ಅನುಪಮ್ ಖೇರ್ ಮಂಗಳವಾರ ಆರೋಪಿಸಿದರು.

‘ಹಂಗೇನೂ ಇಲ್ಲ, ವೀಸಾ ನಿರಾಕರಣೆ ಆಗಿದೆ ಅಂತಾದ್ರೆ ಅವರು ಮೊದಲು ವೀಸಾಗೆ ಅನುಮತಿ ಕೋರಿ ಪತ್ರ ಕೊಟ್ಟಿರಬೇಕಲ್ಲ? ಅದರ ಸ್ವೀಕೃತಿ ಚೀಟಿ ತೋರಿಸಲಿ. ಅನುಪಮ್ ಖೇರ್ ಸುಳ್ಳು ಹೇಳ್ತಿದಾರೆ’ ಅಂತ ಪಾಕಿಸ್ತಾನದ ಹೈಕಮಿಷನರ್ ಕಚೇರಿ ಪ್ರತಿಕ್ರಿಯೆ ನೀಡಿತು.

ನಂತರ ಖೇರ್ ಮತ್ತೆ ಇದಕ್ಕೆ ಸ್ಪಷ್ಟನೆ ನೀಡಿದಾಗ, ಪಾಕಿಸ್ತಾನವು ನಿಜಕ್ಕೂ ಖೇರ್ ಆಗಮನ ತಡೆಯುವುದಕ್ಕೆ ಉತ್ಸುಕವಾಗಿರುವುದು ಪಕ್ಕಾ ಆಗಿದೆ. ಏಕೆಂದರೆ ಖೇರ್ ಪ್ರಶ್ನೆ ಇಷ್ಟೆ. ’18 ಮಂದಿ ಆಹ್ವಾನಿತರನ್ನು ಕರಾಚಿಗೆ ಕರೆಸಿಕೊಳ್ಳುವ ಎಲ್ಲ ವ್ಯವಸ್ಥೆ ಮಾಡಿದ್ದು ಅಲ್ಲಿನ ಸಂಘಟಕರು. ಹೀಗಾಗಿ ನಾನು ವೀಸಾಕ್ಕೆ ಅನುಮತಿ ಕೇಳುವ ಪ್ರಶ್ನೆ ಬರುವುದಿಲ್ಲ. ಆ 18 ಮಂದಿಯಲ್ಲಿ ನನ್ನನ್ನು ಮಾತ್ರವೇ ಹೊರಗಿರಿಸಲಾಗಿದೆ. ಉಳಿದವರ ವೀಸಾ ಪ್ರಕ್ರಿಯೆಗೆ ಯಾವುದೇ ತೊಡಕಾಗಿಲ್ಲ. ವೀಸಾ ತೊಂದರೆ ಆಗಿರುವುದರಿಂದ ನಿಮ್ಮನ್ನು ಕರೆಸಿಕೊಳ್ಳಲಾಗುತ್ತಿಲ್ಲ ಅಂತ ಸಂಘಟಕರೇ ಕ್ಷಮೆ ಕೇಳಿದ್ದಾರೆ. ನಾನಲ್ಲಿ ಉಭಯ ದೇಶಗಳನ್ನು ಕಾಡುತ್ತಿರುವ ಭಯೋತ್ಪಾದನೆ ಬಗ್ಗೆ, ಕಾಶ್ಮೀರಿ ಪಂಡಿತರ ಕುರಿತು ಮಾತನಾಡುವವನಿದ್ದೆ. ಉಳಿದವರಂತೆ ಪ್ರತ್ಯೇಕತಾವಾದಿಗಳ ಬಗ್ಗೆ ಅನುಕಂಪ ಹೊಂದಿರುವವ ನಾನಲ್ಲ. ಈ ಕಾರಣಕ್ಕಾಗಿಯೇ ಕರಾಚಿ ಸಾಹಿತ್ಯೋತ್ಸವದಲ್ಲಿ ನನ್ನ ಉಪಸ್ಥಿತಿಯನ್ನು ಅವರು ತಪ್ಪಿಸುತ್ತಿದ್ದಾರೆ’ ಎಂದಿದ್ದಾರೆ ಅನುಪಮ್ ಖೇರ್.

ತಮಾಷೆ ಎಂದರೆ, ಇಷ್ಟು ದಿನ ಸಹಿಷ್ಣುತೆ ಪಾಠ ಹೇಳುತ್ತ, ‘ನಾವು ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳಬೇಕು. ರಾಜಕೀಯ ಕಾರಣಕ್ಕೆ ಸಾಹಿತ್ಯ- ಸಂಸ್ಕೃತಿ ಸಂವಾದವನ್ನು ವಿರೋಧಿಸುವುದು ಸರಿಯಲ್ಲ. ಕೊಡು- ಕೊಳ್ಳುವಿಕೆ ಇರಲಿ’ ಅಂತೆಲ್ಲ ಹೇಳುತ್ತಿದ್ದ ಬಣದವರು, ಖೇರ್ ಅವರಿಗೆ ವೀಸಾ ಸಿಕ್ಕದೇ ಇರೋದು ಸರಿಯಲ್ಲ ಎಂಬ ಪ್ರತಿರೋಧ ವ್ಯಕ್ತಪಡಿಸದೇ ಮುಗುಮ್ಮಾಗಿದ್ದಾರೆ. ಇದು ಪಾಕಿಸ್ತಾನದ ಅಸಹಿಷ್ಣುತೆಯ ಕ್ರಮ ಅಂತ ಅವರ್ಯಾರೂ ಆಕ್ರೋಶ ವ್ಯಕ್ತಪಡಿಸುತ್ತಿಲ್ಲ.

ಇನ್ನೊಂದು ತುದಿಯವರಿಗೆ ಅನುಪಮ್ ಖೇರ್ ಅವರಿಗೆ ವೀಸಾ ನಿರಾಕರಣೆ ಆಗುತ್ತಿದೆ ಎಂಬುದಕ್ಕಷ್ಟೇ ಆಕ್ರೋಶ. ಆದರೆ ಇದೇ ಗುಂಪಿನವರು ಇಲ್ಲಿಯವರೆಗೆ ವಾದಿಸುತ್ತಿದ್ದ ಶೈಲಿ ಹೀಗಿತ್ತು- ‘ಉಗ್ರವಾದಿಗಳನ್ನು ಬೆಳೆಸುತ್ತಿರುವ ಪಾಕಿಸ್ತಾನದ ಜತೆ ಮಾತನಾಡುತ್ತಾ ಕೂರಬೇಕಾ? ಸಂಪೂರ್ಣ ದಿಗ್ಭಂದನ ಹೇರಬೇಕು. ಕಲೆ- ಸಾಹಿತ್ಯದ ಹೆಸರಲ್ಲಿ ಪಾಕಿಸ್ತಾನಿಯರನ್ನೇಕೆ ನಾವು ಆಹ್ವಾನಿಸಬೇಕು?’

ಈ ದೋಸ್ತಿ ಕಟ್ ಆಫ್ ಧೋರಣೆಯವರಿಗೂ ಅನುಪಮ್ ಖೇರ್ ಪಾಕಿಸ್ತಾನಕ್ಕೆ ಹೋಗಲಾಗದ್ದಕ್ಕೆ ಸಿಟ್ಟು ಬಂದಂತಿದೆ. ಪಾಕ್ ಜತೆಗೆ ಏಕಾದರೂ ಸಂಬಂಧ ಇರಿಸಿಕೊಳ್ಬೇಕು ಎಂಬ ತಮ್ಮದೇ ಮಾತಿನ ವರಸೆಗಳೆಲ್ಲ ಮರೆತಂತಿವೆ.

ಅನುಪಮ್ ಖೇರ್ ಪಾಲಿಸಿಕೊಂಡು ಬಂದಿದ್ದೂ ಇದೇ ನೀತಿ. ಈ ಹಿಂದೆ ಪದ್ಮ ಪ್ರಶಸ್ತಿಗಳೂ ಸೇರಿದಂತೆ ಸರ್ಕಾರಿ ಸಮ್ಮಾನಗಳೆಲ್ಲ ಜೋಕ್ ಆಗಿವೆ ಎಂದಿದ್ದವರು ಈ ಬಾರಿ ಅದು ತಮಗೇ ಬಂದಾಗ ಹಿರಿ ಹಿರಿ ಹಿಗ್ಗಿ ಸಂಭ್ರಮಿಸಿದರು.

ಖೇರ್ ಅವರಿಗೆ ವೀಸಾ ನಿರಾಕರಣೆ ಎಂಬ ಪ್ರಕರಣವು ಎರಡೂ ಮುಖಗಳನ್ನೂ ಚೆನ್ನಾಗಿ ಪರಿಚಯಿಸಿದೆ.

Leave a Reply