ನಿಜ ಹೇಳಿ ಸಿದ್ರಾಮಯ್ಯನವರೇ, ಈ ಪರಮೇಶ್ವರ ನಾಯ್ಕ್ ಅವರಂಥವರು ಸಂಪುಟದಲ್ಲಿ ಇರಬೇಕಾ..?

author-thyagarajಪ್ರಾಮಾಣಿಕ ಅಧೀನ ಅಧಿಕಾರಿಗಳು, ಸಿಬ್ಬಂದಿಯನ್ನು ಥೇಟು ರೌಡಿ ರೀತಿ ಅನವರತ ಶೋಷಣೆ ಮಾಡುತ್ತಿರುವ ಪರಮೇಶ್ವರ ನಾಯ್ಕ್ ಅವರಂಥ ಸಚಿವರು ಸಂಪುಟದಲ್ಲಿ ಇರಬೇಕು ಏಕೆ..? ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಜಕ್ಕೂ ಗಂಭೀರವಾಗಿ ಚಿಂತಿಸಬೇಕಾದ ವಿಚಾರ ಇದು.

ಪೊಳ್ಳು ಪ್ರತಿಷ್ಠೆಗೆ ಬಿದ್ದು ಸಚಿವ ಪರಮೇಶ್ವರ ನಾಯ್ಕ್ ಮಾಡಿಸಿದ್ದ ಡಿವೈಎಸ್ಪಿ ಅನುಪಮಾ ಶೆಣೈ ಅವರ ಅನಗತ್ಯ ವರ್ಗಾವಣೆಯನ್ನು ರದ್ದು ಮಾಡುವ ಮೂಲಕ ಸರಕಾರ ಒಂದಷ್ಟಾದರೂ ಮರ್ಯಾದೆ ಉಳಿಸಿಕೊಂಡಿದೆ. ಸರಕಾರ ಪೂರ್ಣ ಮನಸ್ಸಿನಿಂದೇನೂ ಈ ಕೆಲಸ ಮಾಡಿಲ್ಲ. ಸಚಿವರ ವಿರುದ್ಧ ದಿನೇ ದಿನೇ ಮಡುಗಟ್ಟುತ್ತಿದ್ದ ಜನಾಕ್ರೋಶ ಸರಕಾರದ ಕಡೆ ತಿರುಗುತ್ತಿರುವುದನ್ನು ಗಮನಿಸಿ ಒಲ್ಲದ ಮನಸ್ಸಿನಿಂದ ವರ್ಗಾವಣೆ ಆದೇಶ ಹಿಂಪಡೆದುಕೊಂಡಿದೆ. ಅಂದರೆ ಇಲ್ಲಿ ಅನುಪಮಾ ಅವರ ತಪ್ಪೇನೂ ಇಲ್ಲ ಎಂದಾಯಿತಲ್ಲ. ತಪ್ಪಿಲ್ಲದಿದ್ದರೂ ಒಬ್ಬ ಮಹಿಳಾ ಅಧಿಕಾರಿಗೆ ಮಾನಸಿಕ ಹಿಂಸೆ ನೀಡಿದ ಸಚಿವರಿಗೆ ಏನಾದರೂ ಶಿಕ್ಷೆ ಆಗಬೇಕಲ್ಲವೇ?

ವಿಪರ್ಯಾಸ ನೋಡಿ. ಪರಮೇಶ್ವರ ನಾಯ್ಕ್ ಅಲಂಕರಿಸಿರುವ ಖಾತೆ ಕಾರ್ಮಿಕ ಕಲ್ಯಾಣ. ಆದರೆ ಇವರು ಮಾಡುತ್ತಿರುವುದು ಮಾತ್ರ ಅಧಿಕಾರಿಗಳು ಹಾಗೂ ನೌಕರರ ಶೋಷಣೆ. ಐಎಎಸ್ ಅಧಿಕಾರಿಗಳಿಂದ ಹಿಡಿದು ಪೊಲೀಸ್ ಕಾನಸ್ಟೇಬಲ್ ವರೆಗೆ ಯಾರನ್ನೂ ಬಿಟ್ಟಿಲ್ಲ. ಯಾರೋ ಅಪ್ರಾಮಾಣಿಕರು, ಅದಕ್ಷರು, ಕರ್ತವ್ಯ ಕಳ್ಳರಾಗಿದ್ದರೆ ಪರವಾಗಿರಲಿಲ್ಲ. ಆದರೆ ಇವರು ಕೈ ಇಟ್ಟಿರೋರೆಲ್ಲ ನಿಯಮ ಪ್ರಕಾರ ನಡೆದುಕೊಳ್ಳುವ ಬರೀ ಪ್ರಾಮಾಣಿಕರು ಮತ್ತು ಕರ್ತವ್ಯ ನಿಷ್ಠರು. ಇವರು ಮಾಡಿರುವ ತಪ್ಪು ಏನಪ್ಪಾ ಅಂದ್ರೆ ಸಚಿವರು ಮತ್ತು ಅವರ ಬೆಂಬಲಿಗರು ಮಾಡುವ ಗೂಂಡಾಗಿರಿ ಹಾಗೂ ನಾನಾ ದಂಧೆಗಳಿಗೆ ಸೊಪ್ಪು ಹಾಕದಿರುವುದು ಹಾಗೂ ಅದನ್ನು ಪ್ರಶ್ನೆ ಮಾಡಿರುವುದು.

ಕಳೆದು ಎರಡು ವರ್ಷದಲ್ಲಿ ನಾಯ್ಕ್ ಸುಮಾರು ನೂರು ಮಂದಿ ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದಾರಂತೆ. ಇವರ ಮಾತು ಕೇಳದ ಬಹಳಷ್ಟು ಮಂದಿ ಅದರಲ್ಲಿ ಸೇರಿಕೊಂಡಿದ್ದಾರೆ. ಅಕ್ರಮ ಆಹಾರ ಧಾನ್ಯ ಸಂಗ್ರಹ ಅಡ್ಡೆಗಳ ಮೇಲೆ ದಾಳಿ ಮಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಉಪ ನಿರ್ದೇಶಕ ಮಾಂಟೆಸ್ವಾಮಿ, ಅಕ್ರಮ ಮರಳು ಸಾಗಣೆಗೆ ಸಹಕರಿಸದ ವಲಯ ಅರಣ್ಯಾಧಿಕಾರಿ ಬಿ.ಪಿ. ದುದ್ದಗಿ, ಕಮಲಾಪುರ ಪೊಲೀಸ್ ಠಾಣೆ ಭೀಮನಗೌಡ – ಹೀಗೆ ಸಾಗುತ್ತದೆ ಸಚಿವ ಪೀಡಿತರ ಪಟ್ಟಿ. ಹೊಸಪೇಟೆ ಎಸಿಗಳಾಗಿದ್ದ ಐಎಎಸ್ ಅಧಿಕಾರಿಗಳಾದ ಸುನಿಲ್ ಕುಮಾರ್, ಪವನ್ ಕುಮಾರ್ ಎತ್ತಂಗಡಿಗೂ ಇವರು ಯತ್ಮಿಸಿದ್ದರಂತೆ. ಆದರೆ ಅದೃಷ್ಟವಶಾತ್ ಅವರು ಬಡ್ತಿ ಪಡೆದು ಯಾದಗಿರಿ, ಬೀದರ್ ಸಿಇಓಗಳಾಗಿ ಹೋದರಂತೆ. ಇವರ ದರ್ಪ ಹೇಗಿರುತ್ತೆ ಅಂತ ನೋಡಿ. ಯಾವುದಾದರೂ ಪೊಲೀಸ್ ಸ್ಟೇಷನ್ ಗೆ ಹೊಸದಾಗಿ ಕಾನ್ಸಟೇಬಲ್ ಬಂದ್ರೂ ಇವಯ್ಯನ್ನ ಹೋಗಿ ನೋಡಬೇಕಂತೆ. ಅಂದ್ರೆ ಇವರ ಮನೆಗೆ ಹೋಗಿ ಅಟೆಂಡೆನ್ಸ್ ಹಾಕಿ ಬರಬೇಕಂತೆ. ಇದು ಬರೀ  ಸ್ಟೇಷನ್ ಗೆ ಮಾತ್ರ ಸೀಮಿತ ಅಲ್ಲ. ಇವರು ಉಸ್ತುವಾರಿ ಸಚಿವರಾಗಿರುವ ಬಳ್ಳಾರಿ ಜಿಲ್ಲೆ ವ್ಯಾಪ್ತಿಯ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದನ್ನು ಪಾಲಿಸಬೇಕಂತೆ. ಇದು ಬಳ್ಳಾರಿ ಜಿಲ್ಲೆಯ ಅಘೋಷಿತ ಸರಕಾರಿ ನಿಯಮ. ಹೋಗಲಿಲ್ಲ ಅಂದ್ರೆ ‘ಎಲ್ಲಯ್ಯ ಬಂದು ನನ್ನನ್ನ ನೋಡ್ಲೇ ಇಲ್ಲ, ತಿಮಿರು ಜಾಸ್ತಿ ಆಗೈತಾ’ ಅಂತ ತೆಲುಗು ಸಿನಿಮಾ ವಿಲನ್ ಸ್ಟೈಲಲ್ಲಿ ಅವಾಜ್ ಹಾಕುತ್ತಾರಂತೆ. ಅದೂ ಹಿರಿಯರು, ಕಿರಿಯರು ಅಂತ ಮರ್ಯಾದೆ ಕೊಡದೇ ಏಕವಚನದಲ್ಲಿ ಸಂಬೋಧನೆ.

ಇತ್ತೀಚಿನ ಬಳ್ಳಾರಿ ರಾಜಕೀಯದ ಗುಣವೇ ಹಾಗೋ ಅಥವಾ ಅಯೋಗ್ಯರು, ಅನರ್ಹರ ಕೈಗೆ ಅಧಿಕಾರ ಸಿಕ್ಕಿದ ಪರಿಣಾಮವೋ ಏನೋ ಗೊತ್ತಿಲ್ಲ. ಬರೀ ಧಿಮಾಕು, ಅಹಂಕಾರದ ವಿಜೃಂಭಣೆ. ನಾಯ್ಕ್ ಅವರಿಗೆ ಸಂಸ್ಕಾರ ಇಲ್ಲದೆ ಹೋದರೆ ಹಾಳಾಗಿ ಹೋಗ್ಲಿ. ತಾವು ಅಲಂಕರಿಸಿರುವ ಮಂತ್ರಿ ಪದವಿಯ ಗೌರವಕ್ಕಾದರೂ ಬೆಲೆ ಕೊಡಬೇಕಲ್ಲವೇ? ಈ ಸ್ಲಂ ರೌಡಿಗಳ ಮಾದರಿಯಲ್ಲಿ ಕಂಡಕಂಡಲ್ಲಿ ಅಧಿಕಾರಿಗಳನ್ನು ಬಾಯಿಗೆ ಬಂದಂತೆ ಜರಿದರೆ ಬರೀ ಅವರೊಬ್ಬರ ಮರ್ಯಾದೆ ಹೋಗುವುದಷ್ಟೇ ಅಲ್ಲ, ಅವರು ವಹಿಸಿಕೊಂಡಿರುವ ಮಂತ್ರಿ ಸ್ಥಾನದ ಗೌರವವೂ ಹರಾಜಾಗುತ್ತದೆ ಎಂಬ ಪರಿಭಾವನೆ ಇರಬೇಡವೇ? ಅಧಿಕಾರ ನಿಮಿತ್ತದಿಂದ ಬಂದ ದೌಲತ್ತು ಹೆಚ್ಚು ದಿನ ಉಳಿಯುವುದಿಲ್ಲ. ಏಕೆಂದರೆ ಅಧಿಕಾರ ಶಾಶ್ವತ ಅಲ್ಲ. ಎಂತೆಂಥವರೋ ಮಣ್ಣು ಮುಕ್ಕಿದ್ದಾರೆ. ಪರಮೇಶ್ವರ ನಾಯ್ಕ್ ಅವರು ಬೇರೆ ಯಾರನ್ನೂ ನೋಡುವುದು ಬೇಡ. ವಿಜಯನಗರ ಸಾಮ್ರಾಜ್ಯದ ಅರಸರಂತೆ ಮೆರೆದ ಅವರದೇ ಊರಿನ ಗಣಿ ರೆಡ್ಡಿ ಬಳಗ ಇಂದು ಏನಾಗಿದೆ ಎಂಬುದನ್ನು ಒಮ್ಮೆ ಪರಾಂಬರಿಸಿಬಿಟ್ಟರೇ ಸ್ವಲ್ಪ ಜ್ಞಾನೋದಯವಾದರೂ ಆಗಬಹುದು. ಆಗಲೂ ಆಗಲಿಲ್ಲ ಅಂದರೆ ಅದು ಅವರ ದೌರ್ಭಾಗ್ಯ ಅಷ್ಟೇ.

‘ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ’ ಎಂಬ ಗಾದೆ ಮಾತಿನಂತೆ ಯೋಗ್ಯತೆ ಮೀರಿ ಸಿಕ್ಕಿರುವ ಮಂತ್ರಿ ಪದವಿ ಪರಮೇಶ್ವರ ನಾಯ್ಕ್ ಅವರ ತಲೆ ತಿರುಗಿಸಿದೆ. ಜಿಲ್ಲೆಯಲ್ಲಿ ವ್ಯಾಪಕ ಆಗಿರುವ ಲಿಕ್ಕರ್ ಲಾಬಿ, ಅಕ್ರಮ ಮರಳು ಗಣಿಗಾರಿಕೆ ಸಂಪತ್ತಿನ ಸೋಪಾನ. ಜನಪರ ಕೆಲಸಕ್ಕೋ, ಅವರ ಹಿತಕ್ಕೋ ಇವರು ಅಧಿಕಾರಿಗಳ ಮೇಲೆ ಜಬರ್ದಸ್ತು ಮಾಡಿರುವ ಉದಾಹರಣೆಗಳಿಲ್ಲ. ಬರೀ ಇವರು, ಇವರ ಬೆಂಬಲಿಗರ ದಂಧೆನಿಮಿತ್ತವಷ್ಟೇ ಹೊರಬಿದ್ದ ಮಾತುಗಳು ವಿವಾದ ಸ್ವರೂಪ ಪಡೆದುಕೊಂಡಿವೆ. ಇಂಥ ಮಂತ್ರಿಗಳ ಅಡ್ಡವರ್ತನೆಯಿಂದ ಆಡಳಿತಶಾಹಿಯ ನೈತಿಕ ಸ್ಥೈರ್ಯ ಉಡುಗಿ ಹೋಗುತ್ತದೆ. ಸಕಾರಾತ್ಮಕ ಚಿಂತನೆ ನಶಿಸಿ ಹೋಗಿ, ನಕಾರಾತ್ಮಕ ಧೋರಣೆ ಮನೆಮಾಡುತ್ತದೆ. ಆಗ ಸಹಜವಾಗಿಯೇ ಪ್ರಗತಿ ಕಾರ್ಯಗಳು ಕುಂಠಿತಗೊಳ್ಳುತ್ತವೆ.

ಇಲ್ಲಿ ಇನ್ನೊಬ್ಬರು ಮಂತ್ರಿ ಇದ್ದಾರೆ. ಅವರೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್. ಇವರತ್ರ ಜನರ ಸಮಸ್ಯೆ ಬಗ್ಗೆ ಕೇಳುವುದಿಕ್ಕೆ ಮಾಧ್ಯಮದವರು ಪೋನ್ ಕಾಲ್ ಮಾಡಬೇಕಾದರೆ ನಿಗದಿತ ಸಮಯ ಇಟ್ಟುಕೊಂಡಿರಬೇಕಂತೆ. ಯಾವಾಗಂದ್ರೆ ಅವಾಗ ಕಾಲ್ ಮಾಡುವ ಹಾಗಿಲ್ಲವಂತೆ. ಪೋನ್ ಮಾಡಿದಾಗಲೆಲ್ಲ ಕರೆ ಸ್ವೀಕರಿಸಲು ಅವರು ರಿಸೆಪ್ಷನಿಸ್ಟ್ ಅಲ್ಲವಂತೆ. ಕೇಂದ್ರದಿಂತ ಹಣ ಬಂದರೆ ಅಭಿವೃದ್ಧಿ ಕೆಲಸ ಮಾಡ್ತಾರಂತೆ. ಇಲ್ಲ ಅಂದ್ರೆ ಮಾಧ್ಯಮದವರೇ ದುಡ್ಡು ಕೊಡಬೇಕಂತೆ. ಎಂಥ ಬೇಜವಾಬ್ದಾರಿ, ಉಡಾಫೆ ಉತ್ತರ ನೋಡಿ. ಇವರಿಗೆ ಜನರ ಕೆಲಸ ಮಾಡುವುದಕ್ಕೆ ಆಗಲ್ಲ ಅಂತಂದ್ರೆ ಮಂತ್ರಿ ಯಾಕಾಗಬೇಕಿತ್ತು. ಯಾರು ಹೋಗಿ ಇವರ ಕೈ-ಕಾಲು ಹಿಡಿದುಕೊಂಡಿದ್ದರು ನೀವೇ ಮಂತ್ರಿ ಆಗಬೇಕು ಅಂತಾ. ಏನು ಅಲಂಕಾರಕ್ಕೆ, ಬರೀ ಪೇಟಾ ಹಾಕಿಕೊಂಡು ತಿರುಗುವುದಕ್ಕೆ ಮಂತ್ರಿ ಆಗಿದ್ದಾರಾ ಇವರು. ಕೆಲಸ ಮಾಡುವುದಕ್ಕೆ ಯೋಗ್ಯತೆ ಇಲ್ಲಾಂದ್ರೆ ರಾಜೀನಾಮೆ ಬಿಸಾಕಿ ಹೋಗಲಿ, ಯಾರಾದ್ರೂ ಕೆಲಸ ಮಾಡುವವರಾದರೂ ಮಂತ್ರಿ ಆಗ್ತಾರೆ.

ಜಾರ್ಜ್ ಅವರ ಉಡಾಫೆ ಹೊಸದೇನೂ ಇಲ್ಲ. ಹಿಂದೆ ಅವರು ಪ್ರಭಾವಿ ಗೃಹ ಖಾತೆ ಮಂತ್ರಿಗಳಾಗಿದ್ದರು. ಅದನ್ನು ಕಳೆದುಕೊಂಡು ಈಗ ಬೆಂಗಳೂರು ನಗರಾಭಿವೃದ್ಧಿಗೆ ಜಾರಿದ್ದಾರೆ. ಹಿಂದೆ ಗೃಹ ಖಾತೆಯನ್ನು ಇವರ ಸಲಹೆಗಾರರಾಗಿದ್ದ ಕೆಂಪಯ್ಯ ಅವರೇ ನಿಭಾಯಿಸುತ್ತಿದ್ದರು. ಜಾರ್ಜ್ ಬರೀ ನಾಮ್-ಕೆ-ವಾಸ್ತೆ ಮಂತ್ರಿ ಆಗಿದ್ದರು. ಎಲ್ಲರೂ ಇವರನ್ನು ‘ಡಮ್ಮಿ’ ಎಂದೇ ಕರೆಯುತ್ತಿದ್ದರು. ಜಾರ್ಜ್ ಅವರು ತಮ್ಮ ಖಾತೆ ಕೆಲಸದ ಬಗ್ಗೆ ತೋರುತ್ತಿರುವ ಅಸ್ಥೆ, ಅವರು ಆಡಿರುವ ಮಾತುಗಳನ್ನು ನೋಡಿದರೆ ಮಂತ್ರಿ ಪದವಿ ಬಗ್ಗೆ ಅವರಿಗೆ ಯಾವುದೇ ಗೌರವ, ಆಸಕ್ತಿ ಇಲ್ಲದಿರುವುದು ವೇದ್ಯವಾಗುತ್ತದೆ. ‘ಏನು ಸ್ವಾಮಿ ಜನರ  ಸಮಸ್ಯೆ ಬಗ್ಗೆ ಹೇಳೋದಿಕ್ಕೆ ಕೈಗೇ ಸಿಕ್ತಿಲ್ಲವಲ್ಲಾ ಅಂತ ಕೇಳಿದ್ರೆ, ನಾವೇನು ಬಿಟ್ಟಿ ಬಿದ್ದಿದ್ದೀನಾ ಅಂತ ಪ್ರಶ್ನೆ ಮಾಡೋ’ ಇಂಥವರಿಗೆಲ್ಲ ಯಾಕೆ ಬೇಕು ಮಂತ್ರಿ ಪದವಿ?

ಜನಪರ ಕೆಲಸಕ್ಕೆ ನಿಯೋಜನೆ ಆದ ಸಚಿವರೇ ಅದಕ್ಕೆ ಮುಳ್ಳಾದರೆ ರಾಜ್ಯ ಉದ್ಧಾರ ಆಗುವುದಾದರೂ ಹೇಗೆ? ಇದರಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುವುದಿಲ್ಲವೇ? ಮೂರು ವರ್ಷ ಮುಗಿಸುತ್ತಿರುವ ಸಿದ್ದರಾಮಯ್ಯನವರ ಸರಕಾರದ ಸಾಧನೆ ಪರಾಮರ್ಶಿಸುವಾಗ ಪರಮೇಶ್ವರ ನಾಯ್ಕ್, ಜಾರ್ಜ್ ಅವರಂತ ಸಚಿವರ ಕೊಡುಗೆಯೂ ಲೆಕ್ಕಕ್ಕೆ ಬರುತ್ತದೆ. ಇಂಥ ಸಚಿವರನ್ನು ಇಟ್ಟುಕೊಂಡು ಅದೆಂಥ ಲೆಕ್ಕ ತೋರಿಸಲು ಸಾಧ್ಯ? ಸಿದ್ದರಾಮಯ್ಯನವರು ಯೋಚಿಸಬೇಕು. ಅವರು ‘ಅಹಿಂದ’ ಸಿದ್ಧಾಂತದ ಪ್ರತಿಪಾದಕರಿರಬಹುದು. ಆದರೆ ಅವರು ಪ್ರತಿಪಾದಿಸುವ ಸಿದ್ಧಾಂತ ಪರಮೇಶ್ವರ ನಾಯ್ಕ್, ಜಾರ್ಜ್ ಅವರಂಥ ಮತಿಗೇಡಿ, ಕೆಲಸಗೇಡಿ ಸಚಿವರಿಗೆ ರಕ್ಷಣಾಕವಚ ಆಗಬಾರದು.

ಲಗೋರಿ : ಹುಂಬರು, ಮೂರ್ಖರು ಸಂಪುಟಕ್ಕೆ ಬಂದದ್ದು ತಪ್ಪಲ್ಲ. ಆದರೆ ಅವರನ್ನು ಅಲ್ಲಿ ಉಳಿಸಿಕೊಂಡದ್ದು ತಪ್ಪ.

1 COMMENT

Leave a Reply