ಪ್ರಶ್ನೆ- ಮೋದಿ ಸರ್ವಾಧಿಕಾರಿಯೇ? ಉತ್ತರ- ಮೊಟ್ಟೆ ಒಡೆಯದೇ ನೀವು ಆಮ್ಲೆಟ್ ತಯಾರಿಸಬಲ್ಲಿರೇ?

ಡಿಜಿಟಲ್ ಕನ್ನಡ ಟೀಮ್

ನಸ್ಸಿಂ ನಿಕೋಲಸ್ ತಲೇಬ್, ಲೆಬಾನಿಸ್ ಮೂಲದ ಅಮೆರಿಕನ್ ಸಂಖ್ಯಾಶಾಸ್ತ್ರಜ್ಞ , ಅಪಾಯ ವಿಶ್ಲೇಷಕ (risk analyst) ಲೇಖಕ ಹಾಗೂ ಪ್ರಾಧ್ಯಾಪಕ. ಇಷ್ಟೇ ಅಲ್ಲ ಮ್ಯಾಥಮೆಟಿಕಲ್ ಫೈನಾನ್ಸ್ ವಿಭಾಗದಲ್ಲೂ  ಇತನದು ಎತ್ತಿದ ಕೈ. ಹೆಡ್ಜೆ ಫಂಡ್ ಮ್ಯಾನೇಜರ್, ಡಿರೈವೇಟಿವ್ ಟ್ರೇಡರ್ ಆಗಿ ಕೆಲಸ ಮಾಡಿದ ಅನುಭವ ಕೂಡ ಈತನಿಗಿದೆ. ಸದ್ಯಕ್ಕೆ ಯುನಿವರ್ಸ್ ಇನ್ವೆಸ್ಟ್ ಎನ್ನುವ ಕಂಪನಿಗೆ ವೈಜ್ಞಾನಿಕ ಸಲಹೆಗಾರನಾಗಿ ಕೆಲಸ. ಈತ 2007ರಲ್ಲಿ ಬರೆದ ‘ದಿ ಬ್ಲಾಕ್ ಸ್ವಾನ್’ ಪುಸ್ತಕ ಎರಡನೇ ಮಹಾ ಯುದ್ಧದ ನಂತರದ  ಹನ್ನೆರಡು ಅತ್ಯಂತ ಪ್ರಭಾವ ಬೀರುವ ಪುಸ್ತಕಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ.

ಇದಿಷ್ಟು ಈತನ ಪ್ರವರ. ಸದ್ಯ ಈತನ ಉಲ್ಲೇಖ ಏಕೆ? ಮೋದಿ ಗೆದ್ದು ಪ್ರಧಾನಿ ಆಗುವುದಕ್ಕೆ ಮುಂಚೆ ಭಾರತಕ್ಕೆ ಬಂದಿದ್ದ ಈತ  ಮೋದಿಯ ಮೋಡಿ ಗೆ ಯಾವ ಪರಿಗೆ ಸಿಲುಕಿದ್ದನೆಂದರೆ ‘ನಾನು ಭಾರತೀಯನಾಗಿದ್ದರೆ , ಮೋದಿ ಅವರಿಗೆ ವೋಟು ಮಾಡುತಿದ್ದೆ’ ಎನ್ನುವ ಹೇಳಿಕೆ ಕೊಡುವಷ್ಟು… ಕೆಲವು ದಿನಗಳ ಹಿಂದೆ ಮತ್ತೆ ಭಾರತಕ್ಕೆ ಬಂದಿರುವ ಇವರನ್ನು ಪ್ರೆಸ್ ನವರು ಕೇಳಿದ ಮೊದಲ ಪ್ರಶ್ನೆ ‘ಕಳೆದ ಬಾರಿ ಭಾರತೀಯನಾಗಿದ್ದರೆ ಮೋದಿ ಅವರಿಗೆ ವೋಟು ಮಾಡುತಿದ್ದೆ ಎಂದಿರಿ. ನಿಮ್ಮ ಇಂದಿನ ನಿಲುವೇನು?’
ಯಾವುದೇ ಸಂಕೋಚ, ತಡವರಿಕೆ ಇಲ್ಲದೆ  ತಕ್ಷಣ ಬಂದ ಉತ್ತರ, ‘ಖಂಡಿತ ಮೋದಿ ಆಶಾಭಂಗ ಮಾಡಿಲ್ಲ, ಅವರೊಬ್ಬ ತಪಸ್ವಿ (ascetic ), ಕಳೆದ ವರ್ಷದ ಅಂಕಿ ಸಂಖ್ಯೆ ನೋಡಿದರೆ ನಿಮಗೆ ತಿಳಿಯುತ್ತದೆ, ಎಲ್ಲಕ್ಕೂ ಮುಖ್ಯ  ಆತನ ಪ್ರಯತ್ನ (effort ), ಬದ್ಧತೆ ಪ್ರಶ್ನಿಸುವಂತಿಲ್ಲ. ಕೆಲವೊಮ್ಮೆ ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯದೆ ಹೋಗಬಹುದು. ಎಲ್ಲಾ ನಮ್ಮ ಹಿಡಿತದಲ್ಲಿ ಇಲ್ಲವಲ್ಲ?’ ಎಂದು ಮುಂದುವರಿದು ಹೇಳುತ್ತಾನೆ- ‘ಮತ್ತೊಮ್ಮೆ ಹೇಳುತ್ತೇನೆ, ಆತನೊಬ್ಬ ತಪಸ್ವಿ. ಮತ್ತು ನಾನು ತಪಸ್ವಿಯ ನಂಬುತ್ತೇನೆ.’
ಮೋದಿಯನ್ನು ಸರ್ವಾಧಿಕಾರಿ ಎಂದು ಹಲವರು ಹೇಳುತ್ತಾರೆ, ನಿಮ್ಮ ನಿಲುವೇನು ಎನ್ನುವ ಮಾಧ್ಯಮದ ಪ್ರಶ್ನೆಗೆ  ‘ಮೊಟ್ಟೆಯನ್ನು ಒಡೆಯದೆ ನೀವು ಆಮ್ಲೆಟ್ ತಯಾರಿಸಬಲ್ಲಿರೆ ?’ ಎಂದು ಮರು ಪ್ರಶ್ನಿಸಿ, ಮಹಾನ್ ಕಾರ್ಯ ಸಾಧನೆಗೆ ಹಲವೊಮ್ಮೆ ಕಠಿಣ ನಿಲುವು ತೆಗೆದು ಕೊಳ್ಳುವುದು ಅವಶ್ಯಕ ಎನ್ನುವ ಖಡಕ್ ಉತ್ತರ.
ಮೋದಿ ಅಧಿಕಾರ ವಹಿಸಿಕೊಂಡ ನಂತರ ಭಾರತದಲ್ಲಿ ಧರ್ಮ ಆಧಾರಿತ ಅಸಹಿಷ್ಣುತೆ ಹೆಚ್ಚಾಗಿದೆ ಎನ್ನುವ ಕೂಗು ಎದ್ದಿದೆ, ನಿಮ್ಮ ಗಮನಕ್ಕೆ ಅದು ಬಂದಿದೆಯೇ ಎನ್ನುವ ಪ್ರಶ್ನೆಗೆ  ‘ಹುಟ್ಟಿನಿಂದ ಹಲವು ದೈವಗಳ ಆರಾಧಿಸಿಕೊಂಡು ಬಂದಿರುವ ನಿಮ್ಮ ವಿಶಾಲ ಮನೋಭಾವ ಒಂದೇ ದೈವ ಎನ್ನುವ ಸಿದ್ದಾಂತಕ್ಕೆ ಕಟ್ಟು ಬಿದ್ದ ಬೇರೆ ಯಾವುದೇ ಧರ್ಮದಲ್ಲೂ ಇಲ್ಲ’ ಎನ್ನುವ ಉತ್ತರ ನಮ್ಮ ಚಿಂತಕರ ಕಿವಿಗೆ ಬಿದ್ದೀತೆ ? ಅಥವಾ ಜಾಣ ಕಿವುಡೆ?
ಚೀನಾದ ಮಾರುಕಟ್ಟೆ ಕುಸಿತ ಜಗತ್ತಿನ ಮೇಲೆ ಬೀರುವ ಪರಿಣಾಮದ ಕುರಿತ ಪ್ರಶ್ನೆಗೆ, ಸಾಮಾನ್ಯವಾಗಿ ಎಲ್ಲರೂ ಅದರಿಂದ ಆಗುವ ನಕಾರಾತ್ಮಕ ಅಂಶಗಳನ್ನೇ ಹೇಳುತ್ತಾರೆ. ನಿಕೋಲಸ್ ಅದಕ್ಕೆ ತದ್ವಿರುದ್ಧ   ‘ಏರಿದ್ದು ಇಳಿಯಲೇಬೇಕು ‘ ಎನ್ನುವುದು ಪ್ರಕೃತಿ ನಿಯಮ , ಇಳಿಕೆಯೇ ಮತ್ತೊಂದು ಮಹಾನ್ ಏರಿಕೆಗೆ ಕಾರಣ ಅಲ್ಲವೇ?  ಎಲ್ಲವೂ ಏರುತ್ತಲೇ ಇರುವುದಕ್ಕೆ ಹೇಗೆ ಸಾಧ್ಯ?  ಇಳಿಕೆ ಮಾರುಕಟ್ಟೆಗೆ ಅವಶ್ಯವಾಗಿ ಬೇಕಾದ ಟಾನಿಕ್. ನೋಡಿ ಇಳಿಕೆಯ ಸಮಯದಲ್ಲಿ ಸಟ್ಟಾ ವ್ಯಾಪಾರಿ (speculator ) ಓಡಿ ಹೋಗುತ್ತಾನೆ, ನಿಜವಾದ ಹೂಡಿಕೆದಾರ (Investor) ನೆಲ ಕಚ್ಚಿ ನಿಲ್ಲುತ್ತಾನೆ. ಹಾಲಿನಿಂದ ನೀರನ್ನು ಬೇರ್ಪಡಿಸುವುದು ಇದರಿಂದ ಸಾಧ್ಯ.  ಇಳಿಕೆ ಎಲ್ಲಾ ಸಮಯದಲ್ಲೂ ಕೆಟ್ಟದ್ದೇ ಆಗಿರಬೇಕು ಎಂದೇನು ಇಲ್ಲ’ ಎನ್ನುವುದು ಈತನ ನಿಲುವು.
ಕುಸಿಯುತ್ತಿರುವ ಕಚ್ಚಾ ತೈಲ ಬೆಲೆಯಿಂದ 100 ಬಿಲಿಯನ್ ಅಮೆರಿಕನ್ ಡಾಲರ್ ರಿಸರ್ವ್ ಕಳೆದು ಕೊಂಡಿರುವ ಸೌದಿ ಅರೇಬಿಯಾ ಈ ವರ್ಷ ಮತ್ತಷ್ಟು ಹಣ ಕಳೆದು ಕೊಳ್ಳಲಿದೆ, ಕುಸಿದ ತೈಲ ಬೆಲೆಯ ಹೆಚ್ಚು ಲಾಭ ಸಿಗುತ್ತಿರುವುದು ಭಾರತಕ್ಕೆ ಎಂದು ಹೇಳುವುದು ಮರೆಯಲಿಲ್ಲ.
ಸರಕಾರ ಹಾಗು ಭಾರತೀಯ ರಿಸರ್ವ್ ಬ್ಯಾಂಕ್ ನಡುವಿನ ಸಂಬಂಧ, ಫಿಸ್ಕಲ್ ಟಾರ್ಗೆಟ್, ಇನಫ್ಲೇಶನ್ ಟಾರ್ಗೆಟ್ ಗಳ ನಡುವಿನ ತಿಕ್ಕಾಟ ದ ಬಗ್ಗೆ ಗಮನ ಸೆಳೆದಾಗ, ರಾಜನ್ ಪರ ವಹಿಸಿ ಮಾತನಾಡಿ ಹೇಳಿದ್ದಿಷ್ಟು- ‘ಇನಫ್ಲೇಶನ್ ಗುರಿಯಾಗಿರಬೇಕೆ ಹೊರತು ಫಿಸ್ಕಲ್ ಅಲ್ಲ. ನಿಮ್ಮ ಗವರ್ನರ್  ಅಪಾಯದ ಮುನ್ಸೂಚನೆ ತಿಳಿಯುವ, ಸ್ಥಿರತೆಗೆ ಹೆಚ್ಚು ಪ್ರಾಮುಖ್ಯ ಕೊಡುವ ವ್ಯಕ್ತಿ. ಸರಕಾರ ಹೆಚ್ಚು ತಲೆಕೆಡಿಸಿ ಕೊಳ್ಳುವ ಅವಶ್ಯಕತೆ ಇಲ್ಲ, ಮೋದಿ – ರಾಜನ್ ಜುಗಲ್ಬಂಧಿ ಭಾರತದ ಭವಿಷ್ಯಕ್ಕೆ ಉತ್ತಮ ಪಲಿತಾಂಶ ಕೊಡುತ್ತದೆ ಚಿಂತೆ ಬೇಡ.’
ನಸ್ಸಿಂ ನಿಕೋಲಸ್ ತಲೇಬ್ ಸಂಘ ಪರಿವಾರದವರಲ್ಲ, ಭಕ್ತನೂ ಅಲ್ಲ. ಅವರೊಬ್ಬ ವಿಶ್ಲೇಷಕ. ಕಪ್ಪನ್ನು ಕಪ್ಪೆಂದು, ಬಿಳಿಯನ್ನು ಬಿಳಿ ಎಂದು ಹೇಳಲು ಸಂಕೋಚಿಸದ ವ್ಯಕ್ತಿ. ನಮ್ಮಲ್ಲಿ ಹಲವರಿಗೆ ಮಾತ್ರ ಎಲ್ಲವನ್ನೂ ಕಾಮಾಲೆ ಕಣ್ಣಿಂದ ನೋಡುವ ಬುದ್ಧಿ! ಬದಲಾವಣೆ ಜಗದ ನಿಯಮ, ಅವರೂ ಬದಲಾಗುತ್ತಾರೆ ಎಂದು ಆಶಿಸೋಣ.

Leave a Reply