ಭ್ರೂಣದಲ್ಲೇ ಲಿಂಗಪತ್ತೆ ಕಡ್ಡಾಯ ಮಾಡೋಣ ಅಂತಿದಾರೆ ಮೇನಕಾ ಗಾಂಧಿ, ಏನಿದರ ಉದ್ದೇಶ?

 

ಡಿಜಿಟಲ್ ಕನ್ನಡ ಟೀಮ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮೇನಕಾ ಗಾಂಧಿ ಚೌಕಟ್ಟಿನಾಚೆಗೆ ಯೋಚಿಸೋದು ಅಥವಾ ಔಟ್ ಆಫ್ ದ ಬಾಕ್ಸ್ ಥಿಂಕಿಂಗ್ ಅಂತಾರಲ್ಲ, ಹಾಗಿದ್ದೊಂದನ್ನು ಹರಿಯಬಿಟ್ಟಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಭ್ರೂಣದ ಲಿಂಗಪತ್ತೆ ಮಾಡುವುದು ಕಾನೂನಿಗೆ ವಿರುದ್ಧ. ಗಂಡುಮಗು ಬೇಕೆಂಬ ಹುಚ್ಚಿನಲ್ಲಿರುವ ಸಮಾಜ, ಭ್ರೂಣದಲ್ಲೇ ಹೆಣ್ಣನ್ನು ಹೊಸಕುವ ಕ್ರೂರ ಪದ್ಧತಿಯನ್ನು ತಡೆಯುವುದಕ್ಕೆ ಈ ಕಾಯ್ದೆ ಇದೆ.

ಈಗ ಮೇನಕಾ ಗಾಂಧಿ ಹೇಳುತ್ತಿರುವುದೆಂದರೆ, ‘ಭ್ರೂಣದಲ್ಲೇ ಲಿಂಗಪತ್ತೆ ಮಾಡಿ ಅದನ್ನು ದಾಖಲಿಸುವುದನ್ನು ಕಡ್ಡಾಯ ಮಾಡುವ ಬಗ್ಗೆ ಚಿಂತಿಸುತ್ತಿದ್ದೇವೆ.’ ಜೈಪುರದಲ್ಲಿ ನಡೆದ ಪ್ರಾದೇಶಿಕ ಸಂಪಾದಕರ ಸಭೆಯಲ್ಲಿಸೋಮವಾರ ಈ ಸುಳಿವು ನೀಡಿರುವ ಸಚಿವರು, ಸಂಪುಟ ಮಟ್ಟದಲ್ಲೂ ಇದನ್ನು ಚರ್ಚಿಸಲಾಗಿದೆ ಎಂದಿದ್ದಾರೆ.

ಇದಕ್ಕೆ ಮೇನಕಾ ಗಾಂಧಿ ನೀಡಿರುವ ತರ್ಕ ಹೀಗಿದೆ: ಈಗ ಲಿಂಗಪತ್ತೆ ಮಾಡಬಾರದೆಂಬ ಕಾನೂನಿರುವುದು ನಿಜ. ಆದರೆ ಅದು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುತ್ತಿದೆಯೇ? ಅದರ ಬದಲು ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ವಿವರಗಳನ್ನು ದಾಖಲಿಸುವಂತಹ ನಿಯಮವಿದ್ದರೆ ಎಲ್ಲವೂ ದಾಖಲಾಗುತ್ತದೆ. ಗರ್ಭಿಣಿಯಾದಾಗ ಕಡ್ಡಾಯವಾಗಿ ನೊಂದಣಿ ಮಾಡಿಸಬೇಕು. ಆಗ ಮಗುವಿನ ಜನನ, ಮರಣ ಅಥವಾ ಮತ್ತೆ ಏನಾದರೂ ಆಗಿರುವುದರ ಬಗ್ಗೆ ಗಮನಿಸಬಹುದು. ಗರ್ಭಪಾತವಾದ ಸಂದರ್ಭದಲ್ಲಿ ಕಾರಣವನ್ನು ಉಲ್ಲೇಖಿಸಿರುವ ವೈದ್ಯಕೀಯ ದೃಢೀಕರಣ ಪತ್ರವನ್ನು ಸಲ್ಲಿಸಬೇಕು ಎಂಬಂತಹ ನಿಯಮಗಳನ್ನುಇದರಲ್ಲಿಇರಲಿದೆ. ಇದರಿಂದ ಹೆಣ್ಣು ಮಗುವಿನ ಜನನದ ಮುನ್ನವೇ ಹತ್ಯೆಗೆ ಪ್ರಯತ್ನಿಸುವ ಪೋಷಕರನ್ನು ಪತ್ತೆ ಮಾಡಲು ಸಹಾಯವಾಗಲಿದೆ.

ಭಾರತದಲ್ಲಿ 2011 ರ ಜನಗಣತಿಯ ವರದಿ ಪ್ರಕಾರ ಲಿಂಗಾನುಪಾತ 1000 ಗಂಡಸರಿಗೆ 943 ಮಹಿಳೆಯರಿದ್ದರು. ಇನ್ನೂ ಹರ್ಯಾಣದ ಮಕ್ಕಳ ಲಿಂಗಾನುಪಾತ 1000 ಗಂಡು ಮಕ್ಕಳಿಗೆ 889 ಹೆಣ್ಣು ಮಕ್ಕಳು ಇದ್ದರು.

ಮೇನಕಾ ಗಾಂಧಿಯವರ ಹೊಸ ಐಡಿಯಾ ಚರ್ಚೆಯಾಗಬೇಕಾದ ಸಂಗತಿ ಅನ್ನಿಸಲ್ವಾ?

Leave a Reply