ಮೇಕ್ ಇನ್ ಇಂಡಿಯಾದ ಮುಂಚೂಣಿಯಲ್ಲಿ ಮೆಟ್ರೋ, ಆಸ್ಟ್ರೇಲಿಯಕ್ಕೆ ಬೋಗಿಗಳು ರಫ್ತು, ವೃದ್ಧಿಸುತ್ತಿರುವ ತಾಕತ್ತು…

 

ಡಿಜಿಟಲ್ ಕನ್ನಡ ಟೀಮ್

ಜನವರಿ 29ರಂದು ದೇಶದ ಉತ್ಪಾದನಾ ವಲಯ ಇತಿಹಾಸವೊಂದನ್ನು ಬರೆಯಿತು. ಗುಜರಾತ್ ನ ವಡೋದರಾದಲ್ಲಿ ತಯಾರಾಗಿದ್ದ ಮೆಟ್ರೋ ಬೋಗಿಗಳು, ಮುಂಬೈ ಬಂದರನ್ನು ತಲುಪಿ, ಅಲ್ಲಿಂದ ಆಸ್ಟ್ರೇಲಿಯಕ್ಕೆ ರವಾನೆಯಾದವು.

ಮುಂದಿನ ಎರಡೂವರೆ ವರ್ಷಗಳಲ್ಲಿ ಭಾರತವು ಆಸ್ಟ್ರೇಲಿಯ ಸರ್ಕಾರಕ್ಕೆ 450 ಮೆಟ್ರೋ ಕೋಚ್ ಗಳನ್ನು ಪೂರೈಸಲಿದೆ. ಅದರ ಮೊದಲ ಭಾಗವಾಗಿ ಆರು ಬೋಗಿಗಳು ಶುಕ್ರವಾರ ಮುಂಬೈನ ಕಡಲ ತೀರದಿಂದ ಕಾಂಗರೂ ನಾಡಿಗೆ ಪಯಣ ಬೆಳೆಸಿದವು. ಅಲ್ಲಿಗೆ, ಭಾರತದಲ್ಲೇ ಉತ್ಪಾದಿಸಿ ಎಂಬ ಘೋಷವಾಕ್ಯದೊಂದಿಗೆ ಶುರುವಾಗಿದ್ದ ಮೋದಿ ಸರ್ಕಾರದ ಕೈಗಾರಿಕಾ ವಲಯದ ಅಭಿಯಾನಕ್ಕೆ ಮೆಟ್ರೋ ರೈಲು ಉತ್ಪಾದನೆ ಘಟಕಗಳೇ ಮುಂಚೂಣಿಯಲ್ಲಿ ನಿಂತು ರಂಗು ತುಂಬಿದಂತಾಗಿದೆ. ಈ ನಿಟ್ಟಿನಲ್ಲಿ ನಾವು ತಿಳಿದಿರಬೇಕಾದ ಕೆಲವು ಅಂಶಗಳು ಹೀಗಿವೆ.

  • ಬ್ರೆಜಿಲ್ ನ ಸಾವೊ ಪೌಲೊ ಮೊನೊರೈಲ್ ಸ್ಥಾಪನೆಗೆ 521 ಬೋಗಿ ಚೌಕಟ್ಟುಗಳನ್ನು ಭಾರತವೇ ಕಳುಹಿಸಲಿದೆ.
  • ಇನ್ನು ಐದು ವರ್ಷಗಳಲ್ಲಿ ಭಾರತಕ್ಕೆ 2000 ಮೆಟ್ರೋ ರೈಲುಗಳ ಬೇಡಿಕೆ ಬರಲಿದೆ. ಇದು ಮೆಟ್ರೋ ರೈಲು ತಯಾರಿಕಾ ಕೈಗಾರಿಕೆಯನ್ನು ಸಕ್ರಿಯವಾಗಿ ಇರಿಸಲಿದೆ.
  • ದೆಹಲಿ ಮೆಟ್ರೋ ರೈಲ್ ಕಾರ್ಪೋರೇಷನ್ ಸಾಧನೆ ಗಮನಾರ್ಹ. ದೆಹಲಿ ಮೆಟ್ರೋಕ್ಕೆ ಬೇಕಾದ ಶೇ. 90ರಷ್ಟು ಕೋಚ್ ಗಳನ್ನು ಭಾರತದಲ್ಲೇ ಉತ್ಪಾದಿಸಿರುವುದನ್ನೇ ಬಳಸಿಕೊಳ್ಳುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಸಾಧ್ಯವಾಗಿದೆ. ಶೇ. 10ರಷ್ಟು ಭಾಗ ಮಾತ್ರ ಜರ್ಮನಿ ಮತ್ತು ಕೊರಿಯಾಗಳಿಂದ ತರಿಸಿಕೊಂಡಿದ್ದು.
  • ಭಾರತದಲ್ಲೇ ತಯಾರಿಸುವಲ್ಲಿ ತೊಡಗಿಸಿಕೊಂಡಿರುವ ಮೆಟ್ರೋ ಕೋಚ್ ಉತ್ಪಾದನೆಯ ಮೂರು ಕಂಪನಿಗಳೆಂದರೆ ಗುಜರಾತ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನಡಾದ ಬೊಂಬಾರ್ಡಿಯರ್ ಕಂಪನಿ, ಆಂಧ್ರ-ತಮಿಳುನಾಡು ಗಡಿಯ ಶ್ರೀಸಿಟಿಯಲ್ಲಿ ಫ್ರಾನ್ಸ್ ಮೂಲದ ಕಂಪನಿ ಅಲ್ಸ್ತೋಮ್, ಸರ್ಕಾರಿ ಸ್ವಾಮ್ಯದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಮೆಟ್ರೋ ಕೋಚ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಈ ತಯಾರಿಕಾ ಘಟಕಗಳು ಹಲವು ಪರ್ಯಾಯ ಉತ್ಪಾದನಾ ಘಟಕಗಳ ಅಭಿವೃದ್ಧಿಗೂ ಪ್ರೇರೇಪಿಸುತ್ತವೆ. ಕಿಟಕಿ ಗಾಜುಗಳ ತಯಾರಿಕೆ, ಬ್ರೇಕ್ ತಯಾರಿಕೆ, ಬೋಗಿ ಚೌಕಟ್ಟುಗಳ ನಿರ್ಮಾಣ ಹೀಗೆ ಹಲವು ವಿಧದ ಕುಶಲ ಕೆಲಸಗಾರರಿಗೆ ಉದ್ಯೋಗ ನೀಡುತ್ತವೆ.

Leave a Reply