ನಿದ್ರೆ ಬರದ ತೊಳಲಾಟ ನಿಮ್ಮದೇ? ಹಾಗಾದ್ರೆ ಸೋಷಿಯಲ್ ಮೀಡಿಯಾದ ಗೀಳನ್ನು ಕಡಿಮೆ ಮಾಡ್ಕೊಳ್ಳಿ!

ಡಿಜಿಟಲ್ ಕನ್ನಡ ಟೀಮ್

ಅದ್ಯಾಕೋ ಸರಿಯಾಗಿ ನಿದ್ದೇನೇ ಬರ್ತಿಲ್ಲ, ರೆಸ್ಟ್ ತಗೋಬೇಕು ಅಂತೇನೋ ಅನ್ಸುತ್ತೆ ಆದ್ರೆ ನಿದ್ದೆಯ ಸುಖ ಇಲ್ಲ… ಹೀಗೊಂದು ತೊಳಲಾಟ ನಿಮ್ಮದಾ? ಇದಕ್ಕೆ ನಿಮ್ಮ ಸೋಷಿಯಲ್ ಮೀಡಿಯಾದ ಗೀಳು ಕಾರಣವಾಗಿರಬಹುದು ಪರೀಕ್ಷಿಸಿಕೊಳ್ಳಿ!

ಯೆಸ್… ನಿದ್ರಾಹೀನತೆಗೆ ಕಾರಣಗಳು ಹಲವು ಇದ್ದಿರಬಹುದು. ಆದರೆ, ಯುವ ಸಮುದಾಯದಲ್ಲಿ ಹೆಚ್ಚಾಗುತ್ತಿರುವ ಈ ಸಮಸ್ಯೆಗೆ ಫೇಸ್ಬುಕ್, ಇನ್ಸ್ತಾಗ್ರಾಮ್ ಇಂಥ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಹೊತ್ತು ಕಳೀತಿರೋದೇ ಕಾರಣ ಅಂತ ಅಮೆರಿಕದ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದ ಅಧ್ಯಯನ ವರದಿ ಸಾರಿದೆ.

ಅಮೆರಿಕದ 19 ರಿಂದ 32 ವಯಸ್ಸಿನ 1700 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಯಿತು. 18 ತಿಂಗಳುಗಳ ಅವಧಿಗೆ ನಡೆದ ಈ ಅಧ್ಯಯನದಲ್ಲಿಈ ಯುವಕರು ಸಾಮಾಜಿಕ ತಾಣಗಳಲ್ಲಿ ಎಷ್ಟು ಹೊತ್ತು ಕಳೆಯುತ್ತಾರೆ ಎಂಬುದನ್ನು ಅವರ ನಿದ್ದೆಯ ಪ್ರಮಾಣದೊಂದಿಗೆ ಹೋಲಿಸಲಾಯಿತು. ಇದರಿಂದ ದೃಢಪಟ್ಟ ಸಂಗತಿ ಎಂದರೆ, ಸೋಷಿಯಲ್ ಮೀಡಿಯಾ ಗೀಳನ್ನು ಅಂಟಿಸಿಕೊಂಡವರು, ದಿನದಲ್ಲಿ ಅತಿಹೆಚ್ಚು ಸಮಯ ಅದರಲ್ಲೇ ಕಳೆಯುವವರು ನಿದ್ರಾಹೀನತೆಗೆ ಒಳಗಾಗುತ್ತಿದ್ದಾರೆ. ಇವರಿಗೆ ಹೋಲಿಸಿದರೆ ಸಾಮಾಜಿಕ ತಾಣಗಳಲ್ಲಿ ಅಷ್ಟಾಗಿ ಸಮಯ ವ್ಯಯಿಸದೇ ಇರುವವರಿಗೆ ಈ ಸಮಸ್ಯೆ ಇಲ್ಲ.

ಭಾರತವನ್ನು ಕೇಂದ್ರೀಕರಿಸಿ ಇಂಥ ಅಧ್ಯಯನಗಳಾಗಿಲ್ಲ. ಆದರೆ ಅಮೆರಿಕದ ಈ ಅಧ್ಯಯನ ವರದಿ ನಮಗೂ ಎಚ್ಚರಿಕೆಯ ಗಂಟೆಯೇ. ಏಕೆಂದರೆ ಇಲ್ಲಿನ ಯುವ ಸಮುದಾಯದ ಸೋಷಿಯಲ್ ಮೀಡಿಯಾ ಗೀಳು ಜೋರಾಗಿಯೇ ಇದೆ. ಸಾಮಾಜಿಕ ಮಾಧ್ಯಮದಲ್ಲಿರುವವರೆಲ್ಲ ತಮ್ಮನ್ನು ಬಹಳ ಪ್ರಮುಖರೆಂದೂ, ಖುಷಿ ಖುಷಿಯಾಗಿರುವವರೆಂದೂ ಬಿಂಬಿಸಿಕೊಳ್ಳುತ್ತಿದ್ದರೂ ಸತ್ಯ ಬೇರೆಯೇ ಇದ್ದಿರಬಹುದು. ನಿದ್ರಾಹೀನತೆ, ಖಿನ್ನತೆ ಸೇರಿದಂತೆ ಎಷ್ಟೋ ಸಮಸ್ಯೆಗಳನ್ನು ಹುಟ್ಟುಹಾಕಿದ್ದಿರಬಹುದು ಸೋಷಿಯಲ್ ಮೀಡಿಯಾದ ಅತಿಗೀಳು.

ಸೋಷಿಯಲ್ ಮೀಡಿಯಾದಿಂದ ಆಗುವ ನಿದ್ರಾಹೀನತೆ ಒಂದು ಅಪಾಯಕಾರಿ ಸರಪಣಿಯನ್ನೇ ನಿರ್ಮಿಸುತ್ತದೆ. ದಿನವಿಡೀ ಇವುಗಳಲ್ಲಿ ನಿರತರಾಗಿರೋದ್ರಿಂದ ನಿದ್ರಾಹೀನತೆ. ಆದರೆ ರಾತ್ರಿ ನಿದ್ದೆ ಬಂದಿಲ್ಲ ಅಂತ ಮತ್ತೆ ಕಾಲಕ್ಷೇಪಕ್ಕೆ ನೋಡೋದು ಇವನ್ನೇ ಎಂಬಂತಾಗಿದೆ!

ಸೋಷಿಯಲ್ ಮೀಡಿಯಾ ಒಂದು ಅದ್ಭುತ ಪ್ರಪಂಚ. ಆದರೆ ಅದರಲ್ಲೇ ದಿನಗಳೆದರೆ ನಮ್ಮ ವಾಸ್ತವ ಜಗತ್ತು ಕದಡೀತು ಎಚ್ಚರ..

Leave a Reply