ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗ್ತೀನಿ ಅಂದ ಗೌಡ್ರಿಗೆ ಈ ಜನ್ಮದಲ್ಲೇ ಎಲ್ಲ ತೋರಿಸ್ತಿದ್ದಾರೆ ಜಮೀರ್!

ಡಿಜಿಟಲ್ ಕನ್ನಡ ವಿಶೇಷ

ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವುದಕ್ಕೆ ಬಯಸ್ತೀನಿ ಅಂತಂದಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ ಅವರದೇ ಪಾರ್ಟಿ ಮುಸ್ಲಿಂ ಲೀಡರ್ ಜಮೀರ್ ಅಹಮದ್ ಖಾನ್ ಈ ಜನ್ಮದಲ್ಲೇ ಸಾಕು-ಬೇಕು ಮಾಡುತ್ತಿದ್ದಾರೆ.

ದೇವೇಗೌಡರ ಕುಟುಂಬಕ್ಕೂ ಜಮೀರ್ ಅಹಮದ್ ಅವರಿಗೂ ಕೆಲ ವರ್ಷಗಳಿಂದ ತಿಕ್ಕಾಟ, ಹಗ್ಗ-ಜಗ್ಗಾಟ ನಡೆದೇ ಇತ್ತು. ಪಕ್ಷದ ಪಕ್ಷದ ಇತರ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದ ಜಮೀರ್ ಆಹಮದ್, ಇದೀಗ ಹೆಬ್ಬಾಳ ಅಭ್ಯರ್ಥಿ ಆಯ್ಕೆ ಸಂಬಂಧ ತಮ್ಮೊಡನೇ ಸಮಾಲೋಚನೆ ನಡೆಸಿಲ್ಲ ಎಂದು ದೇವೇಗೌಡರ ವಿರುದ್ಧವೇ ಸಮರಕ್ಕೆ ನಿಂತಿದ್ದಾರೆ. ಗೌಡರ ಜತೆ ವಿರಸ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಜಮೀರ್ ಒಡನಾಟ ತೀವ್ರವಾಗಿರುವುದು ಕೌತುಕಕ್ಕೂ ಕಾರಣವಾಗಿದೆ.

ಹೆಬ್ಬಾಳ ಪ್ರಚಾರದಿಂದ ದೂರ ಉಳಿಯುವುದಾಗಿ ಜಮೀರ್ ಉರ್ದು ಪತ್ರಿಕೆ ‘ಡೈಲಿ ಸಾಲಾರ್’ನಲ್ಲಿ ಜಾಹೀರಾತು ಕೊಟ್ಟ ನಂತರ ವಿವಾದ ಗರಿಗೆದರಿದೆ. ಜಾಹೀರಾತು ವಿಚಾರ ಗಮನಕ್ಕೆ ಬರುತ್ತಿದ್ದಂತೆ ಗೌಡರು ಪತ್ರಿಕಾಗೋಷ್ಠಿಯಲ್ಲಿ ಜಮೀರ್ ಅವರನ್ನು ತರಾಟೆಗೆ ತೆಗೆದುಕೊಂಡುರು. ಇದಕ್ಕೆ ಪ್ರತಿಯಾಗಿ ಜಮೀರ್ ಪಕ್ಷದ ಅಲ್ಪಸಂಖ್ಯಾತ ರಾಜ್ಯ ಘಟಕದ ಅಧ್ಯಕ್ಷ ಶಕೀಲ್ ನವಾಜ್ ಅವರಿಂದ ರಾಜೀನಾಮೆ ಕೊಡಿಸಿದ್ದು, ಜೆಡಿಎಸ್ ಭಿನ್ನಮತ ತೀವ್ರ ಸ್ವರೂಪ ಪಡೆದಿದೆ.

ಜಮೀರ್ ಜಾಹೀರಾತಿಗೆ ಕಾರಣಗಳು ಇಲ್ಲದಿಲ್ಲ. ಒಂದು, ಹೆಬ್ಬಾಳ ಅಭ್ಯರ್ಥಿ ಆಯ್ಕೆ ಹೊಣೆಯನ್ನು ಜಮೀರ್ ಗೆ ಒಪ್ಪಿಸಲಾಗಿದೆ ಎಂದಿದ್ದ ಗೌಡರು, ಇಸ್ಮಾಯಿಲ್ ಷರೀಫ್ ಕಣಕ್ಕಿಳಿಸುವಾಗ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದದ್ದು. ಮತ್ತೊಂದು ಸಿದ್ದರಾಮಯ್ಯನವರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿರುವುದು. ಹೀಗಾಗಿಯೇ ಜಮೀರ್ ಬಹಿರಂಗವಾಗಿಯೇ ಸಿದ್ದರಾಮಯ್ಯನವರಿಗೆ ಮಾತ್ರ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದೆ ಎಂದು ಜಾಹೀರಾತಿನಲ್ಲಿ ಹಾಡಿ ಹೊಗಳಿದ್ದಾರೆ. ಗೌಡರು ಕಂಡಾಪಟ್ಟೆ ಕೆರಳಲು ಇದೇ ಪ್ರಮುಖ ಕಾರಣ. ಹೀಗಾಗಿಯೇ ಅವರು ಜಮೀರ್ ಕಾಂಗ್ರೆಸ್ಸಿನಲ್ಲಿದ್ದಾರೋ, ಜೆಡಿಎಸ್ ನಲ್ಲಿದ್ದಾರೋ ತಿಳಿಯುತ್ತಿಲ್ಲ ಎಂದು ಪ್ರಶ್ನೆ ಮಾಡಿರುವುದು. ಜತೆಗೆ ಹೆಬ್ಬಾಳ ಚುನಾವಣೆ ಪ್ರಚಾರ ಸಮಿತಿಯಿಂದ ಅವರನ್ನು ಹೊರಗಿಟ್ಟಿರುವುದು.

ಜಮೀರ್ ತಲೆಯಲ್ಲಿ ಇನ್ನೂ ಒಂದು ವಿಚಾರವಿದೆ. ಕಳೆದ ಬಾರಿ ಸಮುದಾಯದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿ ಇದ್ದುದರಿಂದ ಕ್ಷೇತ್ರ ಮುಸ್ಲಿಂ ಕೈತಪ್ಪಿ ಹೋಗಿತ್ತು. ಗೌಡರು ಹಿಂದೆ ಜೆಡಿಎಸ್ ನಿಂದ ಅಬ್ಜುಲ್ ಅಜೀಂ ಅವರನ್ನು ಕಣಕ್ಕೆ ಇಳಿಸದೇ ಹೋಗಿದ್ದರೆ ಕಾಂಗ್ರೆಸ್ ನ ರೆಹಮಾನ್ ಷರೀಫ್ ಗೆಲ್ಲುತ್ತಿದ್ದರು. ಅಜೀಂ ಆಗ 26 ಸಾವಿರ ಮತಗಳನ್ನು ಪಡೆದಿದ್ದರು. ರೆಹಮಾನ್ ಆರೂವರೇ ಸಾವಿರ ಮತಗಳ ಅಂತರದಿಂದ ಸೋತಿದ್ದರು. ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಈಗ ಗೌಡರು ಮತ್ತೆ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿದ್ದಾರೆ. ಅದೂ ಅಭ್ಯರ್ಥಿ ಆಯ್ಕೆ ಹೊಣೆ ಹೊತ್ತಿದ್ದ ತಮ್ಮನ್ನು ಒಂದು ಮಾತು ಹೇಳದೆ-ಕೇಳದೇ. ಇದೇ ಕಾಲಕ್ಕೆ ಮುಸ್ಲಿಂ ಮುಖಂಡರು ಹಾಗೂ ಕ್ಷೇತ್ರದ ಮೌಲ್ವಿಗಳು ಕಾಂಗ್ರೆಸ್ ಅಭ್ಯರ್ಥಿ ರೆಹಮಾನ್ ಷರೀಫ್ ಗೆಲುವಿಗೆ ಸಹಕರಿಸುವಂತೆ ಜಮೀರ್ ಅವರನ್ನು ಕೇಳಿಕೊಂಡಿದ್ದಾರೆ. ಗೌಡರ ವಿರುದ್ಧ ಸಿಟ್ಟಿಗೆದ್ದಿದ್ದ ಸಂದರ್ಭದಲ್ಲೇ ಸಮುದಾಯದಿಂದ ಬಂದ ಮನವಿ ಜಮೀರ್ ಅವರನ್ನು ಮಣಿಸಿದೆ. ತತ್ಪರಿಣಾಮವೇ ಜಾಹೀರಾತು ಪ್ರಹಸನ.

ವಾಸ್ತವವಾಗಿ ಗೌಡರ ಆಲೋಚನೆಯೇ ಬೇರೆ ಆಗಿತ್ತು. ಎರಡು ಬಾರಿ ಪಕ್ಷಕ್ಕೆ ಬರುವುದಾಗಿ ಹೇಳಿ ಕೈಕೊಟ್ಟಿದ್ದ ಜಾಫರ್ ಷರೀಫ್ ಅವರಿಗೆ ಪಾಠ ಕಲಿಸಲು ಅವರ ಮೊಮ್ಮಗನ ವಿರುದ್ಧ ಗೌಡರು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ಕ್ಷೇತ್ರದಲ್ಲಿ ಹೆಚ್ಚಿರುವ ಮುಸ್ಲಿಂ ಮತಗಳು ವಿಭಜನೆ ಆಗಿ ಬಿಜೆಪಿ ಅಭ್ಯರ್ಥಿ, ಒಕ್ಕಲಿಗ ಸಮುದಾಯದ ವೈ.ಎ. ನಾರಾಯಣಸ್ವಾಮಿಗೆ ಅನುಕೂಲ ಆಗುತ್ತದೆ. ಇದರಿಂದ ಜಾಫರ್ ಷರೀಫ್ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಪಾಠ ಕಲಿಸಿದಂತಾಗುತ್ತದೆ ಎಂಬುದು ಅವರ ಚಿಂತನೆ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ಜಮೀರ್ ಉಲ್ಟಾ ಹೊಡೆದಿರುವುದು ಅವರನ್ನು ಮುಜುಗರಕ್ಕೆ ಸಿಕ್ಕಿಸಿದೆ. ತಮ್ಮ ಬೆಂಬಲಿಗ ಭೈರತಿ ಸುರೇಶ್ ಬದಲು ರೆಹಮಾನ್ ಷರೀಫ್ ಗೆ ಟಿಕೆಟ್ ಸಿಕ್ಕಿರುವುದು ಸಿದ್ದರಾಮಯ್ಯ ಅವರ ಮೇಲೆ ಒಂದಷ್ಟು ಸಹಜ ಒತ್ತಡ ತಂದಿದೆ. ಇಷ್ಟ ಇರಲಿ, ಬಿಡಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಳ್ಳುವುದು ರಾಜಕೀಯ ಅನಿವಾರ್ಯವಾಗಿದೆ. ಇಲ್ಲಿ ಮತ್ತೊಂದು ಕತೆ ಏರ್ಪಟ್ಟಿದೆ. ರೆಹಮಾನ್ ಷರೀಫ್ ಗೆದ್ದರೆ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಚಟುವಟಿಕೆಗಳು ಗರಿಗೆದರಬಹುದು ಎಂಬ ಅನುಮಾನ ಅವರ ಬೆಂಬಲಿಗರದು. ಹೀಗಾಗಿ ಅವರು ರೆಹಮಾನ್ ಸೋಲಿಗೆ ಒಳರಾಜಕೀಯ ಮಾಡುತ್ತಿದ್ದಾರೆ. ತಮ್ಮ ಮತಗಳು ಗಟ್ಟಿಯಿರುವ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲದ ಸಂದೇಶ ರವಾನಿಸುತ್ತಿದ್ದಾರೆ. ಆದರೆ ಸೋಲನ್ನು ತಮ್ಮ ತಲೆಗೆ ಕಟ್ಟುವುದು ಗ್ಯಾರಂಟಿ ಎಂದು ಅರಿತಿರುವ ಸಿದ್ದರಾಮಯ್ಯನವರು ಈ ಒಳೇಟಿಗೆ ಸಹಮತ ವ್ಯಕ್ತಪಡಿಸಿಲ್ಲ. ಆದರೆ ಅವರ ಮಾತು ಕೇಳುವ ಸ್ಥಿತಿಯಲ್ಲಿ ಬೆಂಬಲಿಗರು ಇಲ್ಲ. ಹೀಗಾಗಿ ಗೆಲುವಿಗೆ ಎಲ್ಲ ಬಗೆಯ ಅಸ್ತ್ರಗಳನ್ನು ಅನ್ವೇಷಿಸುತ್ತಿರುವ ಸಿದ್ದರಾಮಯ್ಯನವರಿಗೆ ಗೌಡರ ವಿರುದ್ಧ ಮುನಿದಿರುವ ಜಮೀರ್ ಕೂಡ ಒಂದು ಅಸ್ತ್ರವಾಗಿಯೇ ಗೋಚರಿಸಿದ್ದಾರೆ. ಅದನ್ನು ಯಶಸ್ವಿಯಾಗಿಯೇ ಪ್ರಯೋಗಿಸುತ್ತಿದ್ದಾರೆ.

ಗೌಡರಿಗೆ ಇದು ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಈಗ ಏನೂ ಮಾಡುವಂತಿಲ್ಲ. ಹೆಚ್ಚೆಂದರೆ ಜಮೀರ್ ಅವರನ್ನು ಪಕ್ಷದಿಂದ ಆಚೆ ಕಳುಹಿಸಬಹುದು. ಆದರೆ ಅದಕ್ಕೆ ಈಗಿನ ಮರುಚುನಾವಣೆ ಹಾಗೂ ಬರಲಿರುವ ಜಿಲ್ಲಾ ಮತ್ತು ತಾಲೂಕು ಚಾಯಿತಿ ಚುನಾವಣೆ ಅಡ್ಡಿಯಾಗಿದೆ. ಒಂದೊಮ್ಮೆ ಉಚ್ಚಾಟನೆ ಮಾಡಿದರೆ ಮುಸ್ಲಿಂ ಮತದಾರರನ್ನು ಸಾರಸಗಟು ಎದಿರು ಹಾಕಿಕೊಂಡಂತಾಗುತ್ತದೆ. ಹೀಗಾಗಿ ಸದ್ಯಕ್ಕೆ ಹಲ್ಲು ಕಚ್ಚಿಕೊಂಡು ಸುಮ್ಮನಿರುವುದಷ್ಟೇ ಅವರಿಗೆ ಅನಿವಾರ್ಯವಾಗಿದೆ. ಆದರೆ ಅವರು ಸುಮ್ಮನಿರಲು ಜಮೀರ್ ಬಿಡುತ್ತಾರೆಯೇ ಗೊತ್ತಿಲ್ಲ.

1 COMMENT

Leave a Reply