ವರ್ಜಿನ್ ಅಲ್ಲ ಅಂತ ಗೊತ್ತಾಗಿಬಿಟ್ಟರೆ ಏನು ಮಾಡೋದು?

 

author-geethaಪ್ರಶ್ನೆ: ನನಗೆ ಮದುವೆ ಗೊತ್ತಾಗಿದೆ. ಅಪ್ಪ-ಅಮ್ಮ ನೋಡಿ ಕುದುರಿಸಿರುವ ಸಂಬಂಧ. ಆದರೆ ಈ ಮುಂಚೆ ನನಗೆ ಒಬ್ಬ ಬಾಯ್ ಫ್ರೆಂಡ್ ಇದ್ದ. ಆ ಸಂಬಂಧದ ಬಗ್ಗೆ ನನ್ನನ್ನು ಮದುವೆಯಾಗುತ್ತಿರುವ ಹುಡುಗನಿಗೆ ಹೇಳಬೇಕಾ? ಮುಂದೆ ಅವನಿಗೆ ನಾನು ವರ್ಜಿನ್ ಅಲ್ಲ ಎಂದು ಗೊತ್ತಾದರೆ ಏನು ಮಾಡುವುದು?

ಪರಿಣತರ ಉತ್ತರ: ಹೇಳುವುದು ಬೇಡ. ಅದೇನೂ ಮುಖ್ಯವಲ್ಲ. ಕನ್ಯತ್ವದ ಪದರ (hymen), ಸೆಕ್ಸ್ ಇಂದ ಮಾತ್ರವಲ್ಲ, ಸೈಕಲ್ ಸವಾರಿ ಮಾಡುವುದರಿಂದ, ಆಟ ಆಡುವುದರಿಂದ ಕೂಡ ಹರಿಯುವ ಸಾಧ್ಯತೆ ಇದೆ. ನಿಮಗೆ ಮದುವೆ ಆಗುವುದು ಮುಖ್ಯ.

ಉತ್ತರ ಓದಿ ನನಗೆ ತಬ್ಬಿಬ್ಬಾಯಿತು. ರಕ್ತ ಸಂಬಂಧಗಳದ್ದು ಒಂದು ತೂಕ. ಮದುವೆ ಎಂಬ ಶಾಸ್ತ್ರದ ಮುಖಾಂತರ ಒಂದು ಗಂಡು, ಒಂದು ಹೆಣ್ಣು ಒಟ್ಟಿಗೆ ಬಾಳಲಾರಂಭಿಸುವುದು, ಮುಂದೆ ರಕ್ತ ಸಂಬಂಧಿಗಳಾಗುವ ಮಕ್ಕಳನ್ನು ಪಡೆಯುವುದು ಇನ್ನೊಂದು ತೂಕ. ಹೊಸದಾಗಿ ಏರ್ಪಡುವ ಈ ಸಂಬಂಧ ಸುಳ್ಳಿನ ಅಥವಾ ಸತ್ಯವನ್ನು ಮರೆಮಾಚುವ ಬುನಾದಿಯ ಮೇಲೆ ಪ್ರಾರಂಭಗೊಳ್ಳುವುದು ಎಷ್ಟು ಸರಿ? ನನ್ನ ಈ ದ್ವಂದ್ವ ಹಾಗೂ ಪ್ರಶ್ನೆಯನ್ನು ನನ್ನ ಸ್ನೇಹ ವಲಯದಲ್ಲಿ ಹಂಚಿಕೊಂಡಾಗ ಬಂದ ಉತ್ತರಗಳು ವಿಭಿನ್ನ.

‘ಈಗ ಈ ವರ್ಜಿನಿಟಿ ಅನ್ನೋದೆಲ್ಲ ಔಟ್ ಡೇಟೆಡ್. ಯಾರು ಕೇಳ್ತಾರೆ? ಯಾಕ್ರೀ ಹೇಳ್ತಾರೆ?’

‘ಅಲ್ಲಾ… ನಾನು ವರ್ಜಿನ್ ಅಲ್ಲಾ ಅಂತ ಯಾವ ಹೆಣ್ಣು ನಾಳೆ ಮದುವೆಯಾಗುವವನೊಂದಿಗೆ ಹೇಳ್ತಾಳೆ? ಹೇಳಿದ್ರೆ ಅವನು ಅವಳನ್ನು ಮದುವೆ ಆಗ್ತಾನಾ?’

‘ಯಾಕ್ರೀ ಹೇಳಬೇಕು? ಗಂಡಸರು ಸಂಬಂಧ ಇಟ್ಟುಕೊಂಡಿರ್ತಾರಲ್ಲವೇ… ಅವರು ಹೇಳ್ತಾರಾ? ಗಂಡಸರು ವರ್ಜಿನ್ ಹೌದೋ, ಅಲ್ಲವೋ ಅಂತ ಹೆಂಗಸರು ಕೇಳ್ತಾರಾ?’

‘ಹೇಳಿದರೆ ಅವನು ಜಗಜ್ಜಾಹೀರು ಮಾಡುವುದಿಲ್ಲ ಅಂತ ಏನು ಗ್ಯಾರಂಟಿ? ಮದುವೆ ಮಾಡಿಕೊಳ್ಳುತ್ತಿರುವುದೇ ಒಬ್ಬ ಅಪರಿಚಿತನನ್ನು.. ಇನ್ನು ಗುಟ್ಟೆಲ್ಲಾ ಹೇಳಿಕೊಂಡರೆ ಗೌರವ ಉಳಿಯುತ್ತಾ?’

‘ಏನೂ ಗೊತ್ತಾಗಲ್ಲ ಬಿಡ್ರೀ. ಸತ್ಯ ಅಂತ ಕುತ್ಕೊಳೋಕೆ ಇದು ಕಲಿಗಾಲ ಕಲಿಯುಗ! ದ್ವಾಪರಯುಗದಲ್ಲೇ ಸತ್ಯ ಸತ್ತೋಯ್ತು!’

‘ಮದುವೆ ಒಂದು ಆಗಲಿ. ಆಮೇಲೆ ಗೊತ್ತಾದರೂ ಏನು ಮಾಡ್ತಾನೆ? ಮದುವೆ ಆದಮೇಲೆ ಸಂಬಂಧ ಇಟ್ಟುಕೊಂಡರೆ ಅನೈತಿಕ. ಮದುವೆ ಮುಂಚಿನದಕ್ಕೆ ಅವನು ಪ್ರಶ್ನಿಸುವ ಹಾಗಿಲ್ಲ. ಪ್ರೂವ್ ಮಾಡೋಕೆ ಆಗುತ್ತಾ?’

‘ಡೈವೋರ್ಸೆಲ್ಲಾ ಅಷ್ಟು ಸುಲಭವಲ್ಲ ಈಗ. ಮೆನ್ಟೆನನ್ಸ್ ಕೊಡಬೇಕು. ಅದೆಲ್ಲಾ ಕೊಟ್ಟು ನಂತ್ರ ಬಿಟ್ರೂ ಸೆಕೆಂಡ್ ಹ್ಯಾಂಡ್ ಗಂಡು ಆಗ್ತಾನೆ… ಆಗ ವರ್ಜಿನ್ ಬೇಕು ಅಂತ ಡಿಮ್ಯಾಂಡ್ ಮಾಡೋಕೇನೂ ಆಗಲ್ಲ..’

‘ಗೊತ್ತಾಗದೆಯೇ ಇರಬಹುದು. ಗೊತ್ತಾಗುತ್ತೆ ಅಂತ ಯಾಕೆ ಅಂದ್ಕೋಬೇಕು? ಹಿಂದೆ ಹೇಗಿದ್ರು ಅನ್ನೋದು ಮುಖ್ಯವಲ್ಲ. ಮದುವೆ ಆದಮೇಲೆ ಒಬ್ಬರಿಗೊಬ್ಬರು ಲಾಯಲ್ ಆಗಿದ್ದಾರಾ ಅನ್ನೋದು ಮುಖ್ಯ.’

‘ಅದು ಮದುವೆಯಾಗುವವರ ವೈಯಕ್ತಿಕ ವಿಷಯ. ಚರ್ಚೆ ಮಾಡುವುದೇನಿದೆ? ಅವಳಿಗೆ ತೋಚಿದಂತೆ ಮಾಡಲಿ.’

‘ಈ ವರ್ಜಿನಿಟಿಗೆ ಅಷ್ಟೊಂದು ಪ್ರಾಮುಖ್ಯ ಕೊಡುವುದನ್ನು ನಿಲ್ಲಿಸಬೇಕು. ಗಂಡಸರಿಗೆ ಹೇಳಿ… ಮದುವೆ ಅಂದರೆ ಸೆಕ್ಸ್ ಒಂದೇ ಅಲ್ಲ ಎಂದು.’

‘ಸುಳ್ಳು ಹೇಳುವುದು ಬೇಡ. ಸತ್ಯ ಹೇಳದಿದ್ದರೆ ಆಯಿತು!’

‘ಒಂದು ಸುಮಧುರ ಬಾಂಧವ್ಯ ಮೂಡಬೇಕು ಅಂದರೆ ವಿಷಯಗಳನ್ನು ಮುಚ್ಚಿಡದೇ, ನೇರವಾಗಿ ಹೇಳಿ ಮುಂದುವರಿಯಬೇಕು. ಪರಸ್ಪರ ವಿಶ್ವಾಸ, ಸ್ನೇಹ, ನಂಬಿಕೆ ಇಲ್ಲದಿದ್ದರೆ ಪ್ರೀತಿ ಮಾಡುವುದು ಹೇಗೆ?’

‘ಸಮಾನತೆ ಎಂದು ನಿಂತಿರುವ ಹೆಣ್ಣು ಕೂಡ ವರ್ಜಿನ್ ಗಂಡಸೇ ಬೇಕೆಂದು ಡಿಮ್ಯಾಂಡ್ ಮಾಡಲಿ..’

ಈ ಅಂಕಣವನ್ನು ಭರ್ತಿ ಅವರಿವರು ಹೇಳಿರುವುದರಿಂದಲೇ ಬರೆದು ಮುಗಿಸಬಹುದು. ನಂತರ ಇದನ್ನು ಓದಿದವರು ಅವರಿಗೆ ಅನ್ನಿಸಿದಂತೆ ನಿರ್ಧಾರಕ್ಕೆ ಬರಬಹುದು.

ಕೆಲವು ವೈಯಕ್ತಿಕ ವಿಷಯಗಳು ಹೇಗೆ ಸಾಮಾಜಿಕ ಸಮಸ್ಯೆಗಳಾಗಿಬಿಡುತ್ತವೆ ಎನ್ನುವುದು ಖೇದಕರ. ಇಂತಹ ಮದುವೆ ನಾಳೆ ವಿಚ್ಛೇದನದಲ್ಲಿ ಕೊನೆಗೊಂಡರೆ ಅದು ಸಾಮಾಜಿಕ ಸಮಸ್ಯೆ.

ಈ ವರ್ಜಿನಿಟಿ ಇಲ್ಲದಿರುವುದನ್ನು ಮುಚ್ಚಿಟ್ಟು ಮದುವೆ ಆದರೆ, ಮದುವೆ ಮಾಡಿಕೊಂಡ ಗಂಡಿಗೆ ಅನ್ಯಾಯವಾದೀತು ಎನ್ನುವುದಕ್ಕಿಂತ, ಆ ಹೆಣ್ಣಿನ ಜೀವನವೇ ನರಕವಾಗಬಹುದು ಎಂಬುದೇ ನನ್ನ ಅಭಿಮತ.

ಹೃದಯ ವೈಶಾಲ್ಯವುಳ್ಳ, ಅವಳನ್ನು ಪ್ರೀತಿಸುವ ಗಂಡನಾಗಿದ್ದರೆ ಮುಂದೆ ವಿಷಯ ಗೊತ್ತಾದರೂ ತಾಪತ್ರಯ ಇರುವುದಿಲ್ಲ. ಅವಳು ವರ್ಜಿನ್ ಆಗಿರಲಿಲ್ಲ ಎನ್ನುವುದಕ್ಕಿಂತ ಅದನ್ನು ನನಗೆ ಹೇಳದೇ, ಮುಚ್ಚಿಟ್ಟು ಮದುವೆಯಾದಳು ಎಂಬ ನಿರ್ಧಾರಕ್ಕೆ ಬಂದರೆ, ಅವಳು ಅವನ ನಂಬಿಕೆಯನ್ನು ಕಳೆದುಕೊಳ್ಳಬಹುದು. ಪ್ರೀತಿಯಿಲ್ಲದೇ ಬದುಕಿಬಿಡಬಹುದು, ನಂಬದವರೊಡನೆ ಜೀವನ ನಡೆಸುವುದು ಬಹಳ ಕಷ್ಟ. ಇನ್ನು ವಿಚ್ಛೇದನ ಅಂತೆಲ್ಲಾ ಆದರೆ ಇನ್ನೂ ದುರ್ಭರ.

ಆ ಬಿಟ್ಟುಹೋದ ಗೆಳೆಯ ಬಂದು ಕಾಡಲಾರಂಭಿಸಿದರಂತೂ ಮತ್ತಷ್ಟು ದುಸ್ತರ. ಗಂಡನಲ್ಲಿ ಹೇಳಿಕೊಳ್ಳುವಂತಿಲ್ಲ, ಪೊಲೀಸ್ ಕಂಪ್ಲೇಂಟ್ ಕೊಡುವಂತಿಲ್ಲ. ದುಡ್ಡು ಕೇಳುತ್ತಾನೋ, ಸಂಗಸುಖ ಕೇಳುತ್ತಾನೆಯೋ… ಹೇಗೆ ಹೆದರಿಸುತ್ತಾನೋ ಗೊತ್ತಿಲ್ಲ. ‘ನೀನು ಏನೂ ಹೇಳಬೇಕಾಗಿಲ್ಲ. ನನ್ನ ಗಂಡನಿಗೆ ಇದೆಲ್ಲ ಗೊತ್ತು’ ಎಂದು ಹೇಳುವ ನಿರ್ಭಿಡೆ ಉಳಿಸಿಕೊಳ್ಳಬೇಕು.

ವರ್ಜಿನ್ ಬೇಕು ಎನ್ನುವ ಗಂಡನ್ನು, ಸತ್ಯ ಮರೆಮಾಚಿ ಕಟ್ಟಿಕೊಂಡು, ಜೀವನಪೂರಾ ಅವನಿಗೆ ಗೊತ್ತಾಗದಿದ್ದರೆ ಸಾಕು ಎಂದು ಬಾಳುವುದಕ್ಕಿಂತ, ಮದುವೆ ಆಗದೇ ಉಳಿಯುವುದೇ ಉತ್ತಮ.

ಕಾಲ ಮುಂದುವರಿದಿದೆ. ಹೆಣ್ಣು virgin ಆಗಿರಬೇಕು ಎಂದು ಕೇಳದ ಗಂಡಸರು ಇದ್ದಾರೆ. ಹೆಂಡತಿಯಾದ ಮೇಲೆ ಹೇಗೆ ಜೊತೆಯಲ್ಲಿ ಇರುತ್ತೇವೆ ಎನ್ನುವುದು ಮುಖ್ಯ ಎಂಬ ಅಭಿಮತ ಹೊಂದಿರುವವರು ಖಂಡಿತ ಇದ್ದಾರೆ.

Virginity is not not just the virtue of women… it is virtue of men too.

ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಸಿಂಗಲ್ ಪಾರ್ಟನರ್ ಅತ್ಯುತ್ತಮ.

Leave a Reply