ಸಮುದ್ರದ ಹೊಟ್ಟೇಲಿ ಸರ್ವರ್ ಇಟ್ಟು ನೋಡ್ತು ಮೈಕ್ರೊಸಾಫ್ಟ್!

 

ಡಿಜಿಟಲ್ ಕನ್ನಡ ಟೀಮ್

ನಗರ ಜೀವನವಂತೂ ಗಣಕಮಯ ಅರ್ಥಾತ್ ಕಂಪ್ಯೂಟರ್ ಪ್ರಭಾವದಿಂದಲೇ ಆವರಿಸಿದಂಥದ್ದುಅಂತ ಸುತ್ತಲಿನ ಸಾಧನಗಳತ್ತ ಕಣ್ಣು ಹಾಯಿಸುತ್ತಲೇ ನಿಚ್ಚಳವಾಗುತ್ತದೆ. ಆದರೆ ಇಲ್ಲೆಲ್ಲ ಹುಟ್ಟುತ್ತಲೇ ಇರುವ ಮಾಹಿತಿಗಳು ಮಲಗುವುದೆಲ್ಲಿ? ಕಾರ್ಯನಿರ್ವಹಿಸುವುದೆಲ್ಲಿಂದ?

ಆನ್ ಲೈನ್ ನಲ್ಲಿದ್ದು ಫೇಸ್ಬುಕ್ ಅನ್ನೋ, ಇನ್ಯಾವುದೋ ತಂತ್ರಾಂಶದ ಮೇಲೋ ಕೆಲಸ ಮಾಡಿದಾಗ ಅದರ ಡಾಟಾ ಇನ್ನೆಲ್ಲೋ ಸಂಗ್ರಹಗೊಂಡಿರುತ್ತದೆ. ದೈತ್ಯ ಕಂಪ್ಯೂಟಿಂಗ್ ಕಂಪನಿಗಳು ಇದಕ್ಕಾಗಿ ಬೃಹತ್ ಸರ್ವರ್ ವ್ಯವಸ್ಥೆಯನ್ನೇ ಹೊಂದಿರುತ್ತವೆ. ಇಲ್ಲಿನ ಮುಖ್ಯ ಸವಾಲು ಎಂದರೆ, ಆ ಪ್ರಮಾಣದ ವ್ಯವಸ್ಥೆ ನಿರಂತರ ತಣ್ಣಗಾಗುವ (ಕೂಲಿಂಗ್) ಪ್ರಕ್ರಿಯೆಗೆ ಒಳಪಡಬೇಕು. ಹೀಗಾಗಿ ಜನಸಾಂದ್ರತೆ ಇಲ್ಲದ, ಗ್ಯಾಲನ್ ಗಟ್ಟಲೇ ನೀರು ಲಭ್ಯವಿರುವ ಸ್ಥಳಗಳಲ್ಲಿ ಇಂಥ ವ್ಯವಸ್ಥೆ ಹೊಂದಿರಬೇಕಾಗುತ್ತದೆ.

ಇತ್ತೀಚೆಗೆ ಮೈಕ್ರೋಸಾಫ್ಟ್ ನ ಸಂಶೋಧನಾ ವಿಭಾಗ ಐಡಿಯಾ ಒಂದನ್ನು ಪ್ರಯೋಗ ರೂಪಕ್ಕಿಳಿಸಿ ಯಶಸ್ವಿಯಾಗಿದೆ. ಸಮುದ್ರದಾಳದಲ್ಲಿ ಇಂಥ ವ್ಯವಸ್ಥೆ ಹೊಂದೋದು ಸಾಧ್ಯವಾದರೆ ಹೆಂಗಿರುತ್ತೆ ಅನ್ನೋದೇ ಆ ಐಡಿಯಾ! ಕೂಲಿಂಗ್ ಗಾಗಿ ನೀರು ತರೋದೇನು, ನೀರಿನ ಮಧ್ಯೆಯೇ ಇದ್ದುಬಿಡೋಣ ಎಂಬ ಐಡಿಯಾ.

ಕ್ಯಾಲಿಫೋರ್ನಿಯಾ ಸಮುದ್ರದಲ್ಲಿ 38 ಸಾವಿರ ಪೌಂಡ್ ನ ಸರ್ವರ್ ವ್ಯವಸ್ಥೆಯೊಂದನ್ನು ಮುಳುಗಿಸಿ, ಇತ್ತ ಭೂಮಿ ಮೇಲಿನ 300 ಗಣಕ ಯಂತ್ರಗಳ ಸಂಪರ್ಕವನ್ನು ಅದರೊಂದಿಗೆ ಕಲ್ಪಿಸಿ ಕಾರ್ಯಸಾಧುವೇ ಅಂತ ಪರೀಕ್ಷಿಸಿದಾಗ ಯಶಸ್ಸು ಸಿಕ್ಕಿದೆ.

ಮೈಕ್ರೊಸಾಫ್ಟ್ ನ ಈ ಪ್ರಯೋಗ ಭವಿಷ್ಯದ ಡಾಟಾ ಸಂಗ್ರಹ ಮೂಲಸೌಕರ್ಯಕ್ಕೊಂದು ದಾರಿದೀವಿಗೆ ಎಂಬಂತಿದೆ. ಬಹಳಷ್ಟು ನಗರಗಳು ಸಮುದ್ರ ತೀರದಲ್ಲೇ ಇರುವುದರಿಂದ, ಅಂಥ ಸಾಗರಗಳೊಳಗೆ ಡಾಟಾ ಸಂಗ್ರಹ ವ್ಯವಸ್ಥೆ ಇದ್ದರೆ, ಅದು ಸಿಗ್ನಲ್ ಪಡೆಯುವುದಕ್ಕೂ ದೂರ ಕಡಿಮೆಯಾಗಿ ಕ್ಷಮತೆ ಹೆಚ್ಚುವ ಲೆಕ್ಕಾಚಾರವಿದೆ.

ಆದರೆ ಇದು ಸಣ್ಣಮಟ್ಟದ ಪ್ರಯೋಗ ಮಾತ್ರ. ಬೃಹತ್ ಪ್ರಮಾಣದಲ್ಲಿ ಸಾಗರ ತಳದಲ್ಲಿ ಇಂಥ ಡಾಟಾ ಕೇದ್ರ ಹೊಂದುವುದಕ್ಕೆ ಎದುರಾಗುವ ಸವಾಲುಗಳನ್ನು ಅಧ್ಯಯನ ಮಾಡಬೇಕಿದೆ. ಮುಖ್ಯವಾಗಿ, ಇದರಿಂದ ಸಮುದ್ರಜೀವಿಗಳಿಗೆ ಅಡ್ಡ ಪರಿಣಾಮಗಳು ಆಗುತ್ತವಾ ಎಂಬ ಆತಂಕಕ್ಕೂ ಉತ್ತರ ಕಂಡುಕೊಳ್ಳಬೇಕಿದೆ.

Leave a Reply