ಜಿನಪಥದ ಮೂಲಕ ಹಿರಿಯ ‘ಜೀವಿ’ ಗೆ ನೃತ್ಯನಮನ, ಏನಿದರ ಹೂರಣ?

ಫೆಬ್ರುವರಿ 5ರ ಶುಕ್ರವಾರ  ಸಂಜೆ 6 ಗಂಟೆಗೆ ಮಲ್ಲೇಶ್ವರಂನ `ಸೇವಾಸದನ’ ರಂಗಮಂದಿರದಲ್ಲಿ ಡಾ|| ಕೆ.ಎಸ್. ಪವಿತ್ರಾ ಅವರಿಂದ ‘ಜಿನಪಥ-ಬೆಳಗುವೆನಿಲ್ಲಿ ಜಿನಾಗಮಂ’ ನೃತ್ಯಪ್ರಸ್ತುತಿ ನಡೆಯಲಿದೆ. ಹಿರಿಯ ಭಾಷಾತಜ್ಞ ಜಿ. ವೆಂಕಟಸುಬ್ಬಯ್ಯನವರ ಗೌರವಾರ್ಥ ನಡೆಯಲಿರುವ ಈ ಕಾರ್ಯಕ್ರಮದಲ್ಲಿ’ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. `ಶ್ರೀವಿಜಯ’ದ ಅಧ್ಯಕ್ಷ ಡಾ|| ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ನೃತ್ಯ ಕಾರ್ಯಕ್ರಮದ ಹೂರಣವೇನು ಎಂಬುದರ ಬಗ್ಗೆ ಡಾ. ಕೆ. ಎಸ್ ಪವಿತ್ರ ಅವರೇ ಪರಿಚಯಾತ್ಮಕ ಲೇಖನ ಬರೆದಿದ್ದಾರೆ.

‘ಕನ್ನಡ ಜೈನ ಸಾಹಿತ್ಯ’ ವನ್ನು ಅಧ್ಯಯನ ಮಾಡಿದವರಿಗೆ ಸಾವು-ವೃದ್ಧಾಪ್ಯಗಳ ಹೆದರಿಕೆಯಿಲ್ಲಎಂದು ಮನೋವೈದ್ಯೆಯಾದ ನನ್ನಲ್ಲಿ  ಕನ್ನಡ ಜೈನ ಸಾಹಿತ್ಯದ ಬಗ್ಗೆ ಕುತೂಹಲ ಹುಟ್ಟಿಸಿದವರು ಹಿರಿಯ ಭಾಷಾ ತಜ್ಞ ಶತಾಯುಷಿ ಜಿ. ವೆಂಕಟಸುಬ್ಬಯ್ಯನವರು. ನನ್ನಂಥ ನೂರಾರು ಜನರಲ್ಲಿ ಕನ್ನಡ ಸಾಹಿತ್ಯ-ಭಾಷೆಗಳ ಬಗ್ಗೆ ಒಲವು-ಅಧ್ಯಯನದ ಆಸಕ್ತಿ ಮೂಡಿಸಿದ ಈ ಹಿರಿಯ ಜೀವಿಗೆ ಕೃತಜ್ಞತೆ ಹೇಳುವ ಬಗೆ ಹೇಗೆ? ಅವರ ಗೌರವಾರ್ಥವಾಗಿ ಒಂದು ಕಾರ್ಯಕ್ರಮವನ್ನೇ ಏರ್ಪಡಿಸಿದರೆ? ಕನ್ನಡ ಸಾಹಿತ್ಯ ಜಗತ್ತು ಕಂಡ ಮಹಾಕವಿಗಳಲ್ಲಿ ಆದಿ ಕವಿಯೆನಿಸಿದ ಪಂಪನ, `ಯೋಗಭೋಗ ಸಮನ್ವಯ’ ವನ್ನು ಹೊರ ತಂದ ರತ್ನಾಕರ ವರ್ಣಿಯ ಕಾವ್ಯಗಳನ್ನು ಆಧರಿಸಿದ `ಜಿನಪಥ’ ಎಂಬ ನೃತ್ಯ ಪ್ರಸ್ತುತಿ ಬೆಂಗಳೂರಿನಲ್ಲಿ ನಡೆಯುತ್ತಿರುವ  ಹಿನ್ನೆಲೆ ಇದು.

G.Venkatasubbaiah

‘ಹಳೆಗನ್ನಡನಾ? ಯಾರ್ರೀ ಓದ್ತಾರೆ ಈಗ? ಅದನ್ನ ಈಗಿನ ಕನ್ನಡಕ್ಕೆ ಅನುವಾದ ಮಾಡ್ಬೇಕು!  ಪಂಪ -ರತ್ನಾಕರವರ್ಣಿ ಒಳ್ಳೇ ಕವಿಗಳೇ ಇರ್ಬಹುದು. ಆದರೆ ಆ ಕಾವ್ಯಗಳನ್ನು ಅವರು ಬರೆದದ್ದು ಆಗ. ಈಗಿನ ಜನರಿಗೆ ಅದನ್ನು ಓದೋದಿಕ್ಕೆ ಹೋದ್ರೆ ನಾಲಿಗೇನೇ ತಿರುಗೋಲ್ಲ!’ ಇವು ಪಂಪ – ರತ್ನಾಕರವರ್ಣಿಯ ಕಾವ್ಯಗಳನ್ನು ಆಧರಿಸಿ, ‘ಜಿನಪಥ’ ವನ್ನು ರೂಪಿಸಲು ಹೊರಟಾಗ ನಾನು ಎದುರಿಸಿದ ಟೀಕೆಗಳು. ಇನ್ನೊಬ್ಬ ಕನ್ನಡ ಪ್ರಾಧ್ಯಾಪಕರು ಹೇಳಿದ್ದು ‘ಅಮ್ಮಾ, ನೀವು ಮಾಡ್ತಾ ಇರೋ ಪ್ರಯತ್ನ ಏನೋ ಒಳ್ಳೇದೇ. ಆದ್ರೆ ಜನರಿಗೆ ಈ ಕಷ್ಟವಾದ ಸಾಹಿತ್ಯವೆಲ್ಲಅರ್ಥವಾಗೋದಿಕ್ಕೆ ಸಾಧ್ಯವೇ? ವಿಶ್ವವಿದ್ಯಾಲಯದ ಸಾಹಿತ್ಯ ವಿದ್ಯಾರ್ಥಿಗಳಿಗೇ ಬೇಡ ಅಂಥ ಪಂಪ-ರತ್ನಾಕರರನ್ನು ಹೊರಗೆ ಹಾಕ್ತಾ ಇದಾರೆ!’

ಪಂಪ ಕನ್ನಡ ಕಾವ್ಯ ಜಗತ್ತು ಮರೆಯಲಾಗದ ಕವಿ. ತನ್ನ ಆದಿಪುರಾಣ, ‘ವಿಕ್ರಮಾರ್ಜುನ ವಿಜಯ’ ಗಳಿಂದ ಆತ ಹೆಸರಾಗಿದ್ದಾನೆ. ರತ್ನಾಕರವರ್ಣಿ ‘ಭರತೇಶ ವೈಭವ’, ‘ರತ್ನಾಕರನ ಹಾಡು’ ಗಳನ್ನು ತನ್ನ ಪ್ರತಿಭೆಯಿಂದ ರೂಪಿಸಿದ್ದಾನೆ. ಜೈನ ಧರ್ಮದ ಧಾರ್ಮಿಕ ಪುರಾಣದ ಕಥೆಯನ್ನು, ತತ್ತ್ವವನ್ನು ಪಂಪನ ಆದಿಪುರಾಣ, ರತ್ನಾಕರವರ್ಣಿಯ ‘ಭರತೇಶ ವೈಭವ’- ‘ಹಾಡು’ ಗಳು ಕಾವ್ಯಮಯವಾಗಿ ನಿರೂಪಿಸುತ್ತವೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಈ ಎರಡೂ ಗ್ರಂಥಗಳು ಪರಿಚಿತವೇ. ಆದರೆ ಸಾಮಾನ್ಯ ಜನರಿಗೆ ಪಂಪ-ರತ್ನಾಕರರರ ಹೆಸರು ಪರಿಚಿತವಾಗಿರುವಷ್ಟು ಅವರ ಗ್ರಂಥದ ಭಾಗಗಳು ಆಗಿಲ್ಲವೆಂದೇ ಹೇಳಬಹುದು. ಹಾಗೆಯೇ ಜೈನ ಬಸದಿಗಳ ಬಗ್ಗೆ ನಾವು ಅಲ್ಲಲ್ಲಿ ನೋಡಿದರೂ, ದಿಗಂಬರರಾದ ಜೈನಮುನಿಗಳು, ಅಹಿಂಸೆಗಾಗಿ ಬಾಯಿಯನ್ನೇ ಬಟ್ಟೆಯಿಂದ ಮುಚ್ಚಿಕೊಳ್ಳುವ ಜೈನ ಪದ್ಧತಿ, ಎಲ್ಲವನ್ನೂ ತೊರೆದು ನಗ್ನನಾಗಿ ನಿಂತು ಬೆರಗು ಮೂಡಿಸುವ ಬಾಹುಬಲಿ- ಇವರ ಬಗ್ಗೆ ಅಲ್ಪಸ್ವಲ್ಪ ತಿಳಿದರೂ, ಜೈನ ಧರ್ಮದ ತತ್ತ್ವಗಳನ್ನು  ಕುತೂಹಲಕ್ಕಾದರೂ  ಒಮ್ಮೆ ನೋಡುವ, ಕಥೆಯ ದೃಷ್ಟಿಯಿಂದಲಾದರೂ ಜೈನ ಕಾವ್ಯಗಳ ಕಥೆಗಳನ್ನು ಓದುವ ಪ್ರವೃತ್ತಿ ನಮ್ಮೆಲ್ಲರಲ್ಲಿ ಕಡಿಮೆಯೇ.

ಕಥೆಯ ದೃಷ್ಟಿಯಿಂದ ಅಥವಾ ಕಲೆಯ ದೃಷ್ಟಿಯಿಂದ (ಅಂದರೆ ನಾಟಕ-ನೃತ್ಯಗಳ ಸಲುವಾಗಿ) ನೋಡಿದರೆ ಜೈನಸಾಹಿತ್ಯ ಒದಗಿಸುವ ಸಾಮಗ್ರಿ ವಿಪುಲವಾದದ್ದು. ಇಲ್ಲಿ ಕೇಂದ್ರ ಮನುಷ್ಯ ಮತ್ತು ಆತನ ಸಾಧನೆಗಳು. ಇಲ್ಲಿ ಮನುಷ್ಯ ಸತ್ತಂತೆಲ್ಲಾ ಇನ್ನೊಂದು ಜನ್ಮ ಅಥವಾ ಈ ಪುರಾಣಗಳು ಕರೆಯುವ ‘ಭವ’ ದಲ್ಲಿ ಹುಟ್ಟುತ್ತಾನೆ. ತನ್ನ ಪಾಪ-ಪುಣ್ಯಗಳಿಗನುಸಾರವಾಗಿ ಈ ಜನ್ಮ ಹಿಂದಿನದಕ್ಕಿಂತ ಉತ್ತಮವೋ ಅಥವಾ ಕೆಳಗಿನದೋ ಯಾವುದೂ ಆಗಬಹುದು. ಒಟ್ಟಿನಲ್ಲಿ ಮನುಷ್ಯ ಜೀವನ ವಿಕಾಸ ಇಲ್ಲಿ ಮುಖ್ಯ. ಆದರೆ ಈ ‘ಸಾವು’ – `ಭವ’ ಇವುಗಳಿಗೆ ಸಂಬಂಧಿಸಿದ ಗಂಭೀರ ವಿಷಯಗಳೆಲ್ಲವೂ ಪಂಪ-ರತ್ನಾಕರವರ್ಣಿಗಳ ಲೇಖನಿಯಲ್ಲಿ ಮೂಡುವುದು ಸಾಕಷ್ಟು ಮನರಂಜನಾತ್ಮಕವಾಗಿಯೇ.

ಮೊದಲಿಗೆ ಆದಿದೇವನ ಅಥವಾ ವೃಷಭನಾಥನ ಹುಟ್ಟು, ಭರತ-ಬಾಹುಬಲಿಗಳ ಹುಟ್ಟು ಇವುಗಳನ್ನು ನೋಡಬಹುದು. ಅವರ ತಾಯಂದಿರಿಗೆ  ಬೀಳುವ ಸ್ವಪ್ನಗಳು, ಜನ್ಮಾಭಿಷೇಕ-ಗರ್ಭಾವತರಣ ಕಲ್ಯಾಣಗಳೆಂಬ ವಿಧಿಗಳ ವಿವರವಾದ ವರ್ಣನೆಗಳನ್ನು ಓದಿ, ಊಹಿಸಿಕೊಳ್ಳತೊಡಗಿದರೆ, ಆ ಊಹೆಯಿಂದ ನಾಟಕ-ನಾಟ್ಯಗಳಲ್ಲಿ ಅದನ್ನು ಚಿತ್ರಿಸಲು ಯತ್ನಿಸಿದರೆ ಮನಸ್ಸಿಗೆ ಮುದವಾಗುವುದರಲ್ಲಿ ಸಂಶಯವಿಲ್ಲ.

ಆ ಮೇಲೆ ನಮ್ಮ ಗಮನ ಸೆಳೆಯುವುದು ಶ್ರೀಮತಿ -ವಜ್ರಜಂಘರ ಭವ. ಇಲ್ಲಿ ಶ್ರೀಮತಿ -ವಜ್ರಜಂಘರದು ತುಂಬಾ ‘ರೊಮ್ಯಾಂಟಿಕ್’ ಆದ, ಆದರೆ ಕೊನೆಯಲ್ಲಿ ‘ಟ್ರ್ಯಾಜೆಡಿ’ ಯಾಗಿಬಿಡುವ ಕಥೆ. ಅವರಿಬ್ಬರೂ ಸಂಧಿಸುವ ಪ್ರಸಂಗ, ಶ್ರೀಮತಿ ತಮ್ಮ ಹಿಂದಿನ ಜನ್ಮದ ಪ್ರಣಯ ಪ್ರಸಂಗಗಳ ಚಿತ್ರ ಬರೆಯುವಿಕೆ, ಅದನ್ನು ನೋಡಿ ಅದನ್ನು ಗುರುತಿಸುವ ವಜ್ರಜಂಘ, ಅವರ ಮದುವೆ, ಪ್ರಥಮ ಸ್ಪರ್ಶ ಇವೆಲ್ಲ ನಮ್ಮನ್ನೂ ಪ್ರಣಯ-ಪ್ರೀತಿಗಳ ಜಗತ್ತಿನಲ್ಲಿ ತೇಲಾಡುವಂತೆ ಮಾಡುತ್ತವೆ. ಹೀಗೆ ಎಲ್ಲವೂ ಸುಖವಾಗಿ ಸಾಗುವಾಗಲೇ, ಕೂದಲನ್ನು ಒಣಗಿಸಲು ಇಟ್ಟ ಕಪ್ಪು ಅಗರುವಿನ ಧೂಪದಿಂದ ಉಸಿರುಗಟ್ಟಿ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡೇ ಪ್ರಾಣ ಬಿಡುತ್ತಾರೆ. ಪಂಪ ಹೇಳುವಂತೆ ‘ಕೃಷ್ಣಾ ಗರು ಧೂಪಧೂಮನಿವಹಂ ಕೃಷ್ಣೋರಗಂ ಕೊಲ್ಯವೊಲ್’ ಎಂಬ ಮಾತು ಮತ್ತೆ ಮತ್ತೆ ಕಪ್ಪು ಹಾವು-ಕಪ್ಪು ಬಣ್ಣದ ಹೊಗೆಯ ಸಾಮ್ಯವನ್ನು ಕಣ್ಣ ಮುಂದೆ ನಿಲ್ಲಿಸುತ್ತದೆ. ಪ್ರಣಯದ ಲೋಕದಲ್ಲಿ ವಿಹರಿಸುತ್ತಿದ್ದ ಮನಸ್ಸಿಗೆ ಒಂದು ರೀತಿಯ ವಿಷಾದ ಆವರಿಸುತ್ತದೆ.

ಮುಂದೆ ಬರುವ ನೀಲಾಂಜನೆಯ ನಾಟ್ಯ ಪ್ರಸಂಗ ಆದಿದೇವನಿಗೆ ವೈರಾಗ್ಯ ತಂದುಕೊಟ್ಟರೂ, ಓದುವ-ನೋಡುವ ನಮಗೆ ದೇವ ನರ್ತಕಿಯ ನಾಟ್ಯವನ್ನೇ ಕಣ್ಣಮುಂದೆ ತರುತ್ತದೆ. ಆಕೆಯ ಭಂಗಿ-ನಿಲುವು-ಆಭರಣಗಳು-ನಾಟ್ಯ ನಿಪುಣತೆ ಇವು ನಮ್ಮ ಮನಸ್ಸಿನಲ್ಲಿಯೂ ನರ್ತಿಸುವ ನೀಲಾಂಜನೆಯನ್ನು ಚಿತ್ರಿಸುತ್ತವೆ. ನೀಲಾಂಜನೆ ರಂಗದ ಮೇಲೆ ನರ್ತಿಸುವಾಗಲೇ ಆಯುಷ್ಯ ಮುಗಿದು ಸಾಯುತ್ತಾಳೆ. ರಸಭಂಗವಾಗಬಾರದೆಂದು ಇಂದ್ರ ಮತ್ತೊಂದು ನೀಲಾಂಜನೆಯನ್ನು ಸೃಷ್ಟಿಸುತ್ತಾನೆ. ನೃತ್ಯ ಮುಂದುವರಿಯುತ್ತದೆ. ಆದಿದೇವನಂಥ ಮಹಾತ್ಮನಿಗೆ ತಪಸ್ಸಿಗೆ ತೆರಳಲು ಈ ಪ್ರಸಂಗ ಸಾಕಾಗುತ್ತದೆ. ನಮ್ಮಂಥಹ ಸಾಮಾನ್ಯರಿಗೆ ‘ನೀಲಾಂಜನೆ’ ‘ಸತ್ತಳು’ `ಆಯುಷ್ಯ ಮುಗಿದಿತ್ತು’ ಎನ್ನುವ ಸಂಗತಿ ಸಾಮಾನ್ಯವಷ್ಟೇ ಆಗಿಬಿಡುತ್ತದೆ!  ಆದರೆ ಆದಿದೇವನ ತಪಸ್ಸಿನ ವಿವರಣೆ ಎಂಥ ಸಾಮಾನ್ಯನಿಗೂ ಮನಸ್ಸಿಗೆ ಒಂದು ರೀತಿಯ ಶಾಂತಿಯ ಅನುಭವ, ಯೋಗಿಯ ಮನಸ್ಥಿತಿಯ ಬಗೆಗೆ ಗೌರವ, ‘ತಪಸ್ಸ’ನ್ನೂ ಇಷ್ಟು ಕಣ್ಣ ಮುಂದಿಡುವಂತೆ ಚಿತ್ರಿಸುವ ಪಂಪನ ಬಗ್ಗೆ ಮೆಚ್ಚುಗೆ ಮೂಡಿಸುತ್ತವೆ.

ನಂತರದ ಕಥೆ ನಮ್ಮೆಲ್ಲರಿಗೂ ಚಿರಪರಿಚಿತವಾದ ಭರತ-ಬಾಹುಬಲಿಯ ಕಥೆ. ಒಬ್ಬ ಪ್ರಥಮ ಚಕ್ರವರ್ತಿ. ಇನ್ನೊಬ್ಬ ಜೈನಪುರಾಣಗಳ ಪ್ರಕಾರ ಪ್ರಥಮ ಕಾಮದೇವ!  ಚಕ್ರ ತಿರುಗುತ್ತಾ ಪೌದನಪುರದ ಹತ್ತಿರ ಮುಂದೆ ಹೋಗದೆ ನಿಂತು ಬಿಡುತ್ತದೆ. ಭರತ-ಬಾಹುಬಲಿ ಯುದ್ಧಕ್ಕೆ ನಿಲ್ಲುತ್ತಾರೆ. ಇಡೀ ಸೈನ್ಯ-ಸೈನ್ಯ ಸೆಣೆಸುವ ಬದಲು, ಇಬ್ಬರೇ ಎದುರಾಗಿ ನಿಂತು ದೃಷ್ಟಿಯುದ್ಧ-ಜಲಯುದ್ಧ, ಮಲ್ಲಯುದ್ಧಗಳಲ್ಲಿ ಸೆಣಸುತ್ತಾರೆ. ಬಾಹುಬಲಿ ಗೆಲ್ಲುತ್ತಾನೆ. ಇನ್ನೇನು ಭರತನನ್ನು ಎತ್ತಿ ಒಗೆಯಬೇಕು, ಆಗ, ಆ ಕ್ಷಣದಲ್ಲಿ ಮನಸ್ಸು ಬದಲಾಗುತ್ತದೆ ನಮ್ಮೆಲ್ಲರಲ್ಲೂ ಇದ್ದಕ್ಕಿದ್ದಂತೆ ಮನ ಬದಲುವಂತೆ!  ಆದರೆ ಬಾಹುಬಲಿಯಲ್ಲಿ ಅದು ಸ್ಥಿರವಾಗಿ ನಿಂತು ಅಲ್ಲಿಯವರೆಗೆ ಬಾಹುಬಲದಿಂದ ಮೆರೆಯುತ್ತಿದ್ದವನು, ಈಗ ಆತ್ಮಬಲಿಯಾಗಿ ಬೆಳಗತೊಡಗುತ್ತಾನೆ!  ಈ ಕಥೆಯಂತೂ ಮನಮುಟ್ಟುವಂಥದ್ದು.

ಪಂಪ-ರತ್ನಾಕರವರ್ಣಿಯರು ಈ ಕಾವ್ಯಗಳನ್ನು ರಚಿಸಿದ್ದು, ಆ ಹೊತ್ತಿನ ಧಾರ್ಮಿಕ ಅಗತ್ಯಗಳಿಗೆ ಎನ್ನುವುದರ ಬಗೆಗೆ ಯಾವ ಸಂಶಯವೂ ಇಲ್ಲ. ಆದರೆ ಅವುಗಳಲ್ಲಿರುವ ಕಾವ್ಯಸತ್ತ್ವವೂ ಬಲವಾಗಿಯೇ ಎದ್ದು ನಿಲ್ಲುತ್ತದೆ. ಅಹಿಂಸೆ-ತ್ಯಾಗ-ಕ್ಷಮೆ – ಸಹನಶೀಲತೆ ಇವು ಯಾವ ಒಂದು ಧರ್ಮಕ್ಕೆ ಸೀಮಿತವಾದವೂ ಅಲ್ಲ. (ಈಗಂತೂ, ಅಂದರೆ ಇಂದಿನ ಸಂಘರ್ಷಗಳ ಕಾಲದಲ್ಲಂತೂ ಈ ಮೌಲ್ಯಗಳ ಅಗತ್ಯ ಹಿಂದೆಂದಿಗಿಂತ ಹೆಚ್ಚು) ಹಳಗನ್ನಡ ಪದ್ಯಗಳಿಗೆ ಪದಶಃ ಅರ್ಥವನ್ನು ಕೊಟ್ಟು, ಸುಲಲಿತವಾಗಿ ಬಿಡಿಸಿಡುವ, ಅರ್ಥ ನೀಡುವ ಪುಟಾಣಿ ಪುಸ್ತಕಗಳಿಗೆ ಕನ್ನಡದಲ್ಲಿ ಕೊರತೆಯೂ ಇಲ್ಲ.

ಹೀಗಿರುವಾಗ ಪಂಪ-ರತ್ನಾಕರರನ್ನು ಹಳೆಗನ್ನಡ ಕವಿಗಳು ಎಂದು ಕೈಬಿಡದೆ, ಅವರನ್ನು ವಿಶ್ವವಿದ್ಯಾಲಯಗಳಿಗೆ ಸೀಮಿತಗೊಳಿಸದೆ, ಕಲೆಯ ವಿವಿಧ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವ, ಹಳತರ ಮೂಲಕ ಹೊಸತನ್ನು ನೀಡುವ ಪ್ರಯತ್ನ ಇಂದು ಆಗಬೇಕಿದೆ. ಅದು ನಿಜ ಅರ್ಥದಲ್ಲಿ ಕಲೆ-ಸಾಹಿತ್ಯಗಳನ್ನು ಜೀವನದೊಂದಿಗೆ ಬೆಸೆಯುವ, ಪಂಪನಂಥ ಚಿರ ಕವಿಗಳನ್ನು ಎಂದೆಂದಿಗೂ ಪ್ರಸ್ತುತವಾಗಿಸುವ ಕಾರ್ಯ. ಅಂಥ ಪ್ರಯತ್ನ `ಜಿನಪಥ-ಬೆಳಗುವೆನಿಲ್ಲಿ ಜಿನಾಗಮಂ’ ಎಂಬ ನೃತ್ಯರೂಪಕ.

ವಯೋವೃದ್ಧರೂ, ಜ್ಞಾನವೃದ್ಧರೂ ಆದ  ಜಿ. ವೆಂಕಟಸುಬ್ಯಯ್ಯನವರ ಗೌರವಾರ್ಥ ನಡೆಯುತ್ತಿರುವ ‘ಜಿನಪಥ’ ಒಂದು ವಿಶಾಲ ಜೀವನ ದೃಷ್ಟಿಯನ್ನು ಬಿಂಬಿಸುತ್ತದೆ. ಅಹಿಂಸೆ-ಮೋಕ್ಷ ಸಾಧನೆಯ ಉನ್ನತ ಧ್ಯೇಯಗಳನ್ನು ಎತ್ತಿ ಹಿಡಿಯುತ್ತದೆ.ಲಲಿತ ಕಲೆ -ಸಾಹಿತ್ಯಗಳನ್ನು ಸವಿಯುವ ಮೂಲಕ, ಕನ್ನಡ ಭಾಷೆಯ ಸೌಂದರ್ಯವನ್ನು ಅರಿಯುವ ಮೂಲಕ ಶಬ್ದಬ್ರಹ್ಮ ಜಿ. ವೆಂಕಟಸುಬ್ಬಯ್ಯ ನವರಿಗೆ ಗೌರವ-ಮನ್ನಣೆಯನ್ನು ಸಾರ್ಥಕವಾಗಿ ನೀಡಲು ‘ಜಿನಪಥ’ ವನ್ನು ಶಿವಮೊಗ್ಗೆಯ ‘ಶ್ರೀವಿಜಯ ಕಲಾನಿಕೇತನ’ ಮತ್ತು ಬೆಂಗಳೂರಿನ ‘ಕಲಾವರ್ಧಿನಿ’ ಸಂಸ್ಥೆ ಆಯೋಜಿಸಿವೆ. ಕಾವ್ಯವನ್ನು ನೃತ್ಯದ ಮೂಲಕ ಸವಿಯುವ ವಿಭಿನ್ನ-ವಿನೂತನ ಅವಕಾಶವಿದು.

Leave a Reply