ಸಲಿಂಗಕಾಮ, ಜಗದಗಲ ಏನಿಹುದು ನಿಯಮ?

ಡಿಜಿಟಲ್ ಕನ್ನಡ ಟೀಮ್

ನಮ್ಮಲ್ಲಿ ಒಂದು ಭಾವನೆ ಭದ್ರವಾಗಿ ಬೇರೂರಿದೆ. ಅದೇನೆಂದರೆ ಸಾಮಾನ್ಯವಾಗಿ ಸಮಾಜದಲ್ಲಿ ಬಹುಪಾಲು ಜನ ಮಾಡುವ ಕೆಲಸ, ರೀತಿ ರಿವಾಜು ಓಕೆ ಎನ್ನುವುದು. ಬಹುಪಾಲು ನಾಗರಿಕರ ಭಾವನೆಗೆ ಘಾಸಿ ಉಂಟುಮಾಡುವ ವಿಷಯ ಅದೆಷ್ಟು ಚಿಕ್ಕದಿದ್ದರೂ ಅದು ಮಹತ್ವ ಪಡೆದು ಬಿಡುತ್ತದೆ. ಅಕಸ್ಮಾತ್ ಇದು ಸೆಕ್ಸ್ ಗೆ ಸಂಬಂಧಿಸಿದ್ದರೆ ಮುಗಿಯಿತು. ನೂರಿಪತ್ತು ಕೋಟಿ ಜನ ಸಂಖ್ಯೆಯ ನಮ್ಮ ದೇಶದಲ್ಲಿ ಹಲವು ಹತ್ತು ಕಾನೂನಿನ ಲೋಪದೋಷಗಳಿವೆ. ಇನ್ನು ಸೆಕ್ಸ್ ಬಗ್ಗೆಯ ಕಾನೂನುಗಳ, ಏಕೆ ಸೆಕ್ಸ್ ಬಗ್ಗೆ ಮಾತನಾಡುವುದು ಕೂಡ ಇಂದಿಗೂ ನಮ್ಮ ಸಮಾಜದಲ್ಲಿ ಕಷ್ಟವೇ ಸರಿ. ಇತ್ತೀಚಿಗೆ ಸೇಮ್ ಸೆಕ್ಸ್ ಗೆ (ಸಲಿಂಗ ಕಾಮ) ತಡೆ ಒಡ್ಡುವ ಸೆಕ್ಷನ್ 377 ತೆಗೆದು ಹಾಕಬೇಕೆನ್ನುವ ಕೂಗು ಭಾರತದಲ್ಲಿ ಎದ್ದಿದೆ. ನಮ್ಮಲ್ಲಿ ಆರ್ಟಿಕಲ್ 377 ಹೇಳುವ ಅಸ್ವಾಭಾವಿಕ ಅಥವಾ ಅನೈಸರ್ಗಿಕ ಲೈಂಗಿಕತೆ ವ್ಯಾಖ್ಯೆಯ ಪ್ರಕಾರ, ಹೆಣ್ಣು- ಗಂಡಿನ ಮಿಲನದ ಹೊರತಾದ ಎಲ್ಲವೂ ಅಸ್ವಾಭಾವಿಕವೆನಿಸಿ ಶಿಕ್ಷಾರ್ಹವಾಗುತ್ತದೆ.
ನಮ್ಮ ದೇಶದಲ್ಲಿ ಸದ್ಯದ ಕಥೆ ಇದು. ಜಗತ್ತಿನ ಯಾವ ದೇಶಗಳಲ್ಲಿಇದು ಮಾನ್ಯತೆ ಪಡೆದಿದೆ?  ಒಂದು ಸುತ್ತು ಹಾಕೋಣ!
ಅಮೆರಿಕ ಎಂದಾಕ್ಷಣ , ಅಲ್ಲಿನ ಸ್ವಚ್ಛಂದ ಪ್ರಿಯತೆ , ಬಿಡುಬೀಸುತನ ಎಲ್ಲ ನೆನಪಿಗೆ ಬರುತ್ತದೆ ಅಲ್ಲವೇ? ನಿಮಗೆ ಗೊತ್ತೇ? ಅಂಥ ಅಮೆರಿಕದಲ್ಲೂ 70ರ ದಶಕದಿಂದ ಸಲಿಂಗ ಕಾಮ ಕ್ಕೆ ಮಾನ್ಯತೆ ಪಡೆಯಲು ಹೋರಾಟ ನಡೆದಿದೆ. ಕೊನೆಗೆ  ಜೂನ್ 2015ರಿಂದ ಅಮೆರಿಕದ ಎಲ್ಲಾ ರಾಜ್ಯಗಳಲ್ಲೂ ಇದು ಮಾನ್ಯತೆ ಪಡೆದಿದೆ. ಅಂದರೆ ಜೂನ್ 2015 ಕ್ಕೆ ಮುಂಚೆ ಹಲವು ರಾಜ್ಯಗಳು ಇದನ್ನು ಒಪ್ಪಿರಲಿಲ್ಲ.
ನೆದರ್ಲೆಂಡ್ ದೇಶ ಜಗತ್ತಿನಲ್ಲಿ ಸಲಿಂಗ ಕಾಮ ಒಪ್ಪಿದ ಮೊದಲ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಏಪ್ರಿಲ್ 2001ರಿಂದ ಇದು ಕಾನೂನು ಮಾನ್ಯತೆ ಪಡೆದಿದೆ. ಬೆಲ್ಜಿಯಂ ಜೂನ್ 2003ರಿಂದ ಇದಕ್ಕೆ ಮಾನ್ಯತೆಯ ಮುದ್ರೆ ಒತ್ತಿದೆ. 2005ದಲ್ಲಿಸ್ಪೇನ್ ಇದನ್ನು ಒಪ್ಪಿದ ಜಗತ್ತಿನ ಮೂರನೇ ದೇಶ. ಹಾಗೆ ನೋಡಿದರೆ ಈ ಕಾನೂನು ಬರುವುದಕ್ಕೂ ಮುಂಚೆ ಇಬ್ಬರು ವ್ಯಕ್ತಿಗಳ ನಡುವೆ ಸಮ್ಮತದಿಂದ ಒಂದೇ ಸೂರಿನಡಿ ಬದುಕಲು ಯಾವ ಅಡ್ಡಿ ಆತಂಕಗಳು ಇರಲಿಲ್ಲ. ಆದರೆ ಅದನ್ನು ಒಂದು ಸಂಸಾರ ಎಂದು ಗುರುತಿಸುವ ಪದ್ಧತಿ ಇರಲಿಲ್ಲ ಅಷ್ಟೇ. ಈಗ ಬದಲಾದ ಕಾನೂನಿನ ಪ್ರಕಾರ, ಇವರು ಮಕ್ಕಳನ್ನು ದತ್ತು ಸ್ವೀಕಾರ ಕೂಡ ಮಾಡಬಹುದು. ಇಬ್ಬರಲ್ಲಿ ಒಬ್ಬ ಅಥವಾ ಒಬ್ಬಳು ಗಂಡಸು ಎಂದು (ಅಂದರೆ ತಂದೆ ) ಇನ್ನೊಬ್ಬ ಅಥವಾ ಇನ್ನೊಬ್ಬಳು ಹೆಂಗಸು (ತಾಯಿ) ಎಂದು ಗುರುತಿಸಿಕೊಳ್ಳುವ ಅವಕಾಶವಿದೆ.
ಮಗುವಿನ ದತ್ತು ಸ್ವೀಕಾರ ಮಾಡುವ ಇರಾದೆ ಇಲ್ಲದಿದ್ದರೂ ಮದುವೆ ನೋಂದಣಿ ಸಮಯದಲ್ಲಿ ಜೋಡಿಯಲ್ಲಿ ಒಬ್ಬ /ಒಬ್ಬಳು  ಗಂಡನೆಂದು, ಇನ್ನೊಬ್ಬ ಅಥವಾ ಇನ್ನೊಬ್ಬಳು ಹೆಂಡತಿ ಎಂದು ಗುರುತಿಸಿ ಕೊಳ್ಳುವ ಅವಕಾಶವಿದೆ.
ಡಿಸೆಂಬರ್ 2015ರಲ್ಲಿ ಯುರೋಪಿಯನ್ ಯೂನಿಯನ್ ಗೆ ಸೇರಿದ 13 ದೇಶಗಳು- (ಫ್ರಾನ್ಸ್, ಪೋರ್ಚುಗಲ್, ಡೆನ್ಮಾರ್ಕ್, ಫಿನ್ಲ್ಯಾಂಡ್, ಐಸ್ಲ್ಯಾಂಡ್, ನಾರ್ವೆ, ಸ್ವೀಡನ್, ಯುನೈಟೆಡ್ ಕಿಂಗ್ಡಮ್ ಹೀಗೆ ಪಟ್ಟಿ ಸಾಗುತ್ತದೆ)- ಅಧಿಕೃತವಾಗಿ ಈ ವಿಧೇಯಕವನ್ನು ಒಪ್ಪಿಕೊಂಡಿವೆ.
ಸ್ವಲ್ಪ ತಾಳಿ ಯುರೋಪಿನಲ್ಲಿ ಎಲ್ಲವೂ ಮುಕ್ತ ಎನ್ನುವ ಹಾಗಿಲ್ಲ. ಜರ್ಮನಿ, ಗ್ರೀಸ್, ಅಂದೋರ ಇನ್ನು ಹಲವು ದೇಶಗಳಲ್ಲಿ ಜೋಡಿಯಂತೆ ಬದುಕಲು ಅಡ್ಡಿ ಇಲ್ಲ. ಅಧಿಕೃತ ಮಾನ್ಯತೆ ಮಾತ್ರ ಇನ್ನೂ ಸಿಕ್ಕಿಲ್ಲ.
ಉಳಿದಂತೆ, ಬುಲ್ಗರಿಯ, ಹಂಗರಿ, ಕ್ರೊವೇಷಿಯ, ಪೋಲೆಂಡ್, ಉಕ್ರೇನ , ಸೋಲ್ವಕಿಯ, ಮೊಂಟೆ ನೆಗ್ರೋ ಮುಂತಾದ ದೇಶಗಳಲ್ಲಿ ಹೆಣ್ಣು ಗಂಡಿನ ನಡುವಿನ ಸಂಬಂಧ ಬಿಟ್ಟು ಸಲಿಂಗ ರತಿಯನ್ನು ಒಪ್ಪುವುದೇ ಇಲ್ಲ.
ಬಹುತೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ಇದೊಂದು ಅತ್ಯಂತ ಹೇಯ ಕೃತ್ಯ ಎಂದು ಪರಿಗಣಿಸಲಾಗುತ್ತದೆ ಮತ್ತು ಮರಣ ದಂಡನೆ ವಿಧಿಸಲಾಗುತ್ತದೆ.
ಆಸ್ಟ್ರೇಲಿಯಾ ಇನ್ನು ಇದಕ್ಕೆ ಅಧಿಕೃತ ಒಪ್ಪಿಗೆ ಕೊಡಲು ಬಾಕಿ ಇದೆ, ನ್ಯೂಜಿಲ್ಯಾಂಡ್ ಆಗಸ್ಟ್ 2013ರಲ್ಲಿ ಇದಕ್ಕೆ ಹಸಿರು ನಿಶಾನೆ ತೋರಿದೆ.

ಭಾರತದಲ್ಲಿ ಈಗ ಎದ್ದಿರುವ ಕೂಗು ಹಾಗೂ ಸಿನಿಮಾದಂಥ ಜನಪ್ರಿಯ ಮಾಧ್ಯಮದಲ್ಲಿಸಲಿಂಗಕಾಮದ ಕಥಾವಸ್ತು ಚರ್ಚೆ ಆಗುತ್ತಿರುವುದು ಹೊಸ ಬೆಳವಣಿಗೆ. ಸಲಿಂಗ ಸಂವೇದನೆ ಹೊಂದಿದ್ದಾರೆಂದು ಗೊತ್ತಾದಾಗ ಕೋಲ್ಕತಾದ ಪ್ರೊಫೆಸರ್ ಬದುಕಲ್ಲಿ ಬಂದ ಕಷ್ಟಗಳೇನು ಎಂಬ ಬಗ್ಗೆ ನೈಜ ಘಟನೆ ಆಧಾರವಾಗಿಟ್ಟುಕೊಂಡು ತಯಾರಾಗಿರುವ ಅಲೀಘರ್ ಚಿತ್ರ ತೆರೆಗೆ ಬರುತ್ತಿದೆ.

ಇವೆಲ್ಲಾ ಏನೇ ಇರಲಿ. ಅಂಕಿ ಅಂಶ ತೆಗೆದು ನೋಡಿದರೆ ಇದಕ್ಕೆ ಅಧಿಕೃತ ಮುದ್ರೆ ಸಿಕ್ಕ ನಂತರ ಈ ವರ್ಗದವರ ಸಂಖ್ಯೆ ಏನೂ ಹುಚ್ಚಾಪಟ್ಟೆ ಬೆಳೆದಿಲ್ಲ. ಅರ್ಥ ಇಷ್ಟೇ.. ಇದು ಮೋಜಿಗಾಗಿ ಅಲ್ಲ, ಅವರಿಗೆ ಸ್ವ ಲಿಂಗಿಗಳ ಬಗ್ಗೆ ಆಸಕ್ತಿ  ಅಷ್ಟೇ. ಅವರು ನಮ್ಮಂತೆ ಮನುಷ್ಯರು. ಊಟ , ತಿಂಡಿಯಲ್ಲಿ ತೋರಿಸುವ ಉದಾರತೆ ಇಡೀ ಜೀವನ ಸವೆಸುವ, ಜೀವನ ನಿರ್ಧರಿಸುವ ಮಹತ್ವದ ನಿರ್ಧಾರಕ್ಕೆ ಏಕಿಲ್ಲ? ಇಷ್ಟಕ್ಕೂ ಯಾರಿಗೂ ತೊಂದರೆ ಕೊಡದೆ ಎರಡು ಜೀವ ಒಂದಾಗಿ ಬಾಳಲು ಬೇಡ ಎನ್ನುವುದಕ್ಕೆ ನಾವ್ಯಾರು? ಅವರ ಅಭಿರುಚಿ ನಮ್ಮ ಅಭಿರುಚಿಗಿಂತ ಭಿನ್ನ ಎನ್ನುವ ಒಂದೇ ಕಾರಣಕ್ಕೆ  ಬೇಡ ಎನ್ನುವುದು, ವಿರೋಧಿಸುವುದು ಎಷ್ಟು ಸರಿ?
ಅನುದಿನವೂ ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಬದಲಾವಣೆಯ ಸ್ವೀಕರಿಸಿದಿದ್ದರೆ ಹೇಗೆ? ನೀವೇ ಯೋಚಿಸಿ.

2 COMMENTS

  1. ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಲೇಖನ.. ಭಾರತ ಅನಾದಿಕಾಲದಿಂದಲೂ ತನ್ನದೇ ಆದ ಸಂಸ್ಕೃತಿ , ಆಚಾರ, ಪದ್ದತಿಗಳಿಂದ ಗುರುತಿಸಿಕೊಂಡಿದೆ.. ಬೇರೆ ದೇಶಗಳಲ್ಲಿ ಆಚರಿಸುವ ಪದ್ಧತಿಯನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕು ಎನ್ನುವುದು ಎಷ್ಟು ಸರಿ ??? ಎಲ್ಲರಿಗೂ ಅವರದೇ ಆದ ವೈಯಕ್ತಿಕ ಜೀವನ ಬಾಳುವ ಸ್ವಾತಂತ್ರ್ಯ ಇದೆ ಒಪ್ಪಿಕೊಳ್ಳುತ್ತೇನೆ.. ಆದರೆ ಇದು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಮಾಜದ ಮೇಲೆ ಪ್ರಭಾವ ಬೀರುತ್ತದೆ ಅನ್ನುವುದನ್ನು ನಾವು ಅರಿತುಕೊಳ್ಳಬೇಕು.. ಆಗ ಸಾಂಪ್ರದಾಯಿಕ ಪದ್ದತಿಯನ್ನು ಆಚರಿಸುವವರ ಬದುಕು ಕ್ಲಿಷ್ಟಕರವಾಗುವ ಸಾದ್ಯತೆಯನ್ನು ಅಲ್ಲಗಳೆಯುವಂತಿಲ್ಲ .. ನೀವು ಹೇಳಿದಹಾಗೆ ಬದಲಾವಣೆ ಜಗದ ನಿಯಮ ಆದರೆ ಎಲ್ಲಾ ಬೆಳವಣಿಗೆ ಸಮಾಜಕ್ಕೆ ಪೂರಕವಲ್ಲ ಅನ್ನುವುದು ನನ್ನ ಅಭಿಪ್ರಾಯ

Leave a Reply