ಡಿಜಿಟಲ್ ಭವಿಷ್ಯ ಹೇಳ್ತಿರುವ ಅರ್ನಾಬ್ ಗೋಸ್ವಾಮಿ, ಪ್ರಸಿದ್ಧಿಗೂ ಮೊದಲಿನ ತಮ್ಮ ದಿನಗಳ ಬಗ್ಗೆ ಏನೆಂದಿದ್ದಾರೆ ಗೊತ್ತೇ?

 

ಡಿಜಿಟಲ್ ಕನ್ನಡ ಟೀಮ್

ಅರ್ನಾಬ್ ಗೋಸ್ವಾಮಿ ಈ ಹೆಸರು ಭಾರತ ಮಾಧ್ಯಮ ಲೋಕದಲ್ಲಿ ಚಿರಪರಿಚಿತ ಹೆಸರು. ಇಂಗ್ಲಿಷ್ ಟಿವಿ ಚಾನೆಲ್ ಸಂಪಾದಕರಾದರೂ ಕರ್ನಾಟಕದ ಬಹುತೇಕರಿಗೆ ಇವರು ಪರಿಚಿತ ವ್ಯಕ್ತಿಯೇ. ಈತನ ಆಕ್ರಮಣಕಾರಿ ಮಾತಿಗೆ ಮುದಗೊಳ್ಳುವವರಿದ್ದಾರೆ. ಅಂತೆಯೇ, ಈತ ಸಂದರ್ಶನದಲ್ಲಿ ಅತಿಥಿಗಳಿಗೆ ಅವಕಾಶ ನೀಡದೇ ತಾನೇ ಹೆಚ್ಚು ಮಾತನಾಡ್ತಾನೆ ಅಂತ ಮೂಗುಮುರಿಯುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಇಷ್ಟಪಟ್ಟಾದರೂ, ಬಯ್ದುಕೊಂಡಾದರೂ ಎಲ್ಲರ ಗಮನಕ್ಕೆ ಸಲ್ಲುತ್ತಿರುವ ವ್ಯಕ್ತಿ ಅರ್ನಾಬ್.

ಟೈಮ್ಸ್ ನೌ ಅಂತಂದ್ರೆ ಅರ್ನಾಬ್ ಎಂಬ ಪ್ರಸಿದ್ಧಿ ಈಗಿನದ್ದು. ಆದರೆ ಈ ಯಶಸ್ಸು ರಾತ್ರಿ ಬೆಳಗಾಗುವುದರಲ್ಲಿ ಗಳಿಸಿದ್ದಲ್ಲ, ಆತಂಕವೇ ಹೊದ್ದಿದ್ದ ಪರಿಶ್ರಮದ ದಿನಗಳಿದ್ದವು ಅಂತ ಸುದ್ದಿ ವಾಹಿನಿಗೆ 10 ವಸಂತಗಳ ಸಂಭ್ರಮದಲ್ಲಿ ಅಂತರ್ಜಾಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಖುದ್ದು ಅರ್ನಾಬ್ ಹೇಳಿದ್ದಾರೆ.

ಬೆಳವಣಿಗೆಯ ಮಾದರಿಯನ್ನು ಹಂತ-ಹಂತಗಳಲ್ಲಿ ಬಿಚ್ಚಿಟ್ಟಿದ್ದಾರೆ ಅರ್ನಾಬ್.

ಮೊದಲ ಹಂತ: ಟೈಮ್ಸ್ ಜತೆ ಸೇರಿ ರಾಯ್ಟರ್ಸ್ ಸುದ್ದಿಸಂಸ್ಥೆ ವಾಹಿನಿ ಆರಂಭಕ್ಕೆ ಒಪ್ಪಿಗೆ ನೀಡಿತು. ಎನ್ ಡಿಟಿವಿ ಬಿಟ್ಟು ಬಂದಾಗ ಈ ಮೊದಲು ಮಾಡದಿರುವ ಕಾರ್ಯ ಇದಾಗಿತ್ತು. ಒಂದೂವರೆ ವರ್ಷ ಟಿವಿಯಿಂದ ದೂರ ಉಳಿದಿದ್ದರಿಂತ ಯಾರಿಗೂ ಹೆಚ್ಚು ಪರಿಚಿತನಾಗಿರಲಿಲ್ಲ. ಟಿವಿ ವಾಹಿನಿ ಕಾರ್ಯ ನಿರ್ವಹಣೆಯ ಅಧ್ಯಯನವೇ ಮೊದಲ ಹಂತ.

ಎರಡನೇ ಹಂತ: ಟಿವಿ ವಾಹಿನಿ ಆರಂಭವಾಗಿ ನಂತರದ ಒಂದು ವರ್ಷದ ಅನುಭವ. ಈ ಹಂತದಲ್ಲಿ ನಾವು ಮಾಡಿದ ಪ್ರತಿಯೊಂದು ಪ್ರಯತ್ನವೂ ವಿಫಲವಾಗಿದ್ದವು. ಆಗ ನಮ್ಮ ಕನಸಿನ ಕೂಸು, ಆರೋಗ್ಯವಾಗಿಲ್ಲವೆಂಬುದು ಸಾಕಷ್ಟು ನೋವು ತಂದಿತ್ತು.

ಮೂರನೇ ಹಂತದ ಹಾದಿಯೂ ಸುಗಮವಾಗಿರಲಿಲ್ಲ. ಈ ಹಂತದಲ್ಲಿ ನಾವು ವಾಹಿನಿಯ ಸಂಪೂರ್ಣ ಸ್ವರೂಪವನ್ನೇ ಬದಲಿಸಬೇಕಿತ್ತು. ಕಾರ್ಯಕ್ರಮದ ಶೈಲಿ, ವ್ಯವಹಾರದಲ್ಲಿನ ಬದಲಾವಣೆ ಹಾಗೂ ಆರಂಭದಲ್ಲಿ ಕಟ್ಟಿಕೊಂಡಿದ್ದ ತಂಡವನ್ನೇ ಬದಲಿಸಬೇಕಿತ್ತು.

2007ರಿಂದ 2008-09ರ ವೇಳೆಗೆ ವಾಹಿನಿ ಬೆಳವಣಿಗೆ ಕಾಣಲು ಆರಂಭಿಸಿದ್ದು, ಉತ್ತೇಜನ ನೀಡಿತು. ಇನ್ನು ಕಡೇಯ ಹಂತವೆಂದರೆ, 2010ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣದಿಂದ ಇಲ್ಲಿಯವರೆಗೆ ಜನರ ಮನಸ್ಸಿನಲ್ಲಿ ಬೇರೂರಲು ಸಾಧ್ಯವಾಗಿರುವುದು. ಪ್ರತಿಯೊಂದು ಹಂತದಲ್ಲೂ ವಿಭಿನ್ನ ಅನುಭವ ಸಿಕ್ಕಿದೆ.

ಈ ಹಂತವೂ ಮುಕ್ತಾಯದ ಸನಿಹಕ್ಕೆ ಬಂದಿದೆ….

ಮುಂದಿನ ಹಂತ ಸಾಕಷ್ಟು ರೋಚಕವಾಗಿರುತ್ತದೆ. ಕಾರಣ, ಡಿಜಿಟಲ್ ಹಾಗೂ ಟಿವಿ ಮಾಧ್ಯಮಗಳು ಒಟ್ಟುಗೂಡಿ ಹೊಸ ವೇದಿಕೆಯೊಂದು ಸಿದ್ಧಗೊಳ್ಳಲಿರುವ ಕಾಲ. 2017ರ ವೇಳೆಗೆ ಡಿಜಿಟಲ್ ಮಾಧ್ಯಮಕ್ಕೆ ಒಂದು ಬಿಗಿ ಹಿಡಿತ ಸಿಗಲಿದ್ದು, ಆ ಸಮಯಕ್ಕೆ 4ಜಿ ಮತ್ತು 5ಜಿ ಸಂಪರ್ಕಗಳು ಜನರನ್ನು ಮುಟ್ಟಲಿವೆ. ಆಗ ವೀಕ್ಷಕರನ್ನು ತಲುಪಲು ವಿಭಿನ್ನ ಮಾದರಿ ಅಥವಾ ಶೈಲಿ ಅಗತ್ಯ. ಹಾಗಾಗಿ 2016ರ ವರ್ಷ ಮಾಧ್ಯಮಕ್ಕೆ ಪ್ರಯೋಗಾತ್ಮಕ ಅವಧಿಯಾಗಿರುತ್ತದೆ. 2017ರ ವರ್ಷ ಹೊಸ ಡಿಜಿಟಲ್ ಮಾಧ್ಯಮ ಉನ್ನತ ಮಟ್ಟಕ್ಕೇರಿ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪಲು ಸಾಧ್ಯವಾಗುತ್ತದೆ. 2018ರ ವರ್ಷದ ವೇಳೆಗೆ ಟಿವಿ ಮತ್ತು ಡಿಜಿಟಲ್ ಮಾಧ್ಯಮದ ಸಮಾಗಮದಲ್ಲಿ ಸ್ಪರ್ಧೆ ಏರ್ಪಡುವ ಘಟ್ಟವಾಗಲ್ದಿದು, ಇನ್ನು 2018ರಿಂದ 2020ಯ ಕಾಲಾವಧಿ ಈ ಮಾಧ್ಯಮಕ್ಕೆ ಹೊಸ ಪುಷ್ಟಿಯನ್ನು ನೀಡಿ ಮತ್ತೊಂದು ಹೊಸ ಹಂತಕ್ಕೆ ದಾರಿ ಮಾಡಿಕೊಡಲಿದೆ… ಹೀಗೆಲ್ಲ ಸುದೀರ್ಘವಾಗಿ ಮಾತಾಡಿದ್ದಾರೆ ಅರ್ನಾಬ್.

ಯಶಸ್ಸು ಕೇವಲ ಮಿರುಗುವ ಕಿರೀಟವಲ್ಲ. ಮುಳ್ಳಿನ ಹಾದಿಯಲ್ಲಿ ಪಯಣಿಸುವ ಛಾತಿ, ಭವಿಷ್ಯದ ತಯಾರಿ ಇದ್ದವರಷ್ಟೇ ಉಳಿಸಿಕೊಳ್ಳೋಕೆ ಸಾಧ್ಯವಾಗುವ ಪಟ್ಟ ಅದು!

1 COMMENT

Leave a Reply