ಪುಟ್ಟಜೀವದ ಆಗಮನಕ್ಕೆ ಬೇಕಿರುವ ಮಾನಸಿಕ ಸಿದ್ಧತೆಗಳು ಹೀಗೆಲ್ಲ ಇರಬಲ್ಲವು..

author-shamaಮೂರನೇ ತ್ರೈಮಾಸಿಕ ಬಸಿರಿನ ಕೊನೆಯ ಹಂತ. ನಿಲ್ದಾಣಕ್ಕಿನ್ನು ಮಾರು ದೂರವಿದ್ದಾಗ ಹಳಿ ತಪ್ಪಬಾರದೆಂದರೆ ಒಂದಷ್ಟು ಜಾಗರೂಕತೆ ವಹಿಸಲೇಬೇಕು. ಈಗಾಗಲೇ ಹೆತ್ತಿರುವ ಧನಾತ್ಮಕ ಚಿಂತನೆಯಿರುವ ತಾಯಂದಿರ ಜತೆ ಮಾತಾಡಿ ಅನುಭವ ಹಂಚಿಕೊಳ್ಳುವುದು ಒಳ್ಳೆಯದು. ಮಗು ಹೆರಲು, ಬರಮಾಡಿಕೊಳ್ಳಲು ತಪ್ಪು ಸರಿ ಎಂಬ ರೀತಿಗಳಿಲ್ಲ. “ನನ್ನ ಮಟ್ಟಿಗೆ ಬೆಸ್ಟ್ ಎನಿಸುವಂಥದ್ದನ್ನೇ ಮಾಡ್ತೇನೆ” ಮತ್ತೆ ಮತ್ತೆ ಹೇಳಿಕೊಳ್ಳಿ. ಅದೊಂಥರ ಶಕ್ತಿ ಕೊಡುತ್ತದೆ. ಪುಟ್ಟ ಕಂದನ ಹಸಿ ಮೈ ಗಂಧ ಕಲ್ಪಿಸಿಕೊಂಡು ಖುಷಿಯಾಗುವುದು ಅಮೋಘ ಅನುಭವ; ಪ್ರಯತ್ನ ಮಾಡಿ. ಮನಸ್ಸಿನೊಳಗಿನ ಅಷ್ಟೂ ಮಾತುಗಳನ್ನ ಬರೆದಿಡುವುದು ಬಹಳ ಒಳ್ಳೆಯ ಒತ್ತಡ ನಿವಾರಣೆಯ ವಿಧಾನ. ಮಗು ಹುಟ್ಟುವಾಗ ಇಂಥದ್ದೇ ಅಂತೇನಾದರೂ ಮಾಡುವ, ವಾತಾವರಣ ಕಲ್ಪಿಸುವ ಆಸೆಯಿದ್ದರೆ ಅದಕ್ಕೆ ತಕ್ಕನಾದ ಯೋಚನೆ ಸಿದ್ಧತೆಗಿದು ಸರಿಯಾದ ಸಮಯ.

ಇನ್ನೂ ಸ್ಪಷ್ಟವಾಗಿ ನೆನಪಿದೆ; ಮೊದಲನೇ ಮಗು ಹುಟ್ಟುವ ಘಳಿಗೆ. ಐದು ವರ್ಷದ ಹಿಂದೆ ಲೇಬರ್ ರೂಮಿನಲ್ಲಿ ಗೈನಕಾಲಜಿಸ್ಟ್ ಡಾ.ಚಂದ್ರಿಕಾ ಹೆರಿಗೆ ಮಾಡಿಸುತ್ತಿದ್ದರೆ ಇನ್ನೇನು ಮಗು ಜಗತ್ತಿಗೆ ಬಂತೆನ್ನುವಾಗ “ಸಾಮಜವರಗಮನಾ” ತೇಲಿ ಬಂದಿತ್ತು ಮಕ್ಕಳ ತಜ್ಞ ಡಾ.ಸುದೀಪ್ ಕೈಲಿದ್ದ ಮ್ಯೂಸಿಕ್ ಸಿಸ್ಟಂ ನಿಂದ. ಅಳುತ್ತಳುತ್ತ ಬಂದ ಹಸುಗೂಸಿಗೆ ಅದೇನನ್ನಿಸಿತ್ತೋ ಸುಶ್ರಾವ್ಯತೆಗೆ ಮಾರು ಹೋಗಿ ಅಳು ನಿಲ್ಲಿಸಿದ್ದಳು ಮಗಳು. ಅಂಥದ್ದೊಂದು ಸ್ವಾಗತವಿದೆಯಲ್ಲ ಅದು ಬಹಳ ಅದ್ಭುತ ಅನುಭವ. ಇನ್ನು ಎರಡನೇ ಕಂದ ಹುಟ್ಟುವ ಹೊತ್ತಿಗೆ ಇಷ್ಟೆಲ್ಲ ಮಾಡುವ ಅಗತ್ಯವೇ ಬಂದಿರಲಿಲ್ಲ. ಎಫ್.ಎಂ. ದೊಡ್ಡದಾಗಿ ಹಾಡ್ತಿತ್ತು “ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ..” ನಾನು ನೋವಿನಿಂದ ಅಳ್ತಿದ್ದರೆ ಡಾಕ್ಟರು “ಹಾಡು ಚೇಂಜ್ ಮಾಡ್ರಮ್ಮ; ಈಗ್ಲೇ ರವಿಚಂದ್ರನ್ ಹಾಡು ಕೇಳಿಸಿ ಕಳಿಸಿದ್ರೆ ಇನ್ನೇನು ಮೂರನೇದು ಅಂತ ಬಂದಾಳು. ಮೊದಲೇ ಜನಸಂಖ್ಯೆ ಕಮ್ಮಿ ನಮ್ಮ ದೇಶದಲ್ಲಿ” ಅನ್ನುತ್ತ ನಕ್ಕಿದ್ದರು. ಹುಟ್ಟಿದಾಕ್ಷಣ ಅಂಗಾಲನ್ನು ಇಂಕ್ ಪ್ಯಾಡ್ ನಲ್ಲಿ ಅದ್ದಿ ಗುರುತು ತೆಗೆದಿಡುತ್ತಿದ್ದರೆ “ನನಗೊಂದು ಕಾಪಿ ಕೊಡಿ ಸಿಸ್ಟರ್” ಕೇಳಿದ್ದೆ. ಪುಟ್ಟ ಪಾದಗಳ ಅಚ್ಚು ಆಮೇಲೆ ಬೇಕೆಂದರೂ ಸಿಗದು. ಹೀಗಿದ್ದೆಲ್ಲ ಪ್ರಯತ್ನಿಸಿ ನೋಡಿ. ಇವೆಲ್ಲ ಪದೇ ಪದೇ ಸಿಗುವಂತದ್ದಲ್ಲ. ಡಬಲ್ ಇನ್ ಕಂ; ಸಿಂಗಲ್ ಕಿಡ್ ಕಾಲವಿದು. “ಕಾಲಕ್ಕೆ ತಕ್ಕ ಕೋಲ ಕಟ್ಟು” ಅಂತ ತುಳುನಾಡ ಕಡೆ ಗಾದೆಯಿದೆ. ಇವತ್ತಿನ ಜಮಾನಾಗೆ ತಕ್ಕ ಹಾಗೆ ಹೊಸ ಐಡಿಯಾ ಹುಡುಕಿ.

ನೀರೊಳಗೆ ಹೆರಿಗೆ ನೋವಿರುವುದಿಲ್ಲ ಅನ್ನುತ್ತಾರಾದರೂ ಇದಕ್ಕೆ ಬಹಳ ಜಾಗರೂಕತೆ ಮತ್ತು ತುಂಬ ಪರಿಣತಿ ಇರುವ ವೈದ್ಯರ ಅವಶ್ಯಕತೆಯಿರುತ್ತದೆ. ಈ ಆಸೆಯಿದ್ದಲ್ಲಿ ಸರಿಯಾಗಿ ಹುಡುಕಿ ಸಾಕಷ್ಟು ಅಭಿಪ್ರಾಯಗಳನ್ನು ಕಲೆ ಹಾಕಿ. ಸಾಧ್ಯವಾದರೆ ಹೆರಿಗೆ ಮಾಡಿಸುವವರನ್ನೂ ಕೂಡ ಭೇಟಿ ಆಗುವುದೊಳ್ಳೆಯದು. ವಿಭಿನ್ನತೆ ಮತ್ತು ವಿಶಿಷ್ಟತೆಯ ಹಂಬಲ, ಸಾಕಷ್ಟು ಧೈರ್ಯ ಗಂಡ ಹೆಂಡತಿಯಿಬ್ಬರಿಗೂ ಇದ್ದು, ಕಾಂಚಾಣದ ಬೆಂಬಲವಿದ್ದರೆ ಇವೆಲ್ಲ ಕಷ್ಟವೇನಲ್ಲ.

ಈ ಅವಧಿಯಲ್ಲಿ ಸಾಹಸಗಳು ಒಳ್ಳೆಯದಲ್ಲ. ಹೇಮಮಾಲಿನಿ ಕೆನ್ನೆಯಷ್ಟು ನುಣುಪು ರಸ್ತೆಯಿದ್ದರೂ ದ್ವಿಚಕ್ರ ವಾಹನದ ಸವಾರಿ ಮಾಡಬೇಡಿ. ಯಾವುದೋ ಒಂದು ಜಂಪ್^ನಲ್ಲೋ, ಹೊಂಡ ಹಾರಿಸುವ ಕ್ಷಣದಲ್ಲೋ ಬಹಳ ಸೂಕ್ಷ್ಮವಾದ ಗರ್ಭಚೀಲಕ್ಕೆ ಪೆಟ್ಟಾದರೆ, ಹರಿದರೆ ಮತ್ತೆ ಅದನ್ನು ಸರಿಪಡಿಸಲಾಗದು. ಮತ್ತು ಆರು ಏಳನೇ ತಿಂಗಳಿನಲ್ಲಿ ಅನಿವಾರ್ಯವಾಗಿ ಮಗುವನ್ನ ಹೊರ ತೆಗೆಯಬೇಕಾಗಿ ಬಂದರೆ ಅದು ದುರ್ಭರ ಅನುಭವ.

ಮನೆ ಕೆಲಸಗಳನ್ನ, ಆಫೀಸು ಕೆಲಸವನ್ನ ಮಾಡುವುದಕ್ಕೆ ಅಡ್ಡಿಯಿಲ್ಲ. ಆದರೆ ಅದರಲ್ಲೂ ನಿಧಾನವೇ ಪ್ರಧಾನವಾಗಲಿ. ಅವಸರಕ್ಕೆ, ಆತುರಕ್ಕೆ ಇದು ಸರಿಯಾದ ಹೊತ್ತಲ್ಲ. ಮೆಟ್ಟಲಿಳಿಯುವಾಗ ಪುಟ್ಟ ಮಕ್ಕಳಿಗಿಂತ ಹುಶಾರಾಗಿರಬೇಕು. ಭಾರ ಎತ್ತುವ ಸಂದರ್ಭ ಬಂದರೆ ಪಕ್ಕದಲ್ಲಿರುವವರನ್ನ ಕರೆದು ಸಹಾಯ ಕೇಳಲು ಅಥವಾ ಅವರ ಕೈಲೇ ಅದನ್ನೆತ್ತಿ ಸಾಗಿಸಲು ಮುಲಾಜು ಬೇಡ. ಬಸುರಿ ಕಂದನ ಭಾರ ಮಾತ್ರ ಹೊರಬೇಕು ಬೇರೆಯದನ್ನಲ್ಲ ಅನ್ನೋದು ಎಲ್ಲರಿಗೂ ಗೊತ್ತಿರತ್ತೆ. ಈ ತ್ರೈಮಾಸಿಕದಲ್ಲಿ ವಿಚಿತ್ರವಾದ ಕನಸುಗಳು ಬೀಳುತ್ತವೆ ಅಂತಾವೆ ಕೆಲವಷ್ಟು ಸಮೀಕ್ಷೆಗಳು. ಇವುಗಳಲ್ಲಿ ಮಗುವನ್ನ ಕಳಕೊಂಡಂತೆ, ಒಳ್ಳೆಯ ತಾಯಾಗಲು ಸಾಧ್ಯವಾಗದಂತೆ ಮತ್ತು ಪ್ರಾಣಿಗಳಿಗೆ ಜನ್ಮ ಕೊಟ್ಟಂತೆ ಇರುವ ಕನಸುಗಳು ಪ್ರಮುಖವಾದವು. ಇವೆಲ್ಲವೂ ಆತಂಕದ, ನಿದ್ರಾಹೀನತೆಯ ಮತ್ತು ಕಳವಳದ ಪ್ರಭಾವವಷ್ಟೇ ಹೊರತು ಇನ್ನೇನಲ್ಲ. ಒಳ್ಳೆಯ ಓದು, ಹಿತವೆನಿಸುವ ಸಂಗೀತ, ಉಲ್ಲಾಸ ಕೊಡುವ ವ್ಯಾಯಾಮಗಳು ಇವಕ್ಕೆ ರಾಮಬಾಣ.

ಈ ಹಂತಕ್ಕೆ ಬರುವ ಹೊತ್ತಿಗೆ ತಾಯಿಯಾಗುವವಳಿಗೆ ಸುಮಾರಾಗಿ ಮಗುವಿನ ಚಲನವಲನಗಳ ಸ್ಪಷ್ಟ ಚಿತ್ರಣ ಸಿಕ್ಕಿರುತ್ತದೆ. ಅದರ ಮೇಲೆ ಮಾತ್ರ ಪ್ರತಿ ಕ್ಷಣ ನಿಗಾ ಇರಬೇಕು. ಏರು ಪೇರು ಸಹಜವೇ ಆದರೂ ಮೂರು ಗಂಟೆಗಳ ಕಾಲ ಸತತವಾಗಿ ಒಳಗಿಂದ ಏನೂ ಸದ್ದು ಗದ್ದಲವಿಲ್ಲದಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಲೇಬೇಕು. ಒಂಭತ್ತನೇ ತಿಂಗಳು ಶುರುವಾದ ಮೇಲೆ ಯಾವ ಕ್ಷಣದಲ್ಲಿಯಾದರೂ ಹೆರಿಗೆ ಆಗಬಹುದು. ಆಸ್ಪತ್ರೆಯನ್ನು ಮೊದಲೇ ನಿರ್ಧರಿಸಿ ಒಂದೆರಡು ದಿನಗಳ ಮಟ್ಟಿಗೆ ಆಕೆಯ ಜತೆಗೆ ಅಲ್ಲಿ ಇರುವವರು ಯಾರೆಂತಲೂ ಪ್ಲಾನ್ ಮಾಡುವುದರಿಂದ ಕೊನೇ ಕ್ಷಣದ ಗೊಂದಲಗಳಿರುವುದಿಲ್ಲ. ಜತೆಗೇ ಅವಶ್ಯಕತೆಯಿರುವಷ್ಟು ಬಟ್ಟೆ ಬರೆಗಳನ್ನು ಪ್ಯಾಕ್ ಮಾಡಿಟ್ಟುಕೊಳ್ಳುವುದು ಅತ್ಯವಶ್ಯ. ಹಸುಗೂಸಿನ ಅವಶ್ಯತಕೆಗಳಿಗೆ ಬಟ್ಟೆಗಳು ಎಷ್ಟಿದ್ದರೂ ಕಡಿಮೆಯೇ.

ಒಟ್ಟಾರೆಯಾಗಿ ಹೇಳುವುದೆಂದರೆ ಮನೆಗೊಂದು ಹೊಸ ಪುಟಾಣಿ ವಿ.ಐ.ಪಿ ಬರುವುದೆಂದರೆ ಸಕಲ ಸಿದ್ಧತೆ ಆಗಲೇಬೇಕು. ಅದು ಹೇಗೋ ಆದರಾಯ್ತು ಅಂತಲ್ಲ. ಹೀಗೇ ಆಗಬೇಕು ಎಂಬುದು ಮುಖ್ಯ. ಹಾಗಂತ ಅನವಶ್ಯಕ ಆತಂಕ, ಗಡಿಬಿಡಿಗೆ ಈಡಾಗುವ ಅಗತ್ಯವಿಲ್ಲ. ಒಂದು ಮುಷ್ಟಿ ಮುಂದಾಲೋಚನೆ, ಬೊಗಸೆಯಷ್ಟು ಜಾಣ್ಮೆ, ಬುಟ್ಟಿ ತುಂಬ ತಾಳ್ಮೆ, ಮನದೊಳಗಿಡೀ ಧೈರ್ಯವಿದ್ದರೆ ಬರಲಿರುವ ಮರಿ ದೇವರು ಪ್ರಸನ್ನ; ಮನೆಯವರೆಲ್ಲ ಪ್ರಫುಲ್ಲ. ಆಮೇಲೆ ಮನೆ ತುಂಬ ಕಿಲ ಕಿಲ ಜುಳು ಜುಳು ಜತೆಗೆ ಆಗಾಗ ಅಳುವಿನ ಗಂಧರ್ವಗಾನ!

“ಕಾಲಕ್ಕೆ ತಕ್ಕ ಕೋಲ ಕಟ್ಟು” – ದಕ್ಷಿಣ ಕನ್ನಡದ ಕಡೆ ಭೂತ ಕೋಲ ಸಾಂಪ್ರದಾಯಿಕವಾದ ಜನಪದ ಆಚರಣೆ. ಅದನ್ನು ತಲೆತಲಾಂತರದಿಂದ ಮಾಡುತ್ತ ಬರುತ್ತಿದ್ದರೂ ಯಾವುದೇ ಹೊಸತನವಿಲ್ಲದೇ ನೋಡುಗರ ಆಸಕ್ತಿ ಹಿಡಿದಿಡುವಲ್ಲಿ ವಿಫಲವಾಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಕಾಲ ಬದಲಾದಂತೆ ರೀತಿ ರಿವಾಜುಗಳನ್ನ ಬದಲಾಯಿಸಿ ಜನರ ಅಭಿರುಚಿಗೆ ತಕ್ಕಂತೆ ಕೋಲವನ್ನು ಮಾರ್ಪಡಿಸಬೇಕು ಅನ್ನುವುದು ಈ ನುಡಿಗಟ್ಟಿನ ಸಾರಾಂಶ.

Leave a Reply