ಬರೀ ಬಾಯಿ ಮಾತಲ್ಲಿ ಅಲ್ಲ, ಭ್ರಷ್ಟರಿಗೆ ಸೆಡ್ಡು ಹೊಡೆದ ಪತ್ರಕರ್ತನಿಗೆ ಹತ್ತು ಲಕ್ಷ ಬಹುಮಾನ ಕೊಟ್ಟು ಮಾದರಿ ಆದ್ರು ವಿಜಯ ಸಂಕೇಶ್ವರ!

 

ಡಿಜಿಟಲ್ ಕನ್ನಡ ಟೀಮ್

ಕನ್ನಡ ಪತ್ರಿಕೋದ್ಯಮದಲ್ಲಿ ನಿಜಕ್ಕೂ ಇದೊಂದು ಹಿಂದೆಂದೂ ಕಂಡರಿಯದ ಮಾದರಿ ನಡೆ. ದಕ್ಷತೆ, ಪ್ರಾಮಾಣಿಕತೆ, ದಿಟ್ಟತನದಿಂದ ಮುನ್ನುಗ್ಗುವ ಪತ್ರಕರ್ತರನ್ನು ಬರೀ ಬಾಯಿಮಾತಲ್ಲಿ ಮಾತ್ರ ಉಪಚರಿಸದೇ ಸರ್ವವಿಧದಲ್ಲೂ ನಿಮ್ಮೊಂದಿಗೆ ನಾವಿದ್ದೇವೆ ಎಂಬುದನ್ನು ಸಾಬೀತು ಮಾಡಿರುವ ‘ವಿಜಯವಾಣಿ’ ದಿನಪತ್ರಿಕೆ ಮಾಲೀಕರಾದ ವಿಜಯ ಸಂಕೇಶ್ವರ ಅವರು ಈ ಮಾದರಿ ನಡೆಯ ರೂವಾರಿ.

ಭ್ರಷ್ಟ ರಾಜಕಾರಣಿಗಳಿಗೆ ಸೆಡ್ಡು ಹೊಡೆದು, ಅವರೊಡ್ಡಿದ ಕೋಟಿ, ಕೋಟಿ ರುಪಾಯಿ ಆಮಿಷಗಳನ್ನು ಕಾಲಕಸದಂತೆ ಕಂಡ ಪತ್ರಿಕೆಯ ಮಡಿಕೇರಿ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ 10 ಲಕ್ಷ ರುಪಾಯಿ ಬೃಹತ್ ಮೊತ್ತದ ನಗದು ಬಹುಮಾನವನ್ನು ಚಿನ್ನದ ಪದಕದೊಡನೆ ಪ್ರದಾನ ಮಾಡಿರುವ ಸಂಕೇಶ್ವರ ಅವರು ಪತ್ರಿಕಾ ವಲಯಕ್ಕೆ ಆತ್ಮಬಲ ಹೆಚ್ಚಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಹಿಂದೆಂದೂ ಇಷ್ಟೊಂದು ದೊಡ್ಡ ಮೊತ್ತದ ಪ್ರಶಸ್ತಿ ಕೊಡಮಾಡಿರುವ ನಿದರ್ಶನ ಇಲ್ಲ. ಕನ್ನಡಕ್ಕೆ ಎರಡು ನಂಬರ್ 1 ಪತ್ರಿಕೆಗಳನ್ನು ಕೊಟ್ಟ ಸಂಕೇಶ್ವರ ಇಲ್ಲೂ ನಂಬರ್ 1 ಆದರ್ಶ ಮೆರೆದಿದ್ದಾರೆ.

ಈ ಪ್ರಶಸ್ತಿ ಮೂರು ವಿಧದಲ್ಲಿ ಮೌಲ್ಯ ಪಡೆದುಕೊಂಡಿದೆ. ಒಂದು ಮಾಧ್ಯಮದಲ್ಲಿ ವಿರಳ ಆಗುತ್ತಿರುವ ಪ್ರಮಾಣಿಕತೆಯನ್ನು ಮೆರೆದ ಕುಟ್ಟಪ್ಪ ಅವರು ಕ್ಷೇತ್ರಕ್ಕೊಂದು ಮೌಲ್ಯ ತಂದುಕೊಟ್ಟಿದ್ದಾರೆ. ಎರಡನೆಯದು ಅವರಿಗೆ ಸಂದ ಗೌರವದ ಆರ್ಥಿಕ ಮೌಲ್ಯ. ಈ ಎರಡಕ್ಕೂ ಮಿಗಿಲಾದದ್ದು ಪತ್ರಕರ್ತನ ನಿಷ್ಠೆಯನ್ನು ಗುರುತಿಸಿ, ಗುರುತರ ರೀತಿಯಲ್ಲಿ ಗೌರವಿಸಿದ ಸಂಕೇಶ್ವರ ಅವರ ಔದಾರ್ಯದ ಮೌಲ್ಯ.

ಪ್ರಶಸ್ತಿ ಹಿಂದಿನ ಕತೆ ಕೂಡ ರೋಚಕ. ವಿರಾಜಪೇಟೆ ಅಕ್ರಮ-ಸಕ್ರಮ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುಜಾ ಕುಶಾಲಪ್ಪ ಮಾಡಿದ ಭೂಹಗರಣಗಳ ಬಗ್ಗೆ ಸರಣಿ ವರದಿ ಮಾಡಿದ ರಮೇಶ್ ಕುಟ್ಟಪ್ಪ ಅವರಿಗೆ ಜೀವಬೆದರಿಕೆ ಬಂದಿತ್ತು. ಈ ಬಗ್ಗೆ ಪೊಲೀಸ್ ಕೇಸಾಗಿ ನ್ಯಾಯಾಲಯ ಸುಜಾ ಕುಶಾಲಪ್ಪ ಅವರಿಗೆ ಎರಡು ವರ್ಷ ಸಜೆ ವಿಧಿಸಿತ್ತು. ಮೇಲ್ಮನವಿ ಸಲ್ಲಿಕೆಯಾಗಿತ್ತು. ಈ ಹಂತದಲ್ಲಿ ಎರಡು ತಿಂಗಳ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಸುಜಾ ಬಿಜೆಪಿ ಅಧಿಕೃತ ಅಭ್ಯರ್ಥಿ ಆದರು. ಆದರೆ ನ್ಯಾಯಾಲಯದಲ್ಲಿದ್ದ ಕೇಸ್ ನಿಂದ ನಾಮಪತ್ರ ತಿರಸ್ಕತವಾಗುವ ಭೀತಿ ಎದುರಾಗಿತ್ತು. ಈ ಹಂತದಲ್ಲಿ ಸಂಸದರೊಬ್ಬರು ಕುಟ್ಟಪ್ಪ ಅವರಿಗೆ 10 ಲಕ್ಷ ರುಪಾಯಿ ಆಮಿಷವೊಡ್ಡಿದ್ದರು. ನಂತರ ಸುಜಾ ಬೆಂಬಲಿಗರಿಂದ ಆಮಿಷದ ಮೊತ್ತ ಒಂದೂವರೇ ಕೋಟಿಗೆ ಏರಿತ್ತು. ಜತೆಗೆ ಬೇರೆ ಪತ್ರಿಕೆಯಲ್ಲಿ ಕೆಲಸ ಕೊಡಿಸುವ ಭರವಸೆಯೂ ಬಂದಿತ್ತು. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ರಮೇಶ್ ಕುಟ್ಟಪ್ಪ ಕೊರಳಿಗೆ ಸಂಕೇಶ್ವರ ಚಿನ್ನದ ಹಾರ ಹಾಕಿದ್ದಾರೆ. ಹತ್ತು ಲಕ್ಷ ರುಪಾಯಿ ಜತೆಜತೆಗೆ. ಪತ್ರಿಕೋದ್ಯಮದ ಘನತೆ ವರ್ಧಿಸಿದ ಈ ಪ್ರಶಸ್ತಿಯನ್ನು ಕನ್ನಡದ ಮಟ್ಟಿಗೆ ‘ಪುಲಿಟ್ಜರ್’ ಎಂದು ಕರೆದರೂ ತಪ್ಪೇನಿಲ್ಲ.

4 COMMENTS

  1. ಬಹಳ ಒಳ್ಳೆಯ ಕೆಲಸ. ಪ್ರಾಮಾಣಿಕ ಪತ್ರಕರ್ತರನ್ನು ಭೂತಕನ್ನಡಿ ಇಟ್ಟುಕೊಂಡು ಹುಡುಕಿದರೂ ಸಿಗುವುದು ಕಷ್ಟಸಾಧ್ಯವಾಗಿರುವಾಗ ಶ್ರೀಯುತ ಕುಟ್ಟಪ್ಪ ಅಂಥವರಿಗೆ ಈ ರೀತಿಯ ಪ್ರೋತ್ಸಾಹ ಸಿಕ್ಕಿರುವುದು ಸಮಾಜಕ್ಕೇ ಒಳ್ಳೆಯ ಬೆಳವಣಿಗೆ. ಅಭಿನಂದನೆಗಳು.

Leave a Reply