ಬೆಂಗಳೂರು ವಿರೋಧಿಸಬೇಕಿರೋದು ಮಾಬ್ ಜಸ್ಟೀಸ್ ಹಾಗೂ ರೇಸಿಸ್ಟ್ ಬೊಬ್ಬೆಯ ‘ಮೀಡಿಯಾ ಮಾಬ್ ಜಸ್ಟೀಸ್’ ಎರಡನ್ನೂ!

 

ಪ್ರವೀಣ್ ಕುಮಾರ್

ತಾಂಜೇನಿಯ ಯುವತಿಗೆ ಥಳಿಸಿದ, ಬಟ್ಟೆ ಹರಿದ ಪ್ರಸಂಗವನ್ನು ಯಾವ ಆಯಾಮದಲ್ಲೂ ಸಮರ್ಥಿಸಿಕೊಳ್ಳುವುದಕ್ಕಾಗುವುದಿಲ್ಲ. ಹಲ್ಲೆ ಮಾಡಿದ ಗುಂಪಿಗೆ ಶಿಕ್ಷೆಯಾಗಲೇಬೇಕು. ಈ ಸಂಬಂಧ ಆಗಲೇ 9 ಮಂದಿಯನ್ನು ಬಂಧಿಸಲಾಗಿದೆ. ತಮ್ಮದೇನೂ ತಪ್ಪಿಲ್ಲದೇ ಅಂಥ ಅಮಾನುಷತೆಗೆ ಒಳಗಾದ ಯುವತಿ ಮತ್ತು ಅವರ ಗೆಳೆಯರಿಗೆ ಅಗತ್ಯ ನೆರವು ಸಿಗಬೇಕೆಂಬುದರಲ್ಲೂ ತಕರಾರಿಲ್ಲ.

ಆದರೆ…

ಈ ಘಟನೆಯನ್ನು ಇರಿಸಿಕೊಂಡು ಬೆಂಗಳೂರು ರೇಸಿಸ್ಟ್, ಇದು ಜನಾಂಗೀಯ ದ್ವೇಷ ತುಂಬಿಕೊಂಡಿದೆ ಅಂತ ಎರಡು ದಿನಗಳಿಂದ ಬಡಬಡಿಸುತ್ತಿರುವ ಕೆಲ ರಾಷ್ಟ್ರೀಯ ವಾಹಿನಿಗಳದ್ದೂ, ಹೆಸರಘಟ್ಟದ ಸ್ಥಳೀಯರು ಅನುಸರಿಸಿದ್ದಂಥದ್ದೇ ‘ಮಾಬ್ ಜಸ್ಟಿಸ್’. ಎಲ್ಲ ಭಾಷೆ- ದೇಶದವರನ್ನು ಅದಾಗಲೇ ಕಿಕ್ಕಿರಿದಿರುವ ತನ್ನ ನೆಲದಲ್ಲಿ ಅಡ್ಜಸ್ಟ್ ಮಾಡಿಕೊಂಡು ತುಂಬಿಸಿಕೊಳ್ಳುತ್ತಿರುವ ಬೆಂಗಳೂರಿಗೆ ಜನಾಂಗೀಯತೆ ಯೋಚನೆ ಹಚ್ಚಿಕೊಂಡು ಕೂರುವುದಕ್ಕೆ ಪುರಸೊತ್ತೆಲ್ಲಿದೆ?

ಹಾಗಂತ… ಉತ್ತರ ಭಾರತೀಯರು ದಕ್ಷಿಣದವರನ್ನೆಲ್ಲ ಮದ್ರಾಸಿಗಳೆನ್ನುವುದು, ಉದ್ಯೋಗ ವಲಯದಲ್ಲಿ ನಮ್ಮ ತಲೆಮೇಲೆ ಬಂದು ಕುಳಿತಿದ್ದಾರೆಂಬ ಹತಾಶೆಗೆ ಬೆಂಗಳೂರಿಗರು ಹಲವು ಬಾರಿ, ನಿರ್ದಿಷ್ಟ ಭಾಷಿಕರನ್ನು ಕೊಂಗರೆನ್ನೋದು, ಮಣಿಪುರದವರನ್ನು ಇವರೆಲ್ಲರೂ ಸೇರಿಕೊಂಡು ಚಿಂಕಿಗಳು ಅನ್ನೋದು, ಅಷ್ಟೇಕೆ ಮೇಲ್ವರ್ಗದ ರೋಷದ ಮೇಲಿನ ಭರದಲ್ಲಿ ಪುಳಿಚಾರುಗಳೆಂದು ಒಬ್ಬರನ್ನು ಹಂಗಿಸೋದು… ಹೀಗಿದ್ದೆಲ್ಲ ನಡೆದುಕೊಂಡುಬಂದಿದ್ದೇ. ಬಿಳಿಯರು ನಮ್ಮನ್ನು ಕರಿ ತೊಗಲಿನವರೆಂದು ಕರೆದಿದ್ದರೆಂದು ತಲೆಬಗ್ಗಿಸುವ ದಿನಗಳು ಹೋದವು… ನಮ್ಮ ಮಾತುಗಳಲ್ಲೀಗ ಅವರು ಬಿಳಿ ಜಿರಳೆಗಳೆಂಬ ರೆಫರೆನ್ಸ್ ಗಳು ಢಾಳಾಗಿ ಇಣುಕುತ್ತಿವೆ. ಇವೆಲ್ಲಾ ರೇಷಿಯಲ್ ಅಲ್ವಾ, ಜನಾಂಗೀಯ ನಿಂದೆ ಅಲ್ವಾ? ಹೌದ್ಹೌದು.. ಆದ್ರೆ ಈ ಮಾನದಂಡದಲ್ಲಿ ಇಡೀ ಜಗತ್ತೇ ಜನಾಂಗೀಯ ದ್ವೇಷದಲ್ಲಿದೆ. ಬೆಂಗಳೂರು ಶೇಮ್, ಬೆಂಗಳೂರು ರೇಷಿಯಲ್ ಅಂತ ಹ್ಯಾಷ್ ಟಾಗ್ ಹಣೆಪಟ್ಟಿಗಳನ್ನು ಕೊಡುವುದಕ್ಕೇನು ಅರ್ಥ?

ಪ್ರತಿಯೊಂದನ್ನೂ ಅಲ್ಲಿನ ಪರಿಸ್ಥಿತಿಯ ಚೌಕಟ್ಟಿನಲ್ಲೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಹೆಸರಘಟ್ಟದಲ್ಲಿ ಸುಡಾನ್ ವಿದ್ಯಾರ್ಥಿಯೊಬ್ಬ ಪಾನಮತ್ತನಾಗಿ ಕಾರು ಚಲಾಯಿಸಿಕೊಂಡು ಬಂದು ಸ್ಥಳೀಯ ಮಹಿಳೆಯ ಸಾವಿಗೆ ಕಾರಣವಾದ. ಆಕೆಯ ಪತಿಯೂ ಗಂಭೀರವಾಗಿ ಗಾಯಗೊಂಡರು. ಆತ ತಪ್ಪಿಸಿಕೊಂಡು ಹೋಗಿದ್ದೇ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಹಾಗೆ ಉದ್ರಿಕ್ತರಾಗಿದ್ದ ಜನಸಮೂಹದ ನಡುವೆ, ಇವ್ಯಾವುದರ ಅರಿವಿಲ್ಲದ ಆಫ್ರಿಕಾದ ನತದೃಷ್ಟ ವಿದ್ಯಾರ್ಥಿನಿ ಮತ್ತವರ ಗೆಳೆಯರು ಅರ್ಧತಾಸಿನ ಅಂತರದಲ್ಲೇ ಕಾಣಿಸಿಕೊಂಡೊಡನೆ, ಆಕ್ರೋಶ ಸ್ಫೋಟಗೊಳ್ಳುವುದಕ್ಕೆ ವೇದಿಕೆಯೊಂದು ಸಿಕ್ಕಂತಾಯಿತು. ಇದು ಸರ್ವಥಾ ಸಮರ್ಥನೀಯವಲ್ಲ. ಆದರೆ ಆಕ್ರೋಶದಲ್ಲಿರುವವರು ಚಿಂತಿಸೋದಿಲ್ಲ. ಮಾಬ್ ಕೆನಾಟ್ ಥಿಂಕ್, ದೆ ಕ್ಯಾನ್ ಓನ್ಲಿ ಆ್ಯಕ್ಟ್..

ಸ್ಥಳೀಯರಲ್ಲಿ ಹೀಗೆ ಯೋಚನೆಗೆ ಎಡೆಮಾಡಿಕೊಡದ ಆಕ್ರೋಶ ವ್ಯಕ್ತವಾಗುವುದಕ್ಕೂ ಕಾರಣಗಳಿವೆ. ಆಫ್ರಿಕಾ ಮೂಲದಿಂದ ವ್ಯಾಸಂಗ ಇನ್ನಿತರ ಕಾರಣಗಳಿಗಾಗಿ ಬಂದವರು ಡ್ರಗ್ಸ್ ಜಾಲ, ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಸಾಕಷ್ಟು ಬಾರಿ ಸಿಕ್ಕಿಕೊಂಡಿದ್ದಾರೆ. ಅಕ್ರಮದ ನಡೆಸುತ್ತಿದ್ದ ನೈಜೀರಿಯಾ ಪ್ರಜೆ ಬಂಧನ ಎಂಬುದು ಸ್ಥಳೀಯ ಪುಟದಲ್ಲಿ ಯಾವತ್ತೂ ಓದಲು ಸಿಗುವ ಸುದ್ದಿ. ಇಂಥ ಹಲವು ವರ್ತನೆಗಳು ಸ್ಥಳೀಯರಲ್ಲಿ ಈ ಸಮುದಾಯದ ಬಗ್ಗೆ ಅಸಮಾಧಾನ- ಸಿಟ್ಟು ಬೆಳೆಸಿದ್ದವು. ಅವೆಲ್ಲದರ ಆಕ್ರೋಶ ತಪ್ಪಾದ ಮುಗ್ಧ ವ್ಯಕ್ತಿಗಳ ಮೇಲೆ ಸ್ಫೋಟಗೊಂಡಿತು. ಅರೇ.. ಯಾರೋ ಒಂದಿಷ್ಟು ನೈಜೀರಿಯನ್ ಗಳು ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಂಡರೆ ಆಫ್ರಿಕಾ ಮೂಲದವರನ್ನೆಲ್ಲ ಸಂಶಯಿಸೋದು ರೇಸಿಸ್ಟ್ ನಡೆ ಅಲ್ಲವಾ? ಬೆಂಗಳೂರಿಗರದ್ದೂ ಅದೇ ಪ್ರಶ್ನೆ. ತಮ್ಮವರು ಸತ್ತಿದ್ದಾರೆಂಬ ಆಕ್ರೋಶದಲ್ಲಿ ಜನಸಮೂಹವೊಂದು ಅಕ್ರಮ- ಅನಾಚಾರ ಎಸಗಿದರೆ ಮಾಧ್ಯಮದ ಚರ್ಚಾಪಟುಗಳು ಇಡೀ ಬೆಂಗಳೂರನ್ನೇ ರೇಸಿಸ್ಟ್ ಎಂಬಂತೆ ನೋಡಿ ಹ್ಯಾಷ್ ಟ್ಯಾಗ್ ಹಾಕಬೇಕಾ?

ಇವರು ಆಫ್ರಿಕಾದವರು ಎಂಬ ಕಾರಣಕ್ಕೇ ಪೊಲೀಸರು ಪ್ರಕರಣ ದಾಖಲಿಸಲಿಲ್ಲ… ಇದು ರೇಸಿಸ್ಟ್ ಅಲ್ವಾ? ಹೀಗೆಂದು ಪ್ರಶ್ನಿಸುವವರು ಸ್ವಲ್ಪ ಆಕ್ರೋಶ ಬಿಟ್ಟು ಯೋಚನೆ ಮಾಡಿದರೆ ತಿಳಿಯೋದಿಷ್ಟು- ಪೊಲೀಸರ ಕರ್ತವ್ಯಲೋಪಕ್ಕೆ ಶಿಕ್ಷೆಯಾಗಬೇಕಾದದ್ದೇ. ಆದರೆ ಈ ಲೋಪಕ್ಕೆ ರೇಸಿಸ್ಟ್ ಆಗಿರೋದಲ್ಲ ಕಾರಣ. ಸ್ಥಳೀಯವಾಗಿ ಯಾರು ಬಲವಾಗಿದ್ದಾರೋ ಅವರ ಪರ ವಾಲಿಕೊಂಡಿರುವುದು ಪೊಲೀಸ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಆಗಾಗ ಪ್ರದರ್ಶಿಸುವ ಬಲಹೀನತೆ. ಸಂತ್ರಸ್ತ ಆಫ್ರಿಕನ್ನರ ಜಾಗದಲ್ಲಿಸ್ಥಳೀಯರಲ್ಲದ ಯಾರೇ ಇದ್ದರೂ, ಅವರು ಈ ದೇಶದವರೇ ಆಗಿದ್ದರೂ, ಯಾವ ವರ್ಗದವರೇ ಆಗಿದ್ದರೂ ಇದೇ ಕೆಟ್ಟ ಪ್ರತಿಸ್ಪಂದನೆ ಇರುತ್ತಿತ್ತು.

ಜನಾಕ್ರೋಶವೂ ಅಷ್ಟೆ. ದುರದೃಷ್ಟವಶಾತ್, ಅಪಘಾತದಲ್ಲಿ ಮೃತರಾದ ಶಬನಾ ಅವರ ಸಾವಿಗೆ ಇನ್ಯಾವುದಾರೂ ನಿರ್ದಿಷ್ಟ ಸಮುದಾಯದವ ಕಾರಣನಾಗಿದ್ದರೆ, ಆಕ್ರೋಶ ಭುಗಿಲೆದ್ದ ಸಮಯದಲ್ಲಿ ಆ ಕೋಮಿನವರ ವಿರುದ್ಧವೂ ಇಂಥದೇ ಸಿಟ್ಟು ಕೆಲಸ ಮಾಡುತ್ತಿತ್ತು.

ಶಬಾನಾ ಸಾವಿಗೆ ಕಾರಣನಾದವನಿಗೆ ಶಿಕ್ಷೆಯಾಗಲಿ, ತಾಂಜೇನಿಯ ಯುವತಿ ಮೇಲೆ ಹಲ್ಲೆ ಮಾಡಿದವರ ಮೇಲೆ ತ್ವರಿತ ಕ್ರಮ ಕೈಗೊಳ್ಳಲಿ ಅಂತ ಆದೇಶಿಸುವುದು ನ್ಯಾಯಸಮ್ಮತ. ಆದರೆ, ರಾಜ್ಯದ ಮಂತ್ರಿಗಳು, ಕೇಂದ್ರದ ಸಚಿವರು ಎಲ್ಲರಿಗೂ ಈ ರಾಷ್ಟ್ರೀಯ ಸುದ್ದಿವಾಹಿನಿಗಳು ಮೈಕ್ ಹಿಡಿದು, ‘ಇದು ಜನಾಂಗೀಯ ಹಲ್ಲೆ ಹೌದು ಅಂತ ಒಪ್ಕೋತೀರಾ’ ಅಂತ ಪಟ್ಟು ಹಿಡಿದಿರೋದು ಮಾತ್ರ ಟಿಆರ್ಪಿಯ ‘ಮೀಡಿಯಾ ಮಾಬ್ ಜಸ್ಟೀಸ್’.

ಫೇಸ್ಬುಕ್ ನಲ್ಲಿ ಗ್ಲ್ಯಾಡ್ಸನ್ ಆಲ್ಮೇಡಾ ಅವರು ಎತ್ತಿರುವ ಪ್ರಶ್ನೆಯನ್ನು ಮಾಧ್ಯಮ ಕೇಳಿಸಿಕೊಳ್ಳಬೇಕು. ಜನಾಂಗೀಯ ತಾರತಮ್ಯದ ಬಗ್ಗೆ ಅತ್ಯುತ್ಸಕವಾಗಿ ಮಾತಾಡುತ್ತಿರುವ ವಾಹಿನಿಗಳಲ್ಲಿ ಕಪ್ಪುವರ್ಣದ ನಿರೂಪಕರು ಯಾರಾದರೂ ಕಾಣುತ್ತಾರೆಯೇ? ‘ಶ್ವೇತವರ್ಣದ, ಸುಂದರ’ ಮಹಿಳಾ ಆ್ಯಂಕರ್ ಗಳನ್ನು ಮಾತ್ರ ಪರದೆಗೆ ಫಿಟ್ ಆಗಿಸಿ, ಅಂಥದೇ ಕೌಶಲ ಇರುವ ಬೇರೆ ವರ್ಣದ ವ್ಯಕ್ತಿಗಳನ್ನು ನಿರ್ಲಕ್ಷಿಸುತ್ತಿಲ್ಲವೇ?

ಯಾರು ರೇಸಿಸ್ಟ್ ಗಳು?

Leave a Reply