ವಿಡಿಯೋ ಸಂದರ್ಶನ: ಚರ್ಚೆಗಳು ಏಳಬೇಕು ಎಂಬುದೇ ಸಿನಿಮಾದ ಉದ್ದೇಶ ಎಂದಿದ್ದಾರೆ ಬಿ. ಸುರೇಶ್

ಡಿಜಿಟಲ್ ಕನ್ನಡ ಟೀಮ್

ಬಿ. ಸುರೇಶ್ ಕತೆ ಬರೆದು ನಿರ್ದೇಶಿಸಿರುವ ‘ದೇವರ ನಾಡಲ್ಲಿ’ ಚಿತ್ರ ಇಂದು (ಫೆ. 5) ಬಿಡುಗಡೆಯಾಗಿದೆ. ಬಿಡುಗಡೆಗೆ ಕೆಲದಿನಗಳ ಮುಂಚೆ ಬಿ. ಸುರೇಶ್ ಅವರೊಂದಿಗೆ ಮಾತು ಮಾತುಗಳ ಮಥಿಸಿತ್ತು ‘ಡಿಜಿಟಲ್ ಕನ್ನಡ’.

‘ದೇವರ ನಾಡಲ್ಲಿ’ ನೆಪದಲ್ಲಿ, ಸಿನಿಮಾ ಅರಳುವ ಜಾಡಿನ ಕುರಿತ ಮಾತುಕತೆ ಇದು ಅಂತ ಹೇಳಬಹುದು. ಕತೆಯನ್ನೇ ಮುಖ್ಯವಾಗಿಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಹೊರಟಾಗ ಬೇಕಾಗುವ ತಯಾರಿ, ಅದರ ಸುದೀರ್ಘ ಪ್ರಕ್ರಿಯೆ ಇಲ್ಲಿನ ವಿರಾಮದ ಮಾತುಕತೆಯಲ್ಲಿ ಬಿಂಬಿತವಾಗಿದೆ.

ಟ್ರೈಲರ್ ನೋಡಿದಾಗ ಎಡ- ಬಲ ಸಿದ್ಧಾಂತಗಳನ್ನೆಲ್ಲ ಸ್ಪರ್ಶಿಸಿದಂತಿದೆ, ನಾಳೆ ನಮ್ಮ ಪಂಥಕ್ಕೆ ನ್ಯಾಯ ಒದಗಿಸಿಲ್ಲ ಅಂತ ಯಾರಾದರೂ ಆಕ್ಷೇಪ ಎತ್ತಬಹುದಲ್ವ ಎಂಬ ಪ್ರಶ್ನೆಗೆ ಬಿ. ಸುರೇಶ್ ಅವರು ಹೇಳಿದ್ದು… ‘ಚರ್ಚೆಗಳನ್ನು ಹುಟ್ಟುಹಾಕುವುದೇ ನನ್ನ ಸಿನಿಮಾಗಳ ಆಶಯ. ಹಾಗಂತ ಯಾರೋ ಕಲ್ಲು ಹೊಡೆಯಬಹುದಾದಂಥದ್ದೆಲ್ಲ ಇಲ್ಲಿ ಏನಿಲ್ಲ. ಆದರೆ ಇದು ಹೀಗಾಗಬೇಕಿತ್ತು ಅಂತ ಜಗಳಕ್ಕೆ ಕುಳಿತರೆ ಅದು ಸ್ವಾಗತಾರ್ಹ. ವಾಗ್ವಾದಗಳಾಗಬೇಕು. ಇಲ್ಲಿ ನನಗೆ ಪ್ರವೇಶ ಸಿಕ್ಕ ಎಲ್ಲವಾದಗಳನ್ನು ಬಿಂಬಿಸಿದ್ದೇನಾದರೂ, ಇದೇ ಸರಿ ಎಂಬ ಸ್ವಂತ ಅಭಿಪ್ರಾಯ ಹೇರಿಲ್ಲ.’

ಅಂದಹಾಗೆ, ‘ದೇವರ ನಾಡಲ್ಲಿ’ ಚಿತ್ರ, ಕರಾವಳಿ ಕರ್ನಾಟಕದಲ್ಲಿ 1993ರಲ್ಲಿ ನಡೆದ ಘಟನೆಯೊಂದನ್ನು ಕೇಂದ್ರವಾಗಿರಿಸಿಕೊಂಡಿದೆ. ಆ ಪ್ರಕರಣದಲ್ಲಿ ಬಂಧಿತರಾದ ಒಂದಿಷ್ಟು ಯುವಕರು 1998ರಲ್ಲಿ ನಿರ್ದೋಷಿಗಳೆಂದು ಬಿಡುಗಡೆಯಾಗುತ್ತಾರೆ. ಇದು ಪತ್ರಿಕೆಗಳಲ್ಲಿ ಪ್ರಕಟವಾದಾಗ, ನಿಜಕ್ಕೂ ಈ ಪ್ರಕರಣ ಏನಾಗಿತ್ತು ಅಂತ ಬೆಂಬತ್ತಿ ಹೋದಾಗ ಹುಟ್ಟಿದ ಕತೆ ಇದು.

ಉಳಿದಂತೆ ಹೊಮ್ಮಿದ ಮಾತುಗಳು….

  • ಈ ಚಿತ್ರ ನೋಡಲು ಬರುವವರಿಗೆ ಒಂದು ಹಂತದ ಸಿದ್ಧತೆ ಇರಬೇಕು ಅನ್ನೋದು ನಿಜ. ಹೀಗಾಗಿ ದೇವರ ನಾಡಲ್ಲಿ ಚಿತ್ರವನ್ನು ಕಮರ್ಷಿಯಲ್ ಅಂತಲೂ ಅನ್ನಲಾರೆ, ಆದರೆ ಆರ್ಟ್ ಹೌಸ್ ಮೂವೀನೂ ಇದಲ್ಲ. ಇವೆರಡರ ಮಧ್ಯಮಮಾರ್ಗ. ಹೀಗಾಗಿ ಮಲ್ಟಿಫ್ಲೆಕ್ಸ್ ಗಳಲ್ಲಿ ಮಾತ್ರ ಬಿಡುಗಡೆ ಆಗುತ್ತಿದೆ. ಸಿಂಗಲ್ ಸ್ಕ್ರೀನ್ ಗಳಿಗೆ ಜನರನ್ನು ಎಳೆತರುವಷ್ಟು ಜನಪ್ರಿಯ ಮಾದರಿ ಇದಲ್ಲ.
  • ಪ್ರಕಾಶ್ ರೈಗೆ ಇದರಲ್ಲಿ ಪಾತ್ರವಿರಲಿಲ್ಲ. ನಮ್ಮ ಗಾಢ ಸ್ನೇಹದಿಂದ ಈ ಚಿತ್ರದಲ್ಲಿ ಪ್ರಕಾಶ ಇದ್ದಾನೆ. ಆದರೆ ಚಿತ್ರಕತೆ ಆತನಿಗೆ ಅದೆಷ್ಟು ಮೆಚ್ಚುಗೆ ಆಯ್ತೆಂದರೆ ತಾನೇ ಪಾತ್ರ ಕೇಳಿ, ಯಾವ ಸಂಭಾವನೆ ಇಲ್ಲದೇ ಪಾತ್ರ ನಿರ್ವಹಿಸಿದ.
  • ಜಗತ್ತಿನ ಯಾವ ಬಿಕ್ಕಟ್ಟನ್ನಾದರೂ ಮಾತಿನಿಂದ ಪರಿಹರಿಸಿಕೊಳ್ಳಬಹುದೆಂಬುದು ನನ್ನ ನಂಬಿಕೆ. ಹೀಗಾಗಿ ಚರ್ಚೆ ಹುಟ್ಟಬೇಕು. ಇದೊಂದು ಸಣ್ಣ ಪ್ರಯತ್ನ… ಚಹಾ ಕಪ್ಪಿನಲ್ಲಿ ಅಲೆಗಳು ಎದ್ದಹಾಗೆ.

Leave a Reply