ಸಮತೋಲನದ ಆಯ್ಕೆ, ಕನ್ನಡಿಗರಿಲ್ಲವೆಂಬ ನಿರಾಸೆ ಬೇಕೆ?

ಸೋಮಶೇಖರ ಪಿ., ಭದ್ರಾವತಿ

ಸದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಈಗ ಟಿ20 ಕ್ರಿಕೆಟ್ ಜಾತ್ರೆಯ ಸಮಯ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಆರಂಭವಾದ ಈ ಜಾತ್ರೆ, ಶ್ರೀಲಂಕಾ ವಿರುದ್ಧದ ಸರಣಿ, ಏಷ್ಯಾ ಕಪ್, ವಿಶ್ವಕಪ್ ಹಾಗೂ ಐಪಿಎಲ್ ಹೀಗೆ ಮುಂಬರುವ ನಾಲ್ಕು ತಿಂಗಳವರೆಗೂ ಭಾರತೀಯ ಕ್ರಿಕೆಟ್ ಪ್ರಿಯರು ಟಿ20 ಕ್ರಿಕೆಟ್ ಅಲೆಯಲ್ಲೇ ತೇಲುತ್ತಿರುತ್ತಾರೆ. ಈಗ ಬಿಸಿಸಿಐ ಆಯ್ಕೆ ಸಮಿತಿ ಪ್ರತಿಷ್ಠಿತ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆಯನ್ನು ನೋಡಿದರೆ, ತಂಡದಲ್ಲಿ ಪ್ರತಿ ವಿಭಾಗದ ಕಾಂಬಿನೇಷನ್ ಹಾಗೂ ಸಮತೋಲನದ ಬಗ್ಗೆ ಹೆಚ್ಚು ಗಮನ ಹರಿಸಿರುವುದು ಎದ್ದು ಕಾಣುತ್ತಿದೆ.

ಈ ತಂಡದಲ್ಲಿ ಕರ್ನಾಟಕದ ಯಾವುದೇ ಆಟಗಾರರಿಗೆ ಸ್ಥಾನವಿಲ್ಲ ಎಂಬ ಕೊರಗು ಸಹಜವಾಗಿ ಕೇಳಿ ಬರುತ್ತದೆ.

ಆದರೆ, ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಐಸಿಸಿಯ ಮಹತ್ವದ ಟೂರ್ನಿಗಳಲ್ಲಿ ತಂಡದ ಸಾಮರ್ಥ್ಯವನ್ನು ಕೇವಲ 15 ಆಟಗಾರರಿಗೆ ಸೀಮಿತವಾಗಿಡುತ್ತಾರೆ. ಆಗ, ಆಡುವ 11ರ ಬಳಗದ ಜತೆಗೆ ಹೆಚ್ಚುವರಿಯಾಗಿ ಕೇವಲ ನಾಲ್ಕು ಆಟಗಾರರನ್ನು ಮಾತ್ರ ತಂಡದಲ್ಲಿ ಹೊಂದಲು ಸಾಧ್ಯ. ಈ ನಾಲ್ವರು ಉಳಿದ ಹನ್ನೊಂದರಲ್ಲಿ ಯಾವುದೇ ಆಟಗಾರನ ಸ್ಥಾನ ತುಂಬುವ ಸಾಮರ್ಥ್ಯ ಹೊಂದಿರ ಬೇಕು. ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಮತ್ತು ಮಧ್ಯಮ ಕ್ರಮಾಂಕಕ್ಕೆ ಇಬ್ಬರು ಆಟಗಾರರಾದರೆ, ವೇಗಿಗಳಿಗೆ ಮತ್ತು ಸ್ಪಿನ್ ವಿಭಾಗದಲ್ಲಿ ಸ್ಥಾನ ತುಂಬಬಲ್ಲ ಆಟಗಾರರನ್ನು ಹೊಂದಿರಬೇಕು.

ಮತ್ತೊಂದೆಡೆ ಕರ್ನಾಟಕ ಆಟಗಾರರಿಗೆ ಸ್ಥಾನವಿಲ್ಲ ಎಂದು ಬೇಸರವಾಗುವುದು ಸಹಜ. ಆದರೆ ತಂಡದಲ್ಲಿ ಯಾರ ಬದಲಿಗೆ ಯಾವ ಆಟಗಾರನನ್ನು ಆಯ್ಕೆ ಮಾಡಬಹುದಿತ್ತು ಎಂದು ನೋಡಿದಾಗ ಆಯ್ಕೆಗಾರರ ಸವಾಲು ನಮಗೆ ಅರ್ಥವಾಗುತ್ತದೆ. ಪ್ರಸ್ತುತ ಕರ್ನಾಟಕದಿಂದ ಟಿ20 ಮಾದರಿಯಲ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗಬಲ್ಲ ಆಟಗಾರರೆಂದರೆ, ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ಎನ್ನಬಹುದು. ಆದರೆ, ಪ್ರಸ್ತುತ ಭಾರತ ತಂಡದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಅತ್ಯುತ್ತಮ ಫಾರ್ಮ್ ನಲ್ಲಿದೆ. ಒಂದು ವೇಳೆ ಈ ಇಬ್ಬರಲ್ಲಿ ಒಬ್ಬರಿಗೆ ಗಾಯವಾದರೂ, ಅಜಿಂಕ್ಯ ರಹಾನೆ ಈ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನದಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದ ಮನೀಷ್ ಪಾಂಡೆ ಸ್ಥಾನದ ನಿರೀಕ್ಷೆಯಲ್ಲಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಧೋನಿ, ಯುವರಾಜ್, ಸುರೇಶ್ ರೈನಾರಂತಹ ಸ್ಪೆಷಲಿಸ್ಟ್ ಗಳಿದ್ದಾರೆ. ಅಲ್ಲದೆ ಈ ಮಾದರಿಯಲ್ಲಿ ಹಾರ್ದಿಕ್ ಪಾಂಡ್ಯ, ಹರ್ಭಜನ್, ಅಶ್ವಿನ್, ಜಡೇಜಾ ಮತ್ತು ಪವನ್ ನೇಗಿರನ್ನು ಆಲ್ರೌಂಡರ್ ಗಳೆಂದು ಪರಿಗಣಿಸಬಹುದು. ಇನ್ನು ಬೌಲಿಂಗ್ ನಲ್ಲಿ ಆಶೀಶ್ ನೆಹ್ರಾ, ಬುಮ್ರಾ ಹಾಗೂ ಮೊಹಮದ್ ಶಮಿ ಮಾತ್ರ ಪ್ರಮುಖ ವೇಗಿಗಳಾಗಿದ್ದು, ಹಾರ್ದಿಕ್ ಮೂರನೇ ಮಧ್ಯಮ ವೇಗಿಯಾಗಲಿದ್ದಾರೆ.

ಭಾರತದಲ್ಲೇ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ 2 ಬಲಗೈ ಆಫ್ ಸ್ಪಿನ್ನರ್ ಮತ್ತು 2 ಎಡಗೈ ಸ್ಪಿನ್ನರ್ ಗಳನ್ನು ಹೊಂದಲಾಗಿದೆ. ಆಸೀಸ್ ನೆಲದಲ್ಲೇ ಸ್ಪಿನ್ ಎಂಬ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಿದ್ದ ಧೋನಿ, ಈ ಟೂರ್ನಿಗಳಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ಸ್ಪಿನ್ ಅನ್ನು ಬ್ರಹ್ಮಾಸ್ತ್ರವಾಗಿ ಬಳಸುವುದು ಸಹಜವಾಗಿಯೇ ತಿಳಿಯುತ್ತಿದೆ. ಇನ್ನು ತಂಡದ ಆಡುವ 11ರ ಕಾಂಬಿನೇಷನ್ ಅನ್ನು ಬ್ಯಾಟ್ಸ್ ಮನ್, ಆಲ್ರೌಂಡರ್, ಸ್ಪಿನ್, ವೇಗಿಗಳಾಗಿ ನೋಡುವುದಾದರೆ ಧೋನಿ (6+1+2+2) ಮಾದರಿಯಲ್ಲಿ ಆಡಿಸಬಹುದು. ಈ ಕಾಂಬಿನೇಷನ್ ನಲ್ಲೇ ತಂಡದ ಆಯ್ಕೆ ನಡೆಯುವುದು ಬಹುತೇಕ ಖಚಿತ.

ಈ ಪರಿಸ್ಥಿತಿಯಲ್ಲಿ ಸ್ಥಾನ ವಂಚಿತರಾಗಿರುವ ರಾಜ್ಯದ ಆಟಗಾರರು ನಿರಾಸೆ ಅನುಭವಿಸುವುದು ಬೇಡ. ಮನೀಷ್ ಪಾಂಡೆ ಆಸ್ಟ್ರೇಲಿಯಾ ನೆಲದಲ್ಲಿ ತನ್ನ ಸಾಮರ್ಥ್ಯ ತೋರಿದ್ದು, ಅವರಿಗೆ ಭವಿಷ್ಯದಲ್ಲಿ ಮತ್ತಷ್ಟು ಅವಕಾಶ ಸಿಗುವುದರಲ್ಲಿ ಅನುಮಾನವಿಲ್ಲ. ಕೇವಲ ಕರ್ನಾಟಕದ ಆಟಗಾರರಲ್ಲದೇ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಇರ್ಫಾನ್ ಪಠಾಣ್ ಗೂ ನಿರಾಸೆ ಸಹಜ. ಆಯ್ಕೆಯಾಗದವರಿಗೆಲ್ಲ ಈ ನಿರಾಸೆ ಕಾಡುತ್ತದಾದರೂ, ತಂಡ ಸಮತೋಲಿತವಾಗಿದೆ ಎಂಬಂಶವೇ ಮುಖ್ಯವಾಗುತ್ತದೆ.

ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಗೆ ಭಾರತ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಪವನ್ ನೇಗಿ, ಹರ್ಭಜನ್ ಸಿಂಗ್, ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬುಮ್ರಾ, ಆಶೀಶ್ ನೆಹ್ರಾ, ಮೊಹಮದ್ ಶಮಿ.

Leave a Reply