ಸಾಹಿತ್ಯ ಲೋಕದ ದಿಗ್ಗಜ, ಚಿಂತಕ, ಶಿಕ್ಷಣತಜ್ಞ, ಕನ್ನಡ ಸೇವಕ ಸಾ.ಶಿ ಮರುಳಯ್ಯ (85) ಶುಕ್ರವಾರ ವಿಧಿವಶರಾಗಿದ್ದಾರೆ. ವಯೋಸಹಜ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಾ.ಶಿ ಯವರು ಜನವರಿ 22 ರಂದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಿಗ್ಗೆ 6 ಗಂಟೆಯ ಸಮಯದಲ್ಲಿ ವೈದ್ಯರು ಸಾ.ಶಿ ರವರು ಇಹಲೋಕ ತ್ಯಜಿಸಿದ್ದಾರೆ ಎಂಬುದನ್ನು ಧೃಡಪಡಿಸಿದರು. ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಗೆ ದೇಹದಾನ ಮಾಡುವಂತೆ ಪತ್ರ ಬರೆದಿಟ್ಟು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಇವರ 60 ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಅಗಲಿಕೆಯಿಂದ ಸಾಹಿತ್ಯ ಲೋಕಕ್ಕೆ ಮತ್ತು ಅಪಾರ ಸಾಹಿತ್ಯಾಸಕ್ತರಿಗೆ ತುಂಬಲಾರದ ನಷ್ಟ ಉಂಟಾಗಿದೆ. ಸಾ.ಶಿ ಯವರು ಇಬ್ಬರು ಪುತ್ರರನ್ನು ಮತ್ತು ಒಬ್ಬರು ಪುತ್ರಿಯನ್ನು ಅಗಲಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಸಲು ಗ್ರಾಮದಲ್ಲಿ 1931 ರ ಜನವರಿ 28 ರಂದು ಜನಿಸಿದ ಸಾಸಲು ಶಿವರುದ್ರಯ್ಯ ಮರುಳಯ್ಯ ಅವರು ಸಂಪಾದನೆ, ಕಾವ್ಯ, ಕಾದಂಬರಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮೈಸೂರು ವಿವಿಯಲ್ಲಿ ಕನ್ನಡ ಎಂ ಎ ಪದವಿ ಪಡೆದು ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. ಚಾಮರಾಜನಗರ, ತುಮಕೂರು, ದಾವಣೆಗೆರೆ, ಶಿವಮೊಗ್ಗ, ಚನ್ನಪಟ್ಟಣ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಅಧ್ಯಾಪಕರಾಗಿ ಹಾಗು ಪ್ರಾಂಶುಪಾಲರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕನ್ನಡ ಬೆಳವಣಿಗೆಗೆ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಇವರು 1995 ರಿಂದ 98 ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇವರ “ಮರುಳ ಸಿದ್ದೇಶ್ವರ ವಚನ ವೈಭವ” ಕಥನ ಕವನ, ವಿಜಯ ವಾತಾಪಿ, ಘೋಷವತಿ, ಬೃಂದಾವನ ಲೀಲೆ, ನೂಪುರಾಲಸ, ಶಿವತಾಂಡವ, ಬಾಸನ ಮಕ್ಕಳು, ಕೆಂಗನ ಕಲ್ಲು, ಅನುಶೀಲನ ಸೇರಿದಂತೆ ಹಲವು ಕೃತಿ. ಕಾದಂಬರಿ, ಸಣ್ಣಕತೆಗಳನ್ನು ಬರೆದು ಸಾಹಿತ್ಯ ಕೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.