ಸುದ್ದಿಸಂತೆ: ತ್ಯಾಜ್ಯದಿಂದ ವಿದ್ಯುತ್, ಸೆಪ್ಟೆಂಬರ್ ನಲ್ಲಿ ‘ಅಕ್ಕ’, ಸೆಹ್ವಾಗ್ ಸೆಂಚುರಿ…

ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಗೆ ರಾಜ್ಯದ ಗಮನ

ಕಸ ವಿಲೆವಾರಿ ಸದ್ಯ ಭಾರತದ ಪ್ರಮುಖ ನಗರಗಳನ್ನು ಕಾಡುತ್ತಿರುವ ಸಮಸ್ಯೆ. ಈ ಸಮಸ್ಯೆ ಬೆಂಗಳೂರನ್ನು ಕಾಡುತ್ತಿದ್ದು, ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿದೇಶಿ ಕಂಪನಿಗಳ ಜತೆ ಕೈ ಜೋಡಿಸಲು ಚಿಂತಿಸಿದ್ದು, ಕಸದಿಂದ ವಿದ್ಯುತ್ ತಯಾರಿಸುವ ಯೋಜನೆಗಳಿಗೆ ಅನುಮತಿ ನೀಡಲು ನಿರ್ಧರಿಸಿದೆ.

 ಕಸದಿಂದ ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಅವಕಾಶಗಳಿದ್ದು ವಿದೇಶಿ ಕಂಪನಿಗಳು ಉತ್ಸುಕವಾಗಿವೆ. ಕಸ ವಿಂಗಡಿಸದೆ ಅದನ್ನು ಸುಟ್ಟು ವಿದ್ಯುತ್ ಉತ್ಪಾದನೆ ಮಾಡುವ ಆಧುನಿಕ ತಂತ್ರಜ್ಞಾನವನ್ನು ಕೆಲ ಕಂಪನಿಗಳು ಹೊಂದಿರುವುದು ವಿಶೇಷ. ಈ ರೀತಿ ಉತ್ಪಾದನೆಗೊಂಡ ವಿದ್ಯುತ್ ರಾಜ್ಯ ಸರ್ಕಾರದ ವಿದ್ಯುತ್ ಕಂಪನಿಗಳೇ ಖರೀದಿಸಲಿವೆ. ಕಸದಿಂದ ಉತ್ಪಾದನೆಯಾದ ವಿದ್ಯುತ್ ಖರೀದಿ ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸಲಿದ್ದು, ಸ್ವಚ್ಛ ಭಾರತ್ ಅಭಿಯಾನದಡಿ ಈ ಯೋಜನೆ ಸೇರ್ಪಡೆಗೆ ಕೇಂದ್ರ ಆಸಕ್ತಿ ತೋರಿದೆ.

ಈ ವಿದ್ಯುತ್ ಉತ್ಪಾದನೆ ಯೋಜನೆಗೆ ಕಸ ಎಷ್ಟು ಟನ್ ವಿಲೇವಾರಿ ಮಾಡಲಾಗುವುದೋ ಅದರ ಆಧಾರದಲ್ಲಿ 10 ರಿಂದ 50 ಎಕರೆವರೆಗೆ ಭೂಮಿ ಅಗತ್ಯವಿದ್ದು, ಇದನ್ನು ಸರ್ಕಾರ ಒದಗಿಸಲು ಮುಂದಾಗಿದೆ. ಕಸದಿಂದ ಇಂಧನ ಉತ್ಪಾದನೆಗೆ ಭಾರತದ ಜತೆಗೆ ಜಪಾನ್, ನೆದರ್ಲೆಂಡ್‍ನಂತಹ ದೇಶಗಳು ಮುಂದೆ ಬಂದಿವೆ. ಕೇಂದ್ರ ಸರ್ಕಾರ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಕುರಿತಂತೆ ಮಾರ್ಗ ಸೂಚಿ ನೀಡಲಿದ್ದು, ಆ ಪ್ರಕಾರ ಇಂಧನ ಉತ್ಪಾದನೆ ಮಾಡಲು ಖಾಸಗಿ ಉದ್ಯಮಿಗಳ ಮುಂದೆ ಬಂದರೆ ರಾಜ್ಯ ಸರ್ಕಾರ ನೆರವು ನೀಡಲು ನಿರ್ಧರಿಸಿದೆ.

ಕೇವಲ ಬೆಂಗಳೂರು ಮಾತ್ರವಲ್ಲದೆ, ದೆಹಲಿ ಮತ್ತು ಮುಂಬೈನಂತಹ ಮಹಾನಗರಗಳಲ್ಲೂ ಈ ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ ದೆಹಲಿಯಲ್ಲಿ ಈಗ ಕಸ ವಿಲೆವಾರಿ ಅಲ್ಲಿನ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಹಾಗಾಗಿ ಈ ರೀತಿಯಾದ ಯೋಜನೆಗಳು ಬಂದರೆ, ಈ ಸಮಸ್ಯೆ ಕ್ರಮೇಣ ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ.

ಸೆ.2ರಿಂದ ನ್ಯೂಜೆರ್ಸಿಯಲ್ಲಿ ಅಕ್ಕ ಸಮ್ಮೇಳನ

ಅಮೆರಿಕದಲ್ಲಿ ಎರಡು ವರ್ಷಕ್ಕೊಮ್ಮ ನಡೆಯಲಿರುವ ಪ್ರತಿಷ್ಠಿತ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಕನ್ನಡ ಸಮ್ಮೇಳನ, ಈ ವರ್ಷ ಸೆ.2ರಿಂದ 4ರ ವರೆಗೆ ನ್ಯೂ ಜೆರ್ಸಿಯ ಅಟ್ಲಾಂಟಿಕ್ ಸಿಟಿ ಕನ್ವೆನ್ಷನ್ ಸೆಂಟರ್  ನಲ್ಲಿ ನಡೆಯಲಿದೆ.

ಇದು ಒಂಬತ್ತನೇ ಆವೃತ್ತಿಯಾಗಿದ್ದು, ದೇಶ-ವಿದೇಶಗಳಿಂದ ಸುಮಾರು ಏಳೂವರೆ ಸಾವಿರ ಜನರು ಆಗಮಿಸುವ ಲೆಕ್ಕಾಚಾರವಿದೆ. ಇದೇ ಮೊದಲ ಬಾರಿಗೆ ಟ್ರಾವೆಲ್ಸ್ ಏಜೆಂಟ್ ಸಹಭಾಗಿತ್ವದಲ್ಲಿ, ಭಾರತದಿಂದ ಸಮ್ಮೇಳನಕ್ಕೆ ಭಾಗವಹಿಸುವವರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಾಸ್ ಪೋರ್ಟ್, ವೀಸಾ, ವಿಮಾನ ಪ್ರಯಾಣ, ಊಟ-ವಸತಿ ಹಾಗೂ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದೂ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲು ಹೊಸ ಯೋಜನೆಯನ್ನು ರೂಪಿಸಲಾಗಿದೆ.

ಶ್ರೀಲಂಕಾ ಪ್ರವಾಸಕ್ಕೆ ಸುಷ್ಮಾ

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎರಡುದಿನಗಳ ಶ್ರೀಲಂಕಾ ಪ್ರವಾಸಕ್ಕಾಗಿ ಶುಕ್ರವಾರ ಕೊಲಂಬೊಗೆ ತೆರಳಿದ್ದಾರೆ. ಈ ಪ್ರವಾಸದಲ್ಲಿ ಭಾರತ ಕಡಲ ತೀರದ ಮೀನುಗಾರರ ವಿಷಯ, ಶ್ರೀಲಂಕಾದಲ್ಲಿರುವ ಅಲ್ಪ ಸಂಖ್ಯಾತ ತಮಿಳಿಗರ ಕ್ಷೇಮದ ಬಗ್ಗೆ ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಗಳಿವೆ. ಅಲ್ಲದೆ ಶ್ರೀಲಂಕಾ ವಿದೇಶಾಂಗ ಸಚಿವರಾದ ಮಂಗಳ ಸಮರವೀರಾ ಜತೆ ಉಭಯ ದೇಶಗಳ ಮತ್ತು ಸ್ಥಳೀಯ ವಿಷಯಗಳ ಕುರಿತಂತೆ ಚರ್ಚಿಸಲಾಗುವುದು.

47 ಎಸೆತದಲ್ಲಿ ಸೆಹ್ವಾಗ್ ಸೆಂಚುರಿ

ದುಬೈನಲ್ಲಿ ನಡೆಯುತ್ತಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಜೆಮಿನಿ ಅರೆಬಿಯನ್ಸ್ ತಂಡದ ಪರ ಆಡುತ್ತಿರುವ ನಾಯಕ ವೀರೇಂದ್ರ ಸೆಹ್ವಾಗ್ (134 ರನ್,  10 ಬೌಂಡರಿ, 11 ಸಿಕ್ಸರ್) ಕೇವಲ 47 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಆ ಮೂಲಕ ತಮ್ಮ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 224 ರನ್ ದಾಖಲಿಸಲು ನೆರವಾಗಿದ್ದಾರೆ.

ಜಾಮೀನಿಗೆ ಇಂದ್ರಾಣಿ ಯತ್ನ

ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರುವ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅನಾರೋಗ್ಯದ ಕಾರಣ ಮುಂದಿಟ್ಟು ಜಾಮೀನು ಪಡೆಯಲು ಮುಂದಾಗಿದ್ದಾರೆ. ಮುಂಬೈನ ಮಹಿಳಾ ಪೊಲೀಸ್ ಕಸ್ಟಡಿಯಲ್ಲಿ ಮುಖರ್ಜಿ ವಿಚಾರಣೆ ನಡೆಯುತ್ತಿದೆ.

Leave a Reply