ದೇಗುಲ ಪ್ರವೇಶ ನಿರ್ಬಂಧ, ಸಂತರು- ರೈಟಿಸ್ಟ್ ಗುಂಪಲ್ಲೂ ಅಭಿಪ್ರಾಯ ಬೇಧ

ಡಿಜಿಟಲ್ ಕನ್ನಡ ಟೀಮ್

ಶನಿ ಶಿಂಗಣಾಪುರದಲ್ಲಿ ಮಹಿಳೆಯರಿಗೆ ಗರ್ಭಗುಡಿ ಪ್ರವೇಶಿಸುವ ನಿರ್ಬಂಧ ತೆರವುಗೊಳಿಸುವ ವಿಚಾರದಲ್ಲಿ ಶನಿವಾರ ದೇವಾಲಯ ಸಮಿತಿ ಮತ್ತು ಪ್ರತಿಭಟನಾಕಾರರ ನಡುವೆ ಸಂಧಾನ ಮಾತುಕತೆ ಇದೆ.

ಸಾಮಾನ್ಯವಾಗಿ ಹಿಂದು ಆಚರಣೆ- ಸಂಪ್ರದಾಯಗಳ ವಿಷಯ ಬಂದಾಗ ರೈಟ್- ಲೆಫ್ಟ್ ವಿಚಾರಧಾರೆಗಳಲ್ಲಿ ಪರ-ವಿರೋಧಗಳ ಧ್ರುವೀಕರಣ ಕಾಣುತ್ತೇವೆ. ಬಿಜೆಪಿ ಒಂದು ನಿಲುವು ತಾಳಿದರೆ, ಅದಕ್ಕೆ ಭಿನ್ನ ನಿಲುವು ಕಾಂಗ್ರೆಸ್ ಮತ್ತು ಎಡಪಕ್ಷಗಳದ್ದಾಗಿರುವಂಥದ್ದು ಸಾಮಾನ್ಯವಾಗಿ ಕಂಡುಬರುವ ಉದಾಹರಣೆ.

ಆದರೆ ಶನಿ ಶಿಂಗಣಾಪುರ ಗರ್ಭಗುಡಿಗೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ಒಂದೇ ಬಗೆಯ ಗುಂಪಿನಿಂದ ಭಿನ್ನ ಸ್ವರಗಳು ಬರುತ್ತಿರುವುದು ಕುತೂಹಲದ ಸಂಗತಿ.

ರವಿಶಂಕರ ಗುರೂಜಿಯವರು ಪ್ರಾರ್ಥನೆಯಲ್ಲಿ ತಾರತಮ್ಯ ಸಲ್ಲದೆಂದು ಶನಿ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಇವರಂತೆಯೇ ಅಪಾರ ಬೆಂಬಲಿಗರನ್ನು ಹೊಂದಿರುವ ಸದ್ಗುರು ಜಗ್ಗಿ ವಾಸುದೇವ ಅವರು, ಶನಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕಿರುವ ನಿರ್ಬಂಧವು ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಿದ್ದಾಗಿದೆ ಅಂತ ಸಂಪ್ರದಾಯ ಪಾಲನೆಯ ಪರವಾಗಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಇವರೆಲ್ಲ ಮಹಿಳೆಯರ ನಿರ್ಬಂಧ ತೆರವಾಗಬೇಕೆನ್ನುತ್ತಿದ್ದಾರೆ. ಆದರೆ ರೈಟಿಸ್ಟ್-ಬಿಜೆಪಿ ಚಿಂತಕರಲ್ಲೇ ನಿರ್ಬಂಧ ಅನುಮೋದಿಸುವ ಧ್ವನಿಗಳೂ ಇವೆ.

ಸದ್ಗುರು ಜಗ್ಗಿ ವಾಸುದೇವ ಅವರ ಪ್ರತಿಪಾದನೆ ಹೀಗಿದೆ: ಲಿಂಗಭೈರವಿ ದೇವಸ್ಥಾನದ ಗರ್ಭಗುಡಿಗೆ ಪುರುಷರಿಗೆ ಪ್ರವೇಶ ಇಲ್ಲ. ಹಾಗಂತ ಅಲ್ಲಿ ಪ್ರತಿಭಟನೆ ಆಗುತ್ತಿಲ್ಲ. ಮುಖ್ಯವಾಗಿ ದೇವಸ್ಥಾನಗಳು ಕೇವಲ ಪ್ರಾರ್ಥನೆ ಮಾಡುವ ಸ್ಥಳಗಳಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಅವು ಶಕ್ತಿ ಕೇಂದ್ರಗಳು. ಸೌರಮಂಡಲ- ಗೃಹಗಳ ಚಲನೆ ಲೆಕ್ಕಾಚಾರಗಳನ್ನು ಆಧರಿಸಿ ಪೂರ್ವಿಕರು ಇವುಗಳನ್ನು ನಿರ್ಮಿಸಿದ್ದಾರೆ.

ಮಹಾರಾಷ್ಟ್ರದ ಶನಿ ಶಿಂಗಣಾಪುರದ ವಿಷಯಕ್ಕೆ ಬಂದರೆ ಅಲ್ಲಿಯ ಶಕ್ತಿ ಸಮೀಕರಣ ವಿಭಿನ್ನವಾದದ್ದು. ಶನಿ ದೇವಸ್ಥಾನಗಳು ಹೆಚ್ಚಾಗಿ ಭೂತೋಚ್ಚಾಟನೆ, ಅನಿಷ್ಟಗಳ ಉಚ್ಚಾಟನೆ ಇಂಥ ಕಾರಣಗಳಿಗೆ ಪೂರಕವಾಗಿ ನಿರ್ಮಾಣಗೊಂಡಿವೆ. ಇಲ್ಲಿಸೂಸುವ ಶಕ್ತಿ ಮಹಿಳೆಯರಿಗೆ ಪೂರಕವಾದುದ್ದಲ್ಲ. ಅದರಲ್ಲೂ ಮುಂದಿನ ಪೀಳಿಗೆಯನ್ನು ವಿಸ್ತರಿಸಲು ಮಗುವಿಗೆ ಜನ್ಮ ನೀಡುವ ಜವಾಬ್ದಾರಿ ಹೊತ್ತ ಮಹಿಳೆಯ ಗರ್ಭಧಾರಣೆ ಶಕ್ತಿ ಮೇಲೆ ಈ ಶಕ್ತಿ ಕೆಟ್ಟ ಪ್ರಭಾವ ಬೀರುತ್ತದೆ. ಜೊತೆಗೆ ಮುಟ್ಟಿನ ಸಮಯದಲ್ಲಿ ವ್ಯತಿರಿಕ್ತ ಪರಿಣಾಮ ಆಗಲಿದೆ.

ಮಹಿಳೆಯರು ಇಂತಹ ಸ್ಥಳಗಳಿಗೆ ಹೋಗಲೆ ಬೇಕು ಎನ್ನುವುದಾದರೆ ಮೊದಲು ಒಂದಷ್ಟು ತಯಾರಿ ಮಾಡಿಕೊಳ್ಳಬೇಕು. ಇದು ತುಂಬ ಕಠಿಣ ಮಾರ್ಗ.

ಇಲ್ಲಿ ಲಿಂಗ ತಾರತಮ್ಯದ ಪ್ರಶ್ನೆ ಉದ್ಭವಿಸುವುದಿಲ್ಲ. ಲಿಂಗ ಭೈರವಿ ದೇವಸ್ಥಾನದಲ್ಲಿ ಪುರುಷರಿಗೆ ಏಕೆ ಪ್ರವೇಶವಿಲ್ಲವೆಂದರೆ ಇದನ್ನು ಪುರುಷರಿಗಾಗಿ ವಿನ್ಯಾಸಗೊಳಿಸಿರುವುದಲ್ಲ. ಅದೇ ರೀತಿ ಮಹಿಳೆಯರ ವಿಚಾರದಲ್ಲಿ ಶನಿ ಶಿಂಗಣಾಪುರ.

ಇನ್ನು ಕೆಲವು ಕಾಲದೊಂದಿಗೆ ಬದಲಾಯಿಸಿಕೊಳ್ಳಬಹುದಾದ ಸಂಪ್ರದಾಯಗಳಿವೆ. ವೆಲ್ಲಿಯನ್ ಗಿರಿ ಬೆಟ್ಟದ ದೇವಸ್ಥಾನಕ್ಕೆ ಮಹಿಳೆಯರು ಬೆಟ್ಟ ಹತ್ತಲು ಕಷ್ಷ, ಸುರಕ್ಷತೆ ಇಲ್ಲದ ದಾರಿ, ದಟ್ಟವಾದ ಕಾಡು ಇದ್ದಿದ್ದರಿಂದ ನಿರ್ಬಂಧವಿತ್ತು. ಈಗ ಅದನ್ನು ಖಂಡಿತ ಸಡಿಲಿಸಬಹುದು. ಆದರೆ ಶಣಿ ಶಿಂಗಣಾಪುರ ಹಾಗಲ್ಲ.

ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ದೇಗುಲ ಪ್ರವೇಶಕ್ಕಾಗಿ ಒತ್ತಾಯಿಸುತ್ತಿರುವ ಮಹಿಳೆಯರನ್ನು ಬೆಂಬಲಿಸಿದ್ದಾರೆ. ‘ದೇವಾಲಯ ಪ್ರವೇಶಕ್ಕೆ ಪುರುಷರಿಗೆ ಸಮಾನವಾದ ಹಕ್ಕು ಪ್ರತಿಪಾದಿಸುತ್ತಿರುವ ಮಹಿಳೆಯರನ್ನು ನಾವು ಬೆಂಬಲಿಸಬೇಕು. ತಾರತಮ್ಯ ಪ್ರತಿಪಾದಿಸುವ ಯಾವುದೇ ಶಾಸ್ತ್ರವನ್ನು ತಿದ್ದುಪಡಿ ಮಾಡಬಹುದು ಆದರೆ ಕಮ್ಯುನಿಸ್ಟರನ್ನಲ್ಲ’ ಅಂತ ಟ್ವೀಟಿಸಿದ್ದಾರೆ. ತಮ್ಮ ವಿರಾಟ್ ಹಿಂದುಸ್ತಾನ್ ಸಂಗಮ್ ಸಂಘಟನೆಯು ಹಿಂದು ಸುಧಾರಣೆಯನ್ನುಬಯಸುತ್ತದೆ ಅಂತಲೂ ಅವರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಬಿಜೆಪಿ ಯುವ ಮೋರ್ಚಾದ ತೇಜಸ್ವಿ ಸೂರ್ಯ, ಶನಿ ಶಿಂಗಣಾಪುರ ಗರ್ಭಗುಡಿಗೆ ಮಹಿಳೆಯರ ಪ್ರವೇಶಕ್ಕೆ ಲಿಂಗ ಸಮಾನತೆ ಆಧಾರದಲ್ಲಿ ತಮ್ಮ ಬೆಂಬಲ ನೀಡಿರುವ ರವಿಶಂಕರ ಗುರೂಜಿ ಅವರ ನಿಲುವನ್ನು ಪ್ರಶ್ನೆಗೆ ಒಳಪಡಿಸಿದ್ದಾರೆ. ರೈಟ್ ವಿಚಾರಧಾರೆಯೊಂದಿಗೆ ಗುರುತಿಸಿಕೊಂಡಿರುವ ಸ್ವರಾಜ್ಯಮ್ಯಾಗ್ ಗೆ ಬರೆದಿರುವ ಲೇಖನದಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ.

ಸನಾತನ ಧರ್ಮದ ಮುಕ್ತತೆಯ ತತ್ವವನ್ನು ಅರ್ಥಮಾಡಿಕೊಳ್ಳಲಾಗದ ಕೆಲವರು ಇಲ್ಲಿನ ವೈವಿಧ್ಯವನ್ನೇ ತಾರತಮ್ಯ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಸಂತರು ಮತ್ತು ರಾಜಕೀಯ ನೇತಾರರೂ ಸೇರಿದಂತೆ ಹಿಂದು ಚಿಂತನೆಯುಳ್ಳ ಹಲವರು, ಹಿಂದು ಸಂಪ್ರದಾಯ ಟೀಕಿಸುತ್ತಿರುವವರೊಂದಿಗೆ ಸಮ್ಮತಿ ವ್ಯಕ್ತಪಡಿಸುತ್ತಿರುವುದನ್ನು ಕಾಣುವುದಕ್ಕೆ ಖೇದವಾಗುತ್ತಿದೆ. ನೀವು (ರವಿಶಂಕರ್ ಗುರೂಜಿ) ಪ್ರತಿಭಟನಾನಿರತ ಮಹಿಳೆಯರಿಗೆ ದೇಗುಲ ಪ್ರವೇಶ ನಿರ್ಬಂಧವು ಲಿಂಗ ತಾರತಮ್ಯವನ್ನು ಉದ್ದೇಶವಾಗಿರಿಸಿಕೊಂಡಿಲ್ಲ ಎಂಬುದನ್ನು ಮೊದಲಿಗೆ ಮನದಟ್ಟು ಮಾಡಿದ್ದರೆ ಖುಷಿಯಾಗುತ್ತಿತ್ತು. ಸನಾತನ ಧರ್ಮದ ಸಂಪ್ರದಾಯ ಮತ್ತು ಪದ್ಧತಿಗಳು ವಯಸ್ಸಿಗೆ, ಲಿಂಗಕ್ಕೆ, ವ್ಯಕ್ತಿಗೆ ನಿರ್ದಿಷ್ಟವಾಗಿ ರೂಪುಗೊಂಡಿವೆ ಎಂಬುದರ ಬಗ್ಗೆ ನೀವವರನ್ನು ಶಿಕ್ಷಿತಗೊಳಿಸಿದ್ದರೆ ಒಳ್ಳೆಯದಿತ್ತು. ಇಳಿದ ಅಬ್ರಾಹಮಿಕ್ ಮತಗಳಂತೆ ಒಂದೇ ಅಂಗಿ ಎಲ್ಲರಿಗೂ ಹಿಡಿಸುತ್ತದೆ ಎಂಬ ಮಾದರಿಯ ಧರ್ಮ ಇದಲ್ಲ, ಸತ್ಯವನ್ನು ತಲುಪುವುದಕ್ಕೆ ಬೇರೆ ಬೇರೆ ಮಾರ್ಗಗಳಿವೆ ಎಂದು ತಿಳಿಹೇಳುವ ಕೆಲಸವಾಗಬೇಕು.

Leave a Reply