ಪಾತ್ರಕ್ಕಾಗಿ ದೇಹದಂಡಿಸುವ ಪರಂಪರೆ, ಇದು ರಣದೀಪ್ ಹೂಡಾ ಸ್ಟೈಲ್!

 

ಡಿಜಿಟಲ್ ಕನ್ನಡ ಟೀಮ್

ಸಿನಿಮಾ ಕ್ಷೇತ್ರದಲ್ಲಿ ನಾಯಕ ನಟನಿಗಾಗಿ ಕತೆಗಳು ಸಿದ್ಧವಾಗುವುದು ಒಂದು ಸ್ಥಿತಿಯಾದರೆ, ಸಿನಿಮಾ ಕತೆಗೆ ನಾಯಕ ಸಿದ್ಧವಾಗುವುದು ಮತ್ತೊಂದು ಸ್ಥಿತಿ. ಹಾಲಿವುಡ್ ನಲ್ಲಿ ಸಿನಿಮಾ ಪಾತ್ರಕ್ಕಾಗಿ ಅದಕ್ಕೆ ಜೀವ ತುಂಬಲು ನಟರು ತಮ್ಮ ದೇಹದ ಸ್ವರೂಪವನ್ನೇ ಬದಲಿಸಿಕೊಳ್ಳುವ ಅತ್ಯಂತ ಪ್ರಯಾಸದಾಯಕ ಪ್ರಕ್ರಿಯೆಯೊಂದನ್ನು ಕಾಣಬಹುದು.

ಇಲ್ಲೀಗ ಬಾಲಿವುಡ್ ನಟ ರಣದೀಪ್ ಹೂಡಾ ಪಾತ್ರವೊಂದಕ್ಕೆ 28 ದಿನಗಳಲ್ಲಿ ಬರೋಬ್ಬರಿ 18 ಕೆ.ಜಿ ತೂಕ ಇಳಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.  ಸಿಕ್ಸ್ ಪ್ಯಾಕ್ಸ್, ಕಟ್ಟುಮಸ್ತಾದ ಮೈಕಟ್ಟು ಹೊಂದಿದ್ದ ರಣದೀಪ್ ಹೂಡ, ಸರಬ್ಜೀತ್ ಚಿತ್ರಕ್ಕಾಗಿ ಇಂಥ ಸಾಹಸ ಮಾಡಿದ್ದಾರೆ. ಪಾಕಿಸ್ತಾನದ ಜೈಲಿನಲ್ಲಿ ಗೂಢಚಾರಿಕೆ ಆರೋಪದಲ್ಲಿ ಬಂಧಿತನಾಗಿರುವ ವ್ಯಕ್ತಿಯ ಪಾತ್ರ ಇದು. ಈತನನ್ನು ಬಿಡಿಸಿಕೊಳ್ಳುವುದಕ್ಕಾಗಿ ಭಾರತದಲ್ಲಿ ಎಲ್ಲ ಕಚೇರಿಗಳಿಗೆ ಅಲೆದುಕೊಂಡಿರುವ ಹೆಂಡತಿಯ ಹೋರಾಟ ಭೂಮಿಕೆಯನ್ನು ಐಶ್ವರ್ಯ ರೈ ಬಚ್ಚನ್ ನಿಭಾಯಿಸಲಿದ್ದಾರೆ.

randeep-hooda

ಬಾಲಿವುಡ್ ವಲಯದಲ್ಲಿ ಇತ್ತೀಚೆಗೆ ಎಲ್ಲರು ಸಿಕ್ಸ್ ಪ್ಯಾಕ್ಸ್ ಮೊರೆ ಹೋಗಿ ಬಹುತೇಕ ಹೀರೋಗಳು ಕಟ್ಟುಮಸ್ತಾದ ಬಾಡಿಗೆ ಮನಸೋತಿದ್ದರು. ಆಮೀರ್ ಖಾನ್ ತಮ್ಮ ಮುಂದಿನ ಚಿತ್ರ ದಂಗಲ್ ನಲ್ಲಿ ಮಾಜಿ ಕುಸ್ತಿಪಟುವಿನ ಪಾತ್ರ ನಿರ್ವಹಿಸಲಿದ್ದು, ಅದಕ್ಕಾಗಿ ತಮ್ಮ ದೇಹ ತೂಕವನ್ನು 90 ಕೆ.ಜಿಗೆ ಹೆಚ್ಚಿಸಿಕೊಂಡಿದ್ದಾರೆ. ನಂತರ ಚಿತ್ರದ ಎರಡನೇ ಹಂತಕ್ಕೆ ಮತ್ತೆ ದೇಹದ ತೂಕದ ಇಳಿಕೆ ಮಾಡಲಿದ್ದಾರೆ. ಇನ್ನು ಗಜನಿ ಚಿತ್ರದ ನಂತರ 3 ಈಡಿಯಟ್ಸ್ ಚಿತ್ರಕ್ಕಾಗಿ ಅಮೀರ್ ಖಾನ್ ಸಹ ಸ್ವಲ್ಪ ಮಟ್ಟಿಗೆ ತಮ್ಮ ತೂಕ ಕಳೆದುಕೊಂಡಿದ್ದರು. ಇನ್ನು ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರ ಸುಲ್ತಾನ್ ನಲ್ಲಿ ಕುಸ್ತಿಪಟುವಿನ ಪಾತ್ರ ನಿರ್ವಹಿಸಲಿದ್ದು, ಅದಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಹಾಲಿವುಡ್ ಖ್ಯಾತನಾಮರಾದ ಜೇಕ್ ಗಿಲ್ಲೆನ್ಹಾಲ್, ನೈಟ್ ಕ್ರಾವ್ಲ್ ಚಿತ್ರಕ್ಕಾಗಿ 13.5 ಕೆ.ಜಿ, ಮ್ಯಾಥ್ಯೂ ಮೆಕನೌ ಅವರು ಡಲ್ಲಾಸ್ ಬುಯೆರ್ಸ್ ಕ್ಲಬ್ ಚಿತ್ರದಲ್ಲಿ ಏಡ್ಸ್ ರೋಗಿಯ ಪಾತ್ರಕ್ಕಾಗಿ 19 ಕೆ.ಜಿ, ಟಾಮ್ ಹಾಂಕ್ಸ್ ಅವರು ಆಸ್ಕರ್ ಪ್ರಶಸ್ತಿ ಗೆದ್ದ ಕಾಸ್ಟ್ ಅವೇ ಚಿತ್ರಕ್ಕಾಗಿ ಬರೋಬ್ಬರಿ 22 ಕೆ.ಜಿ ಮತ್ತು ಕ್ರಿಶ್ಚಿಯನ್ ಬೇಲ್ ಅವರು ದ ಮೆಕಾನಿಸ್ಟ್ ಚಿತ್ರಕ್ಕಾಗಿ 27 ಕೆ.ಜಿ ತೂಕ ಕಳೆದುಕೊಂಡು ಸಪೂರ ದೇಹದ ಮೊರೆ ಹೋದ ಉದಾಹರಣೆಗಳು ನಮಗೆ ಸಿಗುತ್ತವೆ.

ಜೇಕ್ ಗಿಲ್ಲೆನ್ಹಾಲ್, ಮ್ಯಾಥ್ಯೂ ಮೆಕನೌ, ಕ್ರಿಶ್ಚಿಯನ್ ಬೇಲ್,
ಜೇಕ್ ಗಿಲ್ಲೆನ್ಹಾಲ್, ಮ್ಯಾಥ್ಯೂ ಮೆಕನೌ, ಕ್ರಿಶ್ಚಿಯನ್ ಬೇಲ್

Leave a Reply