ಮೈಕ್ರೊಸಾಫ್ಟ್ ನಲ್ಲಿ ಕೋಟಿ ಸಂಬಳ ಎಣಿಸಲಿರುವ ಹುಡುಗ, ಕಬ್ಬಿಣದಂಗಡಿ ಬಡವನ ಮಗ!

ಡಿಜಿಟಲ್ ಕನ್ನಡ ಟೀಮ್  

ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವವರ ಮಗ ಏನಾಗಬಹುದು? ಈ ಪ್ರಶ್ನೆಗೆ, ಪರಿಶ್ರಮವಿದ್ದರೆ ಏನೂ ಆಗಬಹುದು ಎಂಬ ಉತ್ತರ ದೊರಕಿಸಿಕೊಟ್ಟಿದ್ದಾರೆ ಬಿಹಾರದ 21 ವರ್ಷದ ವಾತ್ಸಲ್ಯ ಚೌಹಾಣ್. ಬಡತನದ ನಡುವೆಯೂ ಪಟ್ಟಾಗಿ ವ್ಯಾಸಂಗ ನಡೆಸಿ ಪದವಿ ಮುಕ್ತಾಯಗೊಳ್ಳುವ ಮುನ್ನವೇ ವಿಶ್ವದ ಪ್ರತಿಷ್ಠಿತ ಮೈಕ್ರೋಸಾಫ್ಟ್ ಕಂಪನಿಯಲ್ಲಿ ವರ್ಷಕ್ಕೆ 1.02 ಕೋಟಿ ಸಂಬಳದ ಕೆಲಸ ಪಕ್ಕಾ ಮಾಡಿಕೊಂಡಿದ್ದಾರೆ ಚೌಹಾಣ್.

ಬಿಹಾರದ ಖಗ್ರಿಯಾ ಜಿಲ್ಲೆಯಲ್ಲಿ ಚಂದ್ರಕಾಂತ್ ಎಂಬ ಕಬ್ಬಿಣ ವೆಲ್ಡಿಂಗ್ ಮಾಡುವವರ ಮಗನಾಗಿರುವ ವಾತ್ಸಲ್ಯ, ಹಿಂದಿ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ದ್ವಿತೀಯ ಪಿಯುಸಿಯಲ್ಲಿ ಶೇ.75ರಷ್ಟು ಅಂಕಗಳನ್ನು ಪಡೆದಿದ್ದ. ಆ ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಕೋಟಾಗೆ ತೆರಳಿದ. ಅಲ್ಲಿ ಐಐಟಿಗಾಗಿ, ಆಲೆನ್ ಕೆರಿಯರ್ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆಯಲು ಸೇರಿಕೊಂಡ. ಈತನ ಪರಿಶ್ರಮ ಹಾಗೂ ಪ್ರತಿಭೆಯನ್ನು ಕಂಡ ಸಂಸ್ಥೆಯ ನಿರ್ದೇಶಕ ರಾಜೇಶ್ ಮಹೇಶ್ವರಿ, ಈತನಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ವಸತಿ ಜತೆಗೆ ಉಚಿತ ತರಬೇತಿ ನೀಡಿದರು. 2009ರಲ್ಲಿ ಕೋಟಾಗೆ ತೆರಳಿದ ವಾತ್ಸಲ್ಯ, ನಂತರ ಇಂಜಿನಿಯರಿಂಗ್ ಮೇಲಿನ ಆಸಕ್ತಿಯನ್ನು ಕಳೆದುಕೊಂಡ. ನಂತರ 2011ರಲ್ಲಿ ಮೊದಲ ಬಾರಿಗೆ ಜೆಇಇ ಪರೀಕ್ಷೆ ತೆಗೆದುಕೊಂಡಾಗ ನಿರೀಕ್ಷಿತ ಮಟ್ಟದ ಫಲಿತಾಂಶ ಪಡೆಯುವಲ್ಲಿ ವಿಫಲವಾದ.

ಮನೆಯವರಿಂದ ಯಾವುದೇ ಒತ್ತಡ ಎದುರಿಸದ ವಾತ್ಸಲ್ಯಗೆ ನಂತರ, ಆಲೆನ್ ಸಂಸ್ಥೆಯಲ್ಲಿ ಉತ್ತಮ ಉತ್ತೇಜನ ಮತ್ತು ಪ್ರೋತ್ಸಾಹ ದೊರೆಯಿತು. ಆಗ ಕಠಿಣ ಪರಿಶ್ರಮದ ಅಗತ್ಯದ ಬಗ್ಗೆ ಎಚ್ಚೆತ್ತುಕೊಂಡ ವಾತ್ಸಲ್ಯ, ನಂತರ ಕಷ್ಟಪಟ್ಟು ಓದಿದ. ಈ ವೇಳೆ ಮನೆ ಬಿಟ್ಟು ಹೋರ ಹೋಗದ ಚೌಹಾಣ್, ತೀವ್ರ ಒತ್ತಡದ ನಡುವೆಯೂ ಹಗಲು ರಾತ್ರಿ ಎನ್ನದೇ ಕಠಿಣ ಅಭ್ಯಾಸ ನಡೆಸಿದ. ಮತ್ತೇ 2012ರಲ್ಲಿ ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ಬರೆದ ಚೌಹಾಣ್ಗೆ ಆರೋಗ್ಯ ಉತ್ತಮ ಸಾಥ್ ನೀಡಲಿಲ್ಲ. ಪರೀಕ್ಷೆಗೆ ನಾಲ್ಕು ದಿನಗಳ ಮುಂಚಿತವಾಗಿ ಅತಿಯಾದ ಜ್ವರಕ್ಕೆ ಒಳಗಾದ ಚೌಹಾಣ್, ಅನಾರೋಗ್ಯದ ನಡುವೆ ಪರೀಕ್ಷೆಗೆ ಹಾಜರಾದರು. ಮೊದಲ ಪರೀಕ್ಷೆ ಸುಲಭವಾಗಿತ್ತಾದರೂ, ನಂತರ ಎರಡನೇ ಪರೀಕ್ಷೆ ಸವಾಲಿನದ್ದಾಗಿತ್ತು. ಆದರೂ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿ ದೇಶದಲ್ಲಿ 382ನೇ ಸ್ಥಾನ ಪಡೆದು ಬಿಹಾರ ಮತ್ತು ಜಾರ್ಖಂಡ್ ನಲ್ಲಿ ಎಐಇಇಇಗೆ ಮೊದಲ ಸ್ಥಾನ ಪಡೆದ. ಆಮೂಲಕ ಖರಗಪುರ ಐಐಟಿಯಲ್ಲಿ ಸೀಟು ಪಡೆಯುವಲ್ಲಿ ಯಶಸ್ವಿಯಾದ.

ಈ ವೇಳೆ ಶೈಕ್ಷಣಿಕ ಸಾಲದ ಮೂಲಕ ತನ್ನ ಹಾದಿ ಮುಂದುವರಿಸಿದ ವಾತ್ಸಲ್ಯ, ಪ್ರಸ್ತುತ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಚೌಹಾಣ್ ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದ ವೇಳೆ ಮೈಕ್ರೋಸಾಫ್ಟ್ ಕಂಪನಿಗೆ ಆಯ್ಕೆಯಾಗಿದ್ದಾನೆ. ಮುಂದಿನ ಎರಡು ಮೂರು ತಿಂಗಳಲ್ಲಿ ಪದವಿ ಪೂರ್ಣಗೊಳಿಸಲಿದ್ದು, ಅಕ್ಟೋಬರ್ ನಿಂದ ಕೆಲಸಕ್ಕೆ ಸೇರಲಿದ್ದಾನೆ. 2015-16ನೇ ಸಾಲಿನಲ್ಲಿ ನಡೆದ ಕ್ಯಾಂಪಸ್ ಆಯ್ಕೆಯಲ್ಲಿ ಅತಿ ಹೆಚ್ಚು ಸಂಭಾವನೆಯ ಕೆಲಸ ಪಡೆದ ವಿದ್ಯಾರ್ಥಿಯಾಗಿದ್ದಾನೆ.

ಪ್ರಸ್ತುತ ಕೋಟಿ ಸಂಬಳ ಕೆಲಸ ಪಡೆದಿರುವ ವಾತ್ಸಲ್ಯ ಚೌಹಾಣ್ ಆಸಕ್ತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾರ್ಗದರ್ಶನ ನೀಡುವ ಆಸೆ ಹೊಂದಿದ್ದಾನೆ. ಪ್ರಸ್ತುತ ಐಐಟಿ ಕ್ಯಾಂಪಸ್ ನಲ್ಲೂ ಇತರೆ ಸ್ನೇಹಿತರೊಂದಿಗೆ ಆಟೋ ಚಾಲಕರ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಚೌಹಾಣ್, ತನ್ನ ನಾಲ್ಕು ತಿಂಗಳ ರಜೆಯ ಅವಧಿಯಲ್ಲಿ ಶಾಲೆಗೆ ತೆರಳಿ ಪಾಠ ಮಾಡುತ್ತಾನೆ. ಆರ್ಥಿಕವಾಗಿ ಸ್ವಲ್ಪ ಉತ್ತಮ ಪರಿಸ್ಥಿತಿಯಲ್ಲಿರುವವರಿಂದ ಶುಲ್ಕ ಪಡೆಯುವ ವಾತ್ಸಲ್ಯ, ಬಡ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡುತ್ತಾರೆ. ಅಲ್ಲದೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಕನಸು ಹೊಂದಿದ್ದಾರೆ.

ವಾತ್ಸಲ್ಯ ಚೌಹಾಣ್, ತನ್ನ ಇತರೆ ಮೂವರು ಸಹಪಾಠಿಗಳೊಂದಿಗೆ ಹೊಸ ಸ್ಟಾರ್ಟ್ ಅಪ್ ನ ವಿನ್ಯಾಸಗೊಳಿಸುತ್ತಿದ್ದಾರೆ. ಆ ಮೂಲಕ ನಾಣ್ಯ ಗಾತ್ರದ ಒಂದು ಸಾಧನ ಕಂಡು ಹಿಡಿದಿದ್ದು, ಅದನ್ನು ಕೈ ಬೆರಳಿಗೆ ಹಾಕಿಕೊಂಡು ವ್ಯಕ್ತಿ ಕಳೆದಿರುವ ವಸ್ತುವನ್ನು ಹುಡುಕಲು ನೆರವಾಗುವಂತೆ ಹೊಸ ಸಂಶೋಧನೆ ನಡೆಸಿದ್ದಾರೆ. ಸಂಶೋಧನೆಯ ಮೇಲೆ ಸಾಕಷ್ಟು ಆಸಕ್ತಿ ಹೊಂದಿರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ಸೇರಿದ ಮೇಲೂ ಹೊಸ ಹೊಸ ಸಾಧನ ಕಂಡು ಹಿಡಿಯುವ ಕನಸು ಈತನದ್ದಾಗಿದೆ.

Leave a Reply