ಸಹಿಷ್ಣು ಭಾರತ, ಇಲ್ಲಿವೆ 2 ಬಿಂಬಗಳು

ಡಿಜಿಟಲ್ ಕನ್ನಡ ಟೀಮ್

ಭಾರತ ಸಹಿಷ್ಣುವೇ ಅಸಹಿಷ್ಣುವೇ ಅಂತ ಬೇರೆ ಬೇರೆ ಪಂಗಡದವರು ವಾದ ಮಾಡಿಕೊಂಡಿದ್ದಾರೆ. ಆದರೆ ಭಾರತದ ಜನಸಾಮಾನ್ಯರು ಮಾತ್ರ ಸಾಮರಸ್ಯ- ಸೌಹಾರ್ದಗಳನ್ನು ಸದ್ದಿಲ್ಲದೇ ಆಚರಣೆಯಲ್ಲಿಟ್ಟಿದ್ದಾರೆ. ಕೇರಳದಲ್ಲಿಕಳೆದ ಭಾನುವಾರ ದ್ವೇಷದ ಹಿನ್ನೆಲೆಯಲ್ಲಿಯುವಕರ ಗುಂಪೊಂದು ಎಂ.ವಿ ಶಬ್ಬೀರ್ ಎಂಬ ಮುಸ್ಲಿಂ ಯುವಕನನ್ನು ಹೊಡೆದು ಕೊಂದಿದ್ದ ಘಟನೆ ವ್ಯಾಪಕವಾಗಿ ಸುದ್ದಿ ಮಾಡಿತ್ತು. ಈತನ ಸಾವಿಗೆ ಶೋಕಾಚರಣೆ ವ್ಯಕ್ತಪಡಿಸುವ ಸಲುವಾಗಿ ತಿರುವನಂತಪುರದ ಅತ್ತಿಂಗಲ್ ನ ಶಿವನ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ಪೂಜೆ ಹಾಗೂ ಇತರೆ ಸಾಂಪ್ರದಾಯಿಕ ಕಾರ್ಯಗಳನ್ನು ನಿಲ್ಲಿಸಲಾಯಿತು. ದೇವಾಲಯ ತೆರೆದರೂ ಶಂಖ ಹಾಗೂ ಗಂಟೆಗಳ ಧ್ವನಿ ಇರಲಿಲ್ಲ.

ಇದು ಯಾವುದೋ ಸಮುದಾಯವನ್ನು ಖುಷಿಪಡಿಸುವ ಹೆಜ್ಜೆಯಲ್ಲ. ಎರಡು ಕೈ ಸೇರಿದಾಗಲಷ್ಟೇ ಚಪ್ಪಾಳೆ. ಶಬ್ಬೀರ್ ಸಹ ಇದಕ್ಕೆ ಯೋಗ್ಯರೇ. ಕಳೆದ ಎರಡು ವರ್ಷಗಳ ಹಿಂದೆ ದೇವಸ್ಥಾನದ ಆಡಳಿತ ಮಂಡಳಿ ಪ್ರತಿ ವರ್ಷ ನಡೆಯಲಿರುವ ಹಬ್ಬದ ಆಯೋಜನೆಯಲ್ಲಿ 23 ವರ್ಷದ ಶಬ್ಬೀರ್ ಸಹ ಇದ್ದರು. ಅನ್ನದಾನಕ್ಕಾಗಿ ಮನೆ ಮನೆಗೆ ಹೋಗಿ ಅಕ್ಕಿ-ಕಾಯಿ ಸಂಗ್ರಹಿಸಿಕೊಂಡು ಬರುವ ಕಾರ್ಯದಲ್ಲಿ ಶಬ್ಬೀರ್ ವಾರಗಳಿಂದ ತೊಡಗಿಸಿಕೊಂಡಿದ್ದರು. ಕ್ಷುಲ್ಲಕ ಜಗಳವೊಂದು ಹತ್ಯೆಯಲ್ಲಿ ಪರ್ಯಾವಸನವಾಗಿದ್ದಾಗಿ ಸ್ಥಳೀಯರು ಹೇಳುತ್ತಾರೆ. ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಐದು ತಿಂಗಳ ಹಿಂದೆ, ಇಂಡಿಯಾ ಟುಡೆ ಸುದ್ದಿವಾಹಿನಿ ಮತ್ತೊಂದು ಬಗೆಯ ಸೌಹಾರ್ದ ಪ್ರಪಂಚ ತೋರಿಸಿತ್ತು. ಮಧ್ಯಪ್ರದೇಶದ ಮದರಸಾ ಒಂದರಲ್ಲಿ ಗಾಯತ್ರಿ ಮಂತ್ರವನ್ನೂ ಬೋಧಿಸುತ್ತಿರುವ ಉದಾಹರಣೆ. ಆ ಪ್ರದೇಶದಲ್ಲಿ ಮಕ್ಕಳು ಹಿಂದು- ಮುಸ್ಲಿಂ ಎಂಬ ಬೇಧವಿಲ್ಲದೇ ಪರಸ್ಪರರ ಶ್ಲೋಕ- ಗ್ರಂಥಸಾಲುಗಳನ್ನು ಕಲಿಸಲಾಗುತ್ತಿದೆ ಎಂಬುದನ್ನು ವರದಿ ತೋರಿಸಿದೆ.

Leave a Reply