
ಡಿಜಿಟಲ್ ಕನ್ನಡ ಟೀಮ್
ಕೈಗಾರಿಕೆ ವಿದ್ಯುತ್ ರಜೆ ಹಿಂದಕ್ಕೆ
ಕೈಗಾರಿಕೆಗಳಿಗೆ ಘೋಷಿಸಲಾಗಿದ್ದ, ವಿದ್ಯುತ್ ರಜೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ಹಿಂದಕ್ಕೆ ಪಡೆದಿದೆ. ಗ್ರಾಮೀಣ ಭಾಗದ ಮತದಾರರ ಮೇಲೆ ಪ್ರಭಾವ ಬೀರಲು ಕೃಷಿ ಪಂಪ್ಸೆಟ್ಗಳಿಗೆ ತ್ರೀಫೆಸ್ ವಿದ್ಯುತ್ ಪೂರೈಕೆಗೆ ಈ ರಜೆ ಘೋಷಿಸಲಾಗಿತ್ತು.
ರಾಜ್ಯದಲ್ಲಿ ಇದೀಗ 1920 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಹಾಗೂ ವಿವಿಧ ಸಂಘ ಸಂಸ್ಥೆಗಳು, ಉದ್ಯಮಗಳು, ಲಿಂಗನಮಕ್ಕಿ, ಸೂಪಾ, ಮಾಣಿ ಜಲಾಶಯಗಳಿಂದ 1000 ಮೆ.ವ್ಯಾ. ಹೆಚ್ಚುವರಿ ಜಲವಿದ್ಯುತ್ ಉತ್ಪಾದನೆ ಆಗುತ್ತಿದೆ. ಹೀಗಾಗಿ ಕೈಗಾರಿಕೆ ವಿದ್ಯುತ್ ರಜೆ ಹಿಂಪಡೆಯಲಾಗಿದೆ. ಕೃಷಿ ಪಂಪ್ ಸೆಟ್ ಹಾಗೂ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ಪದಕ ಬಾಚಿದ ಭಾರತ
ಗುವಾಹತಿ ಮತ್ತು ಶಿಲ್ಲಾಂಗ್ ನಲ್ಲಿ ಶನಿವಾರದಿಂದ ಆರಂಭವಾದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಶುಭಾರಂಭ ಮಾಡಿದ್ದಾರೆ. ಕ್ರೀಡಾಕೂಟದ ಮೊದಲ ದಿನ ವೇಟ್ ಲೀಫ್ಟಿಂಗ್ ಮತ್ತು ಸೈಕ್ಲಿಂಗ್ ನಲ್ಲಿ 4 ಚಿನ್ನ, 2 ಬೆಳ್ಳಿ ಸೇರಿದಂತೆ 6 ಪದಕಗಳನ್ನು ಸಂಪಾದಿಸಿದರೆ, ಆರ್ಚರಿಪಟುಗಳು 4 ಚಿನ್ನ ಮತ್ತು 4 ಬೆಳ್ಳಿ ಪದಕಗಳನ್ನು ಖಚಿತಪಡಿಸಿದ್ದಾರೆ.
ಸೈಕ್ಲಿಸ್ಟ್ ಟಿ.ವಿಜಯಲಕ್ಷ್ಮಿ ಮಹಿಳೆಯರ 30 ಕಿ.ಮೀ ವೈಯಕ್ತಿಕ ಟೈಮ್ ಟ್ರಯಲ್ ವಿಭಾಗದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗಳಿಸಿದರು. ನಂತರ ಟುರುಂಗಮ್ ವಿದ್ಯಾಲಕ್ಷ್ಮಿ ( 49:24.573) ಮಹಿಳೆಯರ 30. ಕಿ.ಮೀ ಟೈಮ್ ಟ್ರಯಲ್ ನಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಪುರುಷರ 40 ಕಿ.ಮೀ. ಟೈಮ್ ಟ್ರಯಲ್ ವಿಭಾಗದಲ್ಲಿ ಭಾರತದ ಅರವಿಂದ್ ಪಾನ್ವರ್ ( 52:28.800) ಅಗ್ರ ಸ್ಥಾನ ಹಾಗೂ ಮಂಜೀತ್ ಸಿಂಗ್ ( 54:01.183) ದ್ವಿತೀಯ ಸ್ಥಾನ ಪಡೆದು ಚಿನ್ನ ಮತ್ತು ಬೆಳ್ಳಿ ಪದಕ ಪಡೆದಿದ್ದಾರೆ.
ಇನ್ನು ವೇಟ್ ಲಿಫ್ಟಿಂಗ್ ನಲ್ಲಿ ಭಾರತ 2 ಚಿನ್ನ ಸಂಪಾದಿಸಿದ್ದು, ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಸೈಕೊಮ್ ಮಿರಾಬಾಯಿ ಚಾನು ಎಲ್ಲಾ ವಿಭಾಗದಲ್ಲೂ (169 ಕೆ.ಜಿ) ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆದ್ದರು. ಪುರುಷರ 56 ಕೆ.ಜಿ ವಿಭಾಗದಲ್ಲಿ ಭಾರತದ ಗುರುರಾಜ (241 ಕೆ.ಜಿ) ಅಗ್ರಸ್ಥಾನ ಪಡೆದು ಸ್ವರ್ಣ ಪದಕ ಬಾಚಿದರು.
ಭಾರತದ ಆರ್ಚರಿಪಟುಗಳು ಸಹ ಗಮನಾರ್ಹ ಪ್ರದರ್ಶನ ನೀಡಿದ್ದು, 4 ಚಿನ್ನ ಮತ್ತು 4 ಬೆಳ್ಳಿ ಪದಕ ಖಚಿತ ಪಡಿಸಿದ್ದಾರೆ. ಬೆಳಿಗ್ಗೆ ನಡೆದ ಪುರುಷರ ರಿಕರ್ವ್ ವಿಭಾಗದ ಸ್ಪರ್ಧೆಯಲ್ಲಿ ತರುಣ್ ದೀಪ್ ರಾಯ್ ಮತ್ತು ಗುರುಚರಣ್ ಬಸ್ರಾ ಹಾಗೂ ಮಹಿಳೆಯರ ರಿಕರ್ವ್ ವಿಭಾಗದಲ್ಲಿ ದೀಪಿಕಾ ಕುಮಾರಿ ಮತ್ತು ಬೊಂಬೈಲಾ ದೇವಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ. ಮಧ್ಯಾಹ್ನ ನಡೆದ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮಾ ಮತ್ತು ರಜತ್ ಚೌಹಾಣ್ ಹಾಗೂ ಮಹಿಳೆಯರ ವಿಭಾಗದಲ್ಲಿ ಪೂರ್ವಶಾ ಶಿಂಧೆ ಮತ್ತು ಜ್ಯೋತಿ ಸುರೇಖಾ ಜಯ ಸಾಧಿಸಿದ್ದಾರೆ. ಆ ಮೂಲಕ ಈ 8 ಆರ್ಚರಿಪಟುಗಳು ಫೆ.8ರಂದು ನಡೆಯಲಿರುವ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದು, ಈ ಸುತ್ತಿನಲ್ಲಿ ಕೇವಲ ಭಾರತದ ಸ್ಪರ್ಧಿಗಳಿದ್ದಾರೆ. ಹಾಗಾಗಿ 4 ಚಿನ್ನ 4 ಬೆಳ್ಳಿ ಪದಕ ಖಚಿತವಾಗಿದೆ.
ಸೆಮಿ ಫೈನಲ್ ಪ್ರವೇಶಿಸಿದ ಭಾರತ ಕಿರಿಯರು
ದುರ್ಬಲ ನಮಿಬಿಯಾ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತ ಕಿರಿಯರ ಕ್ರಿಕೆಟ್ ತಂಡ ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದೆ. ಶನಿವಾರ ಫಾತುಲ್ಲಾದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 197 ರನ್ ಗಳಿಂದ ನಮಿಬಿಯಾ ತಂಡವನ್ನು ಮಣಿಸಿದೆ. ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 349 ರನ್ ಪೇರಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ನಮಿಬಿಯಾ 39 ಓವರ್ ಗಳಲ್ಲಿ 152 ರನ್ ಗಳಿಗೆ ಆಲೌಟ್ ಆಯಿತು. ಭಾರತ ತಂಡದ ಪರ ರಿಶಬ್ ಪಂತ್ (111), ಸರ್ಫರಾಜ್ ಖಾನ್ (76) ಮತ್ತು ಅರ್ಮಾನ್ ಜಾಫರ್ (64) ಉತ್ತಮ ಬ್ಯಾಟಿಂಗ್ ನಡೆಸಿದರು. ಬೌಲಿಂಗ್ ವಿಭಾಗದಲ್ಲಿ ಮಯಾಂಕ್, ಅನ್ಮೊಲ್ ಪ್ರೀತ್ ತಲಾ 3, ಸುಂದರ್ 2, ಖಲೀಲ್, ರಾಹುಲ್ ತಲಾ 1 ವಿಕೆಟ್ ಪಡೆದರು.
ಹಲವು ಅಚ್ಚರಿಗಳಿಗೆ ಸಾಕ್ಷಿಯಾದ ಐಪಿಎಲ್ ಹರಾಜು
ಪ್ರತಿ ಬಾರಿಯಂತೆ ಈ ಬಾರಿಯೂ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಸಾಕಷ್ಟು ಕುತೂಹಲ ಹಾಗೂ ರೋಚಕವಾಗಿದ್ದು, ಕೆಲ ಪ್ರಮುಖರು ಬಿಕರಿಯಾಗದೇ ಉಳಿದರೆ ಮತ್ತೆ ಕೆಲವರು ಅಚ್ಚರಿ ಮೊತ್ತಕ್ಕೆ ಮಾರಾಟವಾಗಿದ್ದು ಹುಬ್ಬೇರುವಂತೆ ಮಾಡಿದೆ. ಎಲ್ಲರೂ ಈ ಬಾರಿಯೂ ಯುವರಾಜ್ ಸಿಂಗ್ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಹೊಂದಿದ್ದರು. ಆದರೆ, ಆಸ್ಟ್ರೇಲಿಯಾದ ಶೇನ್ ವಾಟ್ಸನ್ (9.5 ಕೋಟಿ) ಆರ್ಸಿಬಿ ಪಾಲಾದರು. ಇನ್ನು ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಪವನ್ ನೇಗಿ (8.5 ಕೋಟಿ) ಡೇರ್ ಡೆವಿಲ್ಸ್ ಪಾಲಾದರು. ಇನ್ನು ಡೆಲ್ಲಿ ತಂಡ ಅನಗತ್ಯವಾಗಿ ಕ್ರಿಸ್ ಬ್ರಾತ್ ವೈಟ್ (4.20 ಕೋಟಿ) ಮತ್ತು ಕ್ರಿಸ್ ಮೊರಿಸ್ (7 ಕೋಟಿ) ದುಬಾರಿ ಮೊತ್ತ ನೀಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಕಳೆದ ಬಾರಿ ಕರ್ನಾಟಕದ ಕೆ.ಸಿ ಕಾರ್ಯಪ್ಪ ಕೆಕೆಆರ್ ತಂಡಕ್ಕೆ ರೋಚಕ ಆಯ್ಕೆಯಾದ ರೀತಿ ಈ ಬಾರಿ ಮತ್ತೊಬ್ಬ ಕನ್ನಡಿಗ ಕಿಶೋರ್ ಕಾಮತ್ (1.4 ಕೋಟಿ) ಮುಂಬೈ ಪಾಲಾಗಿರುವುದು ಸಹ ವಿಶೇಷ. ಇನ್ನು ಮಾರ್ಟೀನ್ ಗುಪ್ಟಿಲ್ ರಂತಹ ಆಟಗಾರರು ಬಿಕರಿಯಾಗದಿದ್ದದ್ದೂ ಬೇಸರದ ಸಂಗತಿ. ಇನ್ನು ರಾಯಲ್ ಚಾಲೆಂಜರ್ಸ್ ಪರ ಕನ್ನಡಿಗನಿಲ್ಲ ಎಂಬ ಅಭಿಮಾನಿಗಳ ಕೊರಗನ್ನು ಸ್ಟುವರ್ಟ್ ಬಿನ್ನಿ ಆಯ್ಕೆ ಮೂಲಕ ಮಲ್ಯ ಸ್ವಲ್ಪ ಕಡಿಮೆ ಮಾಡಿದ್ದಾರೆ. ಇನ್ನು ಕೆಕೆಆರ್ (12.25 ಕೋಟಿ) ಮತ್ತು ಕಿಂಗ್ಸ್ ಇಲೆವೆನ್ (12.45 ಕೋಟಿ) ಮೊತ್ತವನ್ನು ಜೇಬಿನಲ್ಲೇ ಭದ್ರವಾಗಿ ಉಳಿಸಿಕೊಂಡು ಉತ್ತಮ ವ್ಯವಹಾರ ನಡೆಸಿವೆ. ಇನ್ನು ಹೊಸ ತಂಡಗಳಾದ ಗುಜರಾತ್ ಲಯನ್ಸ್ ಹಾಗೂ ರೈಸಿಂಗ್ ಪುಣೆ ತಂಡಗಳು ಸಮತೋಲಿತ ತಂಡಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಪ್ರತಿ ತಂಡಗಳು ತಮ್ಮ ತಂಡಗಳಲ್ಲಿ ಅಗತ್ಯಕ್ಕೆ ತಕ್ಕಂತೆ ತಂತ್ರಗಾರಿಕೆ ಮೂಲಕ ಆಟಗಾರರ ಆಯ್ಕೆ ಮಾಡಿಕೊಂಡಿವೆ. ಹಾಳೆಯ ಮೇಲೆ ಪ್ರತಿ ತಂಡವೂ ಬಲಿಷ್ಠವಾಗಿ ಕಾಣಿತ್ತಿದ್ದು, ಈ ಆಯ್ಕೆ ಯಾವ ರೀತಿಯ ಫಲಿತಾಂಶ ನೀಡುತ್ತವೆ ಎಂಬುದನ್ನು ಟೂರ್ನಿಯಲ್ಲೇ ಕಾದು ನೋಡಬೇಕು.
ತೈವಾನ್ ಭೂಕಂಪ, 11 ಸಾವು
ತೈವಾನ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದ 17 ಅಂತಸ್ತುಗಳ ಬೃಹತ್ ಅಪಾರ್ಟ್ ಮೆಂಟ್ ಕುಸಿದು ರಸ್ತೆ ಮೇಲೆ ಬಿದ್ದು ಪರಿಣಾಮ 11 ಮಂದಿ ಮೃತಪಟ್ಟಿದ್ದು 30 ಕ್ಕೂ ಹೆಚ್ಚು ಜನರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ರಿಕ್ಟರ್ ಮಾಪಕದಲ್ಲಿ 6.4 ಪ್ರಮಾಣದ ತೀವ್ರತೆ ದಾಖಲಾಗಿದೆ. ಮೃತರಲ್ಲಿ 10 ದಿನದ ಹೆಣ್ಣು ಮಗು ಸೇರಿ 3 ಮಕ್ಕಳು ಸೇರಿವೆ. ಘಟನೆಯಲ್ಲಿ 400 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು 60 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇಂದ್ರದ ಅನುದಾನ ಕೇಳೋದೇ ಆಪ್ ಕೆಲಸ?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವೃದ್ಧಿಸಲು ಎಎಪಿ ನೇತೃತ್ವದ ದೆಹಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ 4 ಸಾವಿರ ಕೋಟಿ ಅನುದಾನ ನೀಡುವಂತೆ ಶನಿವಾರ ಒತ್ತಾಯಿಸಿದೆ. ದೆಹಲಿಯಲ್ಲಿ ಮತ್ತೆ ಸಮ-ಬೆಸ ಸಂಖ್ಯೆ ಆಧಾರದ ಸಂಚಾರ ವ್ಯವಸ್ಥೆ ಜಾರಿಯಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಅನುದಾನಕ್ಕಾಗಿ ದೆಹಲಿ ಸರಕಾರ ಕೇಂದ್ರದ ಬಾಗಿಲು ಬಡಿದಿದೆ. ಮುಂದಿನ ದಿನಗಳಲ್ಲಿ 5 ಸಾವಿರ ಬಸ್ಸುಗಳನ್ನು ಖರೀದಿಸಲು ದೆಹಲಿ ಸರಕಾರ ಚಿಂತಿಸಿದೆ.