ಹೆಮ್ಮೆ-ಹೊಣೆಗಾರಿಕೆಯ ಸಂಗಮ, ಅಂತಾರಾಷ್ಟ್ರೀಯ ಸ್ತರದ ಭಾರತದ ನೌಕಾ ಪ್ರದರ್ಶನ

ಡಿಜಿಟಲ್ ಕನ್ನಡ ಟೀಮ್

ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ 2016. ಹೀಗೊಂದು ಹೆಸರು ಹೊತ್ತು ವಿಶಾಖಪಟ್ಟಣ ಸಮುದ್ರ ತೀರದಲ್ಲಿ ಸುದ್ದಿ ಮಾಡುತ್ತಿರುವ ಕಾರ್ಯಕ್ರಮದ ಮಹತ್ವ ಏನು? ಭಾರತೀಯ ನೌಕಾಸೇನೆ ಫೆಬ್ರವರಿ 4ರಿಂದ ಆರಂಭಿಸಿ 8ರವರೆಗೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಶನಿವಾರ ರಾಷ್ಟ್ರಪತಿ ಮತ್ತು ಪ್ರಧಾನಿ ಸಹ ಪಾಲ್ಗೊಂಡರು.

ಹಾಗಾದರೆ ಏನಿದು ಅಂತಾರಾಷ್ಟ್ರೀಯ ನೌಕಾ ವಿಮರ್ಶೆ? ಸರಳವಾಗಿ ಹೇಳೋದಾದ್ರೆ ಇದೊಂದು ಮಿಲಿಟರಿ ಬಲ ಪ್ರದರ್ಶನ. ಯುದ್ಧೋತ್ಸಾಹವೇನಲ್ಲ, ಆದರೆ ನಮ್ಮ ನೌಕಾಬಲ ಎಷ್ಟರಮಟ್ಟಿಗೆ ಸುಸಜ್ಜಿತವಾಗಿದೆ ಅಂತ ಜಗತ್ತಿಗೆ ತೋರಿಸುವ ಸಂದರ್ಭ. ಇಲ್ಲಿ ವಿದೇಶಿ ನೌಕಾಸೇನೆಗಳು ತಮ್ಮ ಪ್ರಾತಿನಿಧ್ಯವನ್ನು ಕಳುಹಿಸಿಕೊಡುತ್ತವೆ. ಸಾಗರಮಾರ್ಗವನ್ನುಕಾಪಿಟ್ಟುಕೊಳ್ಳುವುದು ಒಂದು ಅಂತಾರಾಷ್ಟ್ರೀಯ ಪ್ರಯತ್ನ. ಹೀಗಾಗಿ ಭಾರತದ ನೌಕಾಬಲವನ್ನು ಪ್ರದರ್ಶನಕ್ಕಿಡುವುದರ ಜತೆಗೆ, ಬೇರೆ ಬೇರೆ ದೇಶಗಳ ನೌಕೆಗಳನ್ನೂ ಆಹ್ವಾನಿಸಿ, ಸಾಗರಮಾರ್ಗವನ್ನು ಎಲ್ಲರೂ ಸೇರಿ ಸುರಕ್ಷಿತವಾಗಿಡಬಲ್ಲೆವು ಅಂತ ಖಾತರಿಪಡಿಸಿಕೊಳ್ಳುವ ಸಂದರ್ಭವೂ ಹೌದಿದು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಥದೊಂದು ಕೂಟವನ್ನು ಭಾರತ ಹಮ್ಮಿಕೊಂಡಿದ್ದು 2001ರಲ್ಲಿ. ಮುಂಬೈಸಮುದ್ರದಲ್ಲಿ ಹಮ್ಮಿಕೊಂಡಿದ್ದಇದರ ಅದ್ದೂರಿತನ ಈಗಿನಷ್ಟಿರಲಿಲ್ಲ. ಅದುಬಿಟ್ಟರೆ, ದೇಶೀಯ ಮಟ್ಟದಲ್ಲಿ 11 ಪ್ರದರ್ಶನಗಳಾಗಿವೆ. ಈ ಬಾರಿಯ ನೌಕಾಕೂಟಕ್ಕೆ ಸುಮಾರು 50 ರಾಷ್ಟ್ರಗಳು ತಮ್ಮ ನಿಯೋಗಗಳನ್ನು ಕಳುಹಿಸಿಕೊಟ್ಟಿವೆ. ರಷ್ಯಾ, ಅಮೆರಿಕ, ಜಪಾನ್, ಚೀನಾ, ಬ್ರಿಟನ್, ಫ್ರಾನ್ಸ್ ಆಸ್ಟ್ರೇಲಿಯಾ, ಇಸ್ರೇಲ್ ಮತ್ತು ವಿಯೆಟ್ನಾಂ ಇತ್ಯಾದಿ ರಾಷ್ಟ್ರಗಳ ಉಪಸ್ಥಿತಿಯಿಂದ ಶ್ರೀಮಂತಗೊಂಡಿದೆ ವಿಶಾಖಪಟ್ಟಣದ ಸಮುದ್ರ. ಅಮೆರಿಕ, ಚೀನಾ ಸೇರಿದಂತೆ 24 ವಿದೇಶಿ ಯುದ್ಧ ಹಡಗುಗಳು ಭಾಗವಹಿಸಿವೆ. 22 ದೇಶಗಳ ನೌಕಾಪಡೆ ಮುಖ್ಯಸ್ಥರು ಖುದ್ದು ಹಾಜರಿದ್ದಾರೆ.

fleet

ಪ್ರದರ್ಶನದ ಭಾಗವಾಗಿ ಸ್ವದೇಶಿ ಸ್ಕೈಕಾರ್ ಗಳು ಸಮುದ್ರದ ಮೇಲೆ ಆಕಾಶದಲ್ಲಿ ಬಣ್ಣ ಬಣ್ಣದ ಹೊಗೆ ಬಿಟ್ಟು ಆಕರ್ಷಕವಾದ ಕಿರುದಾರಿಗಳನ್ನು ನಿರ್ಮಿಸಿ ಪ್ರೇಕ್ಷಕರು ಮನಸೂರೆಗೊಂಡರು. ಯುದ್ಧ ವಿಮಾನಗಳ ಪ್ರದರ್ಶನ ನೆರೆದಿದ್ದವರನ್ನು ರೊಮಾಂಚನಗೊಳಿಸಿದವು. ಸೈನಿಕರು ಭಾಗವಹಿಸಿ ಯುದ್ದದ ಸಂದರ್ಭದ ಹಲವು ಆಯಾಮಗಳನ್ನು ಪ್ರದರ್ಶನಗಳೆಲ್ಲ ನಡೆದಿವೆ.

ಈ ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ ಭಾರತದ ಪಾಲಿಗೆ ಹೆಮ್ಮೆಯ ಪ್ರದರ್ಶನವೇ ಸರಿ. ಮೂರು ಕಡೆಯಿಂದ ಸಮುದ್ರ ಹೊಂದಿರುವ ದೇಶವಿದು. ಭಾರತದ ಸಮುದ್ರಮಾರ್ಗವು ಅಂತಾರಾಷ್ಟ್ರೀಯ ವಹಿವಾಟಿನ ಮುಖ್ಯದಾರಿಯೂ ಹೌದು. ಹೀಗಿರುವಾಗ, ನೋಡಿ ನಾವು ಸಿದ್ಧವಾಗಿದ್ದೇವೆ ಅಂತ ಭಾರತ ರವಾನಿಸುವ ಆತ್ಮವಿಶ್ವಾಸದ ಸಂದೇಶಕ್ಕೆ ಮಹತ್ವವಿದೆ.

ಆದರೆ…

ಇದೇ ಸಂದರ್ಭದಲ್ಲಿ ಮತ್ತಷ್ಟು ಹೊಣೆಗಾರಿಕೆಯಿಂದ ನೌಕಾಪಡೆಯ ಬಲವನ್ನು ವೃದ್ಧಿಸಬೇಕಾದ ತುರ್ತೂ ಇದೆ. ನೌಕೆಗಳನ್ನು ಅಭಿವೃದ್ದಿಪಡಿಸಿಕೊಳ್ಳುವಲ್ಲಿ ರಷ್ಯದ ಅವಲಂಬನೆ ಬಿಟ್ಟು ಸ್ವಾಲಂಬನೆ ಸಾಧಿಸಬೇಕಿದೆ. ಕೆಲ ವರ್ಷಗಳ ಹಿಂದೆ ನೌಕಾಪಡೆಯ ಜಲಾಂತರ್ಗಾಮಿ ನೌಕೆಗಳು ಸ್ಫೋಟಗೊಂಡು ಯೋಧರು ಪ್ರಾಣತ್ಯಾಗ ಮಾಡಿದ ಕರಾಳ ನೆನಪು ಚುಚ್ಚುತ್ತಲೇ ಇದೆ. ಐಎನ್ ಎಸ್ ಸುಮಿತ್ರದಂಥ ದೇಶೀ ನೌಕೆಗಳ ಪ್ರಮಾಣ ಹೆಚ್ಚಿ, ಮೇಕ್ ಇನ್ ಇಂಡಿಯಾ ಕನಸು ಇಲ್ಲಿ ಸಾಕಾರಗೊಳ್ಳುವುದಕ್ಕೆ ಕಾದಿದೆ. ಜಪಾನ್, ಚೀನಾಗಳಿಗೆ ಹೋಲಿಸಿದಾಗ ನೌಕಾಬಲದಲ್ಲಿ ಭಾರತ ಸಾಗಬೇಕಿರುವ ದಾರಿ ದೂರವಿದೆ.

ಇವೆಲ್ಲವನ್ನು ಗಮನಕ್ಕೆ ತಂದುಕೊಂಡಾಗ ಭಾರತದ ಈ ಅಂತಾರಾಷ್ಟ್ರೀಯ ನೌಕಾ ಪರಾಮರ್ಶೆ ಕಾರ್ಯಕ್ರಮವು ಹೆಮ್ಮೆ ಮತ್ತು ಹೊಣೆಗಾರಿಕೆಯ ನೆನಪು ಎರಡರ ನಿಟ್ಟಿನಲ್ಲೂ ಪ್ರಾಮುಖ್ಯ ಪಡೆದಿದೆ.

Leave a Reply