ಗೂಗಲ್ ಹುಡುಕಾಟ ರೂಪಿಸಿದ್ದರಲ್ಲಿ ಇದೀಗ ನಿವೃತ್ತಿಯಾಗ್ತಿರೋ ಈ ಭಾರತೀಯನದ್ದು ‘ಅಮಿತ’ ಕೊಡುಗೆ!

ಡಿಜಿಟಲ್ ಕನ್ನಡ ಟೀಮ್

ವಿಶ್ವದ ಪ್ರತಿಷ್ಠಿತ ಅಂತರಜಾಲ ಶೋಧನಾ ಸಾಧನವಾಗಿರುವ ಗೂಗಲ್ ಎಲ್ಲರಿಗೂ ಚಿರಪರಿಚಿತ. ಈ ಗೂಗಲ್ ಬೆಳವಣಿಗೆ ಹಿಂದೆ ಭಾರತೀಯರ ಪರಿಶ್ರಮ ಅಗಾಧವಾದುದು. ಸದ್ಯ ನಮ್ಮೆಲ್ಲರಿಗೂ ಈ ಗೂಗಲ್ ನ ಪ್ರತಿಷ್ಠಿತ ಸ್ಥಾನ ಸಿಇಒ ಜವಾಬ್ದಾರಿಯನ್ನು ಭಾರತದವರಾದ ಸುಂದರ್ ಪಿಚೈ ಹೊತ್ತಿರುವುದು ತಿಳಿದಿದೆ. ಪಿಚೈನಂತಹ ಸಾಕಷ್ಟು ಪ್ರತಿಭಾವಂತ ಭಾರತೀಯ ಇಂಜಿನಿಯರ್ ಗಳು ಈ ಸಂಸ್ಥೆಯ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆ ಪೈಕಿ ಅಮಿತ್ ಸಿಂಘಲ್ ಸಹ ಒಬ್ಬರು.

ಸುಮಾರು 15 ವರ್ಷಗಳಿಂದ ಗೂಗಲ್ ನ ಬೆಳವಣಿಗೆಯ ಭಾಗವಾಗವಾಗಿರುವ ಅಮಿತ್, ಇದೇ ತಿಂಗಳಾಂತ್ಯದಲ್ಲಿ ಗೂಗಲ್ ನಿಂದ ನಿವೃತ್ತಿ ಪಡೆಯಲಿದ್ದು, ತಮ್ಮ ಕುಟುಂಬದವರೊಡನೆ ಕಾಲ ಕಳೆಯಲು ನಿರ್ಧರಿಸಿದ್ದಾರೆ. ಈ ಹಂತದಲ್ಲಿ ಅಮಿತ್ ಅವರ ಈ ಸಾಧನೆಯ ಹಾದಿ ನಮ್ಮೆಲ್ಲರಿಗೂ ಸ್ಫೂರ್ತಿ ತುಂಬುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಈ ಸಾಧಕ ನಡೆದು ಬಂದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

  • ಅಂತರ್ಜಾಲದಲ್ಲಿ ಇವತ್ತು ಏನೇ ಹುಡುಕೋದಿದ್ರೂ, ಗೂಗಲ್ ಮಾಡಿಬಿಡು ಎಂಬಮಟ್ಟಿಗೆ ಸಂಸ್ಥೆ ಬೆಳೆದು ನಿಂತಿದೆ. ಸಂಸ್ಥಾಪಕರಾದ ಲ್ಯಾರಿ ಪೇಜ್, ಸರ್ಜಿ ಬಿನ್ ಅವರಿಗೆ ಇದರ ಶ್ರೇಯಸ್ಸು ಸಲ್ಲೋದರಲ್ಲಿ ತಪ್ಪಿಲ್ಲ. ಆದರೆ ಗೂಗಲ್ ಸರ್ಚ್ ಇಂಜಿನ್ ಅನ್ನು ಈ ಮಟ್ಟಕ್ಕೆ ಪರಿಣಾಮಕಾರಿಯಾಗಿ ತಯಾರು ಮಾಡಿದ್ದರಲ್ಲಿ ಅಮಿತ್ ಸಿಂಘಲ್ ಕೊಡುಗೆ ಅನನ್ಯ. ಅಮಿತ್ ಹಾಗೂ ಆತನ ತಂಡದ ಸದಸ್ಯರು ಗೂಗಲ್ ನ ಸರ್ಚ್ ಆಲ್ಗರಿದಮ್ (ಸಮಸ್ಯೆ ಬಗೆಹರಿಸಲು ಬಳಸುವ ಫಾರ್ಮುಲಾ ಪ್ರಕ್ರಿಯೆ) ನ ಜವಾಬ್ದಾರಿ ಹೊತ್ತಿದ್ದರು. ಗೂಗಲ್ ನಲ್ಲಿ ಬಳಸುವ ಶ್ರೇಣಿಕೃತ ಆಲ್ಗರಿದಮ್ (ವ್ಯಕ್ತಿಯೊಬ್ಬನ ಪ್ರಶ್ನೆಗೆ ಬೇಕಾದ ಉತ್ತರ ಯಾವ ವೆಬ್ ಪೇಜ್ನಲ್ಲಿ ಸಿಗಲಿದೆ ಎಂಬ ಫಾರ್ಮುಲಾ) ನ ಪರಿಣಿತರಾಗಿದ್ದರು. ಗೂಗಲ್ ಸೇರಿದ ಒಂದು ವರ್ಷದ ಅವಧಿಯಲ್ಲಿ ಅಮಿತ್, ಗೂಗಲ್ ನ ಆರಂಭದಲ್ಲಿ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಅವರು ಬರೆದಿದ್ದ ಸರ್ಚ್ ಇಂಜಿನ್ ನ ಫಾರ್ಮುಲಾವನ್ನು ಸಂಪೂರ್ಣವಾಗಿ ಬದಲಿಸಿ, ಹೊಸ ರೂಪಕೊಟ್ಟರು.
  • ಭಾರತದಲ್ಲಿದ್ದುಕೊಂಡು ಭವಿಷ್ಯ ಕನಸುತ್ತಿರುವ ಯುವ ಸಮುದಾಯಕ್ಕೆ ಅಮಿತ್ ಬದುಕಿಂದ ಸಿಗಬಹುದಾದ ಮುಖ್ಯ ಪ್ರೇರಣೆ ಅಂತಂದ್ರೆ- ಅಮಿತ್ ಸಿಂಘಲ್ ಚಿಕ್ಕ ಪಟ್ಟಣವೊಂದರಿಂದ ಬಂದವರು. ಉತ್ತರ ಪ್ರದೇಶದ ಜಾನ್ಸಿಯಲ್ಲಿ ಜನಿಸಿದ ಅಮಿತ್ ಸಿಂಘಲ್ ಗೂಗಲ್ ಸಂಸ್ಥೆಯ ಮೇಲುಸ್ತರ ಮುಟ್ಟಿದ್ದು ರೋಮಾಂಚನದ ಸಂಗತಿ.
  • 1989ರಲ್ಲಿ ರೂರ್ಕಿಯಲ್ಲಿರುವ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ಇದೇ ಕ್ಷೇತ್ರದಲ್ಲಿ ತಮ್ಮ ಅಧ್ಯಯನ ಮುಂದುವರಿಸಿದ ಅಮಿತ್, 1991ರಲ್ಲಿ ಅಮೆರಿಕದಲ್ಲಿ ವಿದ್ಯಾಭ್ಯಾಸ ನಡೆಸಿ ಮಿನಸೋಟ ವಿಶ್ವವಿದ್ಯಾಲಯದಲ್ಲಿ ಎಂಎಸ್ ಪದವಿ ಪಡೆದರು. 1996ರಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಪ್ರೊ.ಗೆರಾರ್ಡ್ ಸಲ್ಟನ್ ಜತೆ ಅಧ್ಯಯನ ನಡೆಸಿ ಪಿಎಚ್ ಡಿ ಪದವಿ ಪಡೆದರು. ನಂತರ ಅಂತರಜಾಲದಲ್ಲಿ ಶೋಧಕ್ಕೆ ಸಂಬಂಧಿಸಿದಂತೆ ಇದ್ದ ಕೆಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಟಿ ಅಂಟ್ ಟಿ ಲ್ಯಾಬ್ಸ್ ಗೆ ಸೇರಿಕೊಂಡರು. ಅಲ್ಲಿ ಶೋಧದ ಮೂಲಕ ಮಾಹಿತಿಯನ್ನು ಪಡೆಯುವ ಬಗ್ಗೆ ಸಂಶೋಧನೆ ನಡೆಸಿದರು. 2000ನೇ ಇಸವಿಯಲ್ಲಿ ಅಮಿತ್, ತಮ್ಮ ಸ್ನೇಹಿತ ಕೃಷ್ಣ ಭಟ್ ಅವರ ಸಲಹೆ ಮೂಲಕ ಗೂಗಲ್ ಸಂಸ್ಥೆಯನ್ನು ಸೇರಿಕೊಂಡರು. ಆಮೇಲೆ ಅಮಿತ್ ತಮ್ಮ ಹಾದಿಯಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ.
  • 2001ರಲ್ಲಿ ಹೊಸ ಸರ್ಚ್ ಇಂಜಿನ್ ಪಡೆದ ನಂತರ ಗೂಗಲ್, ಹೊಸ ಹೊಸ ಆವಿಷ್ಕಾರ, ಮಾಹಿತಿ ಶೋಧ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ ವಿಶ್ವದಲ್ಲಿನ ಯಾವುದೇ ವಿಷಯವನ್ನುಬೆರಳ ತುದಿಗೆ ತಂದು ನಿಲ್ಲಿಸುವ ಮಟ್ಟಕ್ಕೆ ಬಂದಿತು. ಇಂತಿಪ್ಪ ಗೂಗಲ್ ಗೆ ಹೊಸ ಸವಾಲು ಎದುರಾಗಿದ್ದು ಸ್ಮಾರ್ಟ್ ಫೋನ್ ಗಳು ವ್ಯಾಪಕವಾಗಿ ಮಾರುಕಟ್ಟೆ ಆಕ್ರಮಿಸಿಕೊಂಡು ಗ್ರಾಹಕ ವರ್ತನೆಯನ್ನೇ ಬದಲಾಯಿಸಿದ ಘಟ್ಟದಲ್ಲಿ. ಗೂಗಲ್ ಹುಡುಕಾಟವನ್ನು ಮೊಬೈಲ್ ಫೋನ್ ಗಳ ಯುಗಕ್ಕೆ ತಕ್ಕಂತೆ ನವೀಕರಿಸುವ ಗುರುತರ ಜವಾಬ್ದಾರಿಯನ್ನೂ ಮುಂಚೂಣಿಯಲ್ಲಿ ನಿಂತು ನಿರ್ವಹಿಸಿದ್ದು ಅಮಿತ್ ಸಿಂಘಲ್ ಅವರೇ. ಆ ಪ್ರಯತ್ನದ ಫಲವೇ ಗೂಗಲ್ ನೌ ಆಗಿದೆ.

ಗೂಗಲ್ ನಿಂದ ಅಮಿತ್ ನಿವೃತ್ತಿ ಪಡೆಯುತ್ತಿರುವುದನ್ನು ಆ್ಯಪಲ್ ಕಂಪನಿಯಿಂದ ಜಾನಿ ಇವ್ ಬಿಟ್ಟು ಹೋಗಿದ್ದಕ್ಕೆ ಹೋಲಿಕೆ ಮಾಡಲಾಗುತ್ತಿದ್ದು, ಗೂಗಲ್ ನ ಯಶಸ್ಸಿನಲ್ಲಿ ಅವರ ಪಾತ್ರವನ್ನು ಬಿಂಬಿಸುತ್ತದೆ.

Leave a Reply