ಚಂಡಮಾರುತ ಸಾಧ್ಯತೆ ಪತ್ತೆ ಹಚ್ಚೋಕೆ ರೆಡಿಯಾಗ್ತಿದೆ ಇಸ್ರೋದ ಚೀಪ್ ಆ್ಯಂಡ್ ಬೆಸ್ಟ್ ಉಪಗ್ರಹ

 

(ಪ್ರಾತಿನಿಧಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್

ಹವಾಮಾನ ವೈಪರೀತ್ಯ ಅನ್ನೋದು ಜಗತ್ತೇ ತಲೆಕೆಡಿಸಿಕೊಂಡಿರೋ ಸಂಗತಿ. ಪ್ರವಾಹ- ಚಂಡಮಾರುತಗಳೆಲ್ಲ ಮುಂಬರುವ ದಿನಗಳಲ್ಲಿ ಅನಿವಾರ್ಯ ಎಂಬ ಸಾಧ್ಯತೆಗಳೇ ಹೆಚ್ಚು. ಇವನ್ನು ಹುಲುಮಾನವರಿಂದ ತಡೆಯೋಕಂತೂ ಆಗಲ್ಲ. ಆದ್ರೆ ಮೊದಲೇ ಇದರ ಸುಳಿವು ಸಿಕ್ಕರೆ ಜೀವಹಾನಿ ತೀವ್ರತೆ ತಪ್ಪಿಸಬಹುದು. ಇಲ್ಲೇ ನಮಗೆ ತಂತ್ರಜ್ಞಾನ ಆಪ್ತಮಿತ್ರನಾಗೋದು. ಇಸ್ರೋದಂಥ ಸಂಸ್ಥೆಗಳು ನಮ್ಮ ಭವಿಷ್ಯ ಕಾಯಲು ಸದ್ದಿಲ್ಲದ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರ ಬಗ್ಗೆ ನಾವು ಅರಿವು ಬೆಳೆಸಿಕೊಂಡು ಕೃತಜ್ಞರಾಗಿರಬೇಕು.

ಸದ್ಯಕ್ಕೆ ಸಮುದ್ರದ ಒಡಲಲ್ಲೇಳುವ ಚಂಡಮಾರುತದ ಸುಳಿವು ಪತ್ತೆಹಚ್ಚಿ ಎಚ್ಚರಿಸುವುದಕ್ಕೆಂದೇ ಉಪಗ್ರಹವೊಂದನ್ನು ತಯಾರಿಸೋದ್ರಲ್ಲಿ ಇಸ್ರೋ ತೊಡಗಿಸಿಕೊಂಡಿದೆ. ಸ್ಕಾಟ್ಸ್ಯಾಟ್-1 ಎಂಬ ಈ ಉಪಗ್ರಹದ ಹೆಚ್ಚುಗಾರಿಕೆ ಏನ್ ಗೊತ್ತಾ? ಈ ಹಿಂದೆ ಉಡಾವಣೆ ಮಾಡಲಾದ ಉಪಗ್ರಹ ತಯಾರಿಕೆ ವೇಳೆ ಉಳಿದಿದ್ದ ಭಾಗಗಳನ್ನು ಬಳಸಿಕೊಂಡು 310 ಕೆಜಿ ತೂಕದ ಹೊಸ ಉಪಗ್ರಹ ನಿರ್ಮಾಣವಾಗ್ತಿದೆ. ಆ ಮೂಲಕ ಈ ಪ್ರಮಾಣದ ಉಪಗ್ರಹ ತಯಾರಿಕೆಗೆ ವ್ಯಯಿಸಬೇಕಿದ್ದ ಹಣದಲ್ಲಿ ಶೇ. 60ರಷ್ಟು ವೆಚ್ಚ ಕಡಿಮೆ ಮಾಡಿ ಈ ಯೋಜನೆ ರೂಪುಗೊಳ್ಳುತ್ತಿದೆ!

ಜುಲೈನಲ್ಲಿ ಸ್ಕಾಟ್ ಸಾಟ್-1 ಉಪಗ್ರಹ ಉಡಾವಣೆಗೆ ತಯಾರಿ ನಡೆದಿದ್ದು, ಉಡ್ಡಯನದ ನಂತರ ಐದು ವರ್ಷಗಳ ಕಾಲ ಉಪಗ್ರಹದ ಆಯಸ್ಸು. ಈ ಉಪಗ್ರದಲ್ಲಿರುವ ಸ್ಕಾಟೆರೊಮೀಟರ್ ಮೈಕ್ರೋವೇವ್ ರಾಡರ್ ಸೆನ್ಸಾರ್, ಸಮುದ್ರದಲ್ಲಿ ಸೈಕ್ಲೋನ್ ಮತ್ತು ಚಂಡ ಮಾರುತಗಳು ರೂಪ ಪಡೆಯುವುದನ್ನು ಕಂಡು ಹಿಡಿಯಲಿದೆ. ಸಮುದ್ರಗಳಲ್ಲಿ ಗಾಳಿಯ ವೇಗ ಮತ್ತು ಅದು ಸಾಗುವ ದಿಕ್ಕನ್ನು ಗುರುತಿಸಲಿದ್ದು, ಆ ಮೂಲಕ ಸೈಕ್ಲೋನ್ ಅನಾಹುತದ ಪ್ರಮಾಣವನ್ನು ತಗ್ಗಿಸಬಹುದಾಗಿದೆ. 300ಕ್ಕೂ ಹೆಚ್ಚು ವಿಜ್ಞಾನಿಗಳು ಅಹ್ಮದಾಬಾದ್ ನಲ್ಲಿರುವ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ನಲ್ಲಿಇದರ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಟ್ಟದ ಉಪಗ್ರಹ ತಯಾರಿಕೆಗೆ ಸಾಮಾನ್ಯವಾಗಿ 3 ವರ್ಷಗಳ ಅವಧಿ ಕಾಲಾವಕಾಶ ಬೇಕಿರುತ್ತದೆ. ಆದರೆ ಇಲ್ಲಿ ತಗುಲುತ್ತಿರೋದು ಒಂದೇ ವರ್ಷ. ಈ ಉಪಗ್ರಹದ ಜತೆ ಮತ್ತೊಂದು ಉಪಗ್ರಹವನ್ನು ಉಡಾವಣೆ ಮಾಡುವ ಅವಕಾಶ ಇರುವುದರಿಂದ ಅಲ್ಲೂ ಖರ್ಚು ಉಳಿತಾಯವಾಗಲಿದೆ.

ಎಷ್ಟೆಂದರೂ ಮಂಗಳನ ಅಂಗಳಕ್ಕೇ ಅತಿ ಕಡಿಮೆ ಖರ್ಚಿನಲ್ಲಿ ಮಾಮ್ ಕಳುಹಿಸಿದ ಖ್ಯಾತಿ ಇಸ್ರೋದಲ್ಲವೇ? ಅಂದಹಾಗೆ, ಈ ನೂತನ ಉಪಗ್ರಹ ಕಳುಹಿಸುವ ಮಾಹಿತಿಯನ್ನು ನಾಸಾ, ಯುರೋಪ್ ಬಾಹ್ಯಾಕಾಶ ವಿಭಾಗ, ನ್ಯಾಷನಲ್ ಓಷನಿಕ್ ಆ್ಯಂಡ್ ಅಟಮೋಸ್ಪರಿಕ್ ಅಡ್ಮಿನಿಸ್ಟ್ರೇಷನ್ ಇತ್ಯಾದಿ ಅಂತಾರಾಷ್ಟ್ರೀಯ ಸಂಸ್ಥೆಗಳೂ ಉಪಯೋಗಿಸಿಕೊಳ್ಳಲಿವೆ.

ಈ ಹಿಂದೆ ಇಂಥ ಉಪಗ್ರಹ ನಮ್ಮಲ್ಲಿ ಇರಲಿಲ್ವಾ? ಇತ್ತು… 2009ರಲ್ಲಿ ಉಡಾವಣೆಯಾದ ಒಶಿಯಾನ್ ಸ್ಯಾಟ್-2 ಉಪಗ್ರಹ ಹವಾಮಾನ ಬದಲಾವಣೆಗೆ ಕುರಿತ ಮಾಹಿತಿಯನ್ನು ನೀಡುತ್ತಿತ್ತು. ಹುಡ್ ಹುಡ್ ಮತ್ತು ಫೈಲನ್ ನಂತಹ ಚಂಡಮಾರುತಗಳನ್ನು ನಿಖರವಾಗಿ ಗುರುತಿಸಿದ್ದ ಒಶಿಯಾನ್ ಸ್ಯಾಟ್-2 2014ರ ಫೆಬ್ರವರಿಯಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತು. ಹಾಗಾಗಿ ಇಸ್ರೊ ಸದ್ಯಕ್ಕೆ ಹವಾಮಾನ ಕುರಿತ ಮಾಹಿತಿಗಳನ್ನು ಇನ್ ಸ್ಯಾಟ್-3ಡಿ ಉಪಗ್ರಹದ ಮೂಲಕ ಪಡೆಯುತ್ತಿದೆ.

Leave a Reply