ಡಿಜಿಟಲ್ ಕನ್ನಡ ವಿಶೇಷ
ಕೊನೆಗೂ ದೇವೇಗೌಡರ ಕುಟುಂಬದ ಮತ್ತೊಬ್ಬ ಸೊಸೆ ಭವಾನಿ ರೇವಣ್ಣ ಚುನಾವಣೆ ಪಾಲಿಟಿಕ್ಸ್ ಗೆ ಅಧಿಕೃತ ಎಂಟ್ರಿ ಕೊಟ್ಟಿದ್ದಾರೆ. ಅವರು ಕಾಲಿಟ್ಟ ಘಳಿಗೇಲೇ ಮಾಜಿ ಸಚಿವ ಪಿಜಿಆರ್ ಸಿಂಧ್ಯ ಜೆಡಿಎಸ್ ನಿಂದ ಹೊರಬಿದ್ದು ಕಾಂಗ್ರೆಸ್ ಅಂಗಳದಲ್ಲಿ ಠಳಾಯಿಸಿದ್ದಾರೆ. ಅದೂ ಗೌಡರ ಕುಟುಂಬದ ರಾಜಕೀಯ ಶತ್ರು ಡಿ.ಕೆ. ಶಿವಕುಮಾರ್ ಪಾಳೆಯದಲ್ಲಿ!
ಚುನಾವಣೆ ರಾಜಕೀಯಕ್ಕೆ ಬರಬೇಕೆಂಬ ಗೌಡರ ಸೊಸೆ ಭವಾನಿ ರೇವಣ್ಣ ಅವರ ಬಯಕೆ ಒಂಬತ್ತು ವರ್ಷ ತುಂಬಿದ ನಂತರ ಹೆರಿಗೆ ಕಂಡಿದೆ. ಅವರೀಗ ಪತಿ ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಹೋಬಳಿಯಿಂದ ಹಾಸನ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಅಧಿಕೃತ ಅಭ್ಯರ್ಥಿ. ಸುಮಾರು ಇಪ್ಪತ್ತು ವರ್ಷಗಳಿಂದ ಪ್ರಚಾರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಅವರು 2008 ರ ವಿಧಾನಸಭೆ ಚುನಾವಣೆಗೆ ತವರೂರು ಕೆ.ಆರ್. ಪೇಟೆ ಅಭ್ಯರ್ಥಿ ಆಗಲು ವರ್ಷ ಮೊದಲಿಂದಲೇ ಸಿದ್ಧತೆ ನಡೆಸಿದ್ದರು. ಆದರೆ ಅದೃಷ್ಟ ಅವರಿಗೆ ಕೈಕೊಟ್ಟಿತ್ತು, ವಾರಗಿತ್ತಿ ಅನಿತಾ ಕುಮಾರಸ್ವಾಮಿ ಅವರ ಕೈ ಹಿಡಿದಿತ್ತು. ಅವರು ಮಧುಗಿರಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಆಗಿ, ಗೆದ್ದು ಬಂದರು. ಬಯಕೆ ತಪ್ಪಿದ ಭವಾನಿ ಸ್ವಾಟೆ ತಿರುವಿದ್ದರು.
ಆಗಿನಿಂದಲೂ ಗೌಡರ ಕುಟುಂಬದೊಳಗೆ ರಾಜಕೀಯ ಕುರುಕ್ಷೇತ್ರವೇ ನಡೆದಿತ್ತು. ಚುನಾವಣೆ ರಾಜಕೀಯಕ್ಕೆ ಎಂಟ್ರಿ ಕೊಡಬೇಕೆಂಬ ಭವಾನಿ ರೇವಣ್ಣ ಅವರ ಆಸೆಗೆ ಅನಿತಾ ಕುಮಾರಸ್ವಾಮಿ ಪ್ರಚೋದನೆಯಿಂದ ಕುಮಾರಸ್ವಾಮಿ ಅವರು ತಣ್ಣೀರು ಎರಚುತ್ತಲೇ ಬಂದಿದ್ದರು. ಆಗೆಲ್ಲ ಭವಾನಿ ಅವರು ರೇವಣ್ಣ ಅವರ ಮೇಲೆ ಒತ್ತಡ ವೃದ್ಧಿಸುತ್ತಲೇ ಬಂದಿದ್ದರು. 2013 ರ ವಿಧಾನಸಭೆ ಚುನಾವಣೆಯಲ್ಲೂ ಭವಾನಿ ಅವರು ಹಾಸನ ಜಿಲ್ಲೆಯ ಬೇಲೂರು ವಿಧಾನಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆದರೆ ಕುಟುಂಬದೊಳಗಿನ ರಾಜಕೀಯ ಅದಕ್ಕೆ ‘ಒಂಟಿ ಆಕ್ಷಿ’ ಹೊಡೆದಿತ್ತು. ನಂತರ ಚನ್ನಪಟ್ಟಣ ಮರುಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದರು. ಆಗಲೂ ಅನಿತಾ ಕುಮಾರಸ್ವಾಮಿ ಅವರೇ ಅಡ್ಡಗಾಲಾಗಿದ್ದರು. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಗೂ ಅವರು ಹಾಸನ ಟಿಕೆಟ್ ಬಯಸಿದ್ದರು. ಆದರೆ ಅದು ಪಟೇಲ್ ಶಿವರಾಂ ಪಾಲಾಗಿತ್ತು. ಭವಾನಿ ಅವರ ಸಿಟ್ಟು-ಸೆಡವು ಶಿವರಾಂ ಸೋಲಲ್ಲಿ ನಗುತ್ತಿತ್ತು.
ಹೀಗೆ ಬಿಟ್ಟರೆ ಹಾಸನ ರಾಜಕೀಯ ಜೆಡಿಎಸ್ ದಾಟಿಕೊಂಡು ಹೋಗುತ್ತದೆ ಎಂಬುದನ್ನು ಮನಗಂಡ ದೇವೇಗೌಡರು ಇದೀಗ ಭವಾನಿ ಅವರ ಆಕಾಂಕ್ಷೆಗೆ ‘ಹಸಿರು ಶಾಲು’ ತೋರಿದ್ದಾರೆ. ಆ ಮೂಲಕ ಜೆಡಿಎಸ್ ಇದೀಗ ತುಂಬು ಕುಟುಂಬ. ಗೌಡರು, ಕುಮಾರಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ ನಂತರ ಇದೀಗ ಭವಾನಿ ಈ ಕುಟುಂಬ ತುಂಬಿದ್ದಾರೆ. ಇದನ್ನು ಮತ್ತಷ್ಟು ಶ್ರೀಮಂತಗೊಳಿಸಲು ರೇವಣ್ಣ-ಭವಾನಿ ಪುತ್ರ ಪ್ರಜ್ವಲ್ ಹಾಗೂ ಕುಮಾರಸ್ವಾಮಿ-ಅನಿತಾ ಪುತ್ರ ನಿಖಿಲ್ ಗೌಡ ಕೂಡ ಸದ್ಯಕ್ಕೆ ಟವೆಲ್ ಹಾಸಿದ್ದಾರೆ. ಅದರ ಪಕ್ಕದಲ್ಲೂ ಸಾಕಷ್ಟು ಜಾಗ ಖಾಲಿಯಿದೆ. ಇನ್ನೂ ಬರಲಿರುವವರಿಗಾಗಿ..!
ಒಂದು ಕಡೆ ಪಕ್ಷವನ್ನು ಗೌಡರ ಕುಟುಂಬ ತುಂಬುತ್ತಿದ್ದರೆ, ಇನ್ನೊಂದೆಡೆ ಬೇರೆ ನಾಯಕರು ಒಬ್ಬೊಬ್ಬರಾಗಿ ಮನಸ್ಸು ಮತ್ತು ಜಾಗ ಖಾಲಿ ಮಾಡುತ್ತಿದ್ದಾರೆ. ದಿಢೀರ್ ಬೆಳವಣಿಗೆಯಲ್ಲಿ ಜೆಡಿಎಸ್ ನ ಹಿರಿಯ ನಾಯಕ ಪಿಜಿಆರ್ ಸಿಂಧ್ಯ ಅವರು ಸಚಿವ ಡಿ.ಕೆ. ಶಿವಕುಮಾರ್ ಜತೆ ಜಿಲ್ಲಾ ಪಂಚಾಯಿತಿ ಚುನಾವಣೆ ಪ್ರಚಾರದಲ್ಲಿ ಶನಿವಾರ ಕಾಣಿಸಿಕೊಂಡಿದ್ದಾರೆ. ಅದೂ ಕುಮಾರಸ್ವಾಮಿ ಪಾರುಪತ್ಯದ ರಾಮನಗರದಲ್ಲಿ. ಚಲುವರಾಯಸ್ವಾಮಿ, ಜಮೀರ್ ಆಹಮದ್ ಖಾನ್, ಇಕ್ಬಾಲ್ ಅನ್ಸಾರಿ, ಬಾಲಕೃಷ್ಣ, ಪುಟ್ಟಣ್ಣ
ಅವರಂಥವರು ನಾಯಕತ್ವದ ವಿರುದ್ಧ ಮುನಿದಿರುವ ಸಂದರ್ಭದಲ್ಲೇ ಸಿಂಧ್ಯ ಅವರ ಅಚ್ಚರಿ ನಡೆ ಗೌಡರಿಗೆ ಮತ್ತಷ್ಟು ಮುಜುಗರ ತಂದಿದೆ.
ಹಾಗೇ ನೋಡಿದರೆ ಸಿಂಧ್ಯ ಅವರು ಮಾನಸಿಕವಾಗಿ ಜೆಡಿಎಸ್ ಅಂಗಳ ಕಾಲಿ ಮಾಡಿ ಸುಮಾರು ವರ್ಷಗಳೇ ಸಂದಿವೆ. 1983 ರಿಂದ ಆರು ಬಾರಿ ಗೆದ್ದು, ಐದು ಬಾರಿ ಮಂತ್ರಿಯಾಗಿದ್ದ ಸಿಂಧ್ಯ 2005 ರಲ್ಲಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಬಿರುಕು ಕಾಣಿಸಿಕೊಂಡಾಗ ಒಳರಾಜಕೀಯ ಮಾಡಲು ಹೋಗಿ ‘24 x 7 ರಾಜಕೀಯ ಭೀಷ್ಮ’ ಗೌಡರ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಜೆಡಿಎಸ್-ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಬಹುಜನ ಸಮಾಜ ಪಕ್ಷಕ್ಕೆ ಹೋದಷ್ಟೇ ವೇಗವಾಗಿ ಜೆಡಿಎಸ್ ಗೆ ಮರಳಿದ ಸಿಂಧ್ಯ ಲೆಕ್ಕಾಚಾರ ತಪ್ಪಿ ಪಕ್ಷದಲ್ಲಿ ಮೂಲೆಗುಂಪಾಗಿದ್ದರು. ಅಲ್ಲದೇ 2013 ರ ಚುನಾವಣೆಯಲ್ಲಿ ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಸೋತಿದ್ದರು. ಅವತ್ತಿಂದ ಇವತ್ತಿನವರೆಗೆ ರಾಜಕೀಯ ಅಜ್ಞಾತವಾಸದಲ್ಲೇ ಇದ್ದ ಅವರು ಇದೀಗ ಹಠಾತ್ತನೇ ಡಿಕೆಶಿ ಅವರ ಜತೆಯೇ ಕಾಂಗ್ರೆಸ್ ವೇದಿಕೆ ಹಂಚಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ.
ಮೊದಲಿಂದರೂ ಕನಕಪುರದ ಸಿಂಧ್ಯ ಮತ್ತು ಸಾತನೂರಿನ ಡಿ.ಕೆ. ಶಿವಕುಮಾರ್ ನಡುವೆ ಪಕ್ಷ ರಾಜಕಾರಣ ಮೀರಿದ ಒಳಒಪ್ಪಂದ ಇದ್ದೇ ಇತ್ತು. ಅವರ ಕ್ಷೇತ್ರದಲ್ಲಿ ಇವರು, ಇವರ ಕ್ಷೇತ್ರದಲ್ಲಿ ಅವರು ಪರಸ್ಪರ ಚುನಾವಣೆ ಸಹಿಷ್ಣುಗಳಾಗಿದ್ದರು. 2013 ರ ಚುನಾವಣೆಯಲ್ಲಿ ಎದುರಾಳಿಗಳಾಗುವವರೆಗೆ. ಚುನಾವಣೆ ನಂತರ ಇವರಿಬ್ಬರ ಸಂಬಂಧ ಮೊದಲಿನಂತೆಯೇ ಆಗಿತ್ತು. ತಮ್ಮ ರಾಜಕೀಯ ವೈರಿ ಡಿ.ಕೆ. ಶಿವಕುಮಾರ್ ಜತೆ ಸಿಂಧ್ಯ ಸ್ನೇಹ ಮೊದಲಿಂದಲೂ ಗೌಡರ ಕುಟುಂಬದ ಅಸಮಾಧಾನಕ್ಕೆ ಕಾರಣವಾಗಿತ್ತು. ತದನಂತರ ಅವರನ್ನು ನಾಮ್-ಕೇ-ವಾಸ್ತೆ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಮಾಡಿ, ಕೈಕಾಲು ಆಡದಂತೆ ಮಾಡಲಾಗಿತ್ತು. ನಂತರ ಆ ಹುದ್ದೆಯನ್ನೂ ಕಿತ್ತುಕೊಳ್ಳಲಾಗಿತ್ತು. ಸಿಂಧ್ಯ ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದ ಸಂದರ್ಭದಲ್ಲೇ ಅವರೀಗ ಕಾಂಗ್ರೆಸ್ ಪಾಳೆಯದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ಸಿಂಧ್ಯ ಮತ್ತು ಜೆಡಿಎಸ್ ಸಂಬಂಧ ಮತ್ತೊಮ್ಮೆ ಮುರಿದು ಬಿದ್ದಂತಾಗಿದೆ.