ಫೇಸ್ಬುಕ್ ನ ಪುಕ್ಕಟೆ ಆಮಿಷಕ್ಕೆ ಮಣಿಯಲಿಲ್ಲ ಸರ್ಕಾರ, ಫ್ರೀ ಬೇಸಿಕ್ಸ್- ಜಿರೋ ಯೋಜನೆಗಳಿಗೆ ನಕಾರ

 

ಡಿಜಿಟಲ್ ಕನ್ನಡ ಟೀಮ್

ಸ್ವಲ್ಪ ದಿನಗಳ ಹಿಂದಕ್ಕೆ ಹೋಗಿ… ನಿಮ್ಮ ಫೇಸ್ ಬುಕ್ ಪೇಜ್ ನಲ್ಲಿ “ಸೇವ್ ಫ್ರೀ ಬೇಸಿಕ್ಸ್’’ಗೆ ಒಪ್ಪಿಗೆ ಪಡೆಯುವ ಬಗ್ಗೆ ನಿಮ್ಮೆಲ್ಲರಿಗೂ ಮನವಿ ಬಂದಿದ್ದು, ನೆನಪಿದೆಯಲ್ಲವೇ?

ಇದೀಗ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರ ಪ್ರಕಟಿಸಿದ್ದು, ಫ್ರೀ ಬೇಸಿಕ್ಸ್ ಸೇರಿದಂತೆ ಭಿನ್ನ ಡಾಟಾ ದರ ನಿಗದಿಪಡಿಸುವ ಯಾವ ಯೋಜನೆಗಳಿಗೂ ಅನುಮತಿ ನೀಡುವುದಿಲ್ಲ ಅಂತ ಸ್ಪಷ್ಟವಾಗಿ ಸಾರಿದೆ. ಈ ಮೂಲಕ ಫೇಸ್ಬುಕ್ ನ ಪುಕ್ಕಟೆ ಇಂಟರ್ನೆಟ್ ಪ್ರಚಾರ ವಿರೋಧಿಸಿ ಹುಟ್ಟಿಕೊಂಡಿದ್ದ ‘ಸೇವ್ ದಿ ಇಂಟರ್ನೆಟ್’ ಅಭಿಯಾನಕ್ಕೆ ಜಯ ದೊರೆತಂತಾಗಿದೆ.

ಫೇಸ್ ಬುಕ್ ನ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಫ್ರೀ ಬೇಸಿಕ್ಸ್ ನಲ್ಲಿ ಗ್ರಾಹಕರು ಉಚಿತವಾಗಿ ಅಂತರಜಾಲವನ್ನು ಪಡೆಯಬಹುದಾಗಿತ್ತಾದರೂ ಅಲ್ಲಿ ಕೆಲವು ವೆಬ್ ಸೈಟ್ ಗಳನ್ನು ಮಾತ್ರ ಬಳಸಲು ಅವಕಾಶ ಮಾಡಿಕೊಡುತ್ತಿತ್ತು. ಉಚಿತವಾಗಿ ಫೇಸ್ ಬುಕ್ ಇಂಟರ್ ನೆಟ್ ಸಿಗುತ್ತದ್ದೆಂದು ಹಿಂದೆ ಮುಂದೆ ನೋಡದೇ ಸಾಕಷ್ಟು ಜನ ಫೇಸ್ಬುಕ್ ಬಳಕೆದಾರರು ಇದಕ್ಕೆ ಒಪ್ಪಿಗೆ ಬಟನ್ ಒತ್ತಿದ್ದರಾದರೂ, ಈ ಮೂಲಕ ಫೇಸ್ಬುಕ್ ಅಂತರ್ಜಾಲದಲ್ಲಿ ಏಕಸ್ವಾಮ್ಯ ಮೆರೆಯುವುದಕ್ಕೆ ಹೋಗ್ತಿದೆ ಅಂತ ಅಷ್ಟೇ ಪ್ರಬಲವಾದ ಇನ್ನೊಂದು ಧ್ವನಿಯೂ ಎದ್ದಿತು.

ಈ ಧ್ವನಿಗಳನ್ನು ಬಿಂಬಿಸುವ ಲೇಖನಗಳನ್ನು ಡಿಜಿಟಲ್ ಕನ್ನಡ ಪ್ರಸ್ತುತಪಡಿಸಿತ್ತು. ಫ್ರೀ ಬೇಸಿಕ್ಸ್ ಅಂತರಾಳ ಕೆದಕಿತ್ತು.

ಈ ಎಲ್ಲ ಪರ- ವಿರೋಧ ಅಭಿಪ್ರಾಯಗಳು ದಾಖಲಾಗುವುದಕ್ಕೆ ಸಮಯ ನೀಡಿದ್ದ ಟ್ರಾಯ್, ಈಗ ಕೇವಲ ಫ್ರೀ ಬೇಸಿಕ್ಸ್ ಗೆ ಮಾತ್ರವಲ್ಲದೇ, ಗ್ರಾಹಕರಿಗೆ ಡಾಟಾಗೆ ವಿಭಿನ್ನ ವೆಚ್ಚ ನಿಗದಿಪಡಿಸುವ ಯಾವುದೇ ಯೋಜನೆಯನ್ನು ಒಪ್ಪುವುದಿಲ್ಲ ಅಂತ ಸ್ಪಷ್ಟಪಡಿಸಿದೆ. ಹರಸಾಹಸ ಮಾಡಿ ಈ ಯೋಜನೆಗೆ ಒಪ್ಪಿಗೆ ಪಡೆಯುವ ಫೇಸ್ ಬುಕ್, ಏರ್ ಟೆಲ್ ಜೀರೊ ಹಾಗೂ ಇತರ ಕಂಪನಿಗಳ ಪ್ರಯತ್ನಕ್ಕೆ ಭಾರತ ಸರ್ಕಾರ ಸೊಪ್ಪು ಹಾಕಲಿಲ್ಲ. ಈ ಯೋಜನೆಯಿಂದ ಭಾರತದ ಕೋಟ್ಯಂತರ ಗ್ರಾಮೀಣ ಜನರಿಗೆ ಅಂತರಜಾಲ ಉಚಿತವಾಗಿ ತಲುಪುತ್ತದೆ ಎಂದು ಬಣ್ಣಿಸಿದ್ದ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರ ಪ್ರಸ್ತಾವವನ್ನು ಟ್ರಾಯ್ ಸಂಪೂರ್ಣವಾಗಿ ನಿರಾಕರಿಸಿದೆ.

ಅಷ್ಟೇ ಅಲ್ಲ..ಗ್ರಾಹಕರು ಬಳಸುವ ಡಾಟಾದ ದರವು ಏಕರೂಪವಾಗಿರಬೇಕು ಎಂದಿರುವ ಟ್ರಾಯ್, ಒಂದು ವೇಳೆ ಈ ನಿರ್ಧಾರವನ್ನು ಉಲ್ಲಂಘಿಸಿದ್ದಲ್ಲಿ ಪ್ರತಿ ದಿನಕ್ಕೆ 50 ಸಾವಿರ ದಂಡ ವಿಧಿಸುವುದಾಗಿ ಹೇಳಿದೆ.

ಈ ಫ್ರೀ ಬೆಸಿಕ್ಸ್ ಯೋಜನೆಯಲ್ಲಿ ಗ್ರಾಹಕರು ನಿರ್ದಿಷ್ಟ ಜಾಲತಾಣಗಳನ್ನು ಮಾತ್ರ ಬಳಸಬಹುದಿತ್ತು. ಉಳಿದ ಜಾಲತಾಣಗಳನ್ನು ಬಳಸಲು ವಿವಿಧ ಮೊತ್ತವನ್ನು ಪಾವತಿ ಮಾಡಬೇಕಿತ್ತು. ಆ ಮೂಲಕ ನೆಟ್ ನ್ಯೂಟ್ರಿಯಾಲಿಟಿಗೆ ತೀವ್ರ ಹೊಡೆತ ಬೀಳುವುದಲ್ಲದೇ, ಸಣ್ಣ ಪ್ರಮಾಣದ ಮಾಹಿತಿದಾರರು ಮತ್ತು ಸ್ಟಾರ್ಟ್ ಅಪ್ ಗಳಿಗೆ ಹೆಚ್ಚಿನ ಅನಾನುಕೂಲಗಳಾಗುತ್ತಿದ್ದವು. ಇವನ್ನೆಲ್ಲ ಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರ ಪ್ರಕಟಿಸಿರುವ ಟ್ರಾಯ್, ತಾನು ಜನಾಭಿಪ್ರಾಯದ ವಿರುದ್ಧ ಹೋಗಿ ಫೇಸ್ಬುಕ್ ನಂಥ ದೈತ್ಯ ಕಂಪನಿಗಳ ಪ್ರಭಾವಕ್ಕೆ ಮಣಿಯುವುದಿಲ್ಲ ಎಂಬ ಸಮಾಧಾನ ಮೂಡಿಸಿದೆ.

Leave a Reply