ಬೆಂಗಳೂರಲ್ಲಿ ಸಿಕ್ಕಿಬಿತ್ತು ಅಮೆರಿಕಕ್ಕೆ ಮಕ್ಕಳ ಕಳ್ಳಸಾಗಣೆ ಮಾಡ್ತಿದ್ದ ಜಾಲ, ಏನಿವರ ಕಳ್ಳ ಕಾರ್ಯವೈಖರಿ?

ಡಿಜಿಟಲ್ ಕನ್ನಡ ಟೀಮ್

ಅಮೆರಿಕದ ನಿರಾಶ್ರಿತರ ಶಿಬಿರದಲ್ಲಿರುವ ಅಸಲಿ ತಂದೆ-ತಾಯಿಯನ್ನು ಸೇರಲು ಅವರ ಮಕ್ಕಳನ್ನು ನಕಲಿ ತಂದೆ-ತಾಯಿ ಮೂಲಕ ಅಲ್ಲಿಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.

ದೇಶದ ನಾನಾ ಭಾಗಗಳಿಂದ ಮಕ್ಕಳನ್ನು ಬೆಂಗಳೂರಿಗೆ ಕರೆತಂದು, ನಕಲಿ ಅಪ್ಪ-ಅಮ್ಮನ ಜತೆ ಮಾಡಿ, ನಕಲಿ ದಾಖಲೆ ನೆರವಿನಿಂದ ಸೃಷ್ಟಿಸಿದ ಪಾಸ್ ಪೋರ್ಟ್, ವೀಸಾ ಆಧಾರದ ಮೇರೆಗೆ ಅಮೆರಿಕಕ್ಕೆ ಸಾಗಿಸುತ್ತಿದ್ದ ಹದಿನಾರು ಮಂದಿ ಬೆಂಗಳೂರು ಪೊಲೀಸರ ವಶದಲ್ಲಿದ್ದಾರೆ. ಇವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ.

ಈ ನಕಲಿ ದಂಪತಿ ಅಮೆರಿಕಕ್ಕೆ ಕರೆದೊಯ್ದಿದ್ದ ಮಕ್ಕಳಲ್ಲಿ ಒಬ್ಬರೂ ಭಾರತಕ್ಕೆ ವಾಪಾಸಾಗಿಲ್ಲ. ಅಲ್ಲಿ ಬಿಟ್ಟು ಬಂದ ಮಕ್ಕಳು ಎಲ್ಲಿ ಹೋದವು, ಏನಾದವೂ ಎಂಬುದು ಗೊತ್ತಿಲ್ಲ. ಅಮೆರಿಕದಲ್ಲಿ ಅವಧಿ ಮೀರಿದ ಮೇಲೂ ಅಕ್ರಮವಾಗಿ ನೆಲೆಸಿದ್ದ ತಪ್ಪಿಗೆ ಅಲ್ಲಿನ ಪೊಲೀಸರಿಂದ ಬಂಧಿತರಾಗಿ ನಿರಾಶ್ರಿತರ ತಾಣದಲ್ಲಿರುವ ನೈಜ ತಂದೆ-ತಾಯಿಗಳಿಗೆ ಈ ಮಕ್ಕಳನ್ನು ಕರೆದೊಯ್ಡು ಒಪ್ಪಿಸಲಾಗಿದೆ ಎಂಬುದು ಆರೋಪಿಗಳ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ ಹೀಗೆ ಕರೆದೊಯ್ದಿದ್ದ ಮಕ್ಕಳನ್ನು ನಿಜವಾಗಿಯೂ ಅವರ ತಂದೆ-ತಾಯಿ ಬಳಿ ಸೇರಿಸಲಾಗಿದೆಯೇ? ಅಮೆರಿಕದ ಪೊಲೀಸರ ಕಣ್ತಪ್ಪಿಸಿ ನಿರಾಶ್ರಿತ ಶಿಬಿರಗಳಿಗೆ ಮಕ್ಕಳನ್ನು ಸೇರಿಸುವುದು ಅಷ್ಟು ಸುಲಭವೇ? ಹೀಗೆ ಮಕ್ಕಳನ್ನು ಸೇರಿಸಲು ಅಲ್ಲಿರುವ ಜಾಲ ಯಾವುದು? ಈ ಜಾಲದ ಜತೆ ಅಲ್ಲಿನ ಪೊಲೀಸರು ಷಾಮೀಲಾಗಿದ್ದಾರೆಯೇ? ಈ ಮಕ್ಕಳನ್ನು ತಂದೆ-ತಾಯಿ ಬಳಿ ಸೇರಿಸಿರುವುದು ಸುಳ್ಳೇ? ಬದಲಿಗೆ ಅಮೆರಿಕದಲ್ಲಿರುವ ಲೈಂಗಿಕ ವಿಕೃತರ ತೃಷೆಗೆ ಬಲಿ ಕೊಡಲಾಗಿದೆಯೇ ಎಂಬುದು ಹೆಚ್ಚಿನ ತನಿಖೆಯಿಂದ ಗೊತ್ತಾಗಬೇಕಿದೆ.

ವ್ಯವಹಾರದ ಬಗೆ ಹೇಗೆ? : ಬೆಂಗಳೂರಿನ ಜಯಮಹಲ್ ನ ರುದ್ರ ಪ್ರತಾಪ್ ಸಿಂಗ್ ಮಕ್ಕಳ ಕಳ್ಳಸಾಗಣೆ ತಂಡದ ಮುಖ್ಯಸ್ಥ. ಒಂದು ಮಗು ಸಾಗಣೆಗೆ ಈತನಿಗೆ ಸಿಗುತ್ತಿದ್ದ ಕಮಿಷನ್ 10 ಲಕ್ಷ ರುಪಾಯಿ. ರುದ್ರ ಪ್ರತಾಪ್ ಸಿಂಗ್ ಏಜೆಂಟರು ಗುಜರಾತ್. ಬಿಹಾರ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಿಂದ 10 ರಿಂದ 14 ವಯಸ್ಸಿನ ಹೆಣ್ಣು/ಗಂಡು ಮಕ್ಕಳನ್ನು ಬೆಂಗಳೂರಿಗೆ ಕರೆತರುತ್ತಿದ್ದರು. ಹಾಗೆ ತಂದ ಮಕ್ಕಳನ್ನು ನಕಲಿ ದಂಪತಿ ಜತೆ ವಿಂಗಡಿಸಿ ಮನೆಯೊಂದರಲ್ಲಿಟ್ಟು, ಕುಟುಂಬ ಸದಸ್ಯರಂತೆ ವರ್ತಿಸುವ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ತಲಾ ದಂಪತಿ ಜತೆ ಇಬ್ಬರು-ಮೂವರು ಮಕ್ಕಳಂತೆ ಗುಂಪು ಮಾಡಲಾಗುತ್ತಿತ್ತು. ನಂತರ ನಕಲಿ ಜನನ ಪ್ರಮಾಣ ಪತ್ರ, ಬಾಡಿಗೆ ಕರಾರು ಒಪ್ಪಂದ, ಪಡಿತರ ಚೀಟಿ, ಮತದಾರರ ಚೀಟಿ ಸೃಷ್ಟಿಸಿ, ಅದರ ಆಧಾರದ ಮೇರೆಗೆ ಇವರೆಲ್ಲರಿಗೂ ಪಾಸ್ ಪೋರ್ಟ್ ಸಿದ್ಧಪಡಿಸುತ್ತಿತ್ತು. ನಂತರ ತಮಿಳುನಾಡಿನಲ್ಲಿರುವ ಮತ್ತೊಂದು ತಂಡ ವ್ಯಾಪಾರ, ಪ್ರವಾಸ ಉದ್ದೇಶದ ವೀಸಾ ರೆಡಿ ಮಾಡಿಸಿ ಅಮೆರಿಕಕ್ಕೆ ಕಳುಹಿಸುತ್ತಿತ್ತು. ಈ ದಂಪತಿಗಳು ಅಮೆರಿಕದಲ್ಲಿ ಇಳಿದ ವಾರದೊಳಗೆ ಕೆಲವು ಸಂದರ್ಭಗಳಲ್ಲಿ ಎರಡೇ ದಿನದೊಳಗೇ ಮಕ್ಕಳನ್ನು ಅಲ್ಲೇ ಬಿಟ್ಟು ಭಾರತಕ್ಕೆ ಮರಳಿವೆ. ಈ ದಂಪತಿಗೂ ಕೂಡ ಒಂದು ಪ್ರವಾಸಕ್ಕಿಷ್ಟು, ಕರೆದೊಯ್ಯುವ ಒಂದು ಮಗುವಿಗಿಷ್ಟು ಎಂದು ಧನಸಂದಾಯ ಆಗುತ್ತಿತ್ತು.

ಯಾರಾದರೂ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಪ್ರವಾಸ ಹೋದರೆ ಹತ್ತೈನೈದು ದಿನವಾದರೂ ಅಮೆರಿಕದಲ್ಲಿದ್ದು ಬರುವುದು ವಾಡಿಕೆ. ಅದು ಹಾಳಾಗಿ ಹೋಗಲಿ. ಈ ನಕಲಿ ದಂಪತಿ ತಂಡ ವೀಸಾ ಪಡೆಯುವಾಗ ಉಲ್ಲೇಖಿಸುತ್ತಿದ್ದಷ್ಟು ದಿನವೂ ಅಲ್ಲಿರುತ್ತಿರಲಿಲ್ಲ. ಜತೆಗೆ ಇವರು ಅಮೆರಿಕದಲ್ಲಿ ಉಳಿದುಕೊಳ್ಳಲು ನೀಡುತ್ತಿದ್ದ ವಿಳಾಸದಲ್ಲಿಯೂ ಇರುತ್ತಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅಪ್ಪ-ಅಮ್ಮನಿಗೂ ಅವರ ಜತೆಯಲ್ಲಿ ತೆರಳುತ್ತಿದ್ದ ಮಕ್ಕಳಿಗೂ ಮುಖಚರ್ಯೆಯಲ್ಲಾಗಲಿ, ಮೈಬಣ್ಣದಲ್ಲಾಗಲಿ ಯಾವುದೇ ಹೋಲಿಕೆ ಇರುತ್ತಿರಲಿಲ್ಲ. ಇದು ಅನೇಕ ಅನುಮಾನಗಳಿಗೆ ಆಸ್ಪದ ನೀಡಿತ್ತು. ಅದರ ಬೆನ್ನಲ್ಲೇ ತನಿಖೆ ಕೈಗೊಂಡ ಪೊಲೀಸರು ಗಿರಿನಗರ, ಬನಶಂಕರಿ, ವಿಜಯನಗರ, ಶಿವಾಜಿನಗರ, ಬಾಣಸವಾಡಿ, ಬೈಯಪ್ಪನಹಳ್ಳಿ ಸೇರಿದಂತೆ ಬೆಂಗಳೂರಿನ ನಾನಾ ಕಡೆ ದಾಳಿ ಮಾಡಿ 16 ಮಂದಿ ಬಂಧಿಸಿದ್ದಾರೆ.

Leave a Reply