ಸ್ತ್ರೀ ಸಂವೇದನೆ ಚರ್ಚೆಗಳಲ್ಲಿ ತುರ್ತಾಗಿ ಸೇರಬೇಕಿರುವ ಎರಡು ಸಂಗತಿಗಳು

ಡಿಜಿಟಲ್ ಕನ್ನಡ ಟೀಮ್

1

ಇತ್ತೀಚೆಗೆ ಗುರಂಗಾವ್ ನಲ್ಲಿ ಪೊಲೀಸ್ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಹಾಗೂ ಸಿಆರ್ ಪಿಎಫ್ ಜಂಟಿಯಾಗಿ ಆಯೋಜನೆಯಲ್ಲಿ ಮಹಿಳಾ ಪೋಲೀಸರ 7 ನೇ ರಾಷ್ಟ್ರಿಯ ಸಮ್ಮೇಳನ ನಡೆಯಿತು. ಎಲ್ಲ ಸಮ್ಮೇಳನಗಳಲ್ಲಿ ಆಗುವಂತೆ ಸಮೀಕ್ಷಾ ವರದಿಗಳು- ಶಿಫಾರಸುಗಳು ಸಲ್ಲಿಕೆ ಆದವು. ಆ ಪೈಕಿ ಒಂದು ಸಮೀಕ್ಷಾ ವರದಿ ಮಾತ್ರ ಸರ್ಕಾರದ ಸಂವೇದನೆ ತಾಗಲೇಬೇಕು.

ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿ ಮತ್ತು ನಿಯೋಜನೆಗೊಂಡ ಪ್ರದೇಶಗಳಲ್ಲಿ ಮಹಿಳಾ ಸಿಬ್ಬಂದಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ ಮತ್ತು ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆ ಸಿಗುತ್ತಿಲ್ಲ ಎಂಬ ಅಳಲು ವ್ಯಕ್ತವಾಗಿದೆ.

ಈ ಹಿಂದೆ ಹಲವು ಮಹಿಳಾ ಪೇದೆಗಳಿಂದ ಹಿಡಿದು ಮಹಿಳಾ ಡಿಜಿಪಿ ಹುದ್ದೆಯ ಪೋಲೀಸರನ್ನು ಅಧ್ಯಯನಕ್ಕೆ ಒಳಪಡಿಸಿ ಇವರು ನೀಡಿರುವ ಮಾಹಿತಿ ಮತ್ತು ಸಲಹೆಗಳನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಸ್ಥಳಾವಕಾಶ ಕಲ್ಪಿಸಬೇಕು, ಆಗ ಮಾತ್ರ ಮಹಿಳಾ ಸಿಬ್ಬಂದಿಗಳು ಏಕಾಂತದಿಂದ ವಿಶ್ರಾಂತಿ ಪಡೆಯಲು ಸಾಧ್ಯ ಎಂದಿದ್ದಾರೆ ಸಮೀಕ್ಷೆಯ ರೂವಾರಿ ಮತ್ತು ಐಪಿಎಸ್ ಅಧಿಕಾರಿ ರೇಣುಕಾ ಮಿಶ್ರಾ.

ಸಮೀಕ್ಷೆಗೆ ಒಳಪಡಿಸಿದ್ದ 334 ಮಹಿಳಾ ಸಿಬ್ಬಂದಿಯೊಂದಿಗೆ ಚರ್ಚಿಸಿರುವ ಪೊಲೀಸ್ ಅಧಿಕಾರಿ ಸೀಮಾ ಬಾಲ್, ಹೈದರಾಬಾದ್ ನ ರಾಷ್ಟ್ರೀಯ ಪೋಲೀಸ್ ಅಕಾಡೆಮಿ, ಪಂಜಾಬ್ ಪೊಲೀಸ್ ಪಡೆ, ಉತ್ತರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಷಾ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ಸಂಸದಿಯ ಸ್ಥಾಯಿ ಸಮಿತಿ ಮತ್ತು ಎರಡನೆ ಆಡಳಿತಾತ್ಮಕ ಸುಧಾರಣಾ ಆಯೋಗ ಈ ವಿಷಯಗಳ ಬಗ್ಗೆ ವರದಿಯನ್ನು ಸಿದ್ಧಗೊಳಿಸಿದೆ ಎಂದಿದ್ದಾರೆ.

ಈ ಸಮೀಕ್ಷೆ ಪ್ರಕಾರ ಸೌಲಭ್ಯಗಳಿಲ್ಲದ ಕಡೆ ದಿರ್ಘಾವಧಿಯವರೆಗೆ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಶುಚಿತ್ವಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಬಗ್ಗೆ ವರದಿಯಾಗಿದೆ.

2

ಫೆಬ್ರವರಿ 6ನ್ನು ವಿಶ್ವಸಂಸ್ಥೆಯು ‘ಮಹಿಳಾ ಲಿಂಗಚ್ಛೇದದ ವಿರುದ್ಧ ಶೂನ್ಯ ಸಹಿಷ್ಣುತೆ’ ದಿನವನ್ನಾಗಿ ಆಚರಿಸಿತು. ಏನಿದು ಲಿಂಗಚ್ಛೇದ? ಕೆಲವು ಸಮುದಾಯದಲ್ಲಿ ಪುರುಷರ ವಿಚಾರದಲ್ಲಿ ಆಚರಿಸುವ ಪದ್ಧತಿಗೆ ವೈದ್ಯಕೀಯ ಲಾಭದ ಕಾರಣವಿದೆ. ಆದರೆ, ಹಲವು ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಮಹಿಳೆಯ ಲಿಂಗಚ್ಛೇದದ ಕ್ರೂರ ಪದ್ಧತಿಯಿಂದ ಯಾವ ವೈಜ್ಞಾನಿಕ, ವೈದ್ಯಕೀಯ ಲಾಭಗಳೂ ಇಲ್ಲ.

A traditional female circumciser in a remote village in Kenya's

ಮಹಿಳೆಯರ ಜನನಾಂಗವನ್ನು ಬಲವಂತವಾಗಿ ಸೀಳುವ ಅನಿಷ್ಟ ಪದ್ಧತಿ ಈಜಿಪ್ಟ್, ಇಥಿಯೋಪಿಯಾ ಮತ್ತು ಇಂಡೋನೇಷ್ಯ ಸೇರಿದಂತೆ ಪ್ರಪಂಚದ 30 ರಾಷ್ಟಗಳ ಬುಡಕಟ್ಟು ಜನರಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. 14 ವರ್ಷದ ಬಾಲಕಿಯರು ಅ ಕೃತ್ಯಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಯುನಿಸೆಫ್ ವರದಿ ಹೇಳುತ್ತದೆ.

ಈ ಅನಿಷ್ಟ ಪದ್ಧತಿಯನ್ನು 2006 ರಲ್ಲೇ ಶಿಕ್ಷಾರ್ಹ ಅಪರಾಧವಾಗಿಸಿದ್ದರೂ, ಯನಿಸೆಫ್ ನ ಹಿಂದಿನ ವರದಿಗಿಂತ ಪ್ರಸ್ತುತ ವರದಿಯ ಅಂಕಿ ಅಂಶಗಳು ಏರಿಕೆ ಕಂಡಿವೆ. ಈ ಹಿಂದೆ 125 ಮಿಲಿಯನ್ ನಷ್ಟಿದ್ದ ಇಂತಹ ಪ್ರಕರಣಗಳು ಈಗ 200 ಮಿಲಿಯನ್ ತಲುಪಿವೆ. ಏರಿಕೆಯಾಗಿರುವ ಜನಸಂಖ್ಯೆಯೂ ಇದಕ್ಕೆ ಕಾರಣ ಎನ್ನಬಹುದಾದರೂ ಈ ಬಗ್ಗೆ ಇನ್ನೂ ಜಾಗೃತಿ ಮೂಡದಿರುವುದು ವಿಷಾದಕರ.

ಭಾರತದ ಉತ್ತರಭಾಗದಲ್ಲಿರುವ ಬೋಹ್ರಾ ಸಮುದಾಯದಲ್ಲಿ ಈ ಅಮಾನುಷ ಪದ್ಧತಿ ಜಾರಿಯಲ್ಲಿದೆ. ಶಿಯಾ ಮುಸ್ಲಿಮರ ಪಂಗಡವಿದು. ಇಂಥ ಲಿಂಗಚ್ಛೇದ ಸಂತ್ರಸ್ತೆ ಮಸೂಮಾ ರಣಾಲ್ವಿ ಎಂಬುವವರು ಇದನ್ನು ವಿರೋಧಿಸಿ ಆರಂಭಿಸಿರುವ ಆನ್ ಲೈನ್ ಪಿಟಿಷನ್ ಗೆ ನಲ್ವತ್ತು ಸಾವಿರಕ್ಕೂ ಹೆಚ್ಚು ಸಹಿಗಳು ದೊರೆತಿವೆ.

ನೋವು ನಿವಾರಣಾ ಮದ್ದು ನೀಡದೆ ಜನನಾಂಗವನ್ನು ಕತ್ತರಿಸುವ ಭಯಾನಕ ರಿವಾಜು ಇದು. ನೋವು ಒಂದೆಡೆಯಾದರೆ ಸೋಂಕು ಹರಡದಂತೆ ಯಾವ ಮುನ್ನೆಚ್ಚರಿಕೆಯನ್ನೂ ವಹಿಸದ ಅಮಾನುಷತೆ ಇನ್ನೊಂದೆಡೆ. ಇದರಿಂದ ಹಲವು ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಈ ಸಂದರ್ಭದಲ್ಲಿ ಸಾಕಷ್ಟು ರಕ್ತಸ್ರಾವ ಆಗುತ್ತದೆ. ಮಗುವಿನ ಜನನದ ಸಂದರ್ಭದಲ್ಲಿ ಹೆಚ್ಚು ತೊಂದರೆ ಅನುಭವಿಸುತ್ತಾರೆ.

Leave a Reply