ಹೆಡ್ಲಿ ಹೇಳಿಕೆ ಇಟ್ಕೊಂಡು ಪಾಕಿಸ್ತಾನಕ್ಕೆ ಉಗಿಯೋದು ಸುಲಭ, ಪ್ರಶ್ನಿಸಬೇಕಿರೋದು ಅಮೆರಿಕ ಎಷ್ಟ್ ಸುಭಗ?

ಡಿಜಿಟಲ್ ಕನ್ನಡ ಟೀಮ್

2008ರ ಮುಂಬೈ ದಾಳಿ ಪ್ರಕರಣ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐನ ಕರಾರುವಾಕ್ ಯೋಜನೆಯೊಂದಿಗೇ ನಡೆದಿತ್ತು, ಇದರ ಅನುಷ್ಠಾನದಲ್ಲಿ ತಾನೂ ಭಾಗಿಯಾಗಿದ್ದೆ ಅಂತ ಅಮೆರಿಕದ ಡೇವಿಡ್ ಕೋಲ್ಮನ್ ಹೆಡ್ಲಿ, ಭಾರತದ ನ್ಯಾಯಾಲಯದ ಎದುರಿನ ವಿಡಿಯೋ ವಿಚಾರಣೆಯಲ್ಲಿ ಅಧಿಕೃತವಾಗಿ ಸೋಮವಾರ ಒಪ್ಪಿಕೊಂಡಿದ್ದಾನೆ.

ಮುಂಬಯಿ ದಾಳಿ ಪ್ರಕರಣದಲ್ಲೇ ಸದ್ಯ ಅಮೆರಿಕದಲ್ಲಿ 35 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಡೇವಿಡ್ ಹೆಡ್ಲಿ ಈಗ ಬಹಿರಂಗಗೊಳಿಸಿರುವ ಸತ್ಯ ಅತ್ಯಂತ ಸ್ಫೋಟಕ ಎಂಬಂತೆ ಮಾಧ್ಯಮಗಳು ವ್ಯಾಖ್ಯಾನಿಸುತ್ತಿವೆ. ಆದರೆ, 2010ರಲ್ಲೇ ಅಮೆರಿಕದ ವಿಚಾರಣಾಧಿಕಾರಿಗಳಿಗೆ ನೀಡಿದ್ದ ತಪ್ಪೊಪ್ಪಿಗೆಯ ಅಂಶದಲ್ಲಿರುವುದನ್ನೇ ಇಲ್ಲಿ ಪುನರುಚ್ಛರಿಸಿದ್ದಾನೆ ಅಷ್ಟೆ. ಹೆಡ್ಲಿ ತಪ್ಪೊಪ್ಪಿಗೆ ವಿದ್ಯಮಾನದ ಎಲ್ಲ ಹೈಪ್ ಗಳನ್ನು ಬದಿಗಿರಿಸಿ ನಾವು ತಿಳಿದುಕೊಳ್ಳಬೇಕಾದ ಮಹತ್ವದ ಅಂಶಗಳು ಯಾವವು?

  • ಮುಂಬಯಿ ದಾಳಿ ಪ್ರಕರಣದಲ್ಲಿ ಪಾಕಿಸ್ತಾನ ಭಾಗವಹಿಸಿತ್ತು ಎಂಬುದಕ್ಕೆ ಅದಾಗಲೇ ನಮ್ಮಲ್ಲಿ ಮೂಟೆಗಟ್ಟಲೇ ಸಾಕ್ಷ್ಯಗಳಿದ್ದವು. ಅದಕ್ಕೆ ಹೆಡ್ಲೀದು ಇನ್ನೊಂದು ಸೇರ್ಪಡೆ ಅಷ್ಟೆ. ಹೆಡ್ಲಿ ಹೇಳಿರುವುದರಲ್ಲಿ ಮುಖ್ಯವಾಗಿ ಗಣನೆಗೆ ಬರುವಂಥದ್ದು- ತಾನು ಲಷ್ಕರೆ ತೊಯ್ಬಾ ಸಂಘಟನೆ ಪರವಾಗಿಯೇ ಕೆಲಸ ಮಾಡಿದ್ದಾಗಿ ಆತ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾನೆ. ಲಷ್ಕರೆ ಮುಖ್ಯಸ್ಥ ಹಫೀಜ್ ಸಯ್ಯದ್,  ಸಾಜಿದ್ ಮಿರ್ ಐಎಸ್ ಐ ನ ಮೇಜರ್ ಇಕ್ಬಾಲ್ ಅವರ ಹೆಸರುಗಳನ್ನು ಹೆಡ್ಲಿ ಹೇಳಿದ್ದಾನೆ. ಆ ಮೂಲಕ ಮುಂಬಯಿ ದಾಳಿಯಲ್ಲಿ ಪಾಕಿಸ್ತಾನದ ನೇರ ಕೈವಾಡ ಇತ್ತು ಎಂಬುದನ್ನು ಆತ ಅನುಮೋದಿಸಿದ್ದಾನೆ.
  • ಅಮೆರಿಕದಲ್ಲಿ ಅದಾಗಲೇ ಹೆಡ್ಲಿಗೆ ಶಿಕ್ಷೆಯಾಗಿದೆ. ಭಾರತವು ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವುದಕ್ಕೆ ಒಪ್ಪಿದ ನಂತರವಷ್ಟೇ ಹೆಡ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆಗೆ ಒಪ್ಪಿಕೊಂಡ. ಹೀಗಾಗಿ ಆತನ ವಿಷಯದಲ್ಲಿ ಭಾರತ ಇನ್ನೇನೂ ಮಾಡುವುದಕ್ಕೆ ಉಳಿದಿಲ್ಲ. ನೋಡಿ ಪಾಕಿಸ್ತಾನ ದುಷ್ಟ ರಾಷ್ಟ್ರ ಅಂತ ನಾವು ಮೊದ್ಲೇ ಹೇಳಿದ್ವಿ ಅಂತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತುಸು ಒತ್ತಡ ಸೃಷ್ಟಿಸೋದಕ್ಕೆ ಹೆಡ್ಲಿ ತಪ್ಪೊಪ್ಪಿಗೆ ಸಹಾಯ ಮಾಡುತ್ತದೆ ಅಷ್ಟೆ.
  • ಪಾಕಿಸ್ತಾನದ ಕತೆ ಗೊತ್ತಿದ್ದದ್ದೇ. ಡೇವಿಡ್ ಹೆಡ್ಲಿ ಅದೇನೋ ‘ಸ್ಫೋಟಕ ಮಾಹಿತಿ’ ಹೊರಗೆಡವಿಬಿಟ್ಟ ಅಂತ ಪುಳಕಗೊಳ್ಳೋದು ನಮ್ಮ ಚಿಲ್ಲರೆ ಸಂಭ್ರಮವಾಗುತ್ತದೆ ಅಷ್ಟೆ. ಇಷ್ಟಕ್ಕೂ ಜಗತ್ತು ತಲೆಕೆಡಿಸಿಕೊಳ್ಳಬೇಕಿರೋದು ಹೆಡ್ಲಿಯಂಥ ‘ಡಬಲ್ ಏಜೆಂಟ್’ ವಿದ್ಯಮಾನದ ಬಗ್ಗೆ. ಈ ಡೇವಿಡ್ ಕೋಲ್ಮನ್ ಹೆಡ್ಲಿ ಅಮೆರಿಕ ಪರವಾಗಿ ಪಾಕ್ ಮತ್ತು ಅಫ್ಘನ್ ಗಳಲ್ಲಿ ಮಾದಕದ್ರವ್ಯಜಾಲದ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗುತ್ತಿದೆಯಾದ್ರೂ ಈ ಬಗ್ಗೆ ಅನುಮಾನಗಳಿವೆ. ತಾನು ಲಷ್ಕರ್ ತೊಯ್ಬಾದ ಹಫೀಜ್ ಸಯೀದ್ ಭಾಷಣ ಕೇಳಿ ಪ್ರೇರೇಪಿತನಾಗಿದ್ದಾಗಿ ಹೆಡ್ಲಿ ಹೇಳುತ್ತಾನೆ.
  • ಇಲ್ಲೇ ಇರೋದು ಅಪಾಯ. ಭಾರತಕ್ಕೆ ಪಾಕಿಸ್ತಾನಿಯೊಬ್ಬ ಬಂದರೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಕಣ್ಣಿಡಬಹುದು. ಆದರೆ ಅಮೆರಿಕ ಪ್ರಜೆಯೊಬ್ಬ ಪಾಕಿಸ್ತಾನದ ಪರವಾಗಿ ಭಾರತಕ್ಕೆ ಬಂದು ಮುಂಬಯಿಯಲ್ಲಿ ದಾಳಿ ಆಯೋಜಿಸಿ, ಉದ್ದೇಶಿತ ದಾಳಿಗುರಿಗಳ ಫೋಟೋ- ಮಾಹಿತಿ ತೆಗೆದುಕೊಂಡು ಹೋಗುವುದು ನಿರೀಕ್ಷೆಗೆ ಮೀರಿದ್ದು. ಹೆಡ್ಲಿ ಮಾಡಿರೋದು ಅದನ್ನೇ. ಸೋಮವಾರದ ವಿಚಾರಣೆಯಲ್ಲಿ ಸರ್ಕಾರಿ ವಕೀಲರು ‘ನೀನು ಏಳು ಬಾರಿ ಭಾರತಕ್ಕೆ ಬಂದಿದ್ದೆ’ ಎಂದು ಆರೋಪ ಹೊರೆಸಿದಾಗ, ‘ಏಳಲ್ಲ, ಎಂಟು ಬಾರಿ ಭಾರತಕ್ಕೆ ಬಂದಿದ್ದೆ’ ಎಂದು ತಿದ್ದಿದ! ಈ ಪೈಕಿ ಬಹುತೇಕ ಬಾರಿ ಪಾಕಿಸ್ತಾನದಿಂದ ಹಾಗೂ ಒಂದು ಬಾರಿ ದುಬೈನಿಂದ ಭಾರತಕ್ಕೆ ಆಗಮಿಸಿದ್ದ ಹೆಡ್ಲಿ, ದಾಳಿಯ ನಂತರ ಒಂದು ಬಾರಿ ಲಾಹೋರ್ ನಿಂದ ಭಾರತಕ್ಕೆ ಆಗಮಿಸಿದ್ದಾಗಿ ಹೇಳಿದ.

ಈಗ ಹೇಳಿ… ಪಾಕಿಸ್ತಾನ ಪ್ರಾಯೋಜಿತವಾಗಿ ಮುಂಬಯಿ ದಾಳಿ ನಡೆಯಿತು ಎಂಬ ‘ಮಹಾನ್ ಸತ್ಯ’ ಹೇಳೋದಕ್ಕೆ ಡೇವಿಡ್ ಕೋಲ್ಮನ್ ಹೆಡ್ಲಿಯೇ ಆಗಬೇಕಾ? ಅಮೆರಿಕದಂಥ ಅಮೆರಿಕದ ಸುಳಿವಿಗೆ ಬಾರದಂತೆ ಹೆಡ್ಲಿಅಷ್ಟು ದೀರ್ಘ ಕಾಲಕ್ಕೆ ‘ಡಬಲ್ ಏಜೆಂಟ್’ ಆಗಿಬಿಟ್ಟನಾ? ಕೇವಲ ಪಾಕಿಸ್ತಾನದ ಬಗ್ಗೆ ಆಕ್ರೋಶಪಟ್ಟುಕೊಂಡಿರೋದನ್ನು ಬಿಟ್ಟು, ಹೆಡ್ಲಿ ವಿದ್ಯಮಾನ ಮುಂದಿಟ್ಟುಕೊಂಡು ಅಮೆರಿಕ- ಪಾಕಿಸ್ತಾನಗಳ ಅಪವಿತ್ರ ಮೈತ್ರಿ ಅಧ್ಯಾಯವನ್ನು ಎಚ್ಚರಿಕೆಯಿಂದ ನೋಡಬೇಕಿದೆ. ಅಂಥ ಎಚ್ಚರದ ಕಣ್ಣು ನಮಗೆ ಇನ್ನಷ್ಟು ಸತ್ಯಗಳನ್ನು ಸ್ಫೋಟಿಸೀತು.. ಅದುಬಿಟ್ಟು ಪಾಕಿಸ್ತಾನ ಸೈತಾನ ರಾಷ್ಟ್ರ ಅಂತ ಸರ್ಟಿಫಿಕೇಟು ಕೊಡೋದಕ್ಕೆ ಹೆಡ್ಲಿ ಆಗಬೇಕಿಲ್ಲ, ತುಸು ಬುದ್ಧಿ ಇರುವ ಎಲ್ಲರಿಗೂ ತಿಳಿಯೋ ವಿಷಯದಲ್ಲಿ ‘ಸ್ಫೋಟಕ’ ಮಾಹಿತಿ ಏನ್ಬಂತು?

Leave a Reply