ಔಷಧ ಉದ್ಯಮಕ್ಕೂ ಮೇಕ್ ಇನ್ ಇಂಡಿಯಾ ಸಮಯ, ಸ್ವಲ್ಪಕಾಲ ಸತ್ತು ಸಹಕರಿಸು ಓ ಜನಸಾಮಾನ್ಯ!

ಡಿಜಿಟಲ್ ಕನ್ನಡ ಟೀಮ್

ಕ್ಯಾನ್ಸರ್, ಎಚ್ ಐವಿ ಸೋಂಕು ಇಂಥ ರೋಗಗಳಿಗೆ ನಿರಂತರವಾಗಿ ಚಿಕಿತ್ಸೆ ಪಡೆಯೋದು ಈಗಿರೋ ಸ್ಥಿತಿಯಲ್ಲೂ ದುಬಾರಿಯೇ. ಮಧುಮೇಹ ಸಹ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆಯೇ ಆದರೂ ಉಪೇಕ್ಷಿಸಿದರೆ ಜೀವಕ್ಕೆ ಗಂಡಾಂತರ ತರುವಂಥದ್ದೇ.

ಇದೀಗ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಇಂಥ ಕಾಯಿಲೆಗಳಿಗೆ ಬಳಸುವ ಜೀವರಕ್ಷಕ ಔಷಧಗಳು ಅತಿ ದುಬಾರಿ ಆಗಲಿವೆ. ಈವರೆಗೂ ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗ್ತಿದ್ದ 76 ಪ್ರಮುಖ ಡ್ರಗ್ಸ್ ಗಳ ಮೇಲಿನ ಸುಂಕ ವಿನಾಯಿತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಅವುಗಳಲ್ಲಿ ಪ್ರಮುಖವಾಗಿ ಕ್ಯಾನ್ಸರ್, ಮಧುಮೇಹ, ಎಚ್ಐವಿ ಮತ್ತು ಇತರೆ ಪ್ರಮುಖ ಕಾಯಿಲೆಗಳಿಗೆ ಸಂಬಂಧಿಸಿದ ಜೀವರಕ್ಷಕ ಔಷಧಗಳ ಉತ್ಪನ್ನಗಳಾಗಿವೆ. ಸರ್ಕಾರ 2012ರಿಂದ ಈ ಉತ್ಪನ್ನಗಳಿಗೆ ಶೇ.10ರಷ್ಟು ಸುಂಕ ವಿನಾಯಿತಿ ನೀಡುತ್ತಿತ್ತು. ಇತರೆ ಯೋಜನೆಗಳ ಮೂಲಕ ಶೇ.5ರಷ್ಟು ವಿನಾಯಿತಿ ಇತ್ತು. ಈಗ ಎಲ್ಲ ಬಗೆಯ ವಿನಾಯಿತಿಯನ್ನು ತೆಗೆದು ಹಾಕಿರುವುದು ಸಹಜವಾಗಿಯೇ ಈ ಔಷಧಗಳ ಬೆಲೆ ಏರಿಕೆಗೆ ದಾರಿ ಮಾಡಿಕೊಡಲಿದೆ.

ಏಕೀ ನಿರ್ಧಾರ? ಇದು ಮೋದಿ ಸರ್ಕಾರದ ‘ಮೇಕ್ ಇನ್ ಇಂಡಿಯಾ’ದ ಒಂದು ಭಾಗವೆಂದು ವ್ಯಾಖ್ಯಾನಿಸಲಾಗುತ್ತಿದೆ. ಅಂದರೆ, ಈ ಜೀವರಕ್ಷಕ ಔಷಧಗಳನ್ನು ಹಾಗೂ ಈ ಐಷಧ ನಿರ್ಮಾಣಕ್ಕೆ ಬೇಕಾಗುವ ಬೇರೆ ಬೇರೆ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿರುವಷ್ಟು ದಿನವೂ ಈ ನಿಟ್ಟಿನಲ್ಲಿ ಭಾರತದಲ್ಲಿ ಸಂಶೋಧನೆಗಳಾಗುವುದಿಲ್ಲ. ಈ ಜೀವರಕ್ಷಕ ಔಷಧಗಳನ್ನು ಸ್ಥಳೀಯ ಕಂಪನಿಗಳೇ ಉತ್ಪಾದಿಸುವಂಥ ವಾತಾವರಣ ನಿರ್ಮಾಣವಾದರೆ ದೀರ್ಘಾವಧಿಯಲ್ಲಿ ಅದು ದೇಶವನ್ನು ಸ್ವಾವಲಂಬಿಯಾಗಿಸುತ್ತದೆ.

ಆದರೆ…

ಸಂಶೋಧನೆ- ಸುಧಾರಣೆ ಇವಕ್ಕೆಲ್ಲ ಸ್ಥಳೀಯ ಕಂಪನಿಗಳು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ. ಅಲ್ಲದೇ ಪ್ರಾರಂಭದಲ್ಲಿ ಉತ್ಪನ್ನಗಳನ್ನು ಅಗ್ಗದಲ್ಲಿ ಪೂರೈಸುವುದೂ ಕಷ್ಟಸಾಧ್ಯ. ಈ ಅವಧಿಯಲ್ಲಿ ಎಲ್ಲ ಬಿಸಿ ತಾಗೋದು ಮಾತ್ರ ರೋಗಿಗಳಿಗೆ, ಜನಸಾಮಾನ್ಯರಿಗೆ. ಇದೇ ಕಾರಣದಿಂದಲೇ ಇತ್ತೀಚೆಗೆ ಸರ್ಕಾರ, ವೈದ್ಯಕೀಯ ಸಲಕರಣೆಗಳ ಆಮದು ಮೇಲಿನ ಸುಂಕವನ್ನು ಹೆಚ್ಚಿಸಿತ್ತು. ಈ ನಿರ್ಧಾರವನ್ನು ಸ್ಥಳೀಯ ವೈದ್ಯಕೀಯ ಸಲಕರಣೆಗಳ ಉತ್ಪಾದಕರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದು, ಬಹು ರಾಷ್ಟ್ರೀಯ ಕಂಪನಿಗಳು ಆಕ್ಷೇಪಿಸಿದ್ದವು.

ಸದ್ಯ ಔಷಧ ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸುವ ಕಂಪನಿಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಉತ್ತಮವಾಗಿ ಕಾಣುತ್ತದೆ. ಆದರೆ, ಈ ಸ್ಥಳೀಯ ಉತ್ಪಾದಕರು ಈ ಕಾಯಿಲೆಗಳಿಗೆ ಔಷಧಗಳನ್ನು ಉತ್ಪಾದಿಸಿ ಗ್ರಾಹಕರಿಗೆ ಮತ್ತೆ ಕಡಿಮೆ ದರದಲ್ಲಿ ಮಾರಾಟ ಮಾರುವವರೆಗೂ, ರೋಗಿಗಳು ದುಬಾರಿ ಔಷಧಗಳನ್ನು ಪಡೆಯಲು ಪರದಾಟ ನಡೆಸಬೇಕಾಗಿದೆ.

Leave a Reply