ಕುಂಬ್ಳೆ ಕಾಮೆಂಟ್ರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೆ?

 

ಡಿಜಿಟಲ್ ಕನ್ನಡ ಟೀಮ್

ಮಾಜಿ ಕ್ರಿಕೆಟಿಗರು ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳುವುದು ಈಗ ಸರ್ವೇ ಸಾಮಾನ್ಯ. ಆದರೆ, ಕಾಮೆಂಟೇಟರ್ ಆಗಿ ಯಾರು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಕುತೂಹಲ ಸಹಜವಾಗಿ ನಿಮ್ಮಲ್ಲಿರುತ್ತದೆ. ಸದ್ಯ ಬಿಸಿಸಿಐ ಕಳೆದ ವರ್ಷ ಭಾರತದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕರ್ನಾಟಕದ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಮತ್ತು ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರಿಗೆ ನೀಡಲಾದ ಸಂಭಾವನೆಯನ್ನು ಬಿಸಿಸಿಐ ಪ್ರಕಟಿಸಿದೆ. ಆ ಸರಣಿಯಲ್ಲಿ ಅನಿಲ್ ಕುಂಬ್ಳೆ ಅವರಿಗೆ ಬಿಸಿಸಿಐ 39 ಲಕ್ಷ ಹಾಗೂ ಮಂಜ್ರೆಕರ್ ಅವರಿಗೆ 36 ಲಕ್ಷ ಸಂಭಾವನೆ ನೀಡಿದೆ. ಕುಂಬ್ಳೆ ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ 39 ಲಕ್ಷ ಪಡೆದರೆ, ಮಂಜ್ರೆಕರ್ ಕೇವಲ ಟೆಸ್ಟ್ ಸರಣಿಗಾಗಿ ಈ ಸಂಭಾವನೆ ಬಾಚಿಕೊಂಡಿದ್ದಾರೆ.

ಅರೆ, ಒಂದು ಸರಣಿ ಕಾಮೆಂಟರಿಗೆ ಇಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಅಚ್ಚರಿ ಪಡಬೇಡಿ. ಕಾರಣ, ಮಾಜಿ ನಾಯಕರಾದ ಸುನೀಲ್ ಗವಾಸ್ಕರ್ ಮತ್ತು ರವಿಶಾಸ್ತ್ರಿ ಪಡೆದ ಮೊತ್ತ ಕೇಳಿದರೆ ನೀವು ಗಾಬರಿಯಾಗಬಹುದು. 2013ರ ವೇಳೆಯಲ್ಲಿ ಪ್ರತಿ ವರ್ಷಕ್ಕೆ ಬಿಸಿಸಿಐ ವೀಕ್ಷಕ ವಿವರಣೆಗಾರರಾಗಿ ಈ ಇಬ್ಬರೂ ಮಾಜಿ ಆಟಗಾರರು ತಲಾ 4 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆ ಮೂಲಕ ಇವರು ಬಿಸಿಸಿಐನಿಂದ ಆಟಗಾರರಿಗಿಂತಲೂ ಹೆಚ್ಚು ವಾರ್ಷಿಕ ಸಂಭಾವನೆ ಪಡೆದಿದ್ದರು.

ಬಿಸಿಸಿಐನಲ್ಲಿ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಶಶಾಂಕ್ ಮನೋಹರ್ ಅಧ್ಯಕ್ಷರಾದ ನಂತರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಈಗ ಜನವರಿಯಲ್ಲಿ ಬಿಸಿಸಿಐ ಪಾವತಿ ಮಾಡಿರುವ ಹಣದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಆ ಪೈಕಿ ಬಿಸಿಸಿಐ, ಐಪಿಎಲ್ 9ನೇ ಆವೃತ್ತಿಗೆ ಸಂಬಂಧಿಸಿದಂತೆ ಯುಕೆ ಮೂಲದ ಇಂಟರ್ ನ್ಯಾಷನಲ್ ಮ್ಯಾನೆಜ್ಮೆಂಟ್ ಗ್ರೂಪ್ ಗೆ ಎರಡು ಹಂತದಲ್ಲಿ 11.6 ಕೋಟಿ ನೀಡಿದೆ. ಇನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸಂಬಂಧಿಸಿದಂತೆ 2.02 ಕೋಟಿ ರು. ನೀಡಿರುವುದಾಗಿ ಪ್ರಕಟಿಸಿದೆ.

Leave a Reply