ದೇವೇಗೌಡರ ಚಿಂತನೆಯ ಕಂದೀಲು ಕುಂದಿಸಿರುವ ಪಕ್ಷ ಮತ್ತು ಕುಟುಂಬ ರಾಜಕೀಯ ಒತ್ತಡ

author-thyagarajಪಕ್ಷ ಮತ್ತು ಕುಟುಂಬದ ಒಳ, ಹೊರಗಿನ ರಾಜಕೀಯ ಒತ್ತಡಗಳನ್ನು ಈ ಇಳಿವಯಸ್ಸಿನಲ್ಲಿ ಅರಗಿಸಿಕೊಳ್ಳಲಾಗದೆ ಬೇಸತ್ತು, ಹತಾಶರಾಗಿರುವ ಮಾಜಿ ಪ್ರಧಾನಿ ದೇವೇಗೌಡರ ವಾಗ್ಪ್ರಜ್ಞೆಯ ಕಂದೀಲು ಕುಂದಿ ಹೋಗಿದೆ. ಪಕ್ಷ ಕಟ್ಟಬೇಕೆಂಬ ಹಂಬಲಕ್ಕೆ ಸಹಕರಿಸದಿರುವ ವಯಸ್ಸು ಮತ್ತು ಆರೋಗ್ಯ ಅವರನ್ನು ಭ್ರಮನಿರಸನರನ್ನಾಗಿ ಮಾಡಿದೆ. ತಮ್ಮ ಮಾತು ಕೇಳದ ನಾಯಕರು, ಕುಟುಂಬ ಸದಸ್ಯರ ವರ್ತನೆಯಿಂದ ಆಂತರ್ಯದಲ್ಲಿ ಮಡುಗಟ್ಟಿರುವ ನೋವು ಸ್ಥಿಮಿತರಹಿತ ಮಾತುಗಳ ರೂಪದಲ್ಲಿ ಹೊರಹೊಮ್ಮುತ್ತಿವೆ.

ವಯಸ್ಸು ಎಂಬತ್ತೈದು ದಾಟಿದ ಗೌಡರಿಗೆ ಈಗೊಂದು ರೀತಿಯ ಅನಾಥ ಪ್ರಜ್ಞೆ ಕಾಡುತ್ತಿದೆ. ತಾವು ಕಟ್ಟಿ ಬೆಳೆಸಿದ ಪಕ್ಷವನ್ನು ಎತ್ತಿ ಆಡಿಸುವ ನಾಯಕರಿಲ್ಲ. ತಾವು ಎತ್ತಿ ಆಡಿಸಿದ ನಾಯಕರು ಕೈಗೆ ನಿಲುಕುತ್ತಿಲ್ಲ. ಮನೆಯ ಒಳಗಿನ ನಾಯಕರೂ ಮಾತು ಕೇಳುತ್ತಿಲ್ಲ. ಹೊರಗಿನ ನಾಯಕರು ಸಮೀಪಕ್ಕೆ ಸುಳಿಯುತ್ತಿಲ್ಲ. ಹೀಗಾಗಿ, ವ್ಯಾಯಾಮ ಮಾಡುವಾಗ ಬಿದ್ದು ಬೆನ್ನುಮೂಳೆ ಉಳುಕಿರುವ ಗೌಡರು ಹದಿನೈದು ದಿನ ವಿಶ್ರಾಂತಿ ಪಡೆಯಬೇಕೆಂಬ ವೈದ್ಯರ ಸಲಹೆಗೇ ವಿಶ್ರಾಂತಿ ಕೊಟ್ಟು, ಚುನಾವಣೆ ಪ್ರಚಾರ ನಿಮಿತ್ತ ಊರೂರು ತಿರುಗುತ್ತಿದ್ದಾರೆ. ಊರೂರು ತಿರುಗಬೇಕಾದ ನಾಯಕರು ವಿಶ್ರಾಂತಿ ಪಡೆಯುತ್ತಿದ್ದಾರೆ.

ಗೌಡರನ್ನು ಮಾನಸಿಕವಾಗಿ ಹಿಂಡಿ, ಹಿಪ್ಪೇಕಾಯಿ ಮಾಡುತ್ತಿರುವ ವಿಚಾರಗಳನ್ನು ನೋಡುವುದಾದರೆ, ಮೊದಲಿಗೆ ಅವರಿಗೆ ಮತ್ತೊಬ್ಬ ಸೊಸೆ ಭವಾನಿ ರೇವಣ್ಣ ಅವರು ಚುನಾವಣೆ ರಾಜಕೀಯಕ್ಕೆ ಬರುವುದು ಇಷ್ಟವಿರಲಿಲ್ಲ. ಅದನ್ನು ಹೇಳಿಯೂ ಹೇಳಿದ್ದರು. ಭವಾನಿ ಬದಲು ಪ್ರಜ್ವಲ್ ರೇವಣ್ಣ ಸ್ಪರ್ಧೆ ಅವರ ಇರಾದೆ ಆಗಿತ್ತು. ಮುಂದಿನ ಲೋಕಸಭೆ ಚುನಾವಣೆಗೆ ಪ್ರಜ್ವಲ್ ಕಣಕ್ಕಿಳಿಸುವುದು ಈಗಾಗಲೇ ನಿರ್ಣಯವಾಗಿದೆ. ಅದಕ್ಕೆ ತಾಲೀಮಾದರೂ ಆಗುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಆಗಿದ್ದೇ ಬೇರೆ. ಭವಾನಿ ಅವರು ಸ್ಪರ್ಧಿಸಿರುವ ಹೊಳೇನರಸೀಪುರದ ಹಳೇಕೊಟೆ ವಾಸ್ತವವಾಗಿ ಗೌಡರ ರಾಜಕೀಯ ಜನ್ಮಭೂಮಿ. ಅವರು ತಾಲೂಕು ಪಂಚಾಯಿತಿ ಚುನಾವಣೆ ಮೂಲಕ ರಾಜಕೀಯ ಆರಂಭಿಸಿದ್ದು ಇಲ್ಲಿಂದಲೇ. ನಂತರ ರೇವಣ್ಣ ಕೂಡ ಇಲ್ಲಿಂದಲೇ ಚುನಾವಣೆ ರಾಜಕೀಯ ಆರಂಭಿಸಿದ್ದರು. ಇದೀಗ ಭವಾನಿ ಆ ಸಾಲಿನಲ್ಲಿದ್ದಾರೆ.

ವಾಸ್ತವವಾಗಿ, ಹಾಸನ ರಾಜಕೀಯದಲ್ಲಿ ಭವಾನಿ ಅವರದು ರೇವಣ್ಣ ಅವರಿಗಿಂತಲೂ ಒಂದು ಕೈ ಮಿಗಿಲಾದ ಛಾಪು. ಕ್ಷೇತ್ರದ ನಾಯಕರು, ಕಾರ್ಯಕರ್ತರು ಹಾಗೂ ಜನರ ಜತೆಗಿನ ಒಡನಾಟ ಅವರನ್ನು ಗಟ್ಟಿ ನಾಯಕರ ಸ್ಥಾನದಲ್ಲಿ ನಿಲ್ಲಿಸಿದೆ. ಇತ್ತೀಚಿನ ಮೇಲ್ಮನೆ ಚುನಾವಣೆಯಲ್ಲಿ ಪಟೇಲ್ ಶಿವರಾಂ ಬದಲು ಭವಾನಿ ಅವರೇ ಅಭ್ಯರ್ಥಿ ಆಗಿದ್ದಿದ್ದರೆ ಖಂಡಿತವಾಗಿಯೂ ಜೆಡಿಎಸ್ ಸೋಲುತ್ತಿರಲಿಲ್ಲ. ಅದು ಗೊತ್ತಿದ್ದರೂ ಗೌಡರು ಮತ್ತು ಕುಮಾರಸ್ವಾಮಿ ಟಿಕೆಟ್ ತಪ್ಪಿಸಿದ್ದರು. ಒಬ್ಬ ಸೊಸೆ ಅನಿತಾ ಕುಮಾರಸ್ವಾಮಿ ರಾಜಕೀಯಕ್ಕೆ ಬಂದಾಗಿದೆ. ಇನ್ನೊಬ್ಬ ಸೊಸೆ ಬರೋದು ಬೇಡ. ಜನ ಆಡಿಕೊಳ್ಳುತ್ತಾರೆ ಎನ್ನುವುದು ಗೌಡರ ಅಳುಕಿನ ಕಾಳಜಿ ಆಗಿತ್ತು. ಆದರೆ ಕುಮಾರಸ್ವಾಮಿ ಆಕ್ಷೇಪದ ಹಿಂದೆ ಇದ್ದದ್ದು ದಾಯಾದಿ ಮಾತ್ಸರ್ಯ ಮಾತ್ರ.

ಇದು ಭವಾನಿ ಅವರಿಗೆ ಗೊತ್ತಿಲ್ಲದೇ ಏನಿರಲಿಲ್ಲ. ಅನಿತಾ ಕುಮಾರಸ್ವಾಮಿ ಶಾಸಕರಾಗಬಹುದು, ಎರಡು ಚುನಾವಣೆಯಲ್ಲಿ ಸೋತರೂ ರಾಜಕೀಯ ಮಾಡಬಹುದು, ಹಾಗಾದರೇ ತಾವೇಕೆ ರಾಜಕೀಯಕ್ಕೆ ಬರಬಾರದು ಎಂಬುದು ಅವರ ಪ್ರಶ್ನೆ ಆಗಿತ್ತು. ಹಿಂದೆ ಕೆ.ಆರ್. ಪೇಟೆ, ಬೇಲೂರು ವಿಧಾನಸಭೆ ಕ್ಷೇತ್ರ, ಮೇಲ್ಮನೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಗೌಡರ ಬಳಿ ಬಯಕೆ ವ್ಯಕ್ತಪಡಿಸಿದ್ದ ಭವಾನಿ ಅವರು, ಈ ಬಾರಿ ಅವರ ಅಣತಿಗಾಗಿ ಕಾಯಲೇ ಇಲ್ಲ. ಟಿಕೆಟ್ ಕೊಡಿ ಅಂತಲೂ ಕೇಳಲಿಲ್ಲ.‘ನಾನು ನಿಲ್ತಾ ಇದ್ದೀನಿ’ ಅನ್ನಲಿಲ್ಲ, ಬದಲಿಗೆ ‘ನಾನು ನಿಂತಿದ್ದೇನೆ’ ಅಂದರು. ನಾಮಪತ್ರ ಸಲ್ಲಿಸಿದ ನಂತರ ಪತ್ರಿಕಾ ಸಂದರ್ಶನದಲ್ಲೂ ಭವಾನಿ ಅವರು ಗೌಡರನ್ನೇನೂ ವಿಶೇಷವಾಗಿ ನೆನೆದಿಲ್ಲ. ತಮಗೆ ದೇವರ ಆಶೀರ್ವಾದವಿದೆ, ಮತದಾರರ ಆಶೀರ್ವಾದವಿದೆ ಎಂದಿದ್ದಾರೆಯೇ ಹೊರತು ಗೌಡರ ಆಶೀರ್ವಾದವಿದೆ ಎಂದು ಒಮ್ಮೆಯೂ ಹೇಳಿಲ್ಲ. ದೇವೇಗೌಡರ ನೋವಿಗೆ ಇನ್ನೇನು ಬೇಕು?!

ಇನ್ನು ಕುಮಾರಸ್ವಾಮಿ ವಿಚಾರ. ಪಕ್ಷ ಸಂಘಟನೆಗೆ ಈ ವಯಸ್ಸಿನಲ್ಲೂ ತಮಗಿರುವ ತುಡಿತ ಕುಮಾರಸ್ವಾಮಿಗೆ ಯಾವಾಗಲೋ ಕಳೆದು ಹೋಗಿದೆಯಲ್ಲ ಎಂಬುದೇ ಅವರ ದೊಡ್ಡ ಚಿಂತೆ. ಪಕ್ಷದಲ್ಲಿ ತಾವೂ ಸರಿಯಾಗಿ ನಡೆದುಕೊಳ್ಳಲಿಲ್ಲ. ಜತೆಯಲ್ಲಿದ್ದವರನ್ನು ಸರಿಯಾಗಿ ಇಟ್ಟುಕೊಳ್ಳಲಿಲ್ಲ. ಸತತ ಪರಿಶ್ರಮ ಇಲ್ಲದಿದ್ದರೆ ಅಧಿಕಾರವೇನೂ ಮಂತ್ರದಿಂದ ಉದುರುವುದಿಲ್ಲ. ಯಾವಾಗಲೂ ಬರೀ ಅದೃಷ್ಟವೇ ಕೈ ಹಿಡಿಯುವುದಿಲ್ಲ. ಇದು ಗೊತ್ತಿದ್ದೂ ಪಕ್ಷವನ್ನು ತಮ್ಮ ಕಣ್ಣೆದುರಿಗೇ ಆಗತಾನೆ ಕೊಯ್ದ ಭತ್ತದ ತೆನೆಯಂತೆ ಒಣಹಾಕಿರುವುದನ್ನು ಗೌಡರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಆದ ನಂತರ ಕುಮಾರಸ್ವಾಮಿ ಅವರ ಆದ್ಯತೆಗಳೇ ಬದಲಾಗಿವೆ. ಚಲನಶೀಲ ರಾಜಕೀಯ ಬೇಡುವ ಬದ್ಧತೆಯಾಗಲಿ, ಕಠಿಣ ಪರಿಶ್ರಮವಾಗಲಿ ಕಾಣುತ್ತಿಲ್ಲ. ಇದು ಗೌಡರ ಕೋಪ ಮತ್ತು ನೋವಿಗೆ ಕಾರಣವಾಗಿದೆ. ಈವರೆಗೂ ಗೌಡರು ಮತ್ತು ಕುಮಾರಸ್ವಾಮಿ ನಡುವಣ ರಾಜಕೀಯ ಭಿನ್ನಾಭಿಪ್ರಾಯ ಮನೆಯ ಗೋಡೆಯನ್ನು ದಾಟಿರಲಿಲ್ಲ. ಈಗ ಪರಸ್ಪರ ಬಹಿರಂಗ ನಿಂದನೆವರೆಗೂ ಬಂದು ನಿಂತಿದೆ. ಒಬ್ಬರಿಗೊಬ್ಬರು ಬುದ್ಧಿ ಇಲ್ಲ ಎಂದು ಹೇಳಿಕೊಳ್ಳುವಷ್ಟರ ಮಟ್ಟಿಗೆ. ಕುಮಾರಸ್ವಾಮಿ ಅವರಂತೂ ಪರಿಸ್ಥಿತಿ ಹೀಗೆ ಮುಂದುವರಿದರೆ ತಮಗೆ ರಾಜಕೀಯದ ಸಹವಾಸವೇ ಬೇಡ ಎನ್ನುವಲ್ಲಿಗೆ ವಿಮುಖರಾಗಿ ನಿಂತಿದ್ದಾರೆ.

ಇದು ಮನೆಯೊಳಗಿನ ಕತೆ. ಇನ್ನು ಪಕ್ಷದೊಳಗಿನ ಕತೆ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಹಿಂದೆ ಅವರ ತಲೆಗೆ ಅಧಿಕಾರ ಕಟ್ಟುವಲ್ಲಿ ಜತೆಗಿದ್ದ ಚಲುವರಾಯಸ್ವಾಮಿ, ಬಾಲಕೃಷ್ಣ, ಬಸವರಾಜ ಹೊರಟ್ಟಿ, ಜಮೀರ್ ಅಹಮದ್ ಖಾನ್, ಇಕ್ಬಾಲ್ ಅನ್ಸಾರಿ ಅವರಂಥವರು ಈಗ ದೂರಾಗಿದ್ದಾರೆ. ಪಕ್ಷದೊಳಗೆ ತಮ್ಮ ಮಾತಿಗೆ ಬೆಲೆ ಸಿಗುತ್ತಿಲ್ಲ, ಮಾತೇನಿದ್ದರೂ ಗೌಡರ ಕುಟುಂಬದ ಆಸ್ತಿಯಾಗಿದೆ, ಮಾತಿಗೆ ಬೆಲೆ ಇಲ್ಲದಿದ್ದ ಮೇಲೆ, ಅದನ್ನಾಡಲು ತಲೆ ಏಕೆ ಕೆಡೆಸಿಕೊಳ್ಳಬೇಕು ಎಂದು ಕೆಲವರು ಮೌನಕ್ಕೆ ಶರಣಾಗಿದ್ದರೆ, ಜಮೀರ್, ಅನ್ಸಾರಿ ಅವರಂಥವರು ಬೀದಿಯಲ್ಲಿ ನಿಂತು ಪಕ್ಷದ ಮಾನ ಹರಾಜು ಹಾಕುತ್ತಿದ್ದಾರೆ. ಇವರಿಗೆ ಗೌಡರು ಮತ್ತು ಕುಮಾರಸ್ವಾಮಿ ಕೂಡ ತಿರುಗೇಟು ನೀಡುತ್ತಿದ್ದಾರೆ. ಹೀಗಾಗಿ ವಿಧಾನಸಭೆ ಮರುಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಪ್ರಚಾರದಲ್ಲಿ ಪಕ್ಷಕ್ಕಿಂಥ ಪಕ್ಷದೊಳಗಿನ ಜಗಳವೇ ಉತ್ತಮ ಪ್ರಚಾರ ಪಡೆದುಕೊಳ್ಳುತ್ತಿದೆ.

ಇನ್ನು ಪಕ್ಷದ ಹೊರಗಿನ ಕತೆ ನೋಡುವುದಾದರೆ ಗೌಡರು ತಮ್ಮ ಮೇಲೆ ಬಿದ್ದಿರುವ ಆಂತರಿಕ ಒತ್ತಡಗಳನ್ನು ಅನ್ಯರ ಮೇಲೆ ಪ್ರಯೋಗಿಸುವ ಶಸ್ತ್ರಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ನೋವು, ಹತಾಶೆಯಿಂದ ಪ್ರಯೋಗ ಆಗುವ ಅಸ್ತ್ರಗಳು ಯಾವತ್ತಿಗೂ ಗುರಿ ತಲುಪುವುದಿಲ್ಲ. ಏಕೆಂದರೆ ಗುರಿ ಮುಟ್ಟುವ ಉದ್ದೇಶದಿಂದ ಅವು ಪ್ರಯೋಗ ಆಗಿರುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಸಚಿವ ಡಿ.ಕೆ. ಶಿವಕುಮಾರ್ ಅವರಂಥವರ ಮೇಲೆ ಪ್ರಯೋಗಿಸಿದ ವಾಗ್ಬಾಣಗಳು ಗೌಡರಿಗೆ ತಿರುಗುಬಾಣವಾಗಿವೆ. ಸಿದ್ದರಾಮಯ್ಯ ಅವರಿಗೆ ಅಧಿಕಾರ ತಪ್ಪಿಸಿದ್ದು ತಾವೇ ಎಂಬುದು ಗೌಡರಿಗೆ ಚನ್ನಾಗಿ ಗೊತ್ತು. 2004 ರ ಚುನಾವಣೆ ನಂತರ ತಮ್ಮ ಮನೆಗೆ ಬಂದರೆ ಎಸ್.ಎಂ. ಕೃಷ್ಣ ಅವರನ್ನೇ ಸಿಎಂ ಮಾಡುತ್ತೇನೆ ಎಂಬ ಸಂದೇಶ ರವಾನಿಸಿ, ಕರೆಸಿಕೊಂಡ ಗೌಡರು, ನಂತರ ಧರಂಸಿಂಗ್ ಅವರನ್ನು ಸಿಎಂ ಮಾಡಿದರು. ಶಿವಕುಮಾರ್ ಗೆ ಮಂತ್ರಿ ಪಟ್ಟ ಕಟ್ಟಬಾರದೆಂದು ಹಿಡಿದ ಪಟ್ಟು ದಕ್ಕಿಸಿಕೊಂಡರು. ಇದು ಯಾರಿಗೆ ಗೊತ್ತಿಲ್ಲ? ಈಗ ಹೋಗಿ, ಹೋಗಿ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ತಪ್ಪಿಸಿದ್ದು ಕೃಷ್ಣ, ಶಿವಕುಮಾರ್ ಅಂದರೆ ಜನ ನಗದೆ ಇರುತ್ತಾರೆಯೇ? ಗೌಡರ ಹತಾಶೆಗೆ ಇದು ಮತ್ತೊಂದು ನಿದರ್ಶನ.

ಹಾಗೆಂದು ಗೌಡರ ಆರೋಪಕ್ಕೆ ಗುರಿ ಆದವರು ಸುಮ್ಮನಿರುತ್ತಾರೆಯೇ? ಅವರೂ ತಿರುಗಿಸಿ ಕೊಡುತ್ತಾರೆ. ‘ಗೌಡರಿಗೆ ಮದುವೆ ಊಟಕ್ಕಿಂಥ ತಿಥಿ ಊಟವೇ ಬಹಳ ಇಷ್ಟ’ ಎಂದು ಸಿದ್ದರಾಮಯ್ಯ ಹೇಳುವಷ್ಟರ ಮಟ್ಟಿಗೆ. ಅಂದರೆ ರಾಜಕೀಯವಾಗಿ ಎಲ್ಲರನ್ನೂ ಮುಗಿಸುವುದು ಗೌಡರ ಕಾಯಕ ಅನ್ನೋದು ಇದರ ಭಾವಾರ್ಥ. ಇರಲಿ, ಗೌಡರ ಮೇಲೆ ಅವರದೇ ಪಕ್ಷದ ಕೆಲವರು, ಅನ್ಯ ಪಕ್ಷದವರು ಅಮರಿಕೊಂಡಾಗ ಜೆಡಿಎಸ್ ನ ಒಬ್ಬರೇ ಒಬ್ಬ ನಾಯಕರು ಅವರ ಸಹಾಯಕ್ಕೆ, ಸಮರ್ಥನೆಗೆ ಬಂದಿಲ್ಲ ಎನ್ನುವುದು ದುರಂತ. ಚಲುವರಾಯಸ್ವಾಮಿ, ಬಾಲಕೃಷ್ಣ, ಹೊರಟ್ಟಿ ಅವರಂಥ ಪಕ್ಷ ನಿಷ್ಠರು ತಮ್ಮ ನಿಷ್ಠೆಗೆ ಬೆಲೆ ಸಿಗಲಿಲ್ಲ ಎಂದು ಸುಮ್ಮನಾಗಿದ್ದಾರೆ. ಇನ್ನು ಕುಪೇಂದ್ರರೆಡ್ಡಿ, ಮನೋಹರ್, ಕಾಂತರಾಜ್, ಶರವಣ ಅವರಂಥ ಧನಕನಕದ ಆಧಾರದ ಮೇಲೆ ಪಕ್ಷಕ್ಕೆ ಬಂದವರಿಗೆ ಬದ್ಧತೆಯೂ ಇಲ್ಲ, ಜವಾಬ್ದಾರಿಯೂ ಇರುವುದಿಲ್ಲ. ಏಕೆಂದರೆ ಈ ಎಲ್ಲ ಪಾತ್ರಗಳನ್ನು ಅವರು ಹೊತ್ತು ತಂದ ಇಲ್ಲವೇ ಅವರಿತ್ತ ಹಣವೇ ಆಪೋಶನ ತೆಗೆದುಕೊಂಡಿರುತ್ತದೆ. ಈ ಎರಡೂ ರೀತಿಯ ನಾಯಕರನ್ನು ಜಬರ್ದಾಸ್ತಾಗಿ ಪ್ರಶ್ನೆ ಮಾಡುವ, ಯುದ್ಧಕ್ಕೆ ನೂಕುವ ಸ್ಥೈರ್ಯವನ್ನು ಪಕ್ಷದ ನಾಯಕರೇ ಕಳೆದುಕೊಂಡಿದ್ದಾರೆ. ಬೇರು ಮಟ್ಟದಿಂದ ಪಕ್ಷಕ್ಕೆ ದುಡಿದವರನ್ನು, ವಿಚಾರವಂತರನ್ನು, ಸಿದ್ಧಾಂತ ಇರುವವರನ್ನು ಬೆಳೆಸಿದ್ದರೆ, ಇರುವವರ ಪೈಕಿ ಈ ಗುಣ ಇದ್ದವರನ್ನು ಗುರುತಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ. ಹಿಂದಾದರೆ ಪಕ್ಷದಲ್ಲಿ ನಾಯಕತ್ವದ ವರಸೆಯೇ ಬೇರೆ ಇತ್ತು. ಪ್ರತಿ ಜಿಲ್ಲೆಯಲ್ಲೂ ವೀರಶೈವರು, ಹಿಂದುಳಿದವರು, ಪರಿಶಿಷ್ಟರು, ಅಲ್ಪಸಂಖ್ಯಾತರು ಅಂತ ಎಲ್ಲ ಸಮುದಾಯ, ಕೋಮಿನ ನಾಲ್ಕೈದು ಮಂದಿ ನಾಯಕರಾದರೂ ಸಿಗುತ್ತಿದ್ದರು. ಈಗ ಇಡೀ ರಾಜ್ಯದಲ್ಲಿ ನಾಲ್ಕೈದು ನಾಯಕರನ್ನು ಹುಡುಕುವಂತಾಗಿದೆ. ಇದಕ್ಕೆ ಕಾರಣ ದುಡ್ಡು. ಪ್ರತಿಬಾರಿಯೂ, ಪ್ರತಿ ಚುನಾವಣೆಯಲ್ಲೂ ದುಡ್ಡೇ ಮಾತಾಡುವುದಾದರೆ, ದುಡ್ಡಿದ್ದವರಿಗೇ ಸ್ಥಾನಮಾನ ಸಿಗುವುದಾದರೆ, ಮಾತಾಡಬೇಕಾದವರ ಜಾಗವನ್ನು ಮೌನ ನುಂಗಿ ಹಾಕುತ್ತದೆ. ಈಗ ಗೌಡರ ಪಕ್ಷದಲ್ಲಿ ಆಗಿರುವುದೂ ಅದೇ. ದುಡ್ಡು ಎಲ್ಲರ ಬಾಯಿ ಕಟ್ಟಿಸಿದೆ. ರಾಜಕೀಯ ಬಿಟ್ಟಿರಲಾಗದ ಗೌಡರ ಜೀವನ ಸಂಧ್ಯಾಕಾಲವನ್ನು ಚಿಂತೆಯ ತೆರೆಗಳು ಒಂದರ ಮೇಲೊಂದು ಅಪ್ಪಳಿಸುವಂತೆ ಮಾಡಿದೆ.

ಲಗೋರಿ : ಚಿಂತನೆ ವ್ಯತ್ಯಾಸವಾದರೆ ಚಿಂತೆ ಅಪ್ಪಿಕೊಳ್ಳುತ್ತದೆ.

3 COMMENTS

  1. It’s true.JDS is almost sinking boat.By next assembly election half of the jds mla’s left the party and find there future in nl parties.Only those who not get ticket in either bnp or cong are giving oxygen to party.Of course JDS loose its base i many districts which has strong roots.

  2. ಅರ್ಥಪೂರ್ಣವಾದ ಬರಹ. ದೇಶ ಸಮಾಜಸೇವೆಗಾಗಿರಬೇಕಾದ ರಾಜಕೀಯ ಕುಟುಂಬಕ್ಕೆ ಸೀಮಿತವಾದರೆ, ಹೀಗೇ ಆಗುವುದು.

Leave a Reply