ಮಹಿಳೆಯರಾದ್ರೆ ಕ್ವಾಜಿ, ಮುಲ್ಲಾಗಳದ್ದೇನಿದು ಗೌಜಿ?

ಚಿತ್ರಕೃಪೆ-ಎಎನ್ ಐ

ಡಿಜಿಟಲ್ ಕನ್ನಡ ಟೀಮ್

ಇಲ್ಲೊಂದು ಮಹಿಳಾ ಸಾಧನೆಯ ಸುದ್ದಿ ಇದೆ. ಜತೆಗೆ ಕಳವಳವೂ… ಮುಸ್ಲಿಂ ಸಂಪ್ರದಾಯದ ಕ್ವಾಜಿ ಪಟ್ಟವನ್ನು ಮೊದಲ ಬಾರಿಗೆ ಅಧ್ಯಯನದ ಮೂಲಕ ಮಹಿಳೆಯರಿಬ್ಬರು ತಮ್ಮದಾಗಿಸಿಕೊಂಡಿದ್ದಾರೆ. ಮುಂಬೈ ನ ದಾರೂಲ್ ಊಲೂಮ್ – ಐ – ನಿಸವ್ ನಲ್ಲಿ ಎರಡು ವರ್ಷದ ಇಸ್ಲಾಂಮಿಕ್ ಕಾನೂನು ತರಬೇತಿ ಮುಗಿಸಿ ಕ್ವಾಜಿ ಪದವಿಯನ್ನು (ವಿವಾಹಕ್ಕೆ ಧಾರ್ಮಿಕ ಮಾನ್ಯತೆ ನೀಡುವ ಮುಖ್ಯಸ್ಥರ ಸ್ಥಾನ) ಜೈಪುರ ಮೂಲದವರಾದ ಅಫ್ರೊಜ್ ಬೇಗಂ ಮತ್ತು ಜಹಾನ್ ಹರಾ ಎಂಬ ಇಬ್ಬರು ಮಹಿಳೆಯರು ಪಡೆದಿದ್ದಾರೆ.

ಆದರೆ, ಮಹಿಳೆಯರು ಕ್ವಾಜಿ ಪದವಿ ನಿಭಾಯಿಸುವಂತಿಲ್ಲ ಅನ್ನೋದು ಸಂಪ್ರದಾಯವಾದಿಗಳ ತಕರಾರು! ಇದನ್ನು ಮಹಿಳಾ ಸಮಾನತೆ ಪ್ರಶ್ನೆ ಎಂದು ಗ್ರಹಿಸುವುದಾದರೆ, ಶಬರಿಮಲೈ ಮತ್ತು ಶನಿ ಶಿಗ್ಣಾಪುರ ದೇಗುಲಗಳಲ್ಲಿ ಮಹಿಳೆಯರ ಪ್ರವೇಶವನ್ನು ಬೆಂಬಲಿಸುತ್ತಿರುವವರು ಈ ವಿಚಾರದಲ್ಲೂ ತಮ್ಮ ಅಭಿಪ್ರಾಯ ಹೇಳಬೇಕಾಗುತ್ತದೆ.

ರಾಜಸ್ಥಾನದ ಮುಖ್ಯ ಕ್ವಾಜಿ ಖಾಲಿದ್ ಉಸ್ಮಾನಿ ಹೇಳ್ತಾರೆ- ‘ಪುರುಷರು ನಿರ್ವಹಿಸುತ್ತಿರುವ ಈ ಜವಾಬ್ದಾರಿಯನ್ನು ಮಹಿಳೆಯರು ಮಾಡುವಂತಿಲ್ಲ. ಮಹಿಳೆಯರು ಕ್ವಾಜಿ ಆಗಲು ಸಾಧ್ಯವಿಲ್ಲ. ಈ ಬಗ್ಗೆ ಕುರಾನ್ ನಲ್ಲೂ ಉಲ್ಲೇಖಿಸಿಲ್ಲ’.

ಅಖಿಲ ಭಾರತ ಮುಸ್ಲಿಂ ವಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ರಶೀದ್ ಹೇಳೋದು- ಈ ವಿಚಾರದಲ್ಲಿ ಯಾವ ಮುಸ್ಲಿಂ ಪುರುಷರೂ ಮಹಿಳಾ ಕ್ವಾಜಿಗಳನ್ನು ಬೆಂಬಲಿಸುವುದಿಲ್ಲ. ಇದು ಇಸ್ಲಾಂನಲ್ಲಿ ಎಂದಿಗೂ ಸಾಧ್ಯವಿಲ್ಲದ ಮಾತು.

ಇವ್ಯಾವುದಕ್ಕೂ ಸೊಪ್ಪು ಹಾಕದ ಉಭಯರು, ‘ಕೆಲವು ಧಾರ್ಮಿಕ ಮುಖಂಡರಷ್ಟೇ ನಮ್ಮನ್ನು ವಿರೋಧಿಸುತ್ತಿದ್ದಾರೆ. ಸಮುದಾಯದ ಬೆಂಬಲ ನಮಗಿದೆ. ನಾವು ಕ್ವಾಜಿ ಸ್ಥಾನದಲ್ಲಿ ನಿಂತು ಮದುವೆ ಮಾಡಿಸುವುದಷ್ಟೇ ಅಲ್ಲದೇ, ಮಹಿಳೆಯರ ಹಕ್ಕಿಗೂ ಹೋರಾಡುತ್ತೇವೆ’ ಎಂದಿದ್ದಾರೆ. ಇವರಿಗೆ ಬೇಕಲ್ಲವೇ ಬುದ್ಧಿಜೀವಿಗಳೆನಿಸಿಕೊಂಡವರ ಬೆಂಬಲ?

Leave a Reply