ಮೋದಿ ಅವರ 10 ಲಕ್ಷ ರು. ಕೋಟು ಹಿಡಿದು ಜಗ್ಗಾಡಿದ್ದ ರಾಹುಲ್ ಈಗ ಸಿದ್ರಾಮಯ್ಯನವರ 68 ಲಕ್ಷ ರು. ವಾಚ್ ನೋಡಿ ಏನಂತಾರೋ..?

ಡಿಜಿಟಲ್ ಕನ್ನಡ ವಿಶೇಷ

ಕಳೆದ ವರ್ಷ ಜನವರಿಯಲ್ಲಿ ಭಾರತಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಹೈದರಾಬಾದ್ ಹೌಸ್ ನಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ ಹತ್ತು ಲಕ್ಷ ರುಪಾಯಿ ಬೆಲೆ ಬಾಳುವ ಸೂಟು ಕಾಂಗ್ರೆಸ್ ಮುಖಂಡರ ಕಣ್ಣು ಕುಕ್ಕಿತ್ತು. ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಂತೂ ಮೋದಿ ಕೋಟಿನ ರೇಟು ಕೇಳುವುದರಲ್ಲೇ ರಾಜಕೀಯ ಪಾಂಡಿತ್ಯ ಮೆರೆದಿದ್ದರು.

ಅಷ್ಟೆಲ್ಲ ವಿವಾದ ಸೃಷ್ಟಿಸಿದ್ದ ರಾಹುಲ್ ಗಾಂಧಿ ಅವರು ಇದೀಗ ಉತ್ತರ ಹೇಳುವ ಪಾತ್ರದಲ್ಲಿದ್ದಾರೆ. ಏಕೆಂದರೆ ಅವರದೇ ಪಕ್ಷದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟಿರುವ ಅತ್ಯಂತ ಬೆಲೆ ಬಾಳುವ ವಜ್ರಖಚಿತ ರಿಸ್ಟ್ ವಾಚ್ ವಿವಾದಕ್ಕೆ ಕಾರಣವಾಗಿದೆ. ಈ ವಾಚಿನ ಬೆಲೆ ಎಷ್ಟು ಗೊತ್ತೇ? ಬರೀ ಒಂದು ಲಕ್ಷ ಅಮೆರಿಕ ಡಾಲರ್, ಅಂದರೆ ಬರೋಬ್ಬರಿ 68 ಲಕ್ಷ ರುಪಾಯಿ! ನರೇಂದ್ರ ಮೋದಿ ಅವರು ಧರಿಸಿದ್ದರಲ್ಲ ಆ ಕೋಟಿನ ರೇಟಿಗಿಂತ ಏಳು ಪಟ್ಟು ಜಾಸ್ತಿ!!

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅಂದರೆ ಇದೇ ಇರಬೇಕು. ರಾಹುಲ್ ಗಾಂಧಿ ಅವರು ಈಗ ಏನು ಹೇಳುತ್ತಾರೋ, ಅದೇನು ಉತ್ತರ ಕೊಡುತ್ತಾರೋ ಗೊತ್ತಿಲ್ಲ. ಆಗೇನೋ ನರೇಂದ್ರ ಮೋದಿ ಅವರು ಕೋಟನ್ನು ಹರಾಜು ಹಾಕಿ ಬಂದ 1.48 ಕೋಟಿ ರುಪಾಯಿಯನ್ನು ಖಜಾನೆಗೆ ಸೇರಿಸಿ ಕೈ ತೊಳೆದುಕೊಂಡರು. ಈಗ ಕಾಂಗ್ರೆಸ್ ಮಾನ ಹರಾಜು ಹಾಕುತ್ತಿರುವ ಸಿದ್ದರಾಮಯ್ಯನವರ ವಾಚನ್ನು ರಾಹುಲ್ ಗಾಂಧಿ ಅವರೇ ಹರಾಜು ಹಾಕುತ್ತಾರೋ ಅಥವಾ ಹರಾಜು ಹಾಕಿ ಖಜಾನೆಗೆ ದುಡ್ಡು ಪೀಕಿ ಅಂತ ಆದೇಶ ಕೊಡುತ್ತಾರೋ ಗೊತ್ತಿಲ್ಲ.

ಅಂದಹಾಗೆ ಮೊನ್ನೆ ಕುಮಾರಸ್ವಾಮಿ ಅವರು ಸಿದ್ರಾಮಯ್ಯ ಅವರು ಕೋಟಿ ರುಪಾಯಿ ವಾಚ್ ಕಟ್ಟವ್ರೆ, ಐದು ಲಕ್ಷ ರುಪಾಯಿ ಕನ್ನಡಕ ಹಾಕವ್ರೆ, ಬಡವರ ಬಂಧುವಿಗೆ ಇಷ್ಟೆಲ್ಲ ಐಷರಾಮಿ ಐಟಂ ಎಲ್ಲಿಂದ ಬಂತು ಅಂತ ಕೇಳ್ದಾಗ, ಐದು ಲಕ್ಷ ಕೊಟ್ಟು ಎರಡನ್ನೂ ಕುಮಾರಸ್ವಾಮಿನೇ ತಗೊಂಡೋಗ್ಲಿ ಅಂತ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ರು. ನಾನೇನು ಸೆಕೆಂಡ್ ಹ್ಯಾಂಡ್ ಗಿರಾಕಿನಾ ಅದನ್ನು ತಗೊಳ್ಳೋಕೆ ಅಂತ ಕುಮಾರಸ್ವಾಮಿ ಕೂಡ ಬಾಣ ಬಿಟ್ಟಿದ್ರು. ಈಗ ಸಿದ್ದರಾಮಯ್ಯ ಕೈಯಲ್ಲಿ ಜಗಮಗ ಅಂತ ಮಿಂಚುತ್ತಿರುವ ವಾಚಿನ ಚಿತ್ರ, ವಿಡಿಯೋ ಎಲ್ಲರ ಕಣ್ಣು ಕುಕ್ಕುತ್ತಿದೆ. ಕುಮಾರಸ್ವಾಮಿ ಅವರಿಗೆ ಈಗ ಅದೇನು ಉತ್ತರ ಕೊಡ್ತಾರೋ ಗೊತ್ತಿಲ್ಲ.

ಯಾವುದಕ್ಕೂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಮಿತ್ರರೂ ಆದ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಸಲಹೆ ಪಡೆಯುವುದು ಒಳಿತು. ಅವರಿಗೆ ಹೇಗಿದ್ದರೂ ಗುಂಡೂರಾಯರ ಸರಕಾರದಲ್ಲಿ ಮಂತ್ರಿ ಆಗಿದ್ದಾಗ ರೊಲೆಕ್ಸ್ ವಾಚ್ ಹಗರಣದಿಂದ ಪಾರಾದ ಅನುಭವವಿದೆ.

1 COMMENT

Leave a Reply