ಸುದ್ದಿಸಂತೆ: ಕ್ರಿಕೆಟ್ ನಲ್ಲಿ ಕಿರಿಯರು ಫೈನಲ್ ಗೆ, ಮೇಕೆಯೂ ಬಂಧನ- ಬಿಡುಗಡೆ, ಸೂಡನ್ ಸ್ಮಗ್ಲರ್ ಕರಾಮತ್ತು, ಆಪ್ ಗೆ ದೇಣಿಗೆ ಮಳೆ

 

ಪ್ರಶಸ್ತಿ ಸುತ್ತಿಗೆ ಭಾರತ ಕಿರಿಯರು

ಗೆಲುವಿನ ನಾಗಾಲೋಟದಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ಭಾರತ ಕಿರಿಯರ ತಂಡ ಪ್ರತಿಷ್ಠಿತ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಢಾಕಾದ ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ 97 ರನ್ ಗಳ ಜಯ ದಾಖಲಿಸಿತು. ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 267 ರನ್ ದಾಖಲಿಸಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಶ್ರೀಲಂಕಾ 42.4 ಓವರ್ ಗಳಲ್ಲಿ 170 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು.

ಭಾರತ ತಂಡದ ಪರ ಅನ್ಮೋಲ್ ಪ್ರೀತ್ (72), ಸರ್ಫರಾಜ್ (59) ಆಕರ್ಷಕ ಬ್ಯಾಟಿಂಗ್ ನಡೆಸಿದರು. ಬೌಲಿಂಗ್ ನಲ್ಲಿ ಮಯಾಂಕ್ 3, ಆವೇಶ್ 2, ಖಲೀಲ್, ರಾಹುಲ್, ಸುಂದರ್ ತಲಾ 1 ವಿಕೆಟ್ ಪಡೆದರು. ಲಂಕಾ ತಂಡದ ಪರ ಕಮಿಂದು ಮೆಂಡೀಸ್ (39), ಅಶನ್ (38) ರನ್ ಗಳಿಸಿದರು. ಬೌಲಿಂಗ್ ನಲ್ಲಿ ಅಶಿತಾ ಫರ್ನಾಂಡೊ 4, ಲಹಿರು ಕುಮಾರ ಮತ್ತು ತಿಲನ್ ನಿಮೇಶ್ ತಲಾ 2 ವಿಕೆಟ್ ಪಡೆದರು. ಈ ಜಯದೊಂದಿಗೆ ಫೈನಲ್ ಪ್ರವೇಶಿಸಿರುವ ಭಾರತ, ಈವರೆಗೂ ಅತಿ ಹೆಚ್ಚು ಬಾರಿ ಅಂಡರ್ 19 ವಿಶ್ವಕಪ್ ಫೈನಲ್ ಪ್ರವೇಶಿಸಿದ ಪಟ್ಟಿಯಲ್ಲಿ ಪಾಕಿಸ್ತಾನ (5) ಜತೆ ಜಂಟಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ (4) ದಕ್ಷಿಣ ಆಫ್ರಿಕಾ (3) ನಂತರದ ಸ್ಥಾನಗಳಲ್ಲಿವೆ. ಭಾರತದ ಅನ್ಮೋಲ್ ಪ್ರೀತ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ಜಯ ಸಾಧಿಸುವ ತಂಡದ ವಿರುದ್ಧ ಭಾರತ ಫೆ.14ರಂದು ಪ್ರಶಸ್ತಿಗಾಗಿ ಸೆಣಸಲಿದೆ.

ಸೂಡನ್ ಸ್ಮಗ್ಲರ್ ಬಂಧನ: ಹೊಟ್ಟೆಯಲಿದ್ದ 3 ಕೋಟಿ ಮೌಲ್ಯದ ಕೋಕೈನ್ ವಶ, ತಮಿಳು ಸಿನಿಮಾವನ್ನು ನೆನಪಿಸಿದ ಘಟನೆ

ಹೊಟ್ಟೆಯಲ್ಲಿ ಅಪಾರ ಪ್ರಮಾಣದ ಕೋಕೈನ್ ಸಾಗಿಸುತ್ತಿದ್ದ ಸೂಡನ್ ಮೂಲದ ಸ್ಮಗ್ಲರ್ ಒಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತಮಿಳಿನ ಸೂರ್ಯ ನಟನೆಯ ಅಯ್ಯನ್ ಚಿತ್ರದ ಚಿಟ್ಟಿ ಪಾತ್ರದಂತೆ ಈ ಘಟನೆ ನಡೆದಿದೆ. ಡ್ರಗ್ಸ್ ಸಾಗಿಸುತ್ತಿದ್ದ ಆರೋಪಿ ಇರೇಮ್ ಇಮ್ಯಾನುಯಲ್ ಎಂಬಾತ ಸುಮಾರು 3 ಕೋಟಿ ರು ಮೌಲ್ಯದ 20 ಗ್ರಾಂ ಪ್ರಮಾಣದ 70 ಕ್ಕೂ ಹೆಚ್ಚು ಕ್ಯಾಪ್ಸೂಲ್ಸ್ ಗಳನ್ನು ನುಂಗಿ ಹೊಟ್ಟೆಯಲ್ಲಿ ಇರಿಸಿಕೊಂಡು ನಗರಕ್ಕೆ ಬಂದಿದ್ದ. ಈತನ ವಿಚಿತ್ರ ವರ್ತನೆಯನ್ನು ಗಮನಿಸಿದ ಪೊಲೀಸರು ಪರೀಕ್ಷೆಗೆ ಒಳಪಡಿಸಿದಾಗ ಬೃಹತ್ ಪ್ರಮಾಣದ ಡ್ರಗ್ ದೇಹದಲ್ಲಿ ಇರುವುದು ಪತ್ತೆಯಾಗಿದೆ. ಆರೋಪಿಯನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಆರೋಪಿಯಿಂದ ವಿಸರ್ಜನೆ ಮಾಡಿಸಿ ಮಾತ್ರೆಗಳನ್ನು ಹೊರತೆಗೆದರು. ಹೆಚ್ಚಿನ ವಿಚಾರಣೆ ನಡೆಸುತ್ತಿರುವ ಪೋಲೀಸರು ಈ ಜಾಲದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಹೂ,ತರಕಾರಿ ತಿಂದ ಮೇಕೆ: ಬಂಧನ, ಬಿಡುಗಡೆ!

ಮೇಕೆಯೊಂದನ್ನು ಬಂಧಿಸಿ ಜಾಮಿನಿನ ಮೇಲೆ ಬಿಡುಗಡೆ ಮಾಡಿರುವ ಅಪರೂಪದ ವಿಚಿತ್ರ ಘಟನೆಯೊಂದು ಮಂಗಳವಾರ ಛತ್ತಿಸ್ ಗಡದಲ್ಲಿ ನಡೆದಿದೆ. ಹಿರಿಯ ಅಧಿಕಾರಿಯೊಬ್ಬರ ಉದ್ಯಾನವನದಲ್ಲಿ ಕಳೆದ ಕೆಲ ದಿನಗಳಿಂದ ಗಿಡಗಳು, ಹೂವುಗಳು ಮತ್ತು ತರಕಾರಿಗಳನ್ನು ತಿನ್ನುತ್ತಿದೆ ಎಂದು ಮೇಕೆ ವಿರುದ್ಧ ತೋಟದ ಮಾಲಿ ಹೇಮಂತ್ ರಾತ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ಎಎಸ್ ಐ ಶ್ರೀವಾತ್ಸವ್ ಮೇಕೆ ಮತ್ತು ಮಾಲಿಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಮೇಕೆಯ ಪುನಾರಾವರ್ತನೆಯ ಅಪರಾಧ ಮಾಡುತ್ತಿದೆ ಎಂದು 2 ರಿಂದ 7 ವರ್ಷಗಳ ಸಜೆ ಮತ್ತು ದಂಡ ವಿಧಿಸುವ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿತ್ತು.

ರಾಷ್ಟ್ರೀಯ ಪಕ್ಷಗಳಿಗೆ ಹರಿದು ಬಂದ ದೇಣಿಗೆ, ಶೇಕಡಾವಾರು ಪ್ರಮಾಣದಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ ಎಎಪಿ!

ರಾಜಕೀಯ ಪಕ್ಷಗಳಿಗೆ ಈ ಬಾರಿ ದಾನಿಗಳಿಂದ ಸಾಕಷ್ಟು ದೇಣಿಗೆ ಹರಿದು ಬಂದಿದೆ. ಸಾಮಾನ್ಯವಾಗಿ ಅಧಿಕಾರದಲ್ಲಿ ಇರುವ ಪಕ್ಷಗಳಿಗೆ ಹೆಚ್ಚಿನ ದೇಣಿಗೆ ಸಿಗುವುದು ಗೊತ್ತಿರುವ ವಿಚಾರ. ಎಡಿಆರ್ ಮತ್ತು ಎನ್ ಇ ಡಬ್ಲೂ ಸಂಸ್ಥೆಗಳ ವರದಿಯ ಪ್ರಕಾರ 2013-14 ರ ಸಾಲಿಗಿಂತ 2014-15 ರಲ್ಲಿ ಬಿಜೆಪಿ ದೇಣಿಗೆ ಶೇ 156 ರಷ್ಟು ಹೆಚ್ಚಿಸಿಕೊಂಡರೆ ಇದಕ್ಕೆ ಸೆಡ್ಡು ಹೊಡೆದು ಎಎಪಿ ಶೇ 275 ರಷ್ಟು ದೇಣಿಗೆ ಸಂಗ್ರಹಿಸಿ ಅಚ್ಚರಿಗೆ ಅಚ್ಚರಿ ಮೂಡಿಸಿದೆ.

ಎನ್ ಡಿಎ ನೇತೃತ್ವದ ಬಿಜೆಪಿ ಪಕ್ಷ 2013-14 ರಲ್ಲಿ 170.86 ಕೋಟಿ ಸಂಗ್ರಹಿಸಿದ್ದರೆ 2014-15 ರಲ್ಲಿ 437.35 ಕೋಟಿ ದೇಣಿಗೆ ಸಂಗ್ರಹಿಸಿ ಒಟ್ಟು 608.21 ಕೋಟಿ ದೇಣಿಗೆ ಪಡೆದಿದೆ. ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷ 9.42 ಕೋಟಿಯಿಂದ 35.28 ಕೋಟಿ ಸಂಗ್ರಹಿಸಿದೆ. ಇನ್ನೂ ಕಾಂಗ್ರೆಸ್ ಪಕ್ಷವು ಸಹ 81.88 ಕೋಟಿಯಿಂದ 141.46 ಕೋಟಿ ರುಗಳನ್ನು ಸಂಗ್ರಹಿಸಿರುವ ಬಗ್ಗೆ ಘೋಷಿಸಿದೆ.

ಸಿಪಿಐ 2013-14ರಲ್ಲಿ 1.22 ಕೋಟಿ ದೇಣಿಗೆ ಸಂಗ್ರಹಿಸಿದ್ದರೆ 2014-15 ರಲ್ಲಿ 1.33 ಕೋಟಿ ಸಂಗ್ರಹಿಸಿದೆ. ಸಿಪಿಎಂ 2.09 ರಿಂದ 3.42ಕ್ಕೆ ತಲುಪಿದರೆ ಬಿಎಸ್ಪಿ ಕಳೆದ 10 ವರ್ಷಗಳಿಂದ 20 ಸಾವಿರ ರು ಗಳ ದೇಣಿಗೆ ಸಂಗ್ರಹಿಸಿರುವುದಾಗಿ ಘೋಷಿಸಿದೆ. ಒಟ್ಟಾರೆ 5 ರಾಷ್ಟ್ರೀಯ ಪಕ್ಷಗಳ ದೇಣಿಗೆ ಕಳೆದ ಸಾಲಿನಲ್ಲಿ 247.77 ಕೋಟಿ ಆಗಿದ್ದು ಈ ಬಾರಿ 622.38 ಕೋಟಿ ರು ಗಳ ದೇಣಿಗೆ ಬಂದಿದೆ. ಒಟ್ಟು 870.15 ಕೋಟಿ ರು ದೇಣಿಗೆ ಸಂಗ್ರಹವಾಗಿದೆ.

Leave a Reply