ಭಿಕ್ಷೆ ಹೊರತಾಗಿಯೂ ಬದುಕಬಲ್ಲೆವು ಎಂಬುದಕ್ಕೆ ಹೀಗೊಂದು ಮಂಗಳಮುಖಿಯರ ‘ಮಾಡೆಲ್’

ಡಿಜಿಟಲ್ ಕನ್ನಡ ಟೀಮ್

ಮಂಗಳಮುಖಿಯರು ಎಂದರೆ ಸಿಗ್ನಲ್ ಗಳಲ್ಲಿ ಹಣ ಕೇಳುವ ದೃಶ್ಯ ಕಣ್ಮುಂದೆ ಬರುತ್ತದೆ. ಹಾಗೆಂದು ಎಲ್ಲರೂ ಅದೇ ಮಟ್ಟದಲ್ಲಿದ್ದಾರೆ ಎಂದು ಭಾವಿಸಿದರೆ, ಅದು ನಮ್ಮ ತಪ್ಪು ಸ್ವಾಮಿ. ಈಗ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮಂಗಳ ಮುಖಿಯರ ಮಾಡೆಲಿಂಗ್ ಏಜೆನ್ಸಿ ಆರಂಭವಾಗುತ್ತಿದೆ. ಆ ಮೂಲಕ ತೃತೀಯ ಲಿಂಗಿಗಳು ಸಮಾಜದ ಮತ್ತೊಂದು ಸ್ತರದಲ್ಲಿ ತಮ್ಮ ಸ್ಥಾನಮಾನವನ್ನು ಗಳಿಸುವ ಪ್ರಯತ್ನದ ಹಾದಿಯಲ್ಲಿದ್ದಾರೆ.

ದೆಹಲಿ ಮೂಲದ ಮಂಗಳಮುಖಿ ಕಾರ್ಯಕರ್ತೆ ರುದ್ರಾಣಿ ಚೆಟ್ರಿ, ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಮಾಡೆಲಿಂಗ್ ಏಜೆನ್ಸಿಯ ಮೊದಲ ಭಾಗವಾಗಿ ಮಂಗಳಮುಖಿ ಮಾಡೆಲ್ ಗಳ ಆಡಿಷನ್ ಏರ್ಪಡಿಸಿದ್ದು, ಈ ಆಡಿಷನ್ ನಲ್ಲಿ ಆಯ್ಕೆಯಾದ ಅಗ್ರ 5 ಮಾಡೆಲ್ ಗಳು ಫ್ಯಾಶನ್ ಮ್ಯಾಗಜೀನ್ ನ ಫೋಟೊ ಶೂಟ್ ನಲ್ಲಿ ಭಾಗವಹಿಸಲಿದ್ದಾರೆ. ಈ ಆಡಿಷನ್ ಗೆ ಸುಮಾರು 70 ಅರ್ಜಿಗಳು ಬಂದಿವೆ. ಅಮೆರಿಕದ ಕ್ಯಾಟ್ಲಿನ್ ಜೆನ್ನರ್ ಅವರ ಸ್ಫೂರ್ತಿಯಿಂದ ಈ ಪ್ರಯತ್ನ ನಡೆಸಲಾಗುತ್ತಿದ್ದು, ಈ ವರ್ಗದವರನ್ನು ಕೇವಲ ಲೈಂಗಿಕ ಕಾರ್ಯಕರ್ತರಾಗಿ ಮತ್ತು ಭಿಕ್ಷುಕರನ್ನಾಗಿ ನೋಡುವ ಸಮಾಜದ ಮುಖ್ಯವಾಹಿನಿಯಲ್ಲಿ ಸಮಾನ ಅವಕಾಶ ಪಡೆಯುವ ಉದ್ದೇಶ ಹೊಂದಲಾಗಿದೆ.

model1

ನಾವೆಲ್ಲರು ಈವರೆಗೂ ಮಾಡೆಲ್ ಗಳು ಎಂದರೆ ಮಹಿಳೆಯರ ಪೈಕಿ ಮಾದಕ ನೋಟ, ಬಳ್ಳಿಯಂತೆ ಬಳಕುವ ಮೈಮಾಟ, ಅವರ ಬೆಕ್ಕಿನ ನಡಿಗೆ, ಪುರುಷರಲ್ಲಿ ಕಟ್ಟುಮಸ್ತಾದ ದೇಹ, ಪ್ರತಿ ಮಾಂಸಖಂಡವನ್ನು ಸರಿಯಾದ ರೀತಿಯಲ್ಲಿ ಕೆತ್ತಿದಂತಿರುವ ಶೈಲಿ, ಸಿಕ್ಸ್ ಪ್ಯಾಕ್ ಗಳನ್ನು ನೋಡಿರುವ ನಮಗೆ ಮಂಗಳ ಮುಖಿಯರನ್ನು ಮಾಡೆಲ್ ಗಳಾಗಿ ಯೋಚಿಸುವುದು ಸ್ವಲ್ಪ ಕಷ್ಟ ಎನಿಸಬಹುದು. ಆದರೆ, ಮಾಜಿ ಒಲಿಂಪಿಯನ್ ಬ್ರೂಸ್ ಜೆನ್ನರ್, ನಂತರ ಕ್ಯಾಟ್ಲಿನ್ ಜೆನ್ನರ್ ಸ್ತ್ರಿ ಆಗಿ ಪರಿವರ್ತನೆಯಾದ ನಂತರ ಆತ ಮಾಡೆಲಿಂಗ್ ನಲ್ಲಿ ಮಿಂಚಿದ ಉದಾಹರಣೆ ಇದೆ.

ಸಾಕಷ್ಟು ಶೋಷಣೆ, ಸಮಾಜದಲ್ಲಿ ಮುಕ್ತವಾಗಿ ಬದುಕಲು ಇಲ್ಲದ ಸಮಾನ ಅವಕಾಶ ಮತ್ತು ವೇದಿಕೆಯ ಕೊರತೆಯ ನಡುವೆಯೂ ಇತ್ತೀಚಿನ ದಿನಗಳಲ್ಲಿ ಸ್ವಾಭಿಮಾನದಿಂದ ಬದುಕುತ್ತಿರುವ ಈ ವರ್ಗದವರು ಇತರರಂತೆ ಪ್ರತಿ ಕ್ಷೇತ್ರದಲ್ಲೂ ಸಾಧನೆಯ ಹಾದಿ ತುಳಿಯುತ್ತಿರುವುದಕ್ಕೆ ಸಾಕಷ್ಟು ಉದಾಹರಣೆ ನಮಗೆ ಕಾಣ ಸಿಗುತ್ತವೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಕೆ.ಪ್ರೀತಿಕಾ ಯಾಶಿಣಿ ಪೊಲೀಸ್ ಅಧಿಕಾರಿಯಾಗಿ, ಪದ್ಮಿನಿ ಪ್ರಕಾಶ್ ಎಂಬಾಕೆ ಮೊಟ್ಟ ಮೊದಲ ವಾರ್ತಾ ವಾಚಕಿಯಾಗಿ ಸಾಧನೆ ಮಾಡಿರುವುದು ನಮ್ಮ ಕಣ್ಮುಂದೆ ಇದೆ. ಹಾಗಾಗಿ ಭಾರತೀಯ ಸಮಾಜದಲ್ಲಿ ಪುರುಷ ಮತ್ತು ಸ್ತ್ರೀಯರಿಗಿರುವ ಅವಕಾಶವನ್ನು ತಾವೂ ಸಂಪಾದಿಸಬೇಕು ಎಂಬ ಹಂಬಲ ಈ ವರ್ಗದವರಲ್ಲಿ ಮೂಡುತ್ತಿರುವುದು ಉತ್ತಮ ಬೆಳವಣಿಗೆ.

Leave a Reply