ಮಹಿಳೆಯ ದೇಹ – ಗರ್ಭ ಮಾರಾಟಕ್ಕಿಟ್ಟಾಗಿದೆ, ಈಗ ಎದೆಹಾಲಿನ ಸರದಿಯೇ?

author-geetha“ಮಾರಾಟಕ್ಕಿದೆಯಂತೆ..”

“ಏನು?”

“ತಾಯಿಯ ಮೊಲೆ ಹಾಲು”

“ಸೇತುರಾಂ ಅವರು ಅವರದೊಂದು ನಾಟಕದಲ್ಲಿ ಬರೆದಿದ್ರು.. ಮೊಲೆ ಹಾಲನ್ನು ಸಂಗ್ರಹಿಸಿ, ಮಾರಾಟ ಮಾಡಿ ಶ್ರೀಮಂತನಾದವನೊಬ್ಬನ ಪ್ರಲಾಪ..”

“ಕಥೆ, ನಾಟಕ, ಸಿನಿಮಾ ಅಲ್ಲ. ನಿಜವಾಗಿ ತಾಯ ಮೊಲೆ ಹಾಲು ಮಾರಾಟಕ್ಕಿದೆ. ಮೊನ್ನೆ ಪೇಪರಿನಲ್ಲಿ ಓದಿದ್ದು”

“ಮಾರಾಟವಲ್ಲ.. ಮಿಲ್ಕ್ ಬ್ಯಾಂಕ್ ಅಂತ ಇರುತ್ತೆ.. ಅಲ್ಲಿ ಅವಶ್ಯಕತೆ..”

“ಅವಶ್ಯಕತೆ ಯಾರಿಗುಂಟು ಎಂದು ನಿರ್ಧರಿಸೋರು ಯಾರು?”

“ತಾಯಿಯನ್ನು ಕಳೆದುಕೊಂಡ ಎಳೆ ಕಂದಮ್ಮಗಳಿಗೆ ಬೇಕು. ಹಾಲು ಸ್ರವಿಸದ ತಾಯಂದಿರ ಎಳೆ ಕಂದಮ್ಮಗಳಿಗೆ..”

“ಯಾರಿಗೆ ಬೇಕು ಅಂತ ಕೇಳುತ್ತಿಲ್ಲ.. ಯಾರಿಗೆ ಕೊಡಬೇಕು ಎಂದು ನಿರ್ಧರಿಸೋರು ಯಾರು?”  ನನ್ನ ಸ್ನೇಹಿತೆಯರಿಬ್ಬರು ಮಾತನಾಡುತ್ತಿದ್ದಾಗ ಮದ್ಯೆ ಪ್ರವೇಶಿಸಿ ಪ್ರಶ್ನಿಸಿದೆ.

“ಅಂದರೇನು? ತಾಯಿಯ ಹಾಲು ಅವಳ ಕಂದನಿಗೆ ಅಲ್ಲವೇ? ಹೆಚ್ಚಾಗುತ್ತದೆ, ಕಡಿಮೆಯಾಗುತ್ತದೆ ಎಂದು ನಿರ್ಧರಿಸುವವರು ಯಾರು? ಡೊನೇಟ್ ಮಾಡುತ್ತೇನೆ ಎಂದು ತಾಯಿಯಾದವಳು ನಿರ್ಧರಿಸುತ್ತಾಳಾ? ಅಥವಾ ಮಾರಾಟ ಮಾಡುವುದು ಅವಳ ನಿರ್ಧಾರವೇ? ಆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅವಳಿಗಿದೆಯೇ? ಮಾರಾಟಕ್ಕಿದೆ ಎಂದಾದರೆ ಯಾರು ಬೇಕಾದರು ಕೊಂಡುಕೊಳ್ಳಬಹುದೇ?

“ಎಷ್ಟು ಪ್ರಶ್ನೆಗಳು.. ನಮ್ಮ ದೇಶದಲ್ಲಿ ಮೊಲೆ ಹಾಲು ಮಾರಾಟವಾಗುವುದಿಲ್ಲ.. ವಿದೇಶಗಳಲ್ಲಿ ಇರಬಹುದು. ನಮ್ಮ ಸಂಸ್ಕೃತಿಯಲ್ಲಿ ತಾಯಿಗೆ ದೇವರ ಸ್ಥಾನ ಕೊಟ್ಟಿದ್ದೇವೆ. ತಾಯಿ ಹಾಲು ಅಮೃತಕ್ಕೆ ಸಮಾನ ಅದಕ್ಕೆ ಬೆಲೆ ಕಟ್ಟುವವರು ನರಕಕ್ಕೆ ಹೋಗುತ್ತಾರೆ.”

ಮಾತಾಡಿ ಪ್ರಯೋಜನವಿಲ್ಲವೆಂದು ಸುಮ್ಮನಾದೆ. ಮಾತಾಡದೆ ಸುಮ್ಮನಾದೆ ಅಷ್ಟೇ. ಇಂಟರ್ ನೆಟ್ ಜಾಲಾಡಿ ಮಾಹಿತಿ ಕಲೆ ಹಾಕಿದೆ. ಇತಿಹಾಸ ಪುಟಗಳನ್ನು ತಿರುವಿ ಹಾಕಿದೆ.

ಹಲವು ದಶಕಗಳ ಹಿಂದೆ ಮೈಕಟ್ಟಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದ ಶ್ರೀಮಂತ, ರಾಜಮನೆತನದ ಹೆಂಗಳೆಯರು ತಾಯಿಯಾದಾಗ ತಮ್ಮ ಮಕ್ಕಳಿಗೆ ಮೊಲೆಯೊಡಿಸಲು ಬಡ ಕುಟುಂಬದ ದಾದಿಯರನ್ನು ನೇಮಿಸುತ್ತಿದ್ದರಂತೆ. ಇವರ ಮಗು ಹುಟ್ಟಿದಾಗಲೇ ಹುಟ್ಟಿದ ತಮ್ಮ ಮಕ್ಕಳಿಗೆ ಕಮ್ಮಿ ಮಾಡಿ ಕಾಸಿನ ಆಸೆಗೆ ಅಥವಾ ಅವಶ್ಯಕತೆಗೆ ರಾಜಮನೆತನದ, ಶ್ರೀಮಂತ ಮಕ್ಕಳಿಗೆ ಮೊಲೆಯುಣಿಸಲು ಸಿದ್ಧರಾಗುತ್ತಿದ್ದರು ತಾಯಂದಿರು. ಕಮ್ಮಿಯೇನು ಆಗೋದಿಲ್ಲ, ಕುಡಿದಷ್ಟೂ ಹಾಲು ಸ್ರವಿಸುತ್ತದೆ ಎಂದು ಇದನ್ನೂ ಬೆಂಬಲಿಸುವವರು ಇದ್ದರು.

ಈಗ ಹಾಲನ್ನು ಹಿಂಡಲು breast pump ಗಳು, ಕೆಡದಂತೆ ಇಡಲು cold storage ಗಳು, ಹಾಲು ಹೆಚ್ಚು ಉತ್ಪತ್ತಿಯಾಗಲು ಔಷಧಗಳು ಎಲ್ಲಾ ಬಂದು ಇದೊಂದು multi million pound ಉದ್ಯಮವಾಗಿದೆ. ವಿದೇಶದಲ್ಲಿ ಬಿರುಸಿನಿಂದ, ಭಾರತದಲ್ಲಿ ನಿಧಾನಗತಿಯಲ್ಲಿ ಈ ಉದ್ಯಮ ಬೆಳೆಯುತ್ತಿದೆ. Crude oil ಬೆಲೆಗಿಂತ ನಾನೂರು ಪಟ್ಟು ಹೆಚ್ಚಿನ ಬೆಲೆಯಿದೆ. ತಾಯಂದಿರಿಗೆ ತಮ್ಮ ಹಾಲು ಮಾರಾಟ ಮಾಡಿ, ಸಂಪಾದಿಸುವ ಪೂರಾ ಹಕ್ಕು ಇದೆ ಎಂಬ ಕೂಗಿದೆ, ಅದಕ್ಕಾಗಿ ಹೋರಾಟವೂ ನಡೆದಿದೆ. ಮೊಲೆ ಹಾಲಿನ ಮಾರಾಟವಿರಬಾರದು ಅದು ಎಳೆ ಕಂದಮ್ಮಗಳಿಗೆ ದಾನವಾಗಿ ಸಿಗಬೇಕು. ಇದನ್ನು ಲಾಭದಾಯಕ ಉದ್ಯಮ ಎಂದು ಪರಿಗಣಿಸಬಾರದು ಎಂಬ ಮಾತೂ ಇದೆ.

ಈ ಉದ್ಯಮ ಭಾರತದಲ್ಲಿ ಇನ್ನೂ ಅಂಬೆಗಾಲಿಡುವ ಹಂತದಲ್ಲಿದೆ. ಪುರುಷ ಪ್ರಧಾನ ಸಮಾಜ ನಮ್ಮದು. ಅಧಿಕಾರ, ಹಣ ಎಲ್ಲಾದಕ್ಕೂ ಮೂಲಾಧಾರ ಈ ಬಗೆಯ ಪರಿಸ್ಥಿತಿಯಲ್ಲಿ ಮೊಲೆ ಹಾಲು ಮಾರಾಟಕ್ಕಿಟ್ಟರೆ ಹೆಣ್ಣನ್ನು, ಅದರಲ್ಲೂ ಬಾಣಂತಿಯರನ್ನು ಶೋಷಿಸಲು ಮತ್ತೊಂದು ಮಜಲು ಸಿಕ್ಕಿದಂತೆ ಆಯಿತು.

ಸೋನಿ ಟಿವಿಯಲ್ಲಿ ಕ್ರೈಂ ಪಟ್ರೊಲ್ ಅನ್ನೊ ಒಂದು ಕಾರ್ಯಕ್ರಮ ಬರುತ್ತದೆ. ಈ ಲೇಖನ ಬರೆಯಲು ಶುರುಮಾಡಿದಾಗ, ಈ ತಾಯಿ, ಮೊಲೆ ಹಾಲು, ಎಳೇ ಕಂದಮ್ಮನ ಬಗೆಯ ಒಂದು episode ಬರುತ್ತಿತ್ತು.

ಒಂದು ಆಸ್ಪತ್ರೆ, ಒಂದೇ ಘಳಿಗೆಯಲ್ಲಿ ಎರಡು ಮಕ್ಕಳ ಜನನ. ಒಂದು ಗಂಡು, ಒಂದು ಹೆಣ್ಣು. ಇಬ್ಬರು ತಾಯಂದಿರು ತಮಗೆ ಗಂಡು ಮಗುವೇ ಆಗಿದ್ದು ಎಂದು ಸಾಧಿಸುತ್ತಾರೆ. ಹೆಣ್ಣು ಮಗು ನರ್ಸರಿಯಲ್ಲಿಯೇ ಉಳಿಯುತ್ತದೆ. ರಕ್ತ ಪರೀಕ್ಷೆ, ಡಿ ಎನ್ ಎ ಮ್ಯಾಚಿಂಗ್ ಎಲ್ಲಾ ಆಗಿ ರಿಸಲ್ಟ್ ಬರಲು ಸಮಯಬೇಕು ಹೆಣ್ಣು ಮಗುವಿಗೆ ಮೊಲೆಯುಣಿಸಲು ಇಬ್ಬರೂ ಒಪ್ಪುವುದಿಲ್ಲ. ಇಬ್ಬರೂ ಒಪ್ಪುವುದಿಲ್ಲ ಅಂದರೆ ಇಲ್ಲಿ ತಾಯಂದಿರು ಅಲ್ಲ ತಂದೆಯರು! ‘ಆ ಮಗು ನನ್ನದು ಎಂದು ರಿಸಲ್ಟ್ ಬರಲಿ ಆಗ ನನ್ನ ಹೆಂಡತಿ ಹಾಲುಡಿಸುತ್ತಾಳೆ’ ಎನ್ನುತ್ತಾನೆ ಒಬ್ಬ ತಂದೆ. ‘ಈ ಗಂಡು ಮಗು ನನ್ನದು ಇದಕ್ಕೆ ಮಾತ್ರ ಹಾಲುಣಿಸುತ್ತಾಳೆ ನನ್ನ ಹೆಂಡತಿ’ ಎನ್ನುತ್ತಾನೆ ಮತ್ತೊಬ್ಬ ತಂದೆ. ಹೊತ್ತು, ಹೆತ್ತು, ಮಲಗಿರುವ ಹೆಣ್ಣು ಮೌನವಾಗಿ ಕಣ್ಣರಳಿಸುತ್ತಾಳೆ. ಮೊಲೆಗಳಲ್ಲಿ ಹಾಲು ತುಂಬಿ ನೋವನುಭವಿಸುತ್ತಿರುವ ತಾಯಿ ಮುಖ ಮರೆ ಮಾಚುತ್ತಾಳೆ.

ಇಷ್ಟು ತೀವ್ರತರ ಪುರುಷ ದಬ್ಬಾಳಿಕೆ ಇರುವ ನಮ್ಮ ಸಮಾಜದಲ್ಲಿ ಮೊಲೆ ಹಾಲು ಮಾರಾಟಕ್ಕೆ ಬಂದರೆ ಹೆಣ್ಣಿನ ಶೋಷಣೆ  ನೂರ್ಮುಡಿಯಾಗುವುದರಲ್ಲಿ ಸಂಶಯವೇ ಇಲ್ಲ.

ಮೊಲೆ ಹಾಲು ಪ್ಲಾಸ್ಟಿಕ್ ಕವರುಗಳಲ್ಲಿ ಮಾರಾಟವಾಗಲು ಶುರುವಾದರೆ, ಅದೊಂದು ಉದ್ಯಮವಾದರೆ, ಆ ಹಾಲಿನಿಂದ ಶಕ್ತಿ ವೃದ್ಧಿಯಾಗುತ್ತದೆ, ಮಾಂಸಖಂಡಗಳು ಗಟ್ಟಿಯಾಗುತ್ತವೆ ಎಂಬೆಲ್ಲಾ ಮೂಢನಂಬಿಕೆಗಳು ಇರುವುದರಿಂದ ದುರ್ಬಳಕೆಯಾಗುವುದೇ ಹೆಚ್ಚು. (ಚಿತ್ರದುರ್ಗದ ಇತಿಹಾಸದಲ್ಲಿ ಸೈನಿಕರಿಗೆ ಮೊಲೆ ಹಾಲು ಹಿಂಡಿಕೊಟ್ಟ ತಾಯಂದಿರ ಕಥೆಗಳಿವೆ)

ತನ್ನ ಹೆಂಡತಿ ತನ್ನ ಸ್ವತ್ತು, ತನ್ನ ಮಕ್ಕಳ ತಾಯಿ ಎಂದು ಅಧಿಕಾರ ಸ್ಥಾಪಿಸುವ ಪುರುಷರು ಬದಲಾಗುವವರೆಗೂ ಸರಿ, ತಪ್ಪುಗಳ ವಿವೇಚನೆ ಬೆಳೆಸಿಕೊಂಡು ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಹೆಣ್ಣು ಪಡೆದುಕೊಳ್ಳುವವರೆಗೂ ಮೊಲೆ ಹಾಲು ಉದ್ಯಮವಾಗದಿರಲಿ, ಬಾಟಲಿನಲ್ಲಿ ಹಾಲು ಮಾರಾಟಕ್ಕೆ ಬರದಿರಲಿ, ತಾಯಿ ಡೈರಿ ಹಸುವಾಗದಿರಲಿ..

ಸುಖಕ್ಕೆ ಹೆಣ್ಣಿನ ದೇಹವನ್ನು, ಮಕ್ಕಳಿಗೆ ಅವಳ ಗರ್ಭವನ್ನು, ಹಾಲಿಗೆ ಅವಳ ಮೊಲೆಗಳನ್ನು ಮಾರಾಟ ಮಾಡಲು ನಿಂತರೆ.. ಅವನತಿ ಮುಂದಿನ ತಿರುವಿನಲ್ಲಿಯೇ..

1 COMMENT

  1. ‘ಪ್ರಪಂಚ ಹೀಗೂ ಇದ್ದಿರಬಹುದು’ ಎಂಬುದು ನಮ್ಮ ಊಹೆಗೆ ನಿಲುಕದ್ದು! ಅತ್ಯಂತ ಗಂಭೀರವಾದ ಈ ವಿಚಾರವನ್ನು ಉತ್ತಮವಾಗಿ ಪ್ರಸ್ತುತಪಡಿಸಿರುವ ತಮಗೆ ಆತ್ಮೀಯ ವಂದನೆ.

Leave a Reply