ಸಾಲ ತೀರ್ಸಲ್ಲ, ಮೋಜು ಬಿಡಲ್ಲ – ಇದು ಮಲ್ಯ ಬ್ರಾಂಡು, ನಮ್ ತೆರಿಗೆ ದುಡ್ಡಲ್ಲಿ ಷೋಕಿ ಫುಲ್ ಗ್ರಾಂಡು!

ಇಂಟರ್ನೆಟ್ ಸಂಗ್ರಹಚಿತ್ರ

ಡಿಜಿಟಲ್ ಕನ್ನಡ ವಿಶೇಷ

ಮಖಾಡೆ ಬಿದ್ದಿರುವ ಉದ್ಯಮ, ಬ್ಯಾಂಕ್ ಗೆ ತುಂಬಬೇಕಿರುವ ಕೋಟ್ಯಂತರ ರುಪಾಯಿಗಳ ಸಾಲ… ಇವನ್ನೆಲ್ಲ ಇಟ್ಟುಕೊಂಡ ಒಬ್ಬ ವ್ಯಕ್ತಿ ಹೇಗಿರೋಕೆ ಸಾಧ್ಯ? ಚಿಂತೆ- ಡಿಪ್ರೆಷನ್ನು, ಕಷ್ಟದ ಬದುಕು.. ಉಹುಂ, ಹಂಗ್ಯಾಕಿರಬೇಕು? ಲಾಸ್ ಆದ್ರೆ ಕಂಪನಿ ಉದ್ಯೋಗಿಗಳು ಬೇಕಾದ್ರೆ ಸಾಯ್ಲಿ, ನಾನು ಐಷಾರಾಮಾಗಿ ಇರ್ತೀನಿ ಅನ್ನೋ ಗತ್ತು ವಿಜಯ್ ಮಲ್ಯದು.

ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ರಘುರಾಮ್ ರಾಜನ್, ಮಲ್ಯ ಸಾಲ ತೀರಿಸದೇ ಸತಾಯಿಸುತ್ತಿರುವ ಧೋರಣೆಯನ್ನು ಪರೋಕ್ಷವಾಗಿ ಖಂಡಿಸಿದ್ರು. ‘ಆರ್ಥಿಕವಾಗಿ ಕಷ್ಟದಲ್ಲಿದ್ದೀರಿ, ಸಾಲ ತೀರಿಸೋಕಾಗಲ್ಲ ಎಂಬ ಸ್ಥಿತಿ ಇದ್ದರೆ ಸಾರ್ವಜನಿಕವಾಗಿ ಐ ಡೋಂಟ್ ಕೇರ್ ಎಂಬಂತೆ ದುಂದುವೆಚ್ಚ ಮಾಡೋದೇಕೆ? ಇವರಿಗೆಲ್ಲ ಸರಿಯಾಗಿ ವರ್ತಿಸೋಕೆ ಕಲಿಸಬೇಕಿದೆ ಎಂದಿದ್ದರು’. ಇವೆಲ್ಲದರ ನಡುವೆಯೂ ಡಿಸೆಂಬರ್ ನಲ್ಲಿ ತಮ್ಮ 60ನೇ ಹುಟ್ಟುಹಬ್ಬವನ್ನು ಗೋವಾದಲ್ಲಿರುವ ಐಶಾರಾಮಿ ವಿಲ್ಲಾದಲ್ಲಿ ವೈಭವವಾಗಿ ಆಚರಿಸಿಕೊಂಡಿರುವ ಮಲ್ಯ, ಆ ಬಗ್ಗೆ ಚೂರು ಮುಜುಗರ ಇಟ್ಟುಕೊಂಡಂತಿಲ್ಲ. ಮುಂಬೈ ಡರ್ಬಿಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಎಕನಾಮಿಕ್ಸ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ‘ಮೂರನೇ ಬಾರಿಗೆ ನನ್ನ 20ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದಾಗಿ ಗೆಳೆಯರಿಗೆ ತಿಳಿಸಿದ್ದೇನೆ’ ಎಂದಿದ್ದಾರೆ. ತಾವು 20 ದಾಟದ ಚಿರಯುವಕ ಅಂತ ಮಲ್ಯ ಹೊಗಳಿಕೊಂಡಿರಲಿ, ಆದರೆ ಎಸ್ ಬಿ ಐಗೆ ಕಟ್ಟಬೇಕಿರೋ ಸಾಲ ಮೊದಲು ತೀರಿಸಿ, ನಂತರ ತಮ್ಮ ಪೌರುಷ ಮೆರೆದುಕೊಂಡಿರಲಿ ಅಲ್ವೇ?

ಕಿಂಗ್ ಫಿಶರ್ ಏರ್ ಲೈನ್ಸ್ ನೆಲಕಚ್ಚಿ ಸಹಸ್ರಾರು ಕೋಟಿ ಸಾಲವಿದ್ದರೂ ಮಲ್ಯ ಮಾತ್ರ ಧೂಮ್ ಧಾಮ್ ಆಗಿ ರಾಯಲ್ ಜೀವನ ನಡೆಸುತ್ತಿದ್ರೆ, ಇತ್ತ ಕಂಗೆಟ್ಟು ಕೂತಿರೋರು ಸಾಲ ಕೊಟ್ಟ ಬ್ಯಾಂಕ್ ಗಳು. 2012ರ ವೇಳೆ ನಷ್ಟ ಅನುಭವಿಸಿದ ಕಿಂಗ್ ಫಿಶರ್ ಏರ್ ಲೈನ್ಸ್ ನೌಕರರಿಗೂ ವೇತನ ನೀಡದೇ ಬಾಕಿ ಉಳಿಸಿಕೊಂಡು ಅವರಿಗೆ ಸತಾಯಿಸುತ್ತಿದ್ದಾರೆ. ಪ್ರಸ್ತುತ ವಿವಿಧ ಬ್ಯಾಂಕ್ ಗಳಿಗೆ 7,500 ಕೋಟಿ ರು. ಗೂ ಹೆಚ್ಚು ಸಾಲ ತೀರಿಸಬೇಕಿರುವ ಮಲ್ಯ, ತನ್ನ ಶೋಕಿ ಜೀವನವನ್ನು ಮಾತ್ರ ಬಿಡಲು ಸಿದ್ಧವಿಲ್ಲ.

ಇಷ್ಟೆಲ್ಲಾ ಆದರೂ ಮಲ್ಯ, ಫಾರ್ಮುಲಾ ಒನ್ ರೇಸ್ ನಲ್ಲಿ ಸಹರಾ ಫೋರ್ಸ್ ಇಂಡಿಯಾ, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕುದುರೆ ಡರ್ಬಿ ರೇಸ್ಗಳಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ಮಲ್ಯ ಬರ್ತ್ ಡೇ ಪಾರ್ಟಿಗೆ 600ಕ್ಕೂ ಹೆಚ್ಚು ಅತಿಥಿಗಳು ಆಗಮಿಸಿದ್ರು. ಇದರಲ್ಲಿ ಉದ್ದಿಮೆ ಜಗತ್ತಿನ ಖ್ಯಾತನಾಮರಿದ್ದರು. ಇತ್ತೀಚೆಗೆ ವಿಮಾನದಲ್ಲಿ ಹಾಡಿ ವಿವಾದಕ್ಕೆ ಗುರಿಯಾಗಿದ್ದ ಸೋನು ನಿಗಮ್ ಮೂರು ದಿನಗಳ ಬರ್ತ್ ಡೇ ಪಾರ್ಟಿಯಲ್ಲಿ ಗಾಯನ ಪ್ರದರ್ಶನ ನೀಡಿದ್ರು.

ವಿಜಯ್ ಮಲ್ಯ ನಮ್ಮ ಕಣ್ಣಿಗೆ ಕುಕ್ಕುತ್ತಿರುವ ಉದಾಹರಣೆ ಅಷ್ಟೆ. ಮಾಧ್ಯಮದಲ್ಲಿ, ಅಧಿಕಾರದ ಪಡಸಾಲೆಗಳಲ್ಲಿ ಭಾರೀ ಪ್ರಾಮುಖ್ಯ ಪಡೆದುಕೊಳ್ಳುತ್ತಿರುವ ಉದ್ಯಮಿಗಳಲ್ಲಿ ಹಲವರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ದೊಡ್ಡ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿದ್ದಾರೆ.

ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಪಡೆದಿರುವ ಮಾಹಿತಿ ಏನೆಂದರೆ, 2013-2015ರ ಅವಧಿಯಲ್ಲಿ 29 ರಾಜ್ಯಗಳ ಬ್ಯಾಂಕ್ ಗಳಲ್ಲಿ ಒಟ್ಟೂ 1.14 ಲಕ್ಷ ಕೋಟಿ ರುಪಾಯಿಗಳ ಕೆಟ್ಟ ಸಾಲವನ್ನು ಮನ್ನಾ ಮಾಡಲಾಗಿದೆ. ಇದರ ಲಾಭ ಪಡೆದ ಪ್ರಮುಖರು ಯಾರು ಎಂದು ಕೇಳಿದ್ದ ಪ್ರಶ್ನೆಗೆ, ಆ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂಬ ಉತ್ತರ ಬಂದಿದೆ. ಕೋಟ್ಯಂತರ ರುಪಾಯಿ ಸಾಲವನ್ನು ಮರುಪಾವತಿ ಮಾಡದೇ ದಕ್ಕಿಸಿಕೊಳ್ಳುವ ತಾಕತ್ತು ಈ ದೇಶದಲ್ಲಿರೋದು ಉದ್ಯಮಿಗಳಿಗೆ ಮಾತ್ರವೇ ಅನ್ನೋದು ತೆರೆದಿಟ್ಟ ರಹಸ್ಯ. ಕೊನೆಗೂ ಇವೆಲ್ಲದರ ಹೊರೆ ಯಾರಿಗೆ? ಹುಟ್ಟುಹಬ್ಬ ಅಂತೆಲ್ಲ ಆಚರಿಸಿಕೊಂಡಿದ್ದರೆ ಹಣ ಹೊಂದಿಸೋದು ಹೆಂಗೆ ಅಂತ ತಲೆಕೆಡಿಸಿಕೊಂಡು, ಬರುವ ಸಂಬಳದಲ್ಲೇ ಉಳಿತಾಯದ ಒದ್ದಾಟಗಳನ್ನಿಟ್ಟುಕೊಂಡು ತೆರಿಗೆ ಕಟ್ಟುತ್ತಿರುವ ಜನಸಾಮಾನ್ಯನಿಗೆ.

ಸಾಲ ತೀರಿಸಲ್ಲ, ಮೋಜು ಬಿಡಲ್ಲ ಎಂಬ ಉದ್ಯಮಿಗಳ ಧೋರಣೆ ನಮ್ಮೆಲ್ಲರನ್ನೂ ನಿಕೃಷ್ಟರನ್ನಾಗಿ ಕಾಣುತ್ತಿರುವ ಅಹಂಕಾರವಲ್ಲದೇ ಇನ್ನೇನು?

1 COMMENT

  1. ಇದೇ ಕೆಲಸ ರೈತರಾಗಲಿ ಅಥವಾ ಸಣ್ಣ ಉದ್ಧಿಮೆದಾರರಾಗಲಿ ಮಾಡಿದ್ದರೆ ಅವರ ಮಾನ ಕಳೆದು, ಮನೆ, ಆಸ್ರಿ, ಕಾರು ಎಲ್ಲವನ್ನು ಕಿತ್ತುಕೊಂಡು ಹುಟ್ಟ ಬಟ್ಟೆಯಲ್ಲಿ ಅವರನ್ನು ಹೊರದಬ್ಬುತ್ತಿದ್ದರು. ಶೋಕಿಲಾಲ್ ಉದ್ಯಮಿಗಳ ಪ್ರಭಾವಕ್ಕೆ ಮಣಿದ ಮತ್ತು ಮಣಿಯುತ್ತಿರುವ ಬ್ಯಾಂಕ್ ಗಳು ಇಂತವರ 1.14 ಲಕ್ಷ ಕೋಟಿಗಳಷ್ಠು ಸಾಲವನ್ನು ಮನ್ನಾ ಮಾಡಿರುವುದು ಎಲ್ಲಾ ಭಾರತೀಯರಿಗೂ ಮಾಡಿರುವ ಅವಮಾನ. ದೇಶದ ಜನತೆಯ ಹಸಿವನ್ನು ನಿಗಿಸಲು ಶ್ರಮಪಡುತ್ತಿರುವ ಅನ್ನದಾತನಿಗೆ ಒಂದೋ ಅಥವಾ ಎರಡೋ ಲಕ್ಷಗಳು ಸಾಲ ಕೇಳಿದರೆ ನೂರಾರು ದಾಖಲೆ ಕೇಳಿ ಅಡಮಾನಕ್ಕೆ ಇಟ್ಟು ಕೊಳ್ಳುವ ಬ್ಯಾಂಕುಗಳು ಮಲ್ಯ ನಂತವರಿಗೆ ಸಾವಿರಾರು ಕೋಟಿ ಸಾಲ ನೀಡಲು ಏನ್ನನ್ನು ಪಡೆದುಕೊಂಡು ಸಾಲ ನೀಡಿದ್ದಿರೀ..? ಇದು ಸಾಮಾನ್ಯರನ್ನು ಕೆರಳಿಸದೇ ಮತ್ತೇನು..? ಇದೇ ರೀತಿಯ ತಾರತಮ್ಯ ಮುಂದುವರೆದರೆ ಮುಂದಿನ ದಿನಗಳಲ್ಲಿ ಸರ್ಕಾರ, ಉದ್ಯಮಿಗಳ ವಿರುದ್ಧ ದಂಗೆ ಏಳಲು ತಂಬಾ ಸಮಯ ಬೇಕಿಲ್ಲ.

Leave a Reply