ಸಿಯಾಚಿನ್ ನಲ್ಲಿ ಸಾವನ್ನು ಹಿಮ್ಮೆಟ್ಟಿಸೋದಕ್ಕೆ ಕನ್ನಡದ ಕುವರಗೆ ನೆರವಾಗಿದ್ದು ಯೋಗವೇ, ಹೋರಾಟದ ಹುಟ್ಟುಗುಣವೇ..?

ಡಿಜಿಟಲ್ ಕನ್ನಡ ಟೀಮ್

ಸಿಯಾಚಿನ್ ನಲ್ಲಿ ಪವಾಡ ಸದೃಶ ರೀತಿಯಲ್ಲಿ ಬದುಕಿಬಂದು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸಾವಿನೊಂದಿಗೆ ಸಮರದಲ್ಲಿರುವ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಬದುಕಿ ಬರಲಿ ಅಂತ ದೇಶವೇ ಪ್ರಾರ್ಥಿಸುತ್ತಿದೆ. ಪೂರ್ವ ತಯಾರಿ ಇಲ್ಲದೇ ನಾಲ್ಕು ತಾಸಿಗಿಂತ ಹೆಚ್ಚು ಬದುಕಲಾಗದ ಸಿಯಾಚಿನ್ ನೆತ್ತಿ ಮೇಲೆ, ಹಿಮಪದರದಡಿಯಲ್ಲಿ 6 ದಿನಗಳ ಕಾಲ ಬದುಕಿ ಉಳಿದಿರಬೇಕಾದರೆ, ಈ ಸಮರವನ್ನೂ ಜಯಿಸಿಯೇ ಜಯಿಸುತ್ತಾರೆಂಬ ಭರವಸೆ ಎಲ್ಲರಲ್ಲಿ.

ಇದೀಗ ಕೊಪ್ಪದ್ ಅವರು ನಂಬಲಸಾಧ್ಯವಾದ ರೀತಿಯಲ್ಲಿ, ಅಂಥ ಪ್ರತಿಕೂಲ ವಾತಾವರಣದಲ್ಲಿ ಶ್ವಾಸ- ನಾಡಿಮಿಡಿತ ಕಾಪಾಡಿಕೊಂಡಿರುವುದಕ್ಕೆ ಕಾರಣಗಳೇನು ಅಂತ ಚರ್ಚೆ ಆಗ್ತಿದೆ. ಅಂಥ ಮನೋಧಾರ್ಡ್ಯವೊಂದು ಅವರಲ್ಲಿ ಹೇಗೆ ತುಂಬಿಕೊಂಡಿತ್ತು ಎಂಬುದರ ಸಾಧ್ಯತೆಗಳ ಚರ್ಚೆ ಆಗುತ್ತಿದೆ. ನಿಜವಾದ ಕತೆಯನ್ನು ಅವರೇ ಎದ್ದುಬಂದು ಹೇಳುವಂಥ ರೋಮಾಂಚನ ಈ ದೇಶಕ್ಕೆ ಒದಗಲಿ ಅಂತ ಆಶಿಸುತ್ತಲೇ, ಈಗ ಪ್ರಸ್ತಾಪಿತವಾಗುತ್ತಿರುವ ಸಾಧ್ಯತೆಗಳನ್ನು ಗಮನಿಸೋಣ.

  • ಲ್ಯಾನ್ಸ್ ನಾಯಕ್ ಹನುಮಂತಪ್ಪ ಯೋಗ ಅಭ್ಯಾಸ ಮಾಡುವವರಾಗಿದ್ದರು. ದೈವಭಕ್ತ ಸಹ. ಹನುಮಂತಪ್ಪ ಅವರು ಜೀವ ಉಳಿಸಿಕೊಂಡಿರುವುದಕ್ಕೆ ಯೋಗವೇ ಸಹಾಯ ಮಾಡಿತೇ ಎಂಬುದು ಈಗ ಎದ್ದಿರುವ ಜಿಜ್ಞಾಸೆ. ಆಫ್ಕೋರ್ಸ್.. ಇದೊಂದೇ ಅಲ್ಲದೇ ಹಲವು ಪೂರಕ ಕಾರಣಗಳು ಪ್ರಕೃತಿಯಲ್ಲೂ ಒದಗಿದ್ದಿರಬಹುದು. ಆದರೆ, ಹಿಮಪಾತದಲ್ಲಿ ಸಿಲುಕಿಕೊಂಡಾಗ ಎಂಥ ತಯಾರಿ ಇದ್ದರೂ ಗಲಿಬಿಲಿ ಆವರಿಸುತ್ತದೆ. ಈ ಗಾಬರಿ ಉಸಿರಾಟದ ಏರಿಳಿತ ಹೆಚ್ಚಿಸುತ್ತದೆ. ಹಿಮಶಿಲೆಗಳ ನಡುವೆ ಆಮ್ಲಜನಕದ ಕೊರತೆಯೇ ಜೀವಕ್ಕೆ ಕುತ್ತು ತರುವ ಅಂಶ. ಹೀಗಿರುವಾಗ, ಮಾನಸಿಕ ದೃಢತೆ ಸಾಧಿಸಿ, ಉಸಿರಾಟದ ಮೇಲೆ ನಿಯಂತ್ರಣ ಸಾಧಿಸಿದ್ದು ಹನುಮಂತಪ್ಪ ಉಳಿವಿಗೆ ಕಾರಣವಾಗಿದ್ದಿರಬಹುದು.
  • ಹಿಮಶಿಲೆ ಕೆಳಗೆ 25-35 ಅಡಿ ಜಾರುತ್ತಲೂ ಹನುಮಂತಪ್ಪ ತಮ್ಮ ಮಿಲಿಟರಿ ಅಭ್ಯಾಸದ ಯಾವ ಅಂಶವನ್ನೂಗಲಿಬಿಲಿಯಲ್ಲಿ ಮರೆಯದೇ ಪ್ರಜ್ಞಾವಂತಿಕೆ ಮೆರೆದಿರುವ ಸಾಧ್ಯತೆ ಇದೆ. ಹಿಮದೊಡಲೊಳಗೆ ಜಾರುತ್ತಿದ್ದಾಗ ಕೈಗಳನ್ನು ತಲೆಗಿಂತ ಮೇಲಕ್ಕೆ ಎತ್ತರಿಸಿ ಹಿಡಿಯೋದು, ಹುಡುಕಲು ಬರುವವರಿಗೆ ಸಂಕೇತ ಸಿಗುವಂತೆ ಬೆಕಾನ್ ಸಾಧನವನ್ನು ಹೆಗಲಿಗೇರಿಸಿಕೊಳ್ಳೋದು… ಇಂಥದೇ ಕೆಲವು ಅತಿ ತ್ವರಿತ ಸಾಹಸಗಳ ಮೂಲಕ ತನ್ನ ಸುತ್ತ ಜಾಗವೇ ಇಲ್ಲದಂತೆ ಹಿಮಶಿಲೆ ಮುಚ್ಚಿಕೊಳ್ಳೋದರಿಂದ ತಪ್ಪಿಸಿಕೊಂಡು, ಅತ್ಯಲ್ಪ ಆಮ್ಲಜನಕ ಲಭ್ಯತೆಯ ಪದರವೊಂದನ್ನು ನಿರ್ಮಿಸಿಕೊಂಡಿರುವ ಸಾಧ್ಯತೆ ಇದೆ.
  • ಹಿಮಪಾತವಾದ ಸಂದರ್ಭದಲ್ಲಿ ನಿಸರ್ಗ ಮಟ್ಟದಲ್ಲಿ ಕೆಲವೇ ಚಿಕ್ಕ ಅನುಕೂಲಗಳು ಹನುಮಂತಪ್ಪ ಅವರಿಗೆ ದೊರಕಿದ್ದಿರಬಹುದಾದರೂ, ಅವನ್ನು ಬಳಸಿಕೊಳ್ಳುವಲ್ಲಿ ಸಮಯಪ್ರಜ್ಞೆ, ಊಹೆಗೂ ಮೀರಿದ ಮಾನಸಿಕ ಸ್ಥೈರ್ಯ ಬೇಕಾಗುತ್ತದೆ. ಮಿಲಿಟರಿ ತಾಲೀಮು, ಸೈನಿಕರಿಗೆ ಸಹಜವಾದ ತಯಾರಿ ಇವೆಲ್ಲ ಸರಿ… ಇಷ್ಟಾಗಿಯೂ ಈ ಯೋಧನಲ್ಲಿ ಇನ್ನೇನೋ ಗಟ್ಟಿತನವಿರಬೇಕಲ್ಲ, ಅದೆಲ್ಲಿಂದ ಬಂತು ಎಂದು ಗಮನಿಸುವುದಕ್ಕೆ ಹೋದರೆ ಹನುಮಂತಪ್ಪ ತಮ್ಮ ವೃತ್ತಿಯ ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನೇ ಮೈಮೇಲೆ ಎಳೆದುಕೊಂಡ ಚಿತ್ರಣ ಸಿಗುತ್ತದೆ. ಬದುಕನ್ನೇ ಸಮರ ಎಂದು ಈ ವೀರಯೋಧ ಪರಿಭಾವಿಸಿದಂತಿದೆ.
  • ಹೈಸ್ಕೂಲಿನ ದಿನಗಳಲ್ಲಿ ಆರು ಕೀ.ಮಿ. ನಡೆದು ಶಾಲೆ ತಲುಪಿಕೊಳ್ಳುವುದರಿಂದಲೇ ಹನುಮಂತಪ್ಪನವರ ಜೀವನ ಸಮರ ಆರಂಭವಾಯಿತೇನೋ. ಚಿಕ್ಕಂದಿನಿಂದಲೂ ಸೇನೆ ಸೇರಬೇಕೆಂಬ ಕನಸನ್ನು ಸಾಕಾರಗೊಳಿಸಿಕೊಂಡಿದ್ದೂ ಹೋರಾಡಿಯೇ. ಸೇನೆ ಸೇರುವ ಪರೀಕ್ಷೆಯಲ್ಲಿ ಮೂರು ಬಾರಿ ವೈಫಲ್ಯ ಎದುರಾದರೂ ಪಟ್ಟು ಬಿಡದೇ, ನಾಲ್ಕನೇ ಬಾರಿ 19ನೇ ಮದ್ರಾಸ್ ರೆಜಿಮೆಂಟ್ ಸೇರುವುದರಲ್ಲಿ ಯಶಸ್ವಿಯಾದರು ಹನುಮಂತಪ್ಪ.
  • ನಂತರದ ಹಂತದಲ್ಲಿ, ವೃತ್ತಿಯಲ್ಲಿ ಸಹ ಅನುಕ್ಷಣವೂ ಹೋರಾಚದ ಮಾರ್ಗವೇ ಹನುಮಂತಪ್ಪನವರದ್ದು. 2002ರಲ್ಲಿ ಸೇನೆ ಸೇರಿದ ಅವರು 2003 ರಿಂದ 2006ರ ಅವಧಿಗೆ ತೊಡಗಿಸಿಕೊಂಡಿದ್ದು ಜಮ್ಮು- ಕಾಶ್ಮೀರದ ಒಳನುಸುಳುವಿಕೆ ತಡೆಯುವ ಪಡೆಯಲ್ಲಿ. 2008-2010ರ ಅವಧಿಯಲ್ಲಿ ಮತ್ತೆ ತಾವೇ ಕೇಳಿಕೊಂಡು ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿದರು. 2010-12ರ ಅವಧಿಯಲ್ಲಿ ಈಶಾನ್ಯ ಭಾರತದ ಹಿಂಸಾಗ್ರಸ್ತ ಪ್ರದೇಶಗಳಲ್ಲಿ ಬಂಡುಕೋರರನ್ನು ಹತ್ತಿಕ್ಕುವ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡರು. ಈ ಎಲ್ಲಶೌರ್ಯವೇ ಅವರನ್ನು ಸಿಯಾಚಿನ್ ನ ಅತಿ ಕಷ್ಟದ ಪಹರೆಗೆ ಕೊಂಡೊಯ್ದಿತು.

ನಮಗಾಗಿ ಇಷ್ಟೆಲ್ಲ ಸಮರಗಳನ್ನು ಗೆದ್ದವನು ಈಗ ಸಾವಿನ ಸಮರವನ್ನೂ ಗೆದ್ದುಬಿಡಲಿ.. ದೇಶದ ಪ್ರಾರ್ಥನೆ ಇನ್ನೊಂದು ಪವಾಡ ಸೃಷ್ಟಿಸಲಿ..

Leave a Reply