ದಿಲ್ಲಿ ನೆಹರು ವಿವಿಯಲ್ಲಿ ದೇಶದ್ರೋಹಿ ಅಫ್ಜಲ್ ಗುರು ಪುಣ್ಯಸ್ಮರಣೆ, ಅಬ್ಬಾ.. ಧನ್ಯಳಾದಳು ಭಾರತಾಂಬೆ!  

ಡಿಜಿಟಲ್ ಕನ್ನಡ ಟೀಮ್

ಲ್ಯಾನ್ಸ್ ನಾಯಕ ಹನುಮಂತಪ್ಪ ಸೇರಿ ಹತ್ತು ಯೋಧರು ಸಿಯಾಚಿನ್ ಹಿಮಪಾತಕ್ಕೆ ಬಲಿಯಾದ ದುಃಖದಲ್ಲಿ ದೇಶ ಮುಳುಗಿದ್ದರೆ, ಇತ್ತ ದಿಲ್ಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಎಡಪಂಥೀಯ ವಿದ್ಯಾರ್ಥಿಗಳ ಸಂಘ ದೇಶದ್ರೋಹಕ್ಕೆ ನೇಣಿಗೇರಿದ ಅಫ್ಜಲ್ ಗುರುವಿನ ಪುಣ್ಯಸ್ಮರಣೆ ಆಚರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ತರಾಟೆಗೂ ಒಳಗಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದಾಗಿ ವಿವಿಯಿಂದ ಅಪ್ಪಣೆ ಪಡೆದ ಈ ವಿದ್ಯಾರ್ಥಿಗಳ ಸಂಘಟನೆ ಬುಧವಾರ ಅಫ್ಜಲ್ ಗುರು ಮತ್ತು ಜಮ್ಮು- ಕಾಶ್ಮೀರದ ಲಿಬರೇಶನ್ ಫ್ರಂಟ್ ಸಹ ಸಂಸ್ಥಾಪಕ ಮಖ್ಬೂಲ್ ಭಟ್ ಪುಣ್ಯಸ್ಮರಣೆ ಆಚರಿಸಿತಲ್ಲದೇ ಅಫ್ಜಲ್ ಗುರು ಬಗ್ಗೆ ತಯಾರಿಸಲಾದ ಸಾಕ್ಷಚಿತ್ರ ಪ್ರದರ್ಶನಕ್ಕೆ ಮುಂದಾಗಿದೆ. ಇದಕ್ಕೆ ಬಲಪಂಥೀಯ ವಿದ್ಯಾರ್ಥಿ ಗುಂಪು ತಡೆಯೊಡ್ಡಿದಾಗ ವಿವಿ ಆವರಣದಲ್ಲಿ ಬಿಗುವಿನ ವಾತಾವಾರಣ ಸೃಷ್ಟಿಯಾಗಿತ್ತು.

ಈ ವಿಷಯ ತಿಳಿದು ಎಬಿವಿಪಿ ನಾಯಕರು, ಕಾರ್ಯಕರ್ತರು ಗುರುವಾರ ವಿವಿ ಆವರಣಕ್ಕೆ ಆಗಮಿಸಿ ಪ್ರತಿಭಟನೆಗೆ ಇಳಿದರು. ಇದಕ್ಕೆ ಪರ್ಯಾಯವಾಗಿ ಎಡಪಂಥೀಯ ಗುಂಪು ಕೂಡ ಪ್ರತಿಭಟನೆ ನಡೆಸಿತು. ಎರಡೂ ಗುಂಪುಗಳು ಪರಸ್ಪರ ಘೋಷಣೆ ಹಾಕಿದವು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ವಿವಿಯ ಆಡಳಿತ ಮಂಡಳಿ ಮಧ್ಯೆ ಪ್ರವೇಶಿಸಿತು. ಇದೀಗ ತಪ್ಪು ಮಾಹಿತಿ ನೀಡಿ ಅಫ್ಜಲ್ ಗುರು ಸ್ಮರಣೆಗೆ ಮುಂದಾದ ಬಗ್ಗೆ ತನಿಖೆ ನಡೆಸಲು ಕುಲಪತಿ ಎಂ. ಜಗದೀಶ್ ಕುಮಾರ್ ಸಮಿತಿ ರಚಿಸಿದ್ದಾರೆ. ತಪ್ಪು ಮಾಹಿತಿ, ಅಸಭ್ಯ ವರ್ತನೆ, ವಿವಿ ನಿಯಮಗಳ ಉಲ್ಲಂಘನೆ ಬಗ್ಗೆ ತನಿಖೆ ನಡೆಯಲಿದೆ.

ಘಟನೆ ನಡೆದು ದಿನ ಕಳೆದರೂ ದೇಶದ್ರೋಹಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಬಿವಿಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ಈ ಬಗ್ಗೆ ಪ್ರಧಾನಿ ಕಾರ್ಯಾಲಯ, ಗೃಹ ಮತ್ತು ಮಾನವ ಸಂಪನ್ಮೂಲ ಇಲಾಖೆಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ ಎಬಿವಿಪಿ  ಮುಖಂಡ ಸೌರಭ್ ಕುಮಾರ್ ಶರ್ಮಾ.

ಅಫ್ಜಲ್ ಗುರು ಪುಣ್ಯಸ್ಮರಣೆ ಮತ್ತು ಸಾಕ್ಷಚಿತ್ರ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮದ ಒಂದು ಭಾಗ. ಆದರೆ ಇದನ್ನೆ ನೆಪ ಮಾಡಿಕೊಂಡು ಇಡೀ ಕಾರ್ಯಕ್ರಮ ರದ್ದು ಮಾಡಿರುವುದು ಖಂಡನೀಯಯ. ಎಬಿವಿಪಿ ಇದೇ ರೀತಿ ಒತ್ತಡ ಹೇರಿದ್ದರಿಂದ ಹೈದರಾಬಾದ್ ವಿವಿಯ ರೋಹಿತ್ ವೆಮುಲ ಆತ್ಯಹತ್ಯೆ ಮಾಡಿಕೊಂಡರು. ಈಗ ಅಂತಹುದೇ ಪ್ರಯತ್ನ ಜೆಎನ್ ಯುನಲ್ಲೂ ನಡೆಯುತ್ತಿದೆ ಎಂಬುದು ಕಾರ್ಯಕ್ರಮ ಸಂಘಟಕ ಅನೀರ್ ಬಾನ್ ಆರೋಪ. ಘಟನೆ ಕುರಿತು ಪೋಲಿಸ್ ದೂರು ದಾಖಲಾಗಿದೆ. ಘಟನೆಯ ಸಂಪೂರ್ಣ ವಿಡಿಯೋ ಪೂಟೇಜ್ ಲಭ್ಯವಿದ್ದು, ವಿವಿ ಆವರಣದಲ್ಲಿ ಶಾಂತಿ ಕದಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೆಚ್ಚುವರಿ ಡಿಸಿಪಿ (ದಕ್ಷಿಣ) ಕುಶ್ವಾಹ ತಿಳಿಸಿದ್ದಾರೆ.

Leave a Reply