ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಇನ್ನಿಲ್ಲ, ಅವರ ವೀರಗಾಥೆಗೆ ಮರಣವಿಲ್ಲ

 

ಡಿಜಿಟಲ್ ಕನ್ನಡ ಟೀಮ್

ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಆರುದಿನಗಳ ಕಾಲ ಪವಾಡ ಸದೃಶ್ಯವಾಗಿ ಬದುಕುಳಿದ್ದ, ಮನೋಸ್ಥೈರ್ಯಕ್ಕೆ ಅತ್ಯುನ್ನತ ಮಾದರಿಯಾಗಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಗುರುವಾರ ಬೆಳಗ್ಗೆ 11.40ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಲ್ಯಾನ್ಸ್ ನಾಯಕ್ ಹನುಮಂತಪ್ಪನವರ ಪವಾಡಸದೃಶ್ಯ ಜೀವಂತಿಕೆಯನ್ನು ಸಂಭ್ರಮಿಸಿ ದೆಹಲಿಗೆ ಹೋಗಿದ್ದ ಅವರ ಕುಟುಂಬದ ನಗುಮೊಗವನ್ನು ಮೊನ್ನೆಯಷ್ಟೇ ಕಣ್ತುಂಬಿಸಿಕೊಂಡಿದ್ದ ದೇಶಕ್ಕೀಗ ಅವರ ದುಃಖ ನೋಡಬೇಕಾದ ದೌರ್ಭಾಗ್ಯ.

ಅತಿಶೀತದಿಂದ ಲಿವರ್- ಕಿಡ್ನಿಗಳೆಲ್ಲ ವಿಫಲವಾಗಿ, ನ್ಯುಮೋನಿಯಕ್ಕೆ ತುತ್ತಾಗಿದ್ದ ಹನುಮಂತಪ್ಪ ಅವರನ್ನು ಬದುಕಿಸುವುದಕ್ಕೆ ವೈದ್ಯರು ತಮ್ಮೆಲ್ಲ ಪ್ರಯತ್ನ ಧಾರೆ ಎರೆದರಾದರೂ ಅದು ಫಲಿಸಲಿಲ್ಲ. ಲ್ಯಾನ್ಸ್ ನಾಯಕ್ ಹನುಮಂತಪ್ಪ ಮಿಲಿಟರಿ ದಂತಕತೆಯಾಗಿ, ತಲೆಮಾರುಗಳನ್ನು ಪ್ರಭಾವಿಸುವ ಶೌರ್ಯಗಾಥೆಯೊಂದನ್ನು ಬಿಟ್ಟು ಮರೆಯಾಗಿದ್ದಾರೆ.

ಹೈಸ್ಕೂಲಿನ ದಿನಗಳಲ್ಲಿ ಆರು ಕೀ.ಮಿ. ನಡೆದು ಶಾಲೆ ತಲುಪಿಕೊಳ್ಳುವುದರಿಂದಲೇ ಹನುಮಂತಪ್ಪನವರ ಜೀವನ ಸಮರ ಆರಂಭವಾಯಿತೇನೋ. ಚಿಕ್ಕಂದಿನಿಂದಲೂ ಸೇನೆ ಸೇರಬೇಕೆಂಬ ಕನಸನ್ನು ಸಾಕಾರಗೊಳಿಸಿಕೊಂಡಿದ್ದೂ ಹೋರಾಡಿಯೇ. ಸೇನೆ ಸೇರುವ ಪರೀಕ್ಷೆಯಲ್ಲಿ ಮೂರು ಬಾರಿ ವೈಫಲ್ಯ ಎದುರಾದರೂ ಪಟ್ಟು ಬಿಡದೇ, ನಾಲ್ಕನೇ ಬಾರಿ 19ನೇ ಮದ್ರಾಸ್ ರೆಜಿಮೆಂಟ್ ಸೇರುವುದರಲ್ಲಿ ಯಶಸ್ವಿಯಾದರು ಹನುಮಂತಪ್ಪ.

ನಂತರದ ಹಂತದಲ್ಲಿ, ವೃತ್ತಿಯಲ್ಲಿ ಸಹ ಅನುಕ್ಷಣವೂ ಹೋರಾಟದ ಮಾರ್ಗವೇ ಹನುಮಂತಪ್ಪನವರದ್ದು. 2002ರಲ್ಲಿ ಸೇನೆ ಸೇರಿದ ಅವರು 2003 ರಿಂದ 2006ರ ಅವಧಿಗೆ ತೊಡಗಿಸಿಕೊಂಡಿದ್ದು ಜಮ್ಮು- ಕಾಶ್ಮೀರದ ಒಳನುಸುಳುವಿಕೆ ತಡೆಯುವ ಪಡೆಯಲ್ಲಿ. 2008-2010ರ ಅವಧಿಯಲ್ಲಿ ಮತ್ತೆ ತಾವೇ ಕೇಳಿಕೊಂಡು ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿದರು. 2010-12ರ ಅವಧಿಯಲ್ಲಿ ಈಶಾನ್ಯ ಭಾರತದ ಹಿಂಸಾಗ್ರಸ್ತ ಪ್ರದೇಶಗಳಲ್ಲಿ ಬಂಡುಕೋರರನ್ನು ಹತ್ತಿಕ್ಕುವ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡರು. ಈ ಎಲ್ಲ ಶೌರ್ಯವೇ ಅವರನ್ನು ಸಿಯಾಚಿನ್ ನ ಅತಿ ಕಷ್ಟದ ಪಹರೆಗೆ ಕೊಂಡೊಯ್ದಿತು.

ಹಾಸನದ ಹುತಾತ್ಮ ಯೋಧ ನಾಗೇಶ ಟಿಟಿ, ಮೈಸೂರಿನ ಹುತಾತ್ಮ ಯೋಧ ಮಹೇಶ ಪಿ. ಎನ್ ಸೇರಿದಂತೆ ಉಳಿದ ಒಂಬತ್ತು ಯೋಧರ ದೇಹಗಳು ಇನ್ನಷ್ಟೇ ತಲುಪಬೇಕಿವೆ.

Leave a Reply