ಸಿಯಾಚಿನ್ ಪವಾಡವೆಂಬ ವಿಸ್ಮಯ- ವಿಷಾದವನ್ನು ಜೀಕುತ್ತಿರುವಾಗ ನೆನಪಾಗುತ್ತಿದ್ದಾರೆ ಜಾರ್ಜ್ ಫರ್ನಾಂಡೀಸ್!

ಚೈತನ್ಯ ಹೆಗಡೆ

ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಜೀವ ಉಳಿಯಲಿಲ್ಲಎಂಬುದು ಕಡು ವಿಷಾದವೇ. ಆದರೆ, ಒಬ್ಬ ವ್ಯಕ್ತಿ ಮನೋಬಲವನ್ನು ಕಾಪಿಟ್ಟುಕೊಂಡು ಹೇಗೆ ಕೊನೆಯುಸಿರಿನವರೆಗೆ ಧೀರೋದ್ದಾತವಾಗಿ ಹೋರಾಡಬಹುದೆಂದು ತೋರಿಸಿಕೊಟ್ಟರು ಅವರು. ಸೇನೆ ಸೇರುವವರಿಗೆ ಅಂತಲ್ಲ, ಸಾಮಾನ್ಯ ಬದುಕನ್ನು ಎದುರಿಸುವ ನಮ್ಮೆಲ್ಲರಿಗೂ ಮಾದರಿ.

ಅವರ ನೆನಪಲ್ಲಿ ದೇಶವೇ ಒಂದಾಗಿದೆ. ಕಂಪಿಸುವ ಬೆರಳುಗಳಿಂದ ಭೂಪಟದಲ್ಲಿ ಸಿಯಾಚಿನ್ ಪ್ರಾಂತ್ಯವನ್ನು ಹುಡುಕುತ್ತಿದ್ದೇವೆ, ಪುಣ್ಯಕ್ಷೇತ್ರವೊಂದನ್ನು ಕಣ್ತುಂಬಿಸಿಕೊಳ್ಳುವ ತೆರದಲ್ಲಿ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಸಿಯಾಚಿನ್ ನಲ್ಲಿ ಏಕೆ ಪಹರೆಗೆ ಇರಲೇಬೇಕು ಎಂಬುದನ್ನು ವಿವರಿಸುವುದಕ್ಕೆ ಕಾರಣಗಳು ಪ್ರಬಲವಾಗಿವೆ.

ಇಂಥ ಸಿಯಾಚಿನ್ ಬಗ್ಗೆ ಸಾರ್ವಜನಿಕರಲ್ಲಿ ಮೊದಲಿಗೆ ಅರಿವು ಮೂಡಿಸಿದ ಶ್ರೇಯಸ್ಸು ಸಲ್ಲಬೇಕಿರುವುದು ಎನ್ ಡಿ ಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಮಂತ್ರಿ ಆಗಿದ್ದ ಜಾರ್ಜ್ ಫರ್ನಾಂಡೀಸ್ ಅವರಿಗೆ. ಅಲ್ಜಮೀರ್ ಎಂಬ ಭಯಾನಕ ಮರೆವಿನ ಕಾಯಿಲೆಗೆ ತುತ್ತಾಗಿ ಅವರ ಸ್ಮೃತಿಯೆಲ್ಲವೂ ಯಾವುದೋ ಹಿಮಲೋಕದಲ್ಲಿ ಮುಳುಗಿಹೋಗಿದೆ. ಬಾಬಾ ರಾಮದೇವ್ ಆಶ್ರಮದಲ್ಲೆಲ್ಲೋ ಚಿಕಿತ್ಸೆ ಪಡೀತಿದಾರಂತೆ ಎಂಬ ಮಾಹಿತಿ ಬಿಟ್ಟರೆ, ಅವರ ಇರುವನ್ನು ಸೂಚಿಸುವ ಸುದ್ದಿಗದ್ದಲಗಳು ಯಾವತ್ತೋ ಮೌನವಾಗಿವೆ.

ಇರಲಿ… ಸಿಯಾಚಿನ್ ಸುದ್ದಿಯಾಗುತ್ತಿರುವ ಈ ಹೊತ್ತಿನಲ್ಲಿ ಅವರನ್ನು ನೆನಪಿಸಿಕೊಳ್ಳೋಣ. ಏಕೆ ಗೊತ್ತೇ? ಒಂದಲ್ಲ, ನಾಲ್ಕಲ್ಲ, ಹತ್ತಲ್ಲ… ಮೂವತ್ತಕ್ಕೂ ಹೆಚ್ಚುಬಾರಿ ಸಿಯಾಚಿನ್ ಹಿಮನೆತ್ತಿಯ ಮೇಲಿಳಿದು ಅಲ್ಲಿ ಯೋಧರಿಗೆ ಭರವಸೆಯ ಮಾತಾಡಿ ಬಂದ ಧೀಮಂತ ರಕ್ಷಣಾ ಸಚಿವರನ್ನು ಈ ದೇಶ ಕಂಡಿದೆ ಅಂತಾದರೆ… ಅದೊಬ್ಬ ಜಾರ್ಜ್ ಫರ್ನಾಂಡೀಸ್ ಅವರಲ್ಲಿ ಮಾತ್ರ! ಅವರನಂತರವೂ ಪ್ರಧಾನಿ, ಇತರರೆಲ್ಲ ಅಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಆದರೆ ಅದನ್ನು ವ್ರತದಂತೆ ಪಾಲಿಸಿದವರು ಜಾರ್ಜ್. ಪ್ರತಿ ಆರು ತಿಂಗಳಿಗೆ ಸಿಯಾಚಿನ್ ನಲ್ಲಿ ಸೇವೆ ಸಲ್ಲಿಸುವ ಯೂನಿಟ್ ಗಳು ಬದಲಾಗುತ್ತಿದ್ದವು. ರಕ್ಷಣಾ ಸಚಿವರಾಗಿದ್ದಷ್ಟು ದಿನವೂ ಆ ಸಮಯಕ್ಕೆ ಜಾರ್ಜ್ ಫರ್ನಾಂಡೀಸ್ ಅಲ್ಲಿ ಹಾಜರ್! ಸಣ್ಣದೊಂದು ಸಲಕರಣೆ ತಮಗೆ ಸೇರಬೇಕಿದ್ದರೇನೇ, ಹವಾಮಾನದನುಕೂಲ ನೋಡಿಕೊಂಡು ತಿಂಗಳುಗಟ್ಟಲೇ ಸಮಯ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ದೇಶದ ರಕ್ಷಣಾ ಮಂತ್ರಿಯೇ ತಮ್ಮ ನಡುವೆ ಇರುವ ಸಂಗತಿ ನಮ್ಮ ಯೋಧರಲ್ಲಿ ಅದೆಷ್ಟು ಉತ್ಕರ್ಷವನ್ನು ತುಂಬಿಸುತ್ತಿದ್ದಿರಬಹುದಲ್ಲವೇ? ಅವರ ಅವಧಿಯಲ್ಲೇ ಸಿಯಾಚಿನ್ ಬುಡದ ಹುಂದರ್ ಕಣಿವೆಯಲ್ಲಿ ಹಿಮಗಾಯ ಇನ್ನಿತರ ತೊಂದರೆಗಳಿಗೆ ಚಿಕಿತ್ಸೆ ನೀಡುವುದಕ್ಕೆ ಮಿಲಿಟರಿ ಚಿಕಿತ್ಸಾಲಯ ರೂಪುಗೊಂಡಿತ್ತು.

ಜೂನ್ 2003ರಲ್ಲಿ ಪತ್ರಕರ್ತ ಶೇಖರ್ ಗುಪ್ತ ಅವರ ‘ವಾಕ್ ದಿ ಟಾಕ್’ ಸಂದರ್ಶನವು ಸಿಯಾಚಿನ್ ತಪ್ಪಲಲ್ಲೇ ನಡೆಯಿತು. ‘ರಕ್ಷಣಾ ಸಚಿವನಾಗಿ ಅಧಿಕಾರ ವಹಿಸಿಕೊಳ್ಳುತ್ತಲೇ ಸಿಯಾಚಿನ್ ಗೆ ಬಂದೆ. ಇಲ್ಲಿ ಸೈನಿಕರ ಸ್ಥಿತಿ ಕೆಟ್ಟದಾಗಿತ್ತು. ಆಗಿಂದಲೇ ಇಲ್ಲಿ ಆಗಾಗ ಬಂದು ಅಗತ್ಯಗಳನ್ನು ವಿಚಾರಿಸಿಕೊಳ್ಳಬೇಕೆನ್ನುವ ನಿರ್ಧಾರಕ್ಕೆ ಬಂದೆ’ ಎಂದಿದ್ದರು.

ರಕ್ಷಣಾ ಕ್ಷೇತ್ರಕ್ಕೆ ಸಲ್ಲುವ ಬಜೆಟ್ ಪ್ರಮಾಣ ಹೆಚ್ಚಿದ್ದು ಇವರ ಆಗ್ರಹದಿಂದಲೇ. ಇಲ್ಲಿ ಬಂದರೆ ಪ್ರಚಾರ ಸಿಗುತ್ತೆ ಅಂತ ಹೀಗೆ ಮಾಡ್ತೀರಾ ಎಂಬ ಪ್ರಶ್ನೆಯೂ ಅವರಿಗೆ ಎದುರಾಗಿತ್ತು. ‘ಯಾರೇನಾದರೂ ಅಂದುಕೊಳ್ಳಲಿ. ಚಳಿಗಾಲದಲ್ಲಿ ಸಿಯಾಚಿನ್, ಬೇಸಿಗೆಯಲ್ಲಿ ರಾಜಸ್ಥಾನದ ಮರುಭೂಮಿಯಲ್ಲಿ ಕರ್ತವ್ಯ ನಿರ್ವಹಿಸುವ ಹೊಣೆಗಳೆರಡೂ ಕ್ಲಿಷ್ಟ’ ಎಂದಿದ್ದರು.

‘ರಕ್ಷಣಾ ಸಚಿವನಾಗಿ ದೆಹಲಿಯಲ್ಲಿದ್ದಾಗ ನನ್ನ ಬಳಿ ಸೈನಿಕರ ಪೋಷಕರು ಬರುತ್ತಿದ್ದರು. ನನ್ನ ಮಗ ಸಿಯಾಚಿನ್ ಪೋಸ್ಟ್ ಗೆ ಹೋಗಿ ವರ್ಷವಾಯಿತು, ಹಿಂದಕ್ಕೆ ಕರೆಸಿಕೊಡಿ ಎನ್ನುತ್ತಿದ್ದರು. ಆಗೆಲ್ಲ ಅವರ ಮೇಲೆ ಸಿಟ್ಟು ತೋರಿಸುತ್ತಿದ್ದೆ- ನಿಮ್ಮ ಮಕ್ಕಳು ಹಿಂತಿರುಗಿ ಬರಲಿ ಅಂದರೆ ಅದರರ್ಥ ಬೇರೆಯವರ ಮಕ್ಕಳು ಅಲ್ಲಿ ಹೋಗಿರಲಿ ಅಂತಲ್ಲವೇ ಅಂತ ಗದರಿದ್ದೆ. ಆದರೆ ಇಲ್ಲಿಗೆ ಬಂದಾಗ ತಿಳಿಯಿತು, ಈ ಸೈನಿಕರು ಎಂಥ ವಿಷಮ ಸ್ಥಿತಿಯಲ್ಲಿದ್ದಾರೆ ಹಾಗೂ ಅವರ ಪಾಲಕರ ವಿಷಯದಲ್ಲಿ ಎಷ್ಟು ಕಠಿಣವಾಗಿ ನಡೆದುಕೊಂಡುಬಿಟ್ಟೆ ಅಂತ…’ ಹೀಗೆಲ್ಲ ಮಾತನಾಡುವ ಪ್ರಾಮಾಣಿಕತೆ ಬಹುಶಃ ಜಾರ್ಜ್ ಅವರಿಗೆ ಮಾತ್ರ ಇರಲು ಸಾಧ್ಯ. ಅಲ್ಲದೇ ಸಿಯಾಚಿನ್ ನೆತ್ತಿಯ ಮೇಲೆ ಹೋಗಿರದಿದ್ದರೆ, ಕೇವಲ ಡಿಫೆನ್ಸ್ ಮಿನಿಸ್ಟ್ರಿ ಕಡತಗಳಿಂದ ಅವರಿಗೆ ಈ ಸಂವೇದನೆ ದಕ್ಕುತ್ತಿರಲಿಲ್ಲ.

‘ನಿಮ್ಮಂಥವರಿದ್ದೂ ರಕ್ಷಣೆಗೆ ಎತ್ತಿಟ್ಟಿದ್ದ ಹಣ ಬಳಸದೇ ಹಿಂದಕ್ಕೆ ಹೋಗಿದೆಯಲ್ಲ’ ಎಂಬ ಪ್ರಶ್ನೆಗೂ ಸಾವಧಾನವಾಗಿ ಉತ್ತರ ಹೇಳುತ್ತ, ವ್ಯವಸ್ಥೆಯ ಕೆಲವು ಅಸಹಾಯಕತೆಗಳನ್ನು ತೋಡಿಕೊಂಡಿದ್ದರು. ನಮಗೆ ಗೊತ್ತಿರಬೇಕು, ಹಾಗೆ ಸಿಯಾಚಿನ್ ತಪ್ಪಲಿಗೆ ಹೋದಾಗ ಜಾರ್ಜ್ ಎಲ್ಲವನ್ನೂ ಸೈರಿಸಬಲ್ಲ ನವಯುವಕರೇನಾಗಿರಲಿಲ್ಲ; ಎಪ್ಪತ್ತರ ಪ್ರಾಯದಲ್ಲಿದ್ದರು.

ಜಾರ್ಜ್ ಅಂದು ಆರಂಭಿಸಿದ ಸುಧಾರಣೆ ಇವತ್ತಿಗೆ ಸುವರ್ಣ ದಿನಗಳನ್ನು ತಂದು ನಿಲ್ಲಿಸದಿದ್ದರೂ ಮಹತ್ತರ ಪ್ರಗತಿಯಂತೂ ಆಗಿದೆ. ಸಿಯಾಚಿನ್ ಯೋಧರಿಗೆ ನೀಡುವ ವಿಶಿಷ್ಟ ಸೂಟ್ ಗಳಲ್ಲಿ 55 ಅವಶ್ಯಕ ಪದಾರ್ಥಗಳಿರುತ್ತವೆ. ಈ ಪೈಕಿ 22 ಪದಾರ್ಥಗಳು ಮರುಬಳಕೆ ಮಾಡಲು ಆಗದಂಥವು. ಮಲಗುವ ಬ್ಯಾಗು, ಟೆಂಟ್ ಇತ್ಯಾದಿ ಒಳಗೊಂಡ ಈ 22 ಪದಾರ್ಥಗಳಲ್ಲಿ 9 ವಸ್ತುಗಳಿಗೆ ನಾವು ಆಮದನ್ನೇ ಅವಲಂಬಿಸಿದ್ದೇವೆ. ಇನ್ನುಳಿದ 33 ವಸ್ತುಗಳ ಪೈಕಿ 11 ಆಮದಾಗುತ್ತವೆ. ವರ್ಷಕ್ಕೆ ಇಂಥ 27 ಸಾವಿರ ಸೂಟ್ ಗಳು ಸೇನೆಗೆ ಬೇಕಾಗುತ್ತವೆ.

ಇತ್ತೀಚಿನ ಹೊಸ ಬೆಳವಣಿಗೆಯಲ್ಲಿ ಹಲವು ಭಾರತೀಯ ಕಂಪನಿಗಳು ಇಂಥ ಸೂಟ್ ಗಳನ್ನು ತಯಾರಿಸಿ ಪರೀಕ್ಷೆಗೆ ಸಲ್ಲಿಸಿವೆ. ಇವನ್ನೆಲ್ಲ ಹಲವು ಸುತ್ತುಗಳ ಪರೀಕ್ಷೆಗೆ ಒಳಪಡಿಸಿ, ಸಕ್ಷಮವಾಗಿವೆ ಎಂದು ಸಾಬೀತಾದಲ್ಲಿ ಮಾತ್ರ ಬಳಕೆಗೆ ಒಪ್ಪಿಕೊಳ್ಳಲಾಗುತ್ತದೆ. ಇವುಗಳ ಗುಣಮಟ್ಟ ಒಪ್ಪಿಗೆಯಾದರೆ ಈ ಸೂಟುಗಳ ನಿರ್ಮಾಣದಲ್ಲಿ ವಿದೇಶಗಳ ಮೇಲೆ ಇರುವ ಅವಲಂಬನೆ, ಅದರಲ್ಲೂ ಚೀನಾದ ಮೇಲಿನ ಅವಲಂಬನೆ ತಗ್ಗುತ್ತದೆ.

ದೇಶ ಇಷ್ಟರಮಟ್ಟಿಗೆ ಬಂದು ನಿಂತಿರುವಾಗ…. ಆ ಹಿಮನೆತ್ತಿಯ ಮೇಲೆ ಓಡಾಡಿ ಯೋಧರನ್ನೆಲ್ಲ ಹುರಿದುಂಬಿಸಿದ್ದ ನೆನಪುಗಳನ್ನೆಲ್ಲ ಕಳೆದುಕೊಂಡು ಕಾಯಿಲೆಯಿಂದ ಮಲಗಿದ್ದಾರೆ ಜಾರ್ಜ್. ನಾವಾದರೂ ನೆನಪಿಸಿಕೊಳ್ಳೋದು ಬೇಡವಾ?

1 COMMENT

Leave a Reply