ಹೌದು, ಇಶ್ರತ್ ಜಹಾನ್ ಲಷ್ಕರೆ ಉಗ್ರಳೇ… ಸೆಕ್ಯುಲರ್ ರಾಜಕಾರಣವನ್ನು ನಡುಗಿಸಿದ ಹೆಡ್ಲಿ ಬಾಂಬ್!

ಡಿಜಿಟಲ್ ಕನ್ನಡ ಟೀಮ್

ಇಶ್ರತ್ ಜಹಾನ್…

ಗುಜರಾತ್ ನಲ್ಲಿ ಎನ್ ಕೌಂಟರ್ ಆದ ಈ ಉಗ್ರಳ ಫೋಟೋ ಇಟ್ಟುಕೊಂಡು ಈ ದೇಶದ ‘ಸೆಕ್ಯುಲರ್’ ರಾಜಕಾರಣ ಎಬ್ಬಿಸಿದ್ದ ಬೊಬ್ಬೆಯೇನು ಕಡಿಮೆಯೇ? ಇದು ನಕಲಿ ಎನ್ ಕೌಂಟರ್ , ಮುಸ್ಲಿಮರ ಮೇಲಿನ ಪ್ರಹಾರ ಅಂತೆಲ್ಲ ಕೂಗೆಬ್ಬಿಸಿ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಹಣಿಯುವುದಕ್ಕೆ ಒಂದಿಡೀ ಸೆಕ್ಯುಲರ್ ರಾಜಕಾರಣ ಹಾಗೂ ಮಾಧ್ಯಮದ ಬಹುದೊಡ್ಡ ವರ್ಗ ಈ ಪ್ರಕರಣವನ್ನು ಬಳಸಿಕೊಂಡಿತ್ತು.

ಇದೀಗ ಮುಂಬಯಿ ದಾಳಿಗೆ ಸಂಬಂಧಿಸಿದಂತೆ, ಭಾರತದ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಪ್ಪೊಪ್ಪಿಗೆಗಳನ್ನು ನೀಡುತ್ತಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತೊಮ್ಮೆ ದೃಢೀಕರಿಸಿದ್ದು- ಇಶ್ರತ್ ಜಹಾನ್ ಎಂಬಾಕೆ ಲಷ್ಕರೆ ತಯ್ಬಾದ ಪರವಾಗಿಯೇ ಅಂದಿನ ಗುಜರಾತ್ ಮುಖ್ಯಮಂತ್ರಿಯನ್ನು ಕೊಲ್ಲುವ ತಂಡದಲ್ಲಿದ್ದಳು ಅಂತ.

ಮುಂಬಯಿ ದಾಳಿಗೂ ಮೊದಲೂ ಭಾರತದ ಮೇಲಿನ ಎರಡು ದಾಳಿ ಯೋಜನೆಗಳು ವಿಫಲವಾಗಿದ್ದವು ಅಂತ ಹೆಡ್ಲಿ ಈ ಮೊದಲೇ ತಿಳಿಸಿದ್ದನಷ್ಟೆ. ಹಾಗೆ ವಿಫಲವಾದ ಎರಡು ಯೋಜನೆಗಳಲ್ಲಿ ಹೆಣ್ಣುಮಗಳೊಬ್ಬಳು ತೊಡಗಿಸಿಕೊಂಡಿದ್ದಳು ಅಂತ ಲಷ್ಕರ್ ಮುಖ್ಯಸ್ಥ ತಮಗೆ ತಿಳಿಸಿದ್ದಾಗಿ ಹೆಡ್ಲಿ ನ್ಯಾಯಾಲಯದಲ್ಲಿ ಹೇಳಿದ್ದಾನೆ, ಅಷ್ಟೇ ಅಲ್ಲ ಆಕೆ ಭಾರತದ ನೆಲದ ಇಶ್ರತ್ ಜಹಾನ್ ಳೇ ಅಂತಲೂ ಸ್ಪಷ್ಟಪಡಿಸಿದ್ದಾನೆ.

ಹೆಡ್ಲಿ ಹೀಗೆ ಹೇಳುತ್ತಲೇ… ಈವರೆಗೆ ಆತನ ಪಾಕಿಸ್ತಾನದ ವಿರುದ್ಧ ಸಬೂತುಗಳನ್ನೆಲ್ಲ ಚಪ್ಪರಿಸಿಕೊಂಡಿದ್ದವರು ಇಶ್ರತ್ ವಿಚಾರದಲ್ಲಿ ಹೆಡ್ಲಿ ಸುಳ್ಳು ಹೇಳ್ತಿದಾನೆ ಅಂತ ಕೂಗತೊಡಗಿದ್ದಾರೆ. ಏಕೆಂದರೆ, ಹೆಡ್ಲಿ ಮಾತು ಒಪ್ಪೋದೆಂದರೆ ಈವರೆಗೆ ನಿಲ್ಲಿಸಿದ್ದ ವ್ಯಾಖ್ಯಾನದ ಸಾಮ್ರಾಜ್ಯವೊಂದನ್ನು ಬೀಳಿಸಿಕೊಂಡಂತೆ. ಏಕೆಂದರೆ ಇಶ್ರತ್ ಜಹಾನ್ ಳದ್ದು ನಕಲಿ ಎನ್ ಕೌಂಟರ್ ಆಗಿತ್ತು ಅಂತ ಸಿಬಿಐ ವಿಚಾರಣೆ ಸಾರಿಬಿಟ್ಟಿದೆ. ಇದರ ಮೇಲೆ ನ್ಯಾಯಾಂಗ ಸಮಿತಿಗಳು ನೇಮಕವಾಗಿ ಎನ್ ಕೌಂಟರ್ ನಕಲಿ ಎಂದು ನಿರ್ಧರಿಸಿ ಗುಜರಾತ್ ನ ಹಲವು ಪೊಲೀಸರಿಗೆ ಶಿಕ್ಷೆಯೂ ಆಗಿದೆ. ಈಗ ಹೆಡ್ಲಿ ನೀಡಿರುವ ತಪ್ಪೊಪ್ಪಿಗೆ 2004ರ ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಅಲ್ಲದೇ ಬಿಜೆಪಿಗೆ, ಮುಖ್ಯವಾಗಿ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹಾಗೂ ಅಂದು ರಾಜ್ಯದ ಗೃಹಮಂತ್ರಿಯಾಗಿ ಪೋಲೀಸ್ ಬಲದ ಉಸ್ತುವಾರಿ ವಹಿಸಿದ್ದ ಅಮಿತ್ ಶಾ ತಮ್ಮ ಮೇಲಿನ ಆರೋಪ ಕೊಡವಿಕೊಳ್ಳುವುದಕ್ಕೆ ಸಹಕಾರಿ ಆಗಲಿದೆ.

Leave a Reply