ಕ್ರಿಕೆಟ್ ಮಂತ್ರ ಹೇಳುತ್ತಿದ್ದವರ ಬಾಯಲ್ಲಿ ಈಗ ಕಬಡ್ಡಿ ಕಬಡ್ಡಿ ಕಬಡ್ಡಿ… !

ಸೋಮಶೇಖರ ಪಿ. ಭದ್ರಾವತಿ

ಕ್ರೀಡೆ ಅಂತಂದ್ರೆ ಕ್ರಿಕೆಟ್ ಅಂತಿದ್ದ ನಮ್ಮ ದೇಶದ ವಾತಾವರಣದಲ್ಲಿ ಕಬಡ್ಡಿ ಕಳೆದ ಒಂದೂವರೆ ವರ್ಷದಲ್ಲಿ ಬೆಳೆದ ರೀತಿ ಅಮೋಘ. ಐಪಿಎಲ್ ನಂತಹ ಲೀಗ್ ಮಾದರಿಯಲ್ಲಿ ಇತರೆ ಕ್ರೀಡೆಗಳು ಟೂರ್ನಿಗಳನ್ನಾಡುವ ಮೂಲಕ ಜನರನ್ನು ತಲುಪುವ ಪ್ರಯತ್ನ ನಡೆಸಿದವು. ಆ ಪೈಕಿ ಹಾಕಿ, ಫುಟ್ಬಾಲ್, ಬ್ಯಾಡ್ಮಿಂಟನ್, ಟೆನಿಸ್ ಅಲ್ಲದೆ ಇತ್ತೀಚೆಗೆ ಕುಸ್ತಿಯೂ ಲೀಗ್ ಮಾದರಿಗೆ ಒಗ್ಗಿಕೊಳ್ಳುವ ಪ್ರಯತ್ನ ನಡೆಸಿದವು. ಆದರೆ ಕ್ರಿಕೆಟ್ ನಂತರ ಕಬಡ್ಡಿ ಕಂಡ ಯಶಸ್ಸು ಇನ್ಯಾವುದೇ ಆಟ ಕಾಣಲಿಲ್ಲ.

ಸದ್ಯ ಮೂರನೇ ಆವೃತ್ತಿ ನಡೆಯುತ್ತಿದ್ದು, ಆರಂಭಿಕ ಎರಡು ವಾರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜ.30ರಂದು ಆರಂಭವಾದ ಟೂರ್ನಿಯಲ್ಲಿ ಕಳೆದ ಆವೃತ್ತಿಗಿಂತ ವೀಕ್ಷಕರ ಸಂಖ್ಯೆಯಲ್ಲಿ ಶೇ.36ರಷ್ಟು ಏರಿಕೆ ಕಂಡಿದೆ. ಆರಂಭಿಕ ಎರಡು ಆವೃತ್ತಿಯಲ್ಲೂ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿರುವ ಏಕೈಕ ಕ್ರೀಡಾ ಟೂರ್ನಿಯಾಗಿದೆ. ಎರಡನೇ ಆವೃತ್ತಿಯಲ್ಲಿ ನಗರ ಪ್ರದೇಶಗಳಲ್ಲಿ ಟಿವಿಎಂ ರೇಟಿಂಗ್ 54.5ರಷ್ಟಿತ್ತು. ಈ ಆವೃತ್ತಿಯಲ್ಲಿ ಇದು 74ಟಿವಿಎಂ(ಟಿವಿ ರೇಟಿಂಗ್ ಪದ್ಧತಿ)ಗೆ ಏರಿಕೆಯಾಗಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ 134ರಷ್ಟು ಟಿವಿಎಂ ಹೆಚ್ಚಾಗಿದೆ. ಇನ್ನು ಆನ್ ಲೈನ್ ಮತ್ತು ಡಿಜಿಟಲ್ ಮಾಧ್ಯಮದ ವೀಕ್ಷಣೆಯಲ್ಲಿ ಶೇ.33ರಷ್ಟು ಏರಿಕೆ ಕಂಡಿರುವುದಾಗಿ ಸ್ಟಾರ್ ಸ್ಪೋರ್ಟ್ಸ್ ಅಧಿಕೃತವಾಗಿ ಮಾಹಿತಿ ನೀಡಿದೆ. ಇನ್ನು ಟ್ವಿಟರ್ ಹಾಗೂ ಇತರೆ ಸಾಮಾಜಿಕ ತಾಣದಲ್ಲಿ ಲೇ ಪಂಗಾ ಎಂಬ ಆ್ಯಶ್ ಟ್ಯಾಗ್ ನಲ್ಲಿ ಪ್ರತಿಕ್ರಿಯೆ ಶೇ.254ರಷ್ಟು ಏರಿಕೆ ಕಂಡಿದ್ದು, ಎಲ್ಲೆಲ್ಲೂ ಕಬಡ್ಡಿ ತನ್ನ ಹವಾ ಸೃಷ್ಟಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಹೆಚ್ಚು ಪ್ರಚಾರವಿಲ್ಲದೇ ಮರೆಯಾಗಿದ್ದ ಕಬಡ್ಡಿ ಸುಖಾಸುಮ್ಮನೆ ಲೀಗ್ ಮಾದರಿಗೆ ತನ್ನನ್ನು ತೊಡಗಿಸಿಕೊಳ್ಳಲಿಲ್ಲ. ತನ್ನ ಹಳೆ ಸ್ವರೂಪವನ್ನು ಅಂದರೆ, ಆಟದ ನಿಯಮ ಹಾಗೂ ಆಡುವ ವಾತಾವರಣದಲ್ಲಿ ಸಾಂಪ್ರದಾಯಿಕ ಶೈಲಿಗೆ ಎಳ್ಳು ನೀರು ಬಿಟ್ಟಿತು. ಅಭಿಮಾನಿಗಳನ್ನು ತನ್ನತ್ತ ಹಿಡಿದಿಡುವಂತೆ ರೋಚಕ ಹಣಾಹಣಿ ಸೃಷ್ಟಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಪ್ರೊ ಕಬಡ್ಡಿಯಾಗಿ ಅಭಿಮಾನಿಗಳ ಮುಂದೆ ಬಂದಿತು. ಟೂರ್ನಿ ಆರಂಭಕ್ಕೂ ಮುನ್ನ, ಈಗಿನ ಕಾಲದಲ್ಲಿ ಕಬಡ್ಡಿ ಯಾರು ನೋಡ್ತಾರೆ ಎಂದು ಹಲವರು ಮೂಗು ಮುರಿದಿದ್ದು ಉಂಟು. ಆದರೆ, ಮೊದಲ ಆವೃತ್ತಿ ಆರಂಭವಾದ ಕೇಲವೇ ದಿನಗಳಲ್ಲಿ ಮನೆ ಮಾತಾದ ಕಬಡ್ಡಿ ಎಲ್ಲ ವರ್ಗದವರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಟೂರ್ನಿಯ ಯಶಸ್ಸು ಯಾವ ಮಟ್ಟಿಗೆ ಸಾಗಿದೆಯೆಂದರೆ, ವರ್ಷಕ್ಕೊಮ್ಮೆ ಎಂಬಂತೆ ಆರಂಭಿಕ ಎರಡು ಆವೃತ್ತಿಗಳನ್ನು ನಡೆಸಲಾಯಿತು. ಈಗ ಆರು ತಿಂಗಳಿಗೊಮ್ಮೆ ಟೂರ್ನಿಯನ್ನು ನಡೆಸಲು ಆಯೋಜಕರು ಮುಂದಾಗಿದ್ದಾರೆ. ಬೋನಸ್ ಲೈನ್, ಸೂಪರ್ ರೈಡ್, ಸೂಪರ್ ಟ್ಯಾಕಲ್ ಹೀಗೆ ಕ್ರೀಡೆಯ ರೋಚಕತೆ ಹೆಚ್ಚಿಸುವ ಹೊಸ ನಿಯಮಗಳು, ಪಂದ್ಯದ ಸ್ಥಿತಿಯನ್ನು ಕ್ಷಣಾರ್ಧದಲ್ಲಿ ಬದಲಿಸುವ ಸಾಮರ್ಥ್ಯ ಹೊಂದಿವೆ. ಹಾಗಾಗಿ ಪಂದ್ಯದ 40 ನಿಮಿಷ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಷ್ಟು ಕಬಡ್ಡಿ ರಂಜಿಸುತ್ತಿದೆ.

ಈ ಟೂರ್ನಿಗೆ ಆಯೋಜಕರಾದ ಸ್ಟಾರ್ ಇಂಡಿಯಾ ಮೊದಲ ಆವೃತ್ತಿಗೆ 150 ಕೋಟಿ ಸೇರಿದಂತೆ ಈವೆರೆಗೂ ಸುಮಾರು 300 ಕೋಟಿ ಬಂಡವಾಳ ಹಾಕಿದೆ. ಈ ಟೂರ್ನಿ 2018ರ ವೇಳೆಗೆ ಲಾಭ ತಂದುಕೊಡುವ ನಿರೀಕ್ಷೆ ಆಯೋಜಕರದ್ದಾಗಿದೆ.

ಕಬಡ್ಡಿ ಯಶಸ್ಸಿಗೆ ಈ ಅಂಶಗಳೇ ಸಾಕ್ಷಿ

  • 2014ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಪ್ರೊ ಕಬಡ್ಡಿ 37 ದಿನಗಳ ಕಾಲಾವಧಿಯಲ್ಲಿ 40 ಕೋಟಿಗೂ ಹೆಚ್ಚು ವೀಕ್ಷಕರನ್ನು ಸಂಪಾದಿಸಿತು. ಆ ಮೂಲಕ ಕ್ರಿಕೆಟ್ ನಂತರ ಹೆಚ್ಚು ವೀಕ್ಷಕರನ್ನು ಪಡೆದ ಕ್ರೀಡೆ ಎಂಬ ಖ್ಯಾತಿ ಪಡೆಯಿತು. ಅದರಲ್ಲೂ ಫೈನಲ್ ಪಂದ್ಯವನ್ನು ದೇಶದಾದ್ಯಂತ 8 ಕೋಟಿಗೂ ಹೆಚ್ಚು ವೀಕ್ಷಕರು ಆನಂದಿಸಿದ್ದರು. ಐಪಿಎಲ್ 56 ಕೋಟಿಗೂ ಹೆಚ್ಚು ವೀಕ್ಷಕರನ್ನು ಪಡೆದಿತ್ತು.
  • ಎರಡನೇ ಆವೃತ್ತಿಯಲ್ಲಿ ಪ್ರೊ ಕಬಡ್ಡಿ ವೀಕ್ಷಕರ ಸಂಖ್ಯೆ ಶೇ.46ರಷ್ಟು ಏರಿಕೆ ಕಂಡಿತು. ಮೊದಲ ಆವೃತ್ತಿಯಲ್ಲಿ 0.91ರಷ್ಟು ಟಿವಿಆರ್ ಪಡೆದಿದ್ದ ಪ್ರೊ ಕಬಡ್ಡಿ ಎರಡನೇ ಆವೃತ್ತಿಯಲ್ಲಿ 1.33ರಷ್ಟು ಹೆಚ್ಚಿಸಿಕೊಂಡಿತ್ತು.
  • ಎರಡನೇ ಆವೃತ್ತಿಯಲ್ಲಿ 50-55 ಕೋಟಿ ಆದಾಯ ಹೆಚ್ಚಳ. ಇನ್ನು ತಂಡಗಳ ಆದಾಯವೂ ಏರಿಕೆಯಾಗಿದೆ. ಅಡಿಡಾಸ್, ಟಿವಿಎಸ್, ಫ್ಲಿಪ್ಕಾರ್ಟ್, ಟಾಟಾ ಮೋಟಾರ್ಸ್ ನಂಥ ಪ್ರಾಯೋಜಕರು ಕಬಡ್ಡಿಯತ್ತ ಮುಖಮಾಡಿದ್ದಾರೆ. ಕಳೆದ ಬಾರಿ ತಂಡಗಳ ಆದಾಯ 2.5 ಕೋಟಿಯಿಂದ 4.5 ಕೋಟಿವರೆಗೂ ಹೆಚ್ಚಿದೆ. ಈ ಬಾರಿ ಆದಾಯ 10 ಕೋಟಿಯವರೆಗೂ ಹೆಚ್ಚುವ ನಿರೀಕ್ಷೆ ಹೊಂದಲಾಗಿದೆ.

Leave a Reply