ತೆರಿಗೆ ದುಡ್ಡಲ್ಲಿ ಬ್ರಾಂಡ್ ಕಟ್ಟಿಕೊಂಡ ಉದ್ಯಮಿಗಳ ಬಗ್ಗೆ ಓದಿದ್ರಿ, ಬಾಡಿಗೆ ಕಟ್ಟದೇ ನಮಗೆ ಭಾರವಾಗ್ತಿರೋ ಸಂಸದರ ಬಗ್ಗೆ ಓದಿ…

 

ಡಿಜಿಟಲ್ ಕನ್ನಡ ಟೀಮ್

ಜನ ಸಾಮಾನ್ಯರ ದುಡ್ಡು ಅಧಿಕಾರಿಗಳು, ಉದ್ದಿಮೆದಾರರು ಮತ್ತು ರಾಜಕಾರಣಿಗಳ ಸ್ವಂತಕ್ಕೆ ಬಳಯಾಗುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಮ್ಮ ಮುಂದಿವೆ. ಜನಸಾಮಾನ್ಯರಿಂದ ತೆರಿಗೆ ಹಾಗೂ ಇತರೆ ಹಣವನ್ನು ಬಿಡದೇ ವಸೂಲಿ ಮಾಡುತ್ತಿರುವಾಗ, ರಾಜಕಾರಣಿಗಳು ಸಾಕಷ್ಟು ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಸಂಸದರಿಗೆ ಸರ್ಕಾರದ ವತಿಯಿಂದ ದೆಹಲಿಯ ಲುಟ್ಯೆನ್ಸ್ ಪ್ರದೇಶದಲ್ಲಿ ಬಂಗಲೆಗಳನ್ನು ನೀಡಲಾಗುತ್ತದೆ. ಚುನಾಯಿತ ಪ್ರತಿನಿಧಿಗಳು ತಮ್ಮ ಅಧಿಕಾರಾವಧಿಯವರೆಗೂ ಈ ಬಂಗಲೆಗಳಲ್ಲಿ ಉಚಿತವಾಗಿ ವಾಸ ಮಾಡಲು ಅವಕಾಶವಿದೆ. ತಮ್ಮ ಅವಧಿ ಮುಗಿದ ನಂತರ ಖಾಲಿ ಮಾಡಬೇಕಿರುವುದು ಸಾಮಾನ್ಯ ಪದ್ಧತಿ. ಒಂದು ವೇಳೆ ಇವರು ಅವಧಿ ಮುಕ್ತಾಯವಾದ ನಂತರವೂ ಇಲ್ಲೆ ನೆಲೆಸಿದರೆ, ಸರ್ಕಾರಕ್ಕೆ ಬಾಡಿಗೆ ಕಟ್ಟಬೇಕೆಂಬ ಕಾನೂನು ಸಹ ಇದೆ. ಆದರೆ, ಈ ಕಾನೂನು ಇವರಿಗೆ ಲೆಕ್ಕಕ್ಕೇ ಇಲ್ಲ.

ಹೌದು, ಈ ಹಿಂದೆ ತಮ್ಮ ಅಧಿಕಾರ ಅವಧಿ ಮುಕ್ತಾಯವಾದ ನಂತರವೂ ಸಾಕಷ್ಟು ಸಮಯ ಈ ಬಂಗಲೆಗಳಲ್ಲಿ ವಾಸಿಸಿ, ಅದಕ್ಕೆ ಬಾಡಿಗೆಯನ್ನು ಕಟ್ಟದೇ ಇರುವವರ ಸಂಖ್ಯೆ ಎಷ್ಟು ಗೊತ್ತೆ? ಬರೋಬ್ಬರಿ 56 ಮಾಜಿ ಸಂಸದರು ಹಾಗೂ ಸಚಿವರು ಸರ್ಕಾರಕ್ಕೆ ಬಾಡಿಗೆ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇವರು ಕಟ್ಟಬೇಕಿರುವ ಬಾಡಿಗೆ ಒಟ್ಟಾರೆ ಮೊತ್ತ ಸುಮಾರು 90 ಲಕ್ಷ. ಜನಸಾಮಾನ್ಯರು ಒಂದೆರಡು ತಿಂಗಳು ಕರೆಂಟ್, ಫೋನ್ ಹಾಗೂ ಇತರೆ ಬಿಲ್ ಕಟ್ಟಿಲ್ಲ ಎಂದರೇ ತಕ್ಷಣವೇ ಸಂಪರ್ಕ ಕಡಿತ ಮಾಡುವಾಗ, ಇವರಿಗೆ ಮಾತ್ರ ಆ ರೀತಿಯ ಕಟ್ಟು ನಿಟ್ಟಿನ ಕ್ರಮವಿಲ್ಲವೇಕೆ?

ಆರ್ ಟಿ ಐ ಕಾರ್ಯಕರ್ತ ಸುಭಾಷ್ ಅಗರ್ವಾಲ್ ಎಂಬುವವರು ಈ ಕಾಯ್ದೆಯ ಮೂಲಕ ಮಾಜಿ ಸಂಸದರು ಮತ್ತು ಸಚಿವರು ಪಾವತಿ ಮಾಡಬೇಕಿರುವ ಪಟ್ಟಿಯ ಬಗ್ಗೆ ಮಾಹಿತಿ ಕೋರಿದಾಗ, 56 ರಾಜಕಾರಣಿಗಳು ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಪಟ್ಟಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡ ಮಾಜಿ ರಾಜ್ಯಸಭೆ ಸದಸ್ಯ ಗಿರೀಶ್ ಕುಮಾರ್ ಸಂಘಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿರುವವರು 1,969ರು ಇಂದ 23.07 ಲಕ್ಷ ರು.ವರೆಗೆ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಘಿ, ‘ನನಗೆ ಅಚ್ಚರಿಯಾಗಿದೆ. ನಾನು 2010ರಲ್ಲೇ ಬಂಗಲೆ ಖಾಲಿ ಮಾಡಿದ್ದು, ಅದನ್ನು ಬೇರೆಯವರಿಗೆ ನೀಡಲಾಗಿದೆ. ಬೇರೆಯವರು ವಾಸಕ್ಕೆ ನಾನೇಕೆ ಬಾಡಿಗೆ ಕಟ್ಟಲಿ. ಈ ಬಗ್ಗೆ ನನಗೆ ನೋಟಿಸ್ ಬಂದಿದ್ದು, ಉತ್ತರಿಸಿದ್ದೇನೆ’ ಎಂದಿದ್ದಾರೆ.

ಉಳಿದಂತೆ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಮೊಹಮದ್ ಅಜರುದ್ದೀನ್ (2.5 ಲಕ್ಷ), ಆರ್ ಜೆಡಿಯ ಮಂಗನಿ ಲಾಲ್ ಮಂದಲ್ (4.42 ಲಕ್ಷ), ಬಿಜೆಪಿಯ ರಾಮಾ ಕಾಂತ್ ಯಾದವ್ (2.05 ಲಕ್ಷ), ಜಯಪ್ರದಾ (1.68 ಲಕ್ಷ), ಯಶ್ವಂತ್ ಸಿನ್ಹಾ (3.84 ಲಕ್ಷ),  ಪಂಜಾಬ್ ಕಾಂಗ್ರೆಸ್ ಮುಖಂಡ ಪ್ರತಾಪ್ ಸಿಂಗ್ ಬಾಜ್ವಾ (1.47 ಲಕ್ಷ), ರಾಜ್ ಬಬ್ಬರ್ (1.24 ಲಕ್ಷ) ಬಾಕಿ ಪಾವತಿಸಬೇಕಿದೆ.

ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅವಧಿ ಮುಗಿದರೂ ಈ ಬಂಗಲೆಗಳಲ್ಲಿ ವಾಸವಾಗಿದ್ದ 160ಕ್ಕೂ ಸಚಿವರು ಮತ್ತು ಸಂಸದರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಸಚಿವರಾದವರಿಗೆ ಬಂಗಲೆಗಳನ್ನು ನೀಡುವುದು ದ ಡೈರೆಕ್ಟರೇಟ್ ಆಫ್ ಎಸ್ಟೇಟ್ ನ ಜವಾಬ್ದಾರಿಯಾಗಿದ್ದು, ಲೋಕಸಭಾ ಹೌಸಿಂಗ್ ಕಮಿಟಿ ಹೊಸ ಸಂಸದರಿಗೆ ಬಂಗಲೆಗಳನ್ನು ನಿಗದಿಪಡಿಸುತ್ತದೆ.

‘ಜನಸಾಮಾನ್ಯರಿಗೆ ಕಟ್ಟುನಿಟ್ಟಿನ ಕಾನೂನು ಇವರಿಗೂ ಅನ್ವಯಿಸಬೇಕು. ಸರ್ಕಾರಕ್ಕೆ ನೀಡಬೇಕಿರುವ ಹಣವನ್ನು ಬಾಕಿ ಉಳಿಸಿಕೊಂಡವರು ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಆಗ, ಪ್ರತಿಯೊಬ್ಬರೂ ಈ ರೀತಿಯ ಅಸಡ್ಡೆ ವರ್ತನೆಯನ್ನು ತೋರುವುದಿಲ್ಲ.’ ಅಂತಾರೆ ಮಾಹಿತಿ ಹಕ್ಕು ಹೋರಾಟಗಾರ ಸುಭಾಷ್ ಅಗರ್ವಾಲ್.

Leave a Reply