ದುರ್ಭರ ದುಃಖದ ಗಳಿಗೆಯಲ್ಲೂ ದೇಶಭಕ್ತಿ ಮೆರೆದ ಹುತಾತ್ಮ ಹನುಮಂತಪ್ಪ ಕುಟುಂಬ

ಡಿಜಿಟಲ್ ಕನ್ನಡ ಟೀಮ್

ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರನ್ನು ಕಳೆದುಕೊಂಡಿದ್ದರೂ ಆತನ ಕುಟುಂಬದವರು ದೇಶಾಭಿಮಾನದ ಬಗ್ಗೆ ತೋರಿರುವ ಕಾಳಜಿ ಎಲ್ಲರ ಮನ ಗೆದ್ದಿದೆ. ‘ಭಾರತ ಮಾತೆ ಸುರಕ್ಷಿತವಾಗಿರುವುದು ಮುಖ್ಯ. ಎಲ್ಲರೂ ನಿಮ್ಮ ಮಕ್ಕಳನ್ನು ಸೇನೆಗೆ ಸೇರಿಸಿ’ ಟಿವಿ ವಾಹಿನಿಗಳು ಮಾತನಾಡಿಸಿದಾಗ ಹನುಮಂತಪ್ಪ ಅವರ ತಾಯಿ ಆಡಿದ ಮಾತುಗಳಿವು!

‘ಹನುಮಂತಪ್ಪ ಕೇವಲ ನನ್ನ ಗಂಡನಾಗಿರಲಿಲ್ಲ. ಆತ ದೇಶದ ಮಗನಾಗಿದ್ದರು. ಈ ಘಟನೆಯಿಂದ ಯಾರೂ ಸೇನೆಗೆ ಸೇರುವುದು ಬೇಡ ಎಂದು ನಿರ್ಧರಿಸಬೇಡಿ. ದಯವಿಟ್ಟು ದೇಶ ಸೇವೆ ಮಾಡಿ. ನಮ್ಮ ಮನೆಯಲ್ಲಿರುವ ಮಕ್ಕಳನ್ನೆಲ್ಲಾ ಸೇನೆಗೆ ಸೇರಿಸಲು ಸಿದ್ಧ. ನನ್ನ ಮಗಳಿಗೂ ವಿದ್ಯಾಭ್ಯಾಸ ನೀಡಿ ಸೇನೆಗೆ ಸೇರಿಸಲು ಸಿದ್ಧಳಿದ್ದೇನೆ’ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಬಿಕ್ಕುತ್ತಲೇ ಹೇಳಿದ ಮಾತುಗಳಿವು!

ಟಿವಿ ವಾಹಿನಿಗಳು ಅವರ ಕುಟುಂಬದ ಯಾವುದೇ ಸಂಬಂಧಿಗಳ ಮಾತಿಗೆ ಧ್ವನಿಯಾಗುವುದಕ್ಕೆ ಹೋದರೂ, ಹನುಮಂತಪ್ಪ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂಬ ಮಾತುಗಳೇ ಬಂದವು.

ಶುಕ್ರವಾರ ಹುತಾತ್ಮ ಹನುಮಂತಪ್ಪ ಕೊಪ್ಪದ್ ಅವರ ಹುಟ್ಟೂರಾದ ಕುಂದಗೋಳ ತಾಲೂಕಿನ ಬೆಟದೂರಿನಲ್ಲಿ ಸಂಪ್ರಾದಾಯಿಕವಾಗಿ, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರೆ ರಾಜಕೀಯ ಮುಖಂಡರು ಹಾಗೂ ಸೇನಾಧಿಕಾರಿಗಳು, ಗ್ರಾಮಸ್ಥರು ಹಾಗೂ ಬೇರೆ ಸ್ಥಳಗಳಿಂದ ಸಹಸ್ರಾರು ಜನರು ಅಂತಿಮ ನಮನ ಸಲ್ಲಿಸಿದರು.

Hanumantappa last rite

ಯೋಧರಿಗೆಲ್ಲ ಸಮಾನ ಪರಿಹಾರ ಗೌರವ: ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸಿ ಅಸುನೀಗಿದ ರಾಜ್ಯದ ವೀರ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಕುಟುಂಬದವರಿಗೆ ಸರ್ಕಾರ ಪರಿಹಾರ ಘೋಷಿಸಿತ್ತು. ಹಾಗಾದರೆ, ರಾಜ್ಯದ ಇನ್ನಿಬ್ಬರು ಯೋಧರ ಕುಟುಂಬಕ್ಕೆ ಏನು ಮಾಡಲಿದೆ ಎಂಬ ಪ್ರಶ್ನೆ ಮೂಡಿತ್ತು. ಸರ್ಕಾರ ಎಲ್ಲ ಯೋಧರ ಕುಟುಂಬಕ್ಕೆ ಪರಿಹಾರ ಘೋಷಿಸಿದೆ. ಹನುಮಂತಪ್ಪ ಅವರ ಕುಟುಂಬಕ್ಕೆ ನೀಡುವ ಪರಿಹಾರ ಇನ್ನಿತರ ಸೌಲಭ್ಯಗಳು ಮತ್ತಿಬ್ಬರು ಯೋಧರ ಕುಟುಂಬಗಳಿಗೂ ಸಿಗಲಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ಯೋಧ ಮಹೇಶ್, ಹಾಗೂ ಹಾಸನ ಜಿಲ್ಲೆಯ ತೇಜೂರು ಗ್ರಾಮದ ಟಿ.ಟಿ. ನಾಗೇಶ್ ಹಿಮಪಾತದಲ್ಲಿ ಸಿಲುಕಿದ್ದ ಇನ್ನಿಬ್ಬರು ರಾಜ್ಯದ ಯೋಧರಾಗಿದ್ದರು. ಇವರ ಕುಟುಂಬಗಳಿಗೂ ರಾಜ್ಯ ಸರ್ಕಾರ 25 ಲಕ್ಷ ರೂ. ನಗದು, ಅವರ ಜಿಲ್ಲಾ ವ್ಯಾಪ್ತಿಯಲ್ಲಿ ನಿವೇಶ, 4 ರಿಂದ 5 ಎಕರೆ ಕೃಷಿ ಭೂಮಿ, ಅಲ್ಲದೆ, ಯೋಧರು ಮದುವೆಯಾಗಿದ್ದಲ್ಲಿ ಅವರ ಪತ್ನಿಯರಿಗೆ ಸರ್ಕಾರಿ ಉದ್ಯೋಗ ನೀಡಲಿದೆ. ಕೇಂದ್ರ ಸರ್ಕಾರದಿಂದ ಸಹ ಇವರಿಗೆ ಪರಿಹಾರ ಲಭಿಸಲಿದೆ.

Leave a Reply